ಇದೊಳ್ಳೆ ಸುದ್ದಿ: ಮುಸ್ಲಿಂ ಮಹಿಳೆಯರೇ ತಲಾಕ್ ವಿರುದ್ಧ ನಿಂತಿದ್ದಾರೆ!

ಡಿಜಿಟಲ್ ಕನ್ನಡ ಟೀಮ್:

ಮುಸ್ಲಿಂ ವಿಚ್ಛೇದನ ಸಂಪ್ರದಾಯವಾದ ತಲಾಕ್ ವಿರುದ್ಧ ಆಗೀಗ ಅಲ್ಲೊಬ್ಬಳು, ಇಲ್ಲೊಬ್ಬಳು ಮಹಿಳೆ ಮಾತನಾಡುವುದು ಹಾಗೂ ಅದು ಒಂದಿಷ್ಟು ಸುದ್ದಿಗದ್ದಲ ಎಬ್ಬಿಸಿ ತಣ್ಣಗಾಗುವುದು ನಡೆದುಕೊಂಡೇ ಬಂದಿತ್ತು. ಆದರೆ ಇದೀಗ ಅದು ಮುಸ್ಲಿಂ ಸಮುದಾಯದ ಮಹಿಳೆಯರ ಒಂದು ಅಭಿಯಾನವಾಗಿ ರೂಪುಗೊಂಡಿರುವುದು ವಿಶೇಷ. ಈಗಲಾದರೂ ಅದು ನಿರ್ಣಾಯಕ ಹಂತಕ್ಕೆ ಹೋಗುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಹಳೆಓದು- ಮರುಓದು: ತಲಾಕ್ ವಿರುದ್ಧ ಶಯಾರಾ, ಬೆಂಬಲಿಸೋಕೆ ಪ್ರಗತಿಪರರು ತಯಾರಾ?

‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ (ಬಿಎಂಎಂಎ), ತಲಾಕ್ ಅನ್ನು ಕಾನೂನು ವಿರೋಧಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ, ಆನ್ಲೈನ್ ದಾವೆಗೆ 50 ಸಾವಿರ ಮುಸ್ಲಿಂ ಮಹಿಳೆಯರ ಸಹಿ ಸಂಗ್ರಹಿಸಿರುವುದಾಗಿ ಹೇಳಿದೆ. ಈ ಮೊದಲು ಒತ್ತಡಗಳಿಗೆ ಮಣಿದು ಸುಮ್ಮನಾಗುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಈ ಬಾರಿ ಒಗ್ಗಟ್ಟಿನಿಂದ ಆಂದೋಲನದ ಸ್ವರೂಪ ನೀಡುವ ಲಕ್ಷಣಗಳೆಲ್ಲ ಕಾಣುತ್ತಿವೆ.

ಆದರೆ ಮಹಿಳಾವಾದದ ನೆಲೆಯಲ್ಲಾಗಲೀ, ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆಯ ವೇದಿಕೆಗಳಾಗಲಿ ಬೇರೆ ವಿದ್ಯಮಾನಗಳಿಗೆ ಸ್ಪಂದಿಸಿದಂತೆ ಇದಕ್ಕೆ ಸ್ಪಂದನೆ ನೀಡಿಲ್ಲ ಎಂಬುದು ಸ್ಪಷ್ಟ. ಶಬರಿಮಲೆಗೆ ಸ್ತ್ರೀಯರ ಪ್ರವೇಶ, ತೃಪ್ತಿ ದೇಸಾಯಿ ಹೋರಾಟಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಹೋರಾಟಗಾರರೆಲ್ಲ ಯಾವ ವ್ಯಾಪ್ತಿಯ ಸಮಯ ಮೀಸಲಿಟ್ಟರೋ ಅಂಥ ಸ್ತ್ರೀ ವಿಮೋಚನೆ ಸಂವೇದನೆ ಇಲ್ಲಿ ಕಾಣುತ್ತಿಲ್ಲ ಎಂಬುದೂ ಸತ್ಯವೇ.

ಮುಸ್ಲಿಂ ಸಮುದಾಯದ ಮಹಿಳೆಯರೇ ಮಾಡುತ್ತಿರುವ ತಲಾಕ್ ವಿರೋಧಿ ಆಗ್ರಹವನ್ನು ಮುಸ್ಲಿಂ ಧರ್ಮಗುರುಗಳು ಹಾಗೂ ಮುಸ್ಲಿಂ ಯುವಕರ ಮುಂದೆ ತೆಗೆದುಕೊಂಡುಹೋಗಿ ಕಟುಪ್ರಶ್ನೆಗಳನ್ನು ಕೇಳುವ ಸನ್ನಿವೇಶ ಭಾರತದಲ್ಲಿನ್ನೂ ತೆಗೆದುಕೊಂಡಿಲ್ಲ ಎಂಬುದು ದುರಂತ.

ತಲಾಕ್ ಎಂದು ಮೂರು ಬಾರಿ ಹೇಳಿ ಪತ್ನಿಯನ್ನು ದೂರ ಮಾಡುವ ಕ್ರಮ ಕುರಾನ್ ನಲ್ಲಿ ಸಹ ಹೇಳಿಲ್ಲ ಎಂಬ ಪ್ರತಿಪಾದನೆ ಬಿಎಂಎಂಎ ಸಂಘಟನೆಯದ್ದು. ಈ ವಿಷಯದಲ್ಲಿ ತಮ್ಮ ಪರ ಧ್ವನಿ ಎತ್ತುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಈ ಸಂಘಟನೆ ಪತ್ರ ಬರೆದಿದೆ.

ತಲಾಕ್ ರದ್ದುಗೊಳಿಸುವಂತೆ ಸಂತ್ರಸ್ತೆ ಶಯಾರಾ ಬಾನು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. 25ರ ಹರೆಯದ ಜೈಪುರದ ಅಫ್ರೀನ್ ರೆಹ್ಮಾನ್ ಸಹ ಕೋರ್ಟ್ ಮೆಟ್ಟಿಲೇರಿದ್ದಾರೆ. ಇವರಿಗೆ ಪತಿ ಮಹಾಶಯ ಸ್ಪೀಡ್ ಪೋಸ್ಟ್ ನಲ್ಲಿ ತಲಾಕ್ ಎಂದು ವಿಚ್ಛೇದನ ನೀಡಿದ್ದ.

Leave a Reply