ಸಾಂಗವಾಗಿ ಸಾಗಿತು ರಾಜ್ಯ ಸರ್ಕಾರಿ ನೌಕರರ ಮುಷ್ಕರ, ಆದರೆ ಪೋಲೀಸರಿಗಿಲ್ಲ ಈ ವರ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಶ್ರೇಣಿ ಮತ್ತಿತರ ಸೌಲತ್ತುಗಳನ್ನು ತಮಗೂ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ರಾಜ್ಯ ಸರ್ಕಾರಿ ನೌಕರರು ಗುರುವಾರ ನಡೆಸಿದ ಮುಷ್ಕರ ಯಶಸ್ವಿಯಾಗಿದೆ. ಅದರರ್ಥ ಬೇಡಿಕೆಗಳು ಈಡೇರಿವೆ ಎಂದೇನಲ್ಲ. ಆದರೆ ಸರ್ಕಾರದ ಬೆದರಿಕೆಗೆ ಜಗ್ಗದ ಮುಷ್ಕರದ ಚಿತ್ರಣಗಳನ್ನು ಹೀಗೆ ನೋಡಬಹುದು.

– ಮುಷ್ಕರ ನಡೆಸುವ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರೂ, ಇದಕ್ಕೆ ಸಿಬ್ಬಂದಿ ಕ್ಯಾರೇ ಎನ್ನಲಿಲ್ಲ.

– ವಿಧಾನಸೌಧ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳ ಬೀಗ ತೆರೆಯುವ ಸಿಬ್ಬಂದಿಯೂ ಬರಲಿಲ್ಲ.

– ಪ್ರತಿಭಟನೆ , ಮೆರವಣಿಗೆ, ಸಭೆ, ಸಮಾರಂಭ, ಮುಖ್ಯಮಂತ್ರಿಗೆ ಮನವಿ ಇವ್ಯಾವುದೂ ಇರಲಿಲ್ಲ.

-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಹೋದ್ಯೋಗಿಗಳ ಬಹುತೇಕ ಕಚೇರಿ, ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಚೇರಿಗಳ ಬೀಗವೂ ತೆರೆಯಲಿಲ್ಲ.

‘ಕೇಂದ್ರ ಸರ್ಕಾರದ ವೇತನ ಶ್ರೇಣಿಗೂ ರಾಜ್ಯ ಸರ್ಕಾರದ ವೇತನ ಶ್ರೇಣಿಗೂ ಅಪಾರ ಅಂತರವಿದೆ.ಇದನ್ನು ಸರಿಪಡಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಪುನ: ಹೋರಾಟಕ್ಕಿಳಿಯುತ್ತೇವೆ ‘ ಎಂದಿದ್ದಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ.

ಇದು ಸರ್ಕಾರಿ ನೌಕರರ ಮುಷ್ಕರದ ಕತೆ ಆದರೆ ಪೋಲೀಸರ ಸಂಘ ಜೂನ್ 4ಕ್ಕೆ ಕರೆ ಕೊಟ್ಟಿರುವ ಮುಷ್ಕರದ ಕತೆ ಏನು? ಗುರುವಾರ ಈ ಬಗ್ಗೆ ಸಭೆ ನಡೆಸಿದ ಉನ್ನತ ಪೋಲೀಸ್ ಅಧಿಕಾರಿಗಳು ಹೇಳಿರುವುದಿಷ್ಟು- ‘ಪೋಲೀಸ್ ಮ್ಯಾನ್ಯುಯಲ್ ಪ್ರಕಾರ ಪೋಲೀಸರು ಮುಷ್ಕರ ನಡೆಸಬಾರದು. ಈ ನಿಯಮಾವಳಿಯನ್ನು ಮೀರಿ ರಜೆ ಹಾಕುವುದು, ಮುಷ್ಕರ ಮಾಡುವುದು ಕಾನೂನಿಗೆ ವಿರುದ್ಧವಾಗುವುದರಿಂದ ಪೋಲೀಸರನ್ನು ವಜಾ ಮಾಡುವುದೂ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ’

ಬುಧವಾರ ಬಂಧನಕ್ಕೊಳಗಾಗಿದ್ದ ಅಖಿಲ ಕರ್ನಾಟಕ ಪೋಲೀಸ್ ಮಹಾಸಂಘದ ಪ್ರಮುಖ ಶಶಿಧರ್ ಅವರನ್ನು ನ್ಯಾಯಾಲಯ ಜೂನ್ ಹದಿನಾರರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಪೋಲೀಸ್ ಮುಷ್ಕರ ಸುಲಭವಲ್ಲ. ಆದರೆ ಮುಷ್ಕರದ ಧ್ವನಿ ಎತ್ತಿದ್ದ ಪೋಲೀಸರ ಪರವಾಗಿ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಆರಕ್ಷಕರ ಸ್ಥಿತಿ ಸುಧಾರಣೆಗೆ ಆಗ್ರಹಿಸಿ ಸಹಿ ಸಂಗ್ರಹ ಹಾಗೂ ಖಾಲಿಯಿರುವ 28 ಸಾವಿರ ಹುದ್ದೆಗಳ ಭರ್ತಿ ಆಗಲಿ ಎಂಬ ಅಭಿಯಾನಗಳು ನಡೆದಿವೆ.

Leave a Reply