ರಾಜ್ಯ ಸರ್ಕಾರಿ ನೌಕರರ ಮುಷ್ಕರ- ನಾಳೆ ಯಾವುದೇ ಕೆಲಸ ಅನುಮಾನ, ರಾಹುಲ್ ಪದೋನ್ನತಿ ವದಂತಿ, ಥೈಲ್ಯಾಂಡ್ ದೇಗುಲದಲ್ಲಿ ಸತ್ತ ಹುಲಿಮರಿಗಳು ಎತ್ತಿರುವ ಪ್ರಶ್ನೆ…

ಮುಗೀತು ಬೇಸಿಗೆ ರಜೆ, ಬುಧವಾರ ಬೆಂಗಳೂರಲ್ಲಿ ಕಂಡ ಶಾಲೆಗೆ ಹೋಗುವ ಸಂಭ್ರಮ

– ರಾಜ್ಯ ಸರ್ಕಾರಿ ನೌಕರರ ಸಂಘ ಗುರುವಾರ ನಡೆಸಲಿರುವ ಮುಷ್ಕರಕ್ಕೆ ಸುಮಾರು 84 ಇಲಾಖೆಗಳ ನೌಕರ ಸಂಘಗಳು ಬೆಂಬಲ ನೀಡಿರುವುದರಿಂದ ನಾಳೆ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಸಂಬಳ- ಸವಲತ್ತುಗಳು ತಮಗೂ ಬೇಕು ಎಂದು ಆಗ್ರಹಿಸಿ, ಸಾಮೂಹಿಕವಾಗಿ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಯಲಿದೆ. ಅಧಿಕಾರಿಗಳು- ಸಚಿವರ ಚಾಲಕರೂ ಗೈರು ಹಾಜರಾಗುವ ಸಾಧ್ಯತೆ ಇದೆ.

 

– ಬರ ಮತ್ತು ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರವು ನೌಕರರ ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿದಿತ್ತು. ಆದರೆ ಬುಧವಾರದ ಆದೇಶದ ಪ್ರಕಾರ ಇದಕ್ಕೆ ಅನುವು ಮಾಡಿಕೊಟ್ಟಿದೆ. ವರ್ಗಾವಣೆ ಪ್ರಕ್ರಿಯೆ ಇರಲೇಬೇಕು ಎಂದು ಶಾಸಕರ ಒತ್ತಡವೂ ಇತ್ತು. ಆದರೆ ಭ್ರಷ್ಟಾಚಾರಕ್ಕೆ ಅನುವಾಗದಂತೆ ಮಿತ ಪ್ರಮಾಣದಲ್ಲಿ ವರ್ಗಾವಣೆ ಪ್ರಕ್ರಿಯೆ ಇರಬೇಕು ಎಂದು ಉಲ್ಲೇಖಿಸಲಾಗಿದೆ.

– ಬುಧವಾರ ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಅವರ ಪದೋನ್ನತಿಯದ್ದೇ ಸುದ್ದಿ. ಇನ್ನು ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮುಂತಾದ ಯುವ ನೇತಾರರ ತಂಡವೊಂದು ರಾಹುಲ್ ಬೆನ್ನಿಗಿರಲಿದೆ ಎಂಬ ಮೂಲಗಳನ್ನುಲ್ಲೇಖಿಸಿದ ವರದಿ ದಿನವಿಡೀ ಹಾರಾಡಿದೆ.  ಎಂದಿನಂತೆ ಕಾಂಗ್ರೆಸ್ಸಿಗರು ಈ ಸಾಧ್ಯತೆಯನ್ನು ಪ್ರಶಂಸಿಸಿದರೆ, ಎನ್ ಡಿ ಎ ಪಕ್ಷಗಳು ‘ರಾಹುಲ್ ಬಂದು ಉದ್ದರಿಸೋದಕ್ಕೆ ಏನಿದೆ’ ಎಂದು ಗೇಲಿ ಮಾಡಿದವು.

– ಥೈಲ್ಯಾಂಡಿನ ಪ್ರಸಿದ್ಧ ‘ಟೈಗರ್ ಟೆಂಪಲ್’ನ ಫ್ರೀಜರ್ ವ್ಯವಸ್ಥೆಯಲ್ಲಿ ಸತ್ತುಹೋಗಿರುವ 40 ಹುಲಿಮರಿಗಳನ್ನು ಅರಣ್ಯಾಧಿಕಾರಿಗಳು ಬೆಳಕಿಗೆ ತಂದಿರುವುದು, ಪ್ರಾಣಿ ಸಾಗಣೆಯ ಮಾಫಿಯಾ ಒಂದರ ಶಂಕೆಯ ಚಿತ್ರಣವನ್ನು ಬಿಚ್ಚಿಟ್ಟಿದೆ. ಈ ಪ್ರಸಿದ್ಧ ಬೌದ್ಧ ದೇವಾಲಯ ಲಾಗಾಯ್ತಿನಿಂದಲೂ ಹುಲಿ ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾದದ್ದು. ವಿದೇಶಿ ಯಾತ್ರಿಕರು ಹುಲಿಗಳ ಜತೆ ಫೋಟೊ ತೆಗೆಸಿಕೊಳ್ಳಲೆಂದೇ ಅಲ್ಲಿ ಶುಲ್ಕ ತೆತ್ತು ಹೋಗುತ್ತಾರೆ. ಇದರಿಂದ ಆ ಬೌದ್ಧ ದೇವಾಲಯಕ್ಕೆ ಭಾರಿ ಆದಾಯವೂ ಇದೆ. ಇದೀಗ ಹುಲಿಮರಿಗಳ ಸತ್ತ ಸ್ಥಿತಿ ಬೇರೆಯದೇ ಚಿತ್ರಣವನ್ನು ಕೊಡುತ್ತಿದ್ದು, ಅಲ್ಲಿಂದ ಹುಲಿಗಳನ್ನು ಸ್ಥಳಾಂತರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಲ್ಲಿನ ಬೌದ್ಧ ಭಿಕ್ಕುಗಳು ಮಾತ್ರ ಇದನ್ನು ವಿರೋಧಿಸಿ, ದೇವಾಲಯವು ಯಾವುದೇ ರೀತಿಯಲ್ಲಿ ಅಕ್ರಮ ಪ್ರಾಣಿ ಸಾಗಣೆಯಲ್ಲಿ ಶಾಮೀಲಾಗಿಲ್ಲ ಎಂದು ವಾದಿಸಿದ್ದಾರೆ. ಹುಲಿಮರಿಗಳು ಜನನ ಸಂದರ್ಭದಲ್ಲಿ ಹೀಗೆ ಸಾಯೋದು ಸಹಜ ಎಂಬ ವಾದ ಅವರದ್ದು. ಕಾಣೆಯಾಗಿದ್ದ 137 ಹುಲಿಗಳನ್ನು ಹುಡುಕುತ್ತ ಅಲ್ಲಿ ತೆರಳಿದ್ದ ಸಂರಕ್ಷಕರ ಎದುರು ಈ ಕರಾಳ ಚಿತ್ರಣ ತೆರೆದುಕೊಂಡಿದೆ.

thiland tiger

Leave a Reply