‘ಅಸಹಿಷ್ಣುತಾ ಪರ್ವ’ ಮತ್ತೆ ಆರಂಭವಾದೀತು, ಏಕಂದ್ರೆ ಇಂದಿರಾ ಜೈಸಿಂಗ್ ಎನ್ಜಿಒಗೆ ಹೋಗಿದೆ ನೋಟೀಸು!

ಡಿಜಿಟಲ್ ಕನ್ನಡ ಟೀಮ್:

ಈ ಹಿಂದೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದವರು ಇಂದಿರಾ ಜೈಸಿಂಗ್. ಇವರ ಸ್ವಯಂಸೇವಾ ಸಂಸ್ಥೆ ‘ಲಾಯರ್ಸ್ ಕಲೆಕ್ಟಿವ್’ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವುದಾಗಿ ಹೇಳಿರುವ ಸರ್ಕಾರ ಮುಂದಿನ ಆರು ತಿಂಗಳ ಅವಧಿಗೆ ಈ ಸ್ವಯಂಸೇವಾ ಸಂಸ್ಥೆ ವಿದೇಶಿ ದೇಣಿಗೆ ಪಡೆಯುವುದಕ್ಕೆ ಪ್ರತಿಬಂಧ ಹೇರಿದೆ. ಅಲ್ಲದೇ, ವಿದೇಶಿ ಹಣವನ್ನು ಅನ್ಯಕಾರ್ಯಗಳಿಗೆ ಬಳಸಿಕೊಂಡಿರುವುದರಿಂದ ನಿಮ್ಮ ಸ್ವಯಂಸೇವಾ ಸಂಸ್ಥೆಯ ವಿದೇಶಿ ಹಣ ಸ್ವೀಕೃತಿಯ ಮಾನ್ಯತೆ ರದ್ದುಗೊಳಿಸಬಾರದೇಕೆ ಎಂದೂ ಗೃಹ ಸಚಿವಾಲಯದ ನೋಟೀಸ್ ಪ್ರಶ್ನಿಸಿದೆ.

‘ಇದು ಎನ್ ಡಿ ಎ ಸರ್ಕಾರವು ನಮ್ಮನ್ನು ಹತ್ತಿಕ್ಕಲು ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿರುವುದರ ಉದಾಹರಣೆ. ತನ್ನ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಬಿಜೆಪಿಯ ಅಮಿತ್ ಶಾ ಅವರ ವಿರುದ್ಧ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಕ್ಕೆ ಪ್ರತಿಯಾಗಿ ಇಂಥ ಕ್ರಮ ಅನುಸರಿಸಲಾಗುತ್ತಿದೆ’ ಅಂತ ಇಂದಿರಾ ಜೈಸಿಂಗ್ ಮತ್ತು ಅವರ ಸ್ವಯಂಸೇವಾ ಸಂಸ್ಥೆ ದೂರುತ್ತಿದೆ.

ಆದರೆ…

ನೋಟೀಸ್ ಎತ್ತಿರುವ ಯಾವ ಪ್ರಶ್ನೆಗಳಿಗೂ ಜೈಸಿಂಗ್ ತಮ್ಮ ಟ್ವೀಟ್ ಗಳಲ್ಲಾಗಲೀ, ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗಳಲ್ಲಾಗಲೀ ಸೂಕ್ತ ಸಮಜಾಯಿಷಿ ಕೊಟ್ಟಿಲ್ಲ. ಎನ್ ಡಿ ಎ ಸರ್ಕಾರವು ಇಂದಿರಾ ಜೈಸಿಂಗ್ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತಿದೆ ಎಂಬುದನ್ನು ವಾದಕ್ಕಾಗಿ ಒಪ್ಪಿಕೊಂಡರೂ, ಇಲ್ಲಿ ಉಳಿಯುವ ಪ್ರಶ್ನೆ- ಜೈಸಿಂಗ್ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವುದು ಹೌದೋ ಅಲ್ಲವೋ ಅಂತ ಮಾತ್ರ. ಈ ನಿಟ್ಟಿನಲ್ಲಿ ಗೃಹ ಸಚಿವಾಲಯದ ಆದೇಶದಲ್ಲಿ ಕೇಳಿರುವ ಪ್ರಶ್ನೆಗಳು ಹೀಗಿವೆ:

-ಜುಲೈ 2009 ಮತ್ತು ಮೇ 2014ರ ನಡುವೆ ಜೈಸಿಂಗ್ ಭಾರತ ಸರ್ಕಾರದ  ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಯಲ್ಲಿದ್ದಾಗಲೇ ‘ಲಾಯರ್ಸ್ ಕಲೆಕ್ಟಿವ್’ ಅವರಿಗೆ ₹96.60 ಲಕ್ಷ ರುಪಾಯಿಗಳ ಸಂಭಾವನೆ ಕೊಟ್ಟಿದೆ. ಹಿರಿಯ ಕಾನೂನು ಅಧಿಕಾರಿಯೊಬ್ಬರು ಸರ್ಕಾರಿ ಸೇವೆಯಲ್ಲಿದ್ದಾಗಲೇ ಖಾಸಗಿ ಗುಂಪಿನಿಂದ, ಯಾವುದೇ ಉದ್ದೇಶ ನಿಖರತೆ ಇಲ್ಲದೇ ದೊಡ್ಡಮಟ್ಟದ ಹಣವನ್ನು ಹೀಗೆ ಪಡೆದಿರುವುದು ನಿಸ್ಸಂಶಯವಾಗಿ ಕಾಯ್ದೆ ಉಲ್ಲಂಘನೆ.

– ಲಾಯರ್ಸ್ ಕಲೆಕ್ಟಿವ್ ನ ಇನ್ನೊಬ್ಬ ಸಂಸ್ಥಾಪಕರಾಗಿರುವ ಜೈಸಿಂಗ್ ಪತಿ ಆನಂದ ಗ್ರೋವರ್, 2008 ಮತ್ತು 2014ರ ನಡುವೆ, ಆರೋಗ್ಯದ ಹಕ್ಕಿನ ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿಯಾಗಿ ಪ್ರಯಾಣಗಳನ್ನು ಕೈಗೊಂಡಿದ್ದಾರೆ. ಈ ಉದ್ದೇಶಕ್ಕೆ ಗ್ರೋವರ್ ತಮ್ಮ ಸ್ವಯಂಸೇವಾ ಸಂಸ್ಥೆಯಲ್ಲಿ ಜಮೆಯಾಗಿದ್ದ ವಿದೇಶಿ ಹಣವನ್ನು ಉಪಯೋಗಿಸಿಕೊಂಡಿರುವುದೂ ಕಾಯ್ದೆಯ ಉಲ್ಲಂಘನೆ. ಅದರಲ್ಲೂ ಭಾರತದ ಹೊರಗೆ ಈ ಹಣವನ್ನು ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಳ್ಳುವಂತೆಯೇ ಇಲ್ಲ.

– ಭಾರತದಲ್ಲಿ ಮಾತ್ರ ಬಳಸಿಕೊಳ್ಳುವ ಶರತ್ತಿರುವ ದೇಣಿಗೆಯನ್ನು ಹಂಗೇರಿ ಮತ್ತು ಮಲೇಷಿಯಾಗಳಿಗೆ ವರ್ಗಾವಣೆ ಮಾಡಿರುವುದು ಹಾಗೂ 2011-14ರ ಅವಧಿಯಲ್ಲಿ ರಾಜಕೀಯದ ಧರಣಿ- ಸಭೆಗಳಿಗೆ ಫಂಡ್ ಬಳಕೆಯಾಗಿರುವುದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಎಂದು ಸಚಿವಾಲಯ ಹೇಳಿದೆ.

ಈ ನಿಟ್ಟಿನಲ್ಲಿ ಜೈಸಿಂಗ್ ನೀಡಿರುವ ಎರಡು ಸಮರ್ಥನೆಗಳು ಅತಿ ದುರ್ಬಲ ಎಂದು ಹೇಳುವುದಕ್ಕೆ ಕಾನೂನು ಪಂಡಿತರೇ ಆಗಬೇಕಿಲ್ಲ. ಟಿವಿ ವಾಹಿನಿ ಜತೆ ಮಾತನಾಡುತ್ತ ಜೈಸಿಂಗ್ ಹೇಳಿದ್ದು- ಫಂಡ್ ಕೊಟ್ಟವರು ನಾವು ಬಳಸಿದ ಉದ್ದೇಶಗಳನ್ನು ಪ್ರಶ್ನಿಸಿಲ್ಲ ಎಂದ ಮೇಲೆ ಬೇರೆಯವರ ಪ್ರಶ್ನೆ ಏಕೆ ಅಂತ! ಇದೆಂಥ ಬಾಲಿಶತನ? ಇದು ಕೇವಲ ಕೊಡುವವರು- ಇಸಿದುಕೊಳ್ಳುವವರ ಸಂಬಂಧ ಅಲ್ಲ ಅಂತಲೇ ಕಾಯ್ದೆಗಳು ರೂಪುಗೊಂಡಿರೋದಲ್ಲವೇ? ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ತಮ್ಮ ಹುದ್ದೆ ಸರ್ಕಾರಿ ಸೇವೆಯದ್ದಾಗಿರುವುದಿಲ್ಲ ಎಂಬ ವಾದವೂ ಜೈಸಿಂಗ್ ಅವರಿಂದ ವ್ಯಕ್ತಗೊಂಡಿದೆ!

ಇದರ ಹೊರತಾಗಿ….

ಇಂದಿರಾ ಜೈಸಿಂಗ್ ಬಿಜೆಪಿ ವಿರೋಧಿ ಎಂಬುದು ಸತ್ಯವೇ. ಯಾಕೂಬ್ ಮೆನನ್ ಕ್ಷಮೆಗಾಗಿ ಹೋರಾಡಿದವರು, ಅಮಿತ್ ಶಾ ವಿರುದ್ಧದ ಪ್ರಕರಣ ಮುನ್ನಡೆಸುತ್ತಿರುವವರು, ಗುಜರಾತ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪರ ವಕಾಲತ್ತು, ಕನ್ಹಯ್ಯ ಕುಮಾರ್ ಕ್ರಾಂತಿಕಾರಿ ಹಾಗೂ ಆತ ಜಡ್ಜ್ ಗಳಿಗೇ ಪಾಠ ಹೇಳಬಲ್ಲ ಎಂದು ಟ್ವೀಟಿಸಿದವರು…. ಹೀಗೆ ಜೈಸಿಂಗ್ ರ ವಿಷಯದಲ್ಲಿ ಹಲವು ಸಂಗತಿಗಳಿವೆ. ಬಿಜೆಪಿ ವಿರೋಧ ತಪ್ಪಲ್ಲ, ಆದರೆ ಯಾವುದೇ ಸರ್ಕಾರ ಪಕ್ಷವನ್ನು ವಿರೋಧಿಸುವವರು ತಾವು ಬೇಕಾಬಿಟ್ಟಿ ನಿಯಮ ಉಲ್ಲಂಘಿಸುವ ಅಧಿಕಾರ ಹೊಂದಿದ್ದೇವೆ ಎಂದು ವಾದಿಸಬಾರದಲ್ಲ? ಈ ‘ಬಲಿಪಶು ಸಿಂಡ್ರೋಮ್’ ಹೇಗೆ ತಾನೇ ಸಮರ್ಥನೆ ಆದೀತು?

ನಿನ್ನೆ ತೀಸ್ತಾ ಸೆತಲ್ವಾಡರ ಸಬರಂಗ, ಇಂದು ಜೈಸ್ವಾಲರ ಲಾಯರ್ಸ್ ಕಲೆಕ್ಟಿವ್ ಕಟಕಟೆಯಲ್ಲಿ ನಿಲ್ಲುತ್ತಿವೆ. ಎಡಪಂಥೀಯರ ಅಸಹಿಷ್ಣುತೆ ಪಥಸಂಚಲನ ಇನ್ನೊಮ್ಮೆ ಶುರುವಾದರೂ ಆದೀತು!

Leave a Reply