ಬಂದೇ ಬಿಡ್ತು ಅಚ್ಛೇ ದಿನ್! ಭಕ್ತರೊಡಗೂಡಿ ನಗಬೇಡವೋ ನಾಗರಿಕ, ಕಟ್ಟು ತೆರಿಗೆ…

ಡಿಜಿಟಲ್ ಕನ್ನಡ ವಿಶೇಷ:

ಮೋದಿ ಸರ್ಕಾರಕ್ಕೆ ಮೊದಲಿಗೆ ಒಂದು ಅಭಿನಂದನೆ ಹೇಳಬೇಕು. ನಿನ್ನೆ ಘೋಷಣೆಯಾದ ಅಂಕಿಅಂಶದ ಪ್ರಕಾರ ಶೇ. 7.9ರ ಜಿಡಿಪಿ ಬೆಳವಣಿಗೆ ತೋರಿಸಿರುವ ಭಾರತ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತಿಹೆಚ್ಚಿನದು. ಅಲ್ಲದೇ 6.9 ಶೇಕಡ (ಅಂದಾಜು) ಜಿಡಿಪಿ ಬೆಳವಣಿಗೆ ತೋರಿರುವ ಚೀನಾವನ್ನೇ ಹಿಂದಿಕ್ಕಿದ್ದೇವೆ ಎಂದರೆ ಅಸಾಧಾರಣ ಪರಾಕ್ರಮವಲ್ಲವೇ? ಖಂಡಿತ, ಜಾಗತಿಕ ಅರ್ಥವ್ಯವಸ್ಥೆ ಮುಗ್ಗರಿಸುತ್ತಿರುವ ಹೊತ್ತಿನಲ್ಲಿ ಈ ವೇಗ ಕಾಯ್ದುಕೊಂಡಿರುವುದು ಶ್ಲಾಘನಾರ್ಹವೇ. ಹಾಗಂತ ಭಾರತ ವಿಶ್ವಗುರುವಾಯ್ತು, ಅಚ್ಛೇ ದಿನ ಬಂತು ಎಂದು ಟ್ವೀಟು ಕುಟ್ಟುತ್ತ ಪಟಾಕಿ ಹಚ್ಚುವ ಅತಿರೇಕದ ಭಕ್ತಗಣದಿಂದ ತುಸು ದೂರ ನಿಂತು ಯೋಚಿಸಬೇಕಾದ ಸಂಗತಿಗಳೂ ಇವೆ.

ಮೊದಲಿಗೆ, ಹತ್ತು ಚಿಲ್ಲರೆ ಟ್ರಿಲಿಯನ್ ಡಾಲರ್ ಗಳ ಚೀನಾ ಆರ್ಥಿಕತೆಯ ಜಿಡಿಪಿಯನ್ನು ಎರಡು ಟ್ರಿಲಿಯನ್ ಡಾಲರ್ ಗಳ ನಮ್ಮ ಅರ್ಥವ್ಯವಸ್ಥೆ ಜತೆ ಹೋಲಿಸುವುದೇ ಮೂರ್ಖತನ. ಇಪ್ಪತ್ತು ಸಾವಿರ ಸಂಬಳ ಪಡೆಯುವವ ನಂಗೆ ಈ ಬಾರಿ 10 ಪರ್ಸೆಂಟ್ ಹೈಕ್ ಆಗಿದೆ, ಆದ್ರೆ ಒಂದೂವರೆ ಲಕ್ಷ ರುಪಾಯಿ ಸಂಬಳ ಪಡೆಯುವ ಬಾಸಿಗೆ ಎಂಟೇ ಪರ್ಸೆಂಟ್ ಹೆಚ್ಚಳವಾಗಿದೆಯಂತೆ… ಹಂಗಾಗಿ ನಾನೇ ಗೆದ್ದೆ ಎಂದು ಸಂಭ್ರಮಿಸಿದರೆ ಎಷ್ಟು ಅರ್ಥಪೂರ್ಣ ಎನಿಸುತ್ತದೆಯೂ ಅಷ್ಟೇ ಅರ್ಥ ಈ ಸಡಗರಕ್ಕೂ ಇದೆ.

ಯಾವುದೇ ದೇಶದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಾಗಿದೆ ಅಂದ್ರೆ ಏನರ್ಥ ಅಂತ ಬಿಡಿಸಿ ಕೇಳಬೇಕಾಗುತ್ತದೆ. ಈಗ ಭಾರತದ ಸಂದರ್ಭದಲ್ಲಿ ಜಿಡಿಪಿ ಹೆಚ್ಚಿರುವುದಕ್ಕೆ ವಿದ್ಯುತ್, ಸಿಮೆಂಟ್ ಮತ್ತು ಉಕ್ಕಿನ ಉತ್ಪಾದನೆ ಹೆಚ್ಚಿರೋದು ಕಾರಣ. ಜಗತ್ತು ಇವತ್ತು ಓಡುತ್ತಿರುವ ಧಾಟಿಯನ್ನು ಅಳೆಯುವುದಕ್ಕೆ ಇದೊಂದು ಮಾನದಂಡ. ಇದರ ಹೆಚ್ಚಳ ಖುಷಿಯ ವಿಚಾರವೇ ಆದರೂ ಬದುಕು ಹಸನಾಗಿಬಿಟ್ಟಿರುವ ಗಳಿಗೆ ಎಂದು ಸಂಭ್ರಮಿಸಬೇಕಿಲ್ಲ.

ಕೊನೆಗೂ ಸಾಮಾನ್ಯನೊಬ್ಬ ಬದುಕನ್ನು, ಅದರ ಹಗುರ- ಭಾರಗಳನ್ನು ಅಳೆಯುವುದು ಆತನ ದೈನಂದಿನ ಅನುಭವದಲ್ಲೇ ಹೊರತು ಜಿಡಿಪಿ ಅಂಕಿಯಲ್ಲಲ್ಲವಲ್ಲ. ಹಾಗಾದರೆ ಈ ಸಾಮಾನ್ಯ ಅನುಭವಕ್ಕೆ ಅಚ್ಛೇ ದಿನ್ ಬಂದಿದೆಯೇ ಅಂತ ಕೇಳಿದರೆ, ಮಧ್ಯಮವರ್ಗ ತೆರಬೇಕಾದ ಹೊಸ ತೆರಿಗೆಗಳ ಪಟ್ಟಿಯನ್ನೇ ಮುಂದಿರಿಸಿದೆ ಮೋದಿ ಸರ್ಕಾರ.

ಸ್ವಚ್ಛ ಭಾರತ ಸೆಸ್ ಎಂದು ವರ್ಷದ ಹಿಂದೆ ಸೇವಾ ತೆರಿಗೆಯನ್ನು 0.5% ಏರಿಸಿದ್ದ ಕೇಂದ್ರ ಸರ್ಕಾರ, ಈಗ ಕೃಷಿ ಕಲ್ಯಾಣ ಸೆಸ್ ಅಂತ ಇನ್ನೂ 0.5% ಏರಿಸಿ ಸೇವಾ ತೆರಿಗೆ ಶೇ. 15ಕ್ಕೆ ಬರುವಲ್ಲಿ ಕೊಡುಗೆ ನೀಡಿದೆ. ನಮ್ಮಲ್ಲಿ ಕಸದ ಸಮಸ್ಯೆ ಆದರೆ ಬಿಬಿಎಂಪಿಯನ್ನೋ ಸಿದ್ದರಾಮಯ್ಯ ಅವರನ್ನೋ ಬಯ್ದುಕೊಳ್ಳುತ್ತೇವೆಯೇ ಹೊರತು ಕೇಂದ್ರ ಸರ್ಕಾರವನ್ನಲ್ಲ. ಆದರೆ ಸ್ವಚ್ಛ ಭಾರತದ ಹೆಸರಲ್ಲಿ ತೆರಿಗೆ ಮಾತ್ರ ಕಟ್ಟಿ ‘ದೇಶಭಕ್ತಿ’ ಸಾಬೀತುಗೊಳಿಸಬೇಕಾದ ಹೊಣೆಯನ್ನು ಹೇರಲಾಗಿದೆ. ಈಗಿನ ಹೊಸ ಸೆಸ್ ಅನ್ನೂ ಸೇರಿಸಿದರೆ ಬದುಕು ಈ ಎಲ್ಲ ವಲಯಗಳಲ್ಲಿ ದುಬಾರಿ ಆಗುತ್ತದೆ- ರೈಲು ಪ್ರಯಾಣ, ಮೊಬೈಲ್ ಬಿಲ್, ವಿಮೆ, ಆರೋಗ್ಯದ ಚೆಕ್ ಅಪ್, ರೆಸ್ಟೊರೆಂಟ್ ಗಳಲ್ಲಿ ಊಟ, ಬ್ಯಾಂಕ್ ಸೇವೆಗಳಾದ ಡಿಡಿ, ಹೊಸ ಚೆಕ್ಬುಕ್ ನೀಡಿಕೆ, ಲಾಕರ್ ಸೌಲಭ್ಯ ಹಾಗೂ ಎಟಿಎಂ ಶುಲ್ಕ.., ಚಲನಚಿತ್ರ ವೀಕ್ಷಣೆ, ಖಾಸಗಿ ಟ್ಯೂಷನ್ ಮತ್ತು ಕೋಚಿಂಗ್, ವಿಮಾನಯಾನ.

ಇವುಗಳಲ್ಲಿ ವಿಮಾನಯಾನದಂಥ ಸಂಗತಿಗಳನ್ನು ಉಳ್ಳವರ ಪಟ್ಟಿಯಲ್ಲಿ ಸೇರಿಸಿದರೂ ಉಳಿದವೆಲ್ಲ ಸಾಮಾನ್ಯನ ಜೀವನ ಪ್ರಭಾವಿಸುವಂಥವೇ. ಬ್ಯಾಂಕು ಮೊಬೈಲ್ ಸೇವೆಗಳ ಮೇಲೆ ತೆರಿಗೆ ಭಾರ ಹೇರಿ ‘ಎಲ್ಲರನ್ನೂ ಒಳಗೊಳ್ಳುವ ಹಣಕಾಸು ನೀತಿ ನಮ್ಮದು’ ಅಂತ ಭಾಷಣ ಬಿಗಿದರೇನು ಬಂತು?

ಹೊಸದಾಗಿ ಉದ್ಯಮಕ್ಕೆ ಎಳಸುವವರಿಗೆ ಇನ್ನಿಲ್ಲದ ಸೌಲಭ್ಯ ಮಾಡಿಕೊಡುತ್ತಿದ್ದೇವೆ ಅಂತ ಹೇಳುತ್ತಲೇ, ‘ಗೂಗಲ್ ಟ್ಯಾಕ್ಸ್’ ಪರಿಚಯಿಸಲಾಗಿದೆ. ಗೂಗಲ್, ಫೇಸ್ಬುಕ್, ಟ್ವಿಟ್ಟರ್ ನಂಥ ದೈತ್ಯ ಸಂಸ್ಥೆಗಳು ಈ ನೆಲದಿಂದ ಸಂಗ್ರಹಿಸುವ ಜಾಹೀರಾತಿನ ಮೇಲೆ ಸುಂಕ ಬಿದ್ದು, ಭಾರತೀಯ ಕಂಪನಿಗಳಿಗೆ ಸ್ಪರ್ಧೆ ಸಲೀಸಾಗಲಿ ಎಂಬ ಆಶಯವೇನೋ ಇದೆ. ಆದರೆ, ಈ ವಿದೇಶಿ ಕಂಪನಿಗಳು ತೆರಿಗೆಯನ್ನು ಗ್ರಾಹಕರಿಗೆ ದಾಟಿಸುತ್ತವೆಯೇ ವಿನಃ ಅವೇ ಭರಿಸುತ್ತವೆಯೇ ಎಂಬುದು ಪ್ರಶ್ನೆ. ಭಾರತದ್ದಲ್ಲದ ಕಂಪನಿಯಿಂದ ಇಲ್ಲಿನವರು ಆನ್ಲೈನ್ ಜಾಹೀರಾತು ಸೇವೆ ಪಡೆದಿದ್ದಕ್ಕೆ ಪ್ರತಿಯಾಗಿ ಪಾವತಿಸುವ ವಾರ್ಷಿಕ 1 ಲಕ್ಷಕ್ಕೆ ಮೀರಿದ ಪಾವತಿಗಳ ಮೇಲೆ ಶೇ. 6ರ ತೆರಿಗೆ ಇಂದಿನಿಂದ ಜಾರಿಗೆ ಬಂದಿದೆ. ಫೇಸ್ಬುಕ್, ಗೂಗಲ್ ನಂಥ ಪ್ರಸಿದ್ಧ ತಾಣಗಳಲ್ಲಿ ಭಾರತೀಯರು ತಮ್ಮ ಉತ್ಪನ್ನ ಅಥವಾ ಉದ್ದಿಮೆ ಬಗ್ಗೆ ಜಾಹೀರಾತು ನೀಡುತ್ತಾರಲ್ಲ… ಇವುಗಳಿಂದ ಗಳಿಸಿದ ಆದಾಯ ಅಷ್ಟೂ ನೇರವಾಗಿ ಅವರಿಗೇ ಸೇರುತ್ತಿತ್ತು. ಕಾರಣ ಅವು ಕಚೇರಿ ಹೊಂದಿರುವುದು ಬೇರೆ ದೇಶಗಳಲ್ಲಿ. ಈಗ ಅವು ತಮ್ಮ ಭಾರತೀಯ ಘಟಕಗಳ ಮೂಲಕ ತೆರಿಗೆ ಕಟ್ಟಬೇಕು. ಒಂದೊಮ್ಮೆ ಅವುಗಳ ಘಟಕ ಇಲ್ಲಿರದಿದ್ದರೆ ಜಾಹೀರಾತು ಸ್ಥಳ ಪಡೆಯುತ್ತಿರುವವರೇ ಈ ತೆರಿಗೆ ಕಟ್ಟಬೇಕು. ಈ ಕ್ರಮದಿಂದ ಈ ಕಂಪನಿಗಳ ಜಾಹೀರಾತು ದರ ಹೆಚ್ಚಳವಾಗಿ ಕೊನೆಗೂ ತಮ್ಮ ಸಣ್ಣ ಉದ್ದಿಮೆಗಳನ್ನು ಜಾಹೀರಾತು ಮೂಲಕ ಬೆಳೆಸಲು ಹೊರಟವರಿಗೆ ಮಾರಕವಾದೀತಾ ಎಂಬುದು ಸದ್ಯದ ಆತಂಕ.

₹ 10 ಲಕ್ಷಕ್ಕಿಂತ ಹೆಚ್ಚಿನ ದರದ ಕಾರು ಖರೀದಿಸಿದರೆ ಹೆಚ್ಚುವರಿ ಶೇ. 1 ತೆರಿಗೆ ಕಟ್ಟಬೇಕು. ಇರಲಿ ಬಿಡಿ.. ಇದು ಧನಿಕರ ಡಿಪಾರ್ಟ್ ಮೆಂಟ್.. ವಸ್ತು ಮತ್ತು ಸೇವೆಗಳ ಮೇಲೆ ₹2 ಲಕ್ಷಕ್ಕಿಂತ ಹೆಚ್ಚು ವ್ಯಯಿಸಿ ನಗದು ಪಾವತಿ ಮಾಡಿದ ಸಂದರ್ಭದಲ್ಲಿ ಅದರ ಮೇಲೆ ಶೇ. 1ರ ತೆರಿಗೆ.

ಈ ಎಲ್ಲ ಏರಿಳಿತ ಗಮನದಲ್ಲಿಟ್ಟುಕೊಂಡು ಜಿಡಿಪಿ ಹೆಚ್ಚಳಕ್ಕೆ ಸಂತಸಗೊಳ್ಳುವುದೋ, ತೆರಿಗೆಗಳ ಮೆರವಣಿಗೆಯಲ್ಲಿ ದುಬಾರಿ ದಿನ ಬಂತೆಂದು ಆತಂಕಿಸುವುದೋ ಎಂಬುದು ನಾಗರಿಕನಿಗೆ ಬಿಟ್ಟ ವಿಷಯ.

Leave a Reply