ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆ ತೀರ್ಪು ಪ್ರಕಟ: 24 ಮಂದಿ ಅಪರಾಧಿ, 36 ಮಂದಿ ನಿರ್ದೋಷಿಗಳ ಪಟ್ಟಿಯಲ್ಲಿ ಬಿಜೆಪಿ ಕಾರ್ಪೊರೆಟರ್ ಸೇರಿರೋದಕ್ಕೆ ಸಂತ್ರಸ್ತರ ಅಸಮಾಧಾನ

ಡಿಜಿಟಲ್ ಕನ್ನಡ ಟೀಮ್

2002 ರ ಗೋಧ್ರಾ ಹತ್ಯಾಕಾಂಡದ ಪ್ರತಿಕಾರವಾಗಿ ನಡೆದ ಅಹಮದಾಬಾದ್ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆಯ ತೀರ್ಪು ಗುರುವಾರ ಹೊರಬಂದಿದೆ. 66 ಆರೋಪಿಗಳ ಪೈಕಿ 24 ಮಂದಿಯನ್ನು ಅಪರಾಧಿಗಳೆಂದು 36 ಮಂದಿ ನಿರ್ದೋಷಿಗಳೆಂದು ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತಪ್ಪಿತಸ್ಥರ ಶಿಕ್ಷೆ ಪ್ರಮಾಣವನ್ನು ಜೂನ್ 6 ರಂದು ಪ್ರಕಟಿಸಲಿದೆ.

ಇಂಥದೊಂದು ನ್ಯಾಯ ತೀರ್ಪಿಗೆ ಸಂತ್ರಸ್ತರು ಕಾಯಬೇಕಾಗಿ ಬಂದಿದ್ದು ಬರೋಬ್ಬರಿ 14 ವರ್ಷಗಳು ಎಂಬುದು ಗಮನಿಸಬೇಕಾದ ಅಂಶ.

ಪ್ರಕರಣದಲ್ಲಿ 65 ಆರೋಪಿಗಳ ಪೈಕಿ, ನಾಲ್ಕು ಬಾರಿ ಬಿಜೆಪಿ ಕಾರ್ಪೋರೇಟರ್ ಆಗಿದ್ದ ಬಿಪಿನ್ ಪಟೇಲ್ ಸಹ ಪ್ರಮುಖರಾಗಿದ್ದರು. ಈ ತೀರ್ಪಿನಲ್ಲಿ ಬಿಪಿನ್ ನಿರ್ದೋಷಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಫೆ.27 2002 ರಲ್ಲಿ ಗೋಧ್ರಾ ರೈಲ್ವೇ ನಿಲ್ಧಾಣ ಬಳಿ ಸಬರ್ಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ 59 ಮಂದಿಯ ಸಜೀವ ದಹನದ ಬೆನ್ನಲ್ಲೇ, ಫೆ.28 2002 ರಂದು 20 ಸಾವಿರ ಉದ್ರಿಕ್ತರ ಗುಂಪು ಗುಲ್ಬರ್ಗ್ ಸೊಸೈಟಿ ಮೇಲೆ ದಾಳಿ ಮಾಡಿ 29 ಬಂಗಲೆಗಳು, 10 ಅಪಾರ್ಟ್ ಮೆಂಟ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ಕಾಂಗ್ರೆಸ್ ಮಾಜಿ ನಾಯಕ ಇಶಮ್ ಜಾಫ್ರಿ ಸೇರಿದಂತೆ ಒಟ್ಟು 69 ಮಂದಿ ಸಜೀವ ದಹನವಾಗಿದ್ದರು.

ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ (77) ತೀರ್ಪಿನ ಬಗ್ಗೆ ಅತೃಪ್ತಿ ತೋರಿದ್ದು, ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ಕಾರ್ಪೊರೆಟರ್ ಬಿಡುಗಡೆಗೊಂಡಿರುವ ಬಗ್ಗೆ ಅವರಿಗೆ ಅಸಮಾಧಾನವಿದೆ. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು ಎಂಬುದೂ ಅವರ ಆಗ್ರಹ. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾಕಿಯಾ ಅವರ ಅರ್ಜಿಯ ವಿಚಾರಣೆ ಇನ್ನು ಹೈ ಕೋರ್ಟ್ ನಲ್ಲಿ ನಡೆಯುತ್ತಿದೆ.

ಗುಜರಾತ್ ನಲ್ಲಿ 9 ಗಲಭೆಗಳ ಪೈಕಿ ಗುಲ್ಬರ್ಗ್ ಸೊಸೈಟಿಯ ಗಲಭೆ ಸಹ ಪ್ರಮುಖವಾಗಿತ್ತು. ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಹಾಗೂ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಈ ಪ್ರಕರಣದ ತನಿಖೆ ಕುರಿತಂತೆ ತಡೆಯಾಜ್ಞೆ ತಂದಿತ್ತು. ನಂತರ ಸಿಬಿಐಗೆ ತನಿಖೆ ಒಪ್ಪಿಸಿ ವಿಚಾರಣೆಯನ್ನು ಗುಜರಾತ್ ನಿಂದ ಹೊರಗಡೆ ನಡೆಸುವಂತೆ ಕೋರಿತ್ತು.

ಈ ಮನವಿ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್, 2008 ಮಾರ್ಚ್ 26 ರಂದು, ಸಿಬಿಐ ಮಾಜಿ ಮುಖ್ಯಸ್ಥ ಆರ್.ಕೆ ರಾಘವನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ನೇಮಿಸಲು ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

2009 ರಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಗಲಭೆಗೆ ಅವಕಾಶ ಮಾಡಿಕೊಟ್ಟ ಹಾಗೂ ಪ್ರಕರಣದಲ್ಲಿ ಸಾಕ್ಷಾಧಾರ ತಿರುಚಿದ ಆರೋಪದಲ್ಲಿ ಆಗಿನ ಡಿಎಸ್ಪಿ ಎರ್ಡಾ ಅವರನ್ನು ಬಂಧಿಸಲಾಗಿತ್ತು. ಎಸ್ಐಟಿ 2010 ಮೇ 14 ರಂದು ತನ್ನ ವರದಿಯನ್ನು ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವಿಚಾರಣೆ ನಡೆಸಿ ಮೇ 31ರ ಒಳಗೆ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

Leave a Reply