ಏಕನಾಥ ಖಡ್ಸೆಯನ್ನು ಅಧಿಕಾರದಲ್ಲಿರಿಸಿಕೊಂಡು ವಾದ್ರಾ ಮೇಲಿನ ಆರೋಪಗಳನ್ನು ಹೇಗೆ ಪ್ರಶ್ನಿಸೀತು ಬಿಜೆಪಿ?

ಪ್ರವೀಣಕುಮಾರ್

ಮಹಾರಾಷ್ಟ್ರ ಬಿಜೆಪಿ ಹಿರಿಯ ನಾಯಕ ಹಾಗೂ ಕಂದಾಯ ಸಚಿವ ಏಕನಾಥ ಖಡ್ಸೆವಿರುದ್ಧದ ಆರೋಪಗಳು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖಡ್ಸೆ ವಿರುದ್ಧದ ಆರೋಪ ಪ್ರಕರಣ ಕುರಿತ ವರದಿ ಕೇಳಿದ್ದಾರೆ. ಜತೆಗೆ ಆರೆಸ್ಸೆಸ್ ಸಹ ಈ ವಿಷಯದಲ್ಲಿ ಖಡ್ಸೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಸುಮ್ಮನೇ ಕಲ್ಪಿಸಿಕೊಳ್ಳಿ. ದಾವೂದ್ ಇಬ್ರಾಹಿಂಗೆ ಇಲ್ಲಿನ ವ್ಯಕ್ತಿಯ ಫೋನಿನಿಂದ ಕರೆಗಳು ಹೋಗಿವೆ ಎಂಬ ವಿದ್ಯಮಾನದಲ್ಲಿ ಕಾಂಗ್ರೆಸ್ಸಿನ ಸದಸ್ಯರ ಮೇಲೇನಾದರೂ ಆರೋಪ ಕೇಳಿಬಂದಿದ್ದರೆ ಬಿಜೆಪಿ ಪ್ರತಿಕ್ರಿಯಿಸುತ್ತಿದ್ದ ರೀತಿ ಹೇಗಿರುತ್ತಿತ್ತು? ಇವರು ರಾಷ್ಟ್ರದ್ರೋಹಿಗಳು, ಪಾಕಿಸ್ತಾನಕ್ಕೆ ಹೋಗಲಿ ಎಂಬ ಮಾತುಗಳೊಂದಿಗೇ ಬಲಪಂಥೀಯ ವಲಯದಲ್ಲಿ ಕೂಗೇಳುತ್ತಿತ್ತು ಅಂತ ಊಹಿಸುವುದೇನು ಕಷ್ಟವಲ್ಲ. ಈ ಕಾಲ್ ರೆಕಾರ್ಡ್ ಪ್ರಕರಣವನ್ನು ಖಾಸಗಿ ಹ್ಯಾಕರ್ ಒಬ್ಬ ಬೇಧಿಸಿರುವುದು, ನಮ್ಮ ತನಿಖಾ ಸಂಸ್ಥೆಗಳು ಇನ್ನಷ್ಟೇ ಆ ಬಗ್ಗೆ ಸಿಕ್ಕು ಬಿಡಿಸಲಿಕ್ಕಿದೆ ಎಂಬುದೆಲ್ಲ ಸರಿ. ಆದರೆ ಯಾವತ್ತೂ ದೇಶ ರಕ್ಷಣೆ, ಗಡಿ ಸುಭದ್ರತೆ, ಇಸ್ಲಾಮಿಕ್ ಭಯೋತ್ಪಾದನೆ ಎಂದೆಲ್ಲ ಮಾತನಾಡುವ ಬಿಜೆಪಿಗೆ ಪಾಲಿಗೆ ಇದೊಂದು ಗಂಭೀರ ಆರೋಪವಂತೂ ಆಗಲೇಬೇಕು. ‘ಆ ನಂಬರ್ ತಾನು 2 ವರ್ಷದಿಂದ ಬಳಸುತ್ತಿಲ್ಲ. ಸಾಫ್ಟ್ ವೇರ್ ಬಳಸಿಕೊಂಡು ಹೀಗೆ ಮಾಡಿದ್ದಾರೆ’ ಎಂಬ ಸಮರ್ಥನೆ ಹೇಳಿದ್ದರೂ, ತನ್ನ ನಂಬರೇ ಅಲ್ಲ ಎಂದು ವಾದಿಸುವುದು ಖಡ್ಸೆಗೆ ಈವರೆಗೆ ಸಾಧ್ಯವಾಗಿಲ್ಲ ಎಂಬುದೂ ಗಮನಾರ್ಹ.

ಇದಕ್ಕೆ ಕಳಶವಿಟ್ಟಂತೆ ಎದುರಾಗಿರುವುದು ಖಡ್ಸೆ ವಿರುದ್ಧದ ಭ್ರಷ್ಟಾಚಾರ ಆರೋಪ.

ಪುಣೆ ಸಮೀಪದ ಜಮೀನೊಂದನ್ನು ಮಾರುಕಟ್ಟೆ ಬೆಲೆಯಾಗಿರುವ ₹ 30 ಕೋಟಿಗೆ ಬದಲಾಗಿ ₹ 3.70 ಕೋಟಿಗಳಿಗೆ ತಮ್ಮ ಪತ್ನಿ ಮತ್ತು ಅಳಿಯನಿಗೆ ದೊರಕಿಸಿಕೊಟ್ಟಿರುವ ಅಧಿಕಾರ ದುರುಪಯೋಗದ ಆರೋಪ ಖಡ್ಸೆ ವಿರುದ್ಧವಿದೆ. ಸರ್ಕಾರಿ ದಾಖಲೆಗಳಲ್ಲಿ ಮಾರುಕಟ್ಟೆ ಮೌಲ್ಯ ಸ್ಪಷ್ಟವಾಗಿ ನಮೂದಾಗಿರುವಾಗ ಖಡ್ಸೆ ಕುಟುಂಬದವರಿಗೆ ಅಷ್ಟು ಕಡಿಮೆ ಬೆಲೆಗೆ ಸಿಕ್ಕಿದ್ದು ಹೇಗೆ ಎಂಬುದು ಜನಸಾಮಾನ್ಯನಿಗೂ ಕಾಡುವ ಪ್ರಶ್ನೆ.

ಎಲ್ಲರಿಗೂ ಸಮರ್ಥನೆಗಳಿರುವಂತೆ ಖಡ್ಸೆಗೂ ಇದೆ. ಇದು ಪಕ್ಷದೊಳಗೇ ನಡೆಯುತ್ತಿರುವ ಅಧಿಕಾರ ತಿಕ್ಕಾಟದ ಫಲ ಎಂದೂ, ಮಹಾರಾಷ್ಟ್ರದ ಪ್ರಬಲ ಒಬಿಸಿ ನಾಯಕರಾಗಿರುವ ಖಡ್ಸೆಯನ್ನು ನೇಪಥ್ಯಕ್ಕೆ ಸರಿಸಿದರೆ ಬಿಜೆಪಿಯನ್ನು ದುರ್ಬಲಗೊಳಿಸಬಹುದೆಂಬ ಷಡ್ಯಂತ್ರವಿದೆ ಎಂದೂ ಹಲವು ಕಾರಣಗಳನ್ನು ಖಡ್ಸೆ ಸಮರ್ಥಕರು ನೀಡುತ್ತಿದ್ದಾರೆ. ಇವೆಲ್ಲ ಕೇವಲ ಆರೋಪಗಳು ಅಷ್ಟೇ ಅಂತಲೂ ರಾಗ ಎಳೆಯುತ್ತಿದ್ದಾರೆ.

ಹೀಗೆ ಹೇಳುವುದಾದರೆ…

ಅದ್ಯಾವ ಮುಖ ಇಟ್ಟುಕೊಂಡು ರಾಬರ್ಟ್ ವಾದ್ರಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತೀರಿ? ಸೋರಿಕೆಯಾಗಿರುವ ತನಿಖಾ ಏಜೆನ್ಸಿ ವರದಿ ಇಟ್ಟುಕೊಂಡು ವಾದ್ರಾ ಕುರಿತು ಪ್ರಶ್ನಿಸಬಹುದಾದರೆ, ಖಡ್ಸೆ ವಿಷಯದಲ್ಲಿ ಬಿಜೆಪಿ ನೈತಿಕ ಮೇಲ್ಮಟ್ಟ ತೋರಬಾರದೇ? ‘ತನ್ನ ವಿರುದ್ಧವೂ ಆರೋಪಗಳಷ್ಟೇ ಇವೆ. ಯಾವುದೂ ಸಾಬೀತಾಗಿಲ್ಲ’ ಎಂಬ ವಾದವನ್ನು ಖಡ್ಸೆ ರೀತಿಯಲ್ಲೇ ವಾದ್ರಾ ಸಹ ಬಳಸಬಹುದಲ್ಲ?

Leave a Reply