ರಾಜ್ಯಸಭೆ ಅಭ್ಯರ್ಥಿ ಬೆಂಬಲಿಸಲು ಕೋಟಿಗಟ್ಟಲೇ ಕೋಟ್ ಮಾಡಿದ ಶಾಸಕರು, ಎಲ್ಲರಿಗೂ ಗೊತ್ತಿದ್ದ ಸತ್ಯ ಕುಟುಕು ಕಾರ್ಯಾಚರಣೆಯಲ್ಲಿ ನಿಚ್ಚಳ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆ ಚುನಾವಣೆ ಅಂತಂದರೆ ಅಲ್ಲೊಂದು ಮನಿಬ್ಯಾಗ್ ಪಾಲಿಟಿಕ್ಸ್ ಇದ್ದೇ ಇರುತ್ತದೆ ಎಂಬುದು ರಾಜಕೀಯ ವಲಯದ ತೆರೆದಿಟ್ಟ ಸತ್ಯ. ಟಿಕೇಟ್ ಕೊಡುವಾಗ ಪಕ್ಷದ ಮಟ್ಟದಲ್ಲಾಗುತ್ತಿದ್ದ ಡೀಲ್, ಶಾಸಕರ ಹಂತದಲ್ಲೇ ಆಗುತ್ತಿದೆ ಎಂಬುದು ‘ಇಂಡಿಯಾ ಟುಡೆ’ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ಕಾಂಗ್ರೆಸ್ಸಿನ ಕೆ. ಸಿ. ರಾಮಮೂರ್ತಿ ಅವರನ್ನು ಗೆಲ್ಲಿಸುವುದಕ್ಕೆ ಹಣದ ಪ್ರಸ್ತಾಪ ಇಟ್ಟು, ಕಾಂಗ್ರೆಸ್ ಪರ ಎಂಬಂತೆ ಬಿಂಬಿಸಿಕೊಂಡು ಹೋದ ಟಿ. ವಿ. ವರದಿಗಾರನ ಬಳಿ ನಾಲ್ವರು ಶಾಸಕರು ಡೀಲ್ ಪ್ರಸ್ತಾಪ ಮಾಡಿದ್ದಾರೆ.

ಇದರಲ್ಲಿ ಎಲ್ಲರೂ ಹಣ ಸ್ವೀಕರಿಸಿರುವ ದಾಖಲೆಗಳೇನಿಲ್ಲ. ಆದರೆ, ಯಾರೋ ಒಬ್ಬರು ಆಮಿಷ ಒಡ್ಡುತ್ತಲೇ ಅವರೊಂದಿಗೆ ಮಾತುಕತೆಗೆ ಮುಂದಾಗುವ ವಾತಾವರಣ ಇದೆ ಎಂಬುದು ಸ್ಪಷ್ಟವಾಗಿದೆ.

ಜೆಡಿಎಸ್  ನ ಮಲ್ಲಿಕಾರ್ಜುನ ಖೂಬಾ 5 ಕೋಟಿ ಕೇಳಿರುವುದು ವಿಡಿಯೋ ತುಣುಕಿನಲ್ಲಿ ಬಹಿರಂಗವಾಗಿದೆ. ಕನಿಷ್ಠ 5 ಕೋಟಿ ಕೊಟ್ಟರೆ ಜೆಡಿ ಎಸ್ ನಿಂದ 10 ಶಾಸಕರಿಂದ ಮತ ಹಾಕಿಸುತ್ತೇವೆ ಅಂತ ಹೇಳಿರುವುದನ್ನು ವಾಹಿನಿ ಬಿತ್ತರಿಸಿದೆ.

ಉಳಿದಂತೆ ಜಿ. ಟಿ. ದೇವೇಗೌಡರು ಹಣದ ಪ್ರಸ್ತಾಪವನ್ನೇನೂ ಮಾಡದಿದ್ದರೂ  ‘ಪಕ್ಷದ ಮೀಟಿಂಗ್ ನಲ್ಲಿ ಚರ್ಚಿಸಿ ಹೇಳುವೆ’ ಎಂದಿದ್ದಾರೆ. ಆದರೆ ಅವರು ಎದ್ದುಹೋದ ನಂತರ ಅವರ ಸಂಬಂಧಿಕ ( ಅಳಿಯ ಎದು ಇಂಡಿಯಾ ಟುಡೆ ಹೇಳುತ್ತಿದೆ) ‘ನಿಮ್ಮ ಪ್ಯಾಕೇಜ್ ಎಷ್ಟು? 10 ಕೋಟಿ ರುಪಾಯಿ ಕೊಡ್ತೀರಾ’ ಎಂದು ಕೇಳಿರುವುದು ಮುದ್ರಿತವಾಗಿದೆ.

ಕೆಜೆಪಿಯ ಆಳಂದ ಶಾಸಕ ಬಿ. ಆರ್. ಪಾಟೀಲ್  ತಮಗೆ ಹಣ ಸಲ್ಲಬೇಕು ಎಂದಿರುವುದು ಸೆರೆಯಾಗಿಲ್ಲ. ಆದರೆ ಐಪಿ ಎಲ್ ಮ್ಯಾಚ್ ಇದ್ದಂತೆ ಇದು ರಾಜಕೀಯದ ಮ್ಯಾಚು. ಕೆಲವೊಂದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಅಂತ ಮಾತಾಡಿದ್ದಾರೆ. ಪಕ್ಷೇತರರಾಗಿರುವ ವರ್ತೂರು ಪ್ರಕಾಶ್- ‘ಪಕ್ಷೇತರರಿಗೆ ಹಣ ಕೊಡುವುದಕ್ಕೆ ಎಲ್ಲರೂ ಸಿದ್ಧರಿದ್ದಾರೆ. ಅದರಲ್ಲೇನು ವಿಶೇಷ’ ಎಂದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ವರ್ತೂರು ಪ್ರಕಾಶ್ ಹೇಳಿರುವುದು- ‘ನಾನು ಕಾಂಗ್ರೆಸ್ಸಿಗೆ, ಸ್ದ್ದರಾಮಯ್ಯನವರಿಗೆ ನಿಷ್ಠೆ ವ್ಯಕ್ತಪಡಿಸಿದ್ದಾಗಿದೆ. ಯಾರೋ ಪತ್ರಕರ್ತರು ಮಾತಾಡುವುದಕ್ಕಾಗಿ ಕರೆಸಿಕೊಂಡು ರಾಜ್ಯಸಭೆ ಚುನಾವಣೆಯಲ್ಲಿ ಹಣ ಹೇಗೆ ಓಡಾಡುತ್ತಿದೆ ಎಂದು ಕೇಳಿದರು. ಅದರ ಪ್ರಶ್ನೆಯೇ ಇಲ್ಲ, ನನ್ನ ಮತ ಕಾಂಗ್ರೆಸ್ ಗೆ ಎಂದಿದ್ದೇನೆ. ವಿಡಿಯೋದಲ್ಲೂ ಅದೇ ಮುದ್ರಿತವಾಗಿದೆ. ಇದರಲ್ಲಿ ನಾನು ಹಣ ತೆಗೆದುಕೊಳ್ಳುತ್ತಿರುವ ಪ್ರಶ್ನೆ ಏನಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಟೈಮ್ಸ್ ನೌ ವಾಹಿನಿ ನಡೆಸಿದ ಇನ್ನೊಂದು ರಹಸ್ಯ ಕಾರ್ಯಾಚರಣೆಯಲ್ಲಿ ಕರ್ನಾಟಕದ ರಾಜಕೀಯ ವಲಯದ ಹಲವು ರಾಜಕಾರಣಿಗಳು ಏಳು ಕೋಟಿಯವರೆಗೆ ಚೌಕಾಶಿ ನಡೆಯುತ್ತಿದೆ ಎಂದು ಮಾತನಾಡಿರುವುದು ಸೆರೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಮಮೂರ್ತಿ- ‘ನಾವು ಡಿವಲಪ್ ಫಂಡ್ ಫಂಡ್ ಕೊಡುತ್ತೇವೆ.’   ಎಂದು ಸರ್ಕಾರದ ಪರವಾಗಿಯೇ ಪುಸಲಾಯಿಸಿರುವುದು ಬೆಳಕಿಗೆ ಬಂದಿದೆ.

ಈ ಪೈಕಿ ಜಿ. ಟಿ. ದೇವೇಗೌಡರು ಮತ್ತು ಬಿ. ಆರ್ ಪಾಟೀಲ್ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಹಣ ಎಲ್ಲೂ ಕೇಳಿಲ್ಲ. ಯಾರೋ ಬಂದು ಪಕ್ಷದ ನಿರ್ಧಾರ ಏನೆಂದು ಕೇಳಿದರು. ಸಭೆ ನಂತರ ಹೇಳುವುದಾಗಿ ಹೇಳಿದೆ. ಲೋಕಾಭಿರಾಮದ ಮಾತಿನಲ್ಲಿ ಹಣದ ಪ್ರಸ್ತಾವವಾದಾಗ ಎಷ್ಟು ಕೊಡ್ತೀರಿ ಎಂದು ಖೂಬಾ ಕಿಚಾಯಿಸಿರಬಹುದು. ಇಲ್ಲೆಲ್ಲೂ ಹಣ ತೆಗೆದುಕೊಂಡಿರುವುದು ಸಾಬೀತಾಗಿಲ್ಲ’ ಎಂದಿದ್ದಾರೆ.

ಬಿ. ಆರ್. ಪಾಟೀಲ್ ಸಹ- ತಮಾಷೆ ಮಾತನ್ನು ತಿರುಚಿ ಏನನ್ನೆಲ್ಲ ಸೇರಿಸಿ ವಿಡಿಯೋ ಸೃಷ್ಟಿಸಲಾಗಿದೆ ಎಂದಿದ್ದಾರೆ.

Leave a Reply