ತೆಲಂಗಾಣ@2, ಚತ್ತೀಸ್ಗಡದಲ್ಲಿ ಅಜಿತ್ ಜೋಗಿ ಕಾಂಗ್ರೆಸ್ ಬಿಡೋ ಸೂಚನೆ, ಕೊಲಾಬಾದಲ್ಲಿ ಬೆಂಕಿ, ಕಾಗೆಯೊಂದು ಹಾರಿಬಂದು ಸಿಎಂ ಕಾರಲಿ ಕುಳಿತುಕೊಂಡು…

ಕೆಲಸಕ್ಕೆ ತೆರಳದೇ ಮುಷ್ಕರ ನಡೆಸಿ ಬೇಡಿಕೆಗಳ ಒತ್ತಾಯಕ್ಕೆ ಆಗ್ರಹಿಸುವ ರಾಜ್ಯ ಸರ್ಕಾರದ ನೌಕರರ ಮುಷ್ಕರ ಒಳ್ಳೆ ಪ್ರತಿಕ್ರಿಯೆ ಪಡೆಯಿತು. ವಿಧಾನಸೌಧದ ನಾನಾ ಕಚೇರಿಗಳು ಬಿಕೊ ಎನ್ನುತ್ತಿದ್ದ ದೃಶ್ಯ.

 

  • ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ದೇಶದ 3 ನೇ ಪ್ರಮುಖ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದ್ದು ಒಟ್ಟಾರೆ ಆಂತರಿಕ ಉತ್ಪನ್ನದ ಪ್ರಮಾಣ 120 ಬಿಲಿಯನ್ ಡಾಲರ್ ಗಳಿಗೇರಿದೆ. ಇದು ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಭಾರತದ ಏಳು ಮಂದಿ ರಾಯಭಾರಿಗಳು ಹಾಗೂ ಹೈ ಕಮೀಷನರ್ ಗಳ ಜತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ ಮಾಹಿತಿ. ಇದರಲ್ಲಿ ರಾಜ್ಯದ ಸಾಫ್ಟ್ ವೇರ್ ಉತ್ಪನ್ನಗಳ ರಫ್ತೇ ಪ್ರಾಧಾನ್ಯ ವಹಿಸಿದ್ದು, ದೇಶದ ಸಾಫ್ಟ್ ವೇರ್ ರಫ್ತಿನ ಪೈಕಿ ಶೇ. 40ರಷ್ಟು ರಾಜ್ಯದಿಂದಲೇ ಹೋಗುತ್ತಿವೆ ಎಂದಿದ್ದಾರೆ. ತಮ್ಮ ಸರ್ಕಾರದ ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮ ಪ್ರಶಂಸಿಸಿಕೊಂಡ ಮುಖ್ಯಮಂತ್ರಿ, ರಾಜ್ಯದಲ್ಲಿ ಹೂಡಿಕೆ ಮಾಡುವವರಿಗೆ ಮೂಲ ಸೌಕರ್ಯಗಳು ಉತ್ತಮವಾಗಿವೆ ಎಂದರು.
  • ತೆಲಂಗಾಣದಲ್ಲಿ ಪ್ರತ್ಯೇಕ ರಾಜ್ಯದ ಎರಡನೇ ವರ್ಷಾಚರಣೆ ಸಂಭ್ರಮ ಜೋರಾಗಿ ನಡೆದಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ಅದ್ಧೂರಿ ಸಮಾರಂಭ ನಡೆಸಲಾಗಿದೆ. ಈ ಸಂದರ್ಭದಲ್ಲಿ ದೇಶದ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜ (291 ಅಡಿ) ಹಾರಿಸಲಾಗಿದ್ದು, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 15 ಹೊಸ ಜಿಲ್ಲೆಗಳನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಅದ್ಧೂರಿ ಸಮಾರಂಭ ನಡೆಸಿರುವುದು ವ್ಯಾಪಕ ಟೀಕೆಗೂ ಕಾರಣವಾಗಿದೆ. ‘ಸಾಕಷ್ಟು ಸಂಖ್ಯೆಯಲ್ಲಿ ಬಡವರು ಸಾಯುತ್ತಿರುವಾಗ ಈ ಸಮಾರಂಭಕ್ಕಾಗಿ ಸರ್ಕಾರ ನೂರಾರು ಕೋಟಿ ವ್ಯಯಿಸಿದೆ. ಇದರಿಂದ ಚಂದ್ರಶೇಖರ್ ಅವರಿಗೆ ನಾಚಿಕೆಯಾಗಬೇಕು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ.
  • ಚತ್ತೀಸ್ಗಡ ಕಾಂಗ್ರೆಸ್ ನಿಂದ ಹೊರಬಂದಿರುವ ಹಿರಿಯ ನಾಯಕ ಅಜಿತ್ ಜೋಗಿಗೆ ಕಾಂಗ್ರೆಸ್ ಗೆ ಪರ್ಯಾಯವಾಗಿ ಹೊಸ ಪಕ್ಷ ಕಟ್ಟುವುದಾಗಿ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ನಿಂದ ಹೊರಬಂದ ನಂತರ ರಾಜ್ಯ ಅಭಿವೃದ್ಧಿಯಾಗಬೇಕಾದರೆ ರಮಣ್ ಸಿಂಗ್ ನೇತೃತ್ವದ ಬಿಜೆಪಿಯನ್ನು ಕಿತ್ತೊಗೆಯಬೇಕು. ಸಾವಿರಾರು ಸಂಖ್ಯೆಯಲ್ಲಿ ಜನರು ಮತ್ತು ಕಾರ್ಯಕರ್ತರು ಹೊಸ ಪಕ್ಷ ಕಟ್ಟಲು ಮನವಿ ಮಾಡಿಕೊಂಡಿದ್ದಾರೆಂದು ತಿಳಿಸಿದ್ದಾರೆ ಅಜಿತ್ ಜೋಗಿ.
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆಯೊಂದು ಕುಳಿತು ಅವರ ಕಾರು ಸಾಗದಂತೆ ತಡೆದ ಘಟನೆ ಗುರುವಾರ ನಡೆದಿದೆ. ಇದು ಅನಗತ್ಯ ಪ್ರಾಮುಖ್ಯ ಪಡೆದು ಮಾಧ್ಯಮಗಳಲ್ಲಿ ವಿನಾಕಾರಣ ಚರ್ಚೆಯಾಗಿದ್ದು ಮಾತ್ರ ವಿಪರ್ಯಾಸ. ಬೆಳಗ್ಗೆ 11 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳು ತಮ್ಮ ಗೃಹ ಕೃಷ್ಣದಿಂದ ಕಾರ್ಯಕ್ರಮವೊಂದಕ್ಕೆ ಹೊರಟರು. ಈ ಸಂದರ್ಭದಲ್ಲಿ ಕಾರಿನ ಮೇಲೆ ಕಾಗೆ ಕುಳಿತಿತ್ತು. ಈ ವೇಳೆ ಕಾಗೆ ಓಡಿಸಲು ಸಿಬ್ಬಂದಿ 10 ನಿಮಿಷಗಳ ಕಾಲ ಪ್ರಯತ್ನಿಸಿದರು. ಕಾಗೆ ತನ್ನ ಜಾಗ ಕದಲಿಸದೇ ಇದ್ದಾಗ ಸಿಬ್ಬಂದಿ ಅದನ್ನು ಹಿಡಿದು ಬೇರೆಡೆಗೆ ಎತ್ತಿಕೊಂಡು ಹೋಗಿ ಬಿಟ್ಟರು. ಇದಾದ 10 ನಿಮಿಷದ ನಂತರ ಸಿಎಂ ತಮ್ಮ ಪ್ರಯಾಣ ಆರಂಭಿಸಿದರು. ಇತ್ತ ಇದರ ಶಕುನದ ಬಗ್ಗೆ ಚರ್ಚೆಗಳು ರಂಗೇರಿದವು.
  • ಬಿಹಾರದ ಸಿವಾನ್ ನಲ್ಲಿ ಪತ್ರಕರ್ತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಲಡ್ಡನ್ ಮಿಯಾನ್ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. 15 ದಿನಗಳ ಹಿಂದೆ ಹಿಂದೂಸ್ಥಾನ ಎಂಬ ಹಿಂದಿ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪತ್ರಕರ್ತ ರಾಜ್ ದೇವ್ ರಂಜನ್ ಅವರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಮುಖ ಆರೋಪಿ ಮಿಯಾನ್ ಶರಣಾಗಿದ್ದಾನೆ. ಈತ ಆರ್ ಜೆಡಿ ಮಾಜಿ ಸಂಸದ ಮೊಹಮದ್ ಶಹಬುದ್ದೀನ್ ಆಪ್ತನಾಗಿದ್ದಾನೆ. ಆ ಮೂಲಕ ಈ ಕೊಲೆ ಪ್ರಕರಣದಲ್ಲಿ ಶಹಬುದ್ದೀನ್ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
  • ಮುಂಬೈ ದಕ್ಷಿಣ ಭಾಗದಲ್ಲಿರುವ ಕೊಲಾಬಾ ವ್ಯಾಪಾರಿ ಮಳಿಗೆಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಈ ಅವಘಡಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. 12 ಅಗ್ನಿಶಾಮಕದ ವಾಹನಗಳು ಬೆಂಕಿ ಆರಿಸಲು ಪ್ರಯತ್ನಿಸುತ್ತಿದ್ದು ದಟ್ಟವಾಗಿ ಹೊಗೆ ಆಕ್ರಮಿಸಿಕೊಂಡಿದೆ. ಈ ಸಂದರ್ಭದಲ್ಲಿ ಯಾವುದೇ ಹಾನಿಯ ಬಗ್ಗೆಯೂ ಅಧಿಕೃತ ಮಾಹಿತಿ ಬಂದಿಲ್ಲ. ಈ ವಾಣಿಜ್ಯ ಕಟ್ಟಡದಲ್ಲಿ ಮನೆಗಳು ಹಾಗೂ ವ್ಯಾಪಾರ ಮಳಿಗೆಗಳು ಎರಡೂ ಇವೆ.
  • 2002 ರ ಗೋಧ್ರಾ ಹತ್ಯಾಕಾಂಡದ ಪ್ರತಿಕಾರವಾಗಿ ನಡೆದ ಅಹಮದಾಬಾದ್ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆಯ ತೀರ್ಪು ಗುರುವಾರ ಹೊರಬಂದಿದೆ. 66 ಆರೋಪಿಗಳ ಪೈಕಿ 24 ಮಂದಿಯನ್ನು ಅಪರಾಧಿಗಳೆಂದು 36 ಮಂದಿ ನಿರ್ದೋಷಿಗಳೆಂದು ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತಪ್ಪಿತಸ್ಥರ ಶಿಕ್ಷೆ ಪ್ರಮಾಣವನ್ನು ಜೂನ್ 6 ರಂದು ಪ್ರಕಟಿಸಲಿದೆ. ಇಂಥದೊಂದು ನ್ಯಾಯ ತೀರ್ಪಿಗೆ ಸಂತ್ರಸ್ತರು ಕಾಯಬೇಕಾಗಿ ಬಂದಿದ್ದು ಬರೋಬ್ಬರಿ 14 ವರ್ಷಗಳು ಎಂಬುದು ಗಮನಿಸಬೇಕಾದ ಅಂಶ. ವಿವರಗಳು ಇಲ್ಲಿವೆ.

Leave a Reply