ಮಾನವ ಹಕ್ಕುಗಳ ನೆಪದಲ್ಲಿ ಮೋದಿ ಭೇಟಿ ಮಂಕಾಗಿಸುವ ಯತ್ನ, ಭಾರತವೂ ನೀಡಿದೆ ಪ್ರತಿಏಟು

 

ಡಿಜಿಟಲ್ ಕನ್ನಡ ಟೀಮ್

ಇದೇ ತಿಂಗಳು 7 ರಂದು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ ಮಾಡಲಿದ್ದು, ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತದಲ್ಲಿರುವ ಸಾಮಾಜಿಕ ಅಸಮಾನತೆ, ಮಾನವ ಹಕ್ಕು ಉಲ್ಲಂಘನೆ, ಧಾರ್ಮಿಕ ಅಸಹಿಷ್ಣುತೆ ವಿರುದ್ಧ ದನಿ ಎತ್ತಲು ಅಮೆರಿಕ ಸಂಸತ್ ನ ಕೆಲ ಸದಸ್ಯರು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ ಸಹ ನಾವು ಅಮೆರಿಕದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುತ್ತೇವೆ ಎಂದು ಪ್ರತ್ಯುತ್ತರ ನೀಡಿದೆ.

ಅಮೆರಿಕದ ಪ್ರಮುಖ ಸದಸ್ಯರಾಗಿರೊ ಬೆನ್ ಕಾರ್ಡಿನ್ ಮಾತನಾಡಿ ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆ, ನ್ಯಾಯಾಂಗ ಹತ್ಯೆ, ಧಾರ್ಮಿಕ ಅಸಹಿಷ್ಣುತೆ ದೇಶದ ಪ್ರಮುಖ ಸಮಸ್ಯೆಯಾಗಿವೆ ಎಂದಿದ್ದರು. ಈ ಎಲ್ಲ ಅಂಶಗಳು ಕುರಿತು ಮೋದಿ ಅವರ ಭೇಟಿ ಸಂದರ್ಭದಲ್ಲಿ ಚರ್ಚಿಸುವುದು ಬೆನ್ ಕಾರ್ಡಿನ್ ಹಾಗೂ ಇತರ ಅಮೆರಿಕ ಸಂಸತ್ ಸದಸ್ಯರ ಪ್ರಮುಖ ಅಜೆಂಡಾ.

ಇದಕ್ಕೆ ಪ್ರತಿಯಾಗಿ ಭಾರತದ ಅಧಿಕಾರಿಗಳು ಸಹ ತೀಕ್ಷ್ಣ ಉತ್ತರದಿಂದಲೇ ಚುರುಕು ಮುಟ್ಟಿಸಿದ್ದಾರೆ. ನಿಜ, ಭಾರತದಲ್ಲಿ ಸಮಸ್ಯೆಗಳಿವೆ. ಈ ವಿಷಯವನ್ನು ಸಮಾನತೆಯ ತಳಹದಿಯ ಮೇಲೆ ಚರ್ಚೆಗೆ ಸಿದ್ಧವಾಗಿದ್ದೇವೆ. ಆ ಮೂಲಕ ಅಮೆರಿಕದಲ್ಲಿರುವ ಸಮಸ್ಯೆಯ ಬಗ್ಗೆಯೂ ಚರ್ಚೆ ನಡೆಯಲಿ ಎಂದು ಟಾಂಗ್ ನೀಡಿದ್ದಾರೆ.

ಗಮನಿಸಬೇಕಾದ ವಿಷಯ ಎಂದರೆ ಮೋದಿಗೆ ವೀಸಾ ನೀಡಬಾರದು ಎಂದು ಈ ಹಿಂದೆ ದೊಡ್ಡ ಅಭಿಯಾನ ನಡೆದಿತ್ತು. ಇದರಲ್ಲಿ ಕೆಲವು ಅಮೆರಿಕನ್ ಸಂಸದರು ಭಾಗವಹಿಸಿದ್ದರು. ಅದಕ್ಕೆ ಭಾರತದ ಕೆಲ ರಾಜಕಾರಣಿಗಳ ಸಾಥ್ ಇತ್ತು. ಆದರೆ ಈಗ ಬಹುಮತದಿಂದ ಆರಿಸಿಬಂದಿರುವ ಮೋದಿ ಅದೇ ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಸಮಯ ಬಂದಿದೆ. ಮುಖ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತವನ್ನು ಅಮೆರಿಕದಲ್ಲಿ ಅಧಿಕಾರದಲ್ಲಿರುವ ಯಾರೇ ಆದರೂ ಉಪೇಕ್ಷಿಸುವಂತಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ಮಾನವ ಹಕ್ಕುಗಳ ಉಲ್ಲಂಘನೆ ಚರ್ಚೆ ಇಟ್ಟು ಮೋದಿ ಭೇಟಿ ಮಂಕಾಗಿಸುವ ಯತ್ನ ಈ ಅತೃಪ್ತ ಸೆನೆಟರ್ ಗಳದ್ದು. ಗುಜರಾತ್ ಗಲಭೆ, ಕಾಶ್ಮೀರ ಸಮಸ್ಯೆ ಎಂದೆಲ್ಲ ಗದ್ದಲ ಎಬ್ಬಿಸಿ ಒಟ್ಟಾರೆ ಕಾರ್ಯವ್ಯವಸ್ಥೆ ಹಳ್ಳಹಿಡಿಸುವ ತಂತ್ರವಿದು.

ಇದನ್ನು ಗ್ರಹಿಸಿರುವ ಭಾರತ, ‘ನಮ್ಮ ದೇಶವೇನೂ ಸಮಸ್ಯೆ ಮುಕ್ತ ಅಲ್ಲ. ಆದರೆ ಮಾನವ ಹಕ್ಕು ಉಲ್ಲಂಘನೆ ಸಮಸ್ಯೆ ಅಮೆರಿಕವನ್ನೂ ಸೇರಿಸಿ ಎಲ್ಲ ದೇಶಗಳಲ್ಲಿದೆ. ಸಮಾನ ತಳಹದಿಯಲ್ಲಿ ಇವೆಲ್ಲ ಚರ್ಚೆ ಆಗುವುದಾದರೆ ಆಗಲಿ’ ಎಂದಿದ್ದಾರೆ ಭಾರತದ ಅಧಿಕಾರಿಗಳು.

ಅಲ್ಲವೇ ಮತ್ತೆ? ಮಾನವ ಹಕ್ಕು ಉಲ್ಲಂಘನೆ ಯಾರಿಂದಲೇ ಆದರೂ ಚರ್ಚಾರ್ಹವೇ. ಆದರೆ ಉದ್ದೇಶ ಶುದ್ಧಿ ಇಲ್ಲದ ಕೆಲ ಅಮೆರಿಕ ಸಂಸದರಿಂದ ಭಾರತಕ್ಕೆ ಇದರ ಉಪನ್ಯಾಸ ಬೇಕೆ? ಇವತ್ತಿನ ಉಗ್ರವಾದವನ್ನು ಪ್ರಾರಂಭದಲ್ಲಿ ಬೆಳೆಯಲು ನೀರೆರೆದ, ಹಿರೊಶಿಮಾ ಮೇಲೆ ಅಣುಬಾಂಬ್ ಹಾಕಿದ, ಗುಂಟೆಮಾಲಾದಲ್ಲಿ ಕೈದಿಗಳ ಶ್ರಮ ಶಿಬಿರ ಇರಿಸಿದ ಅಮೆರಿಕದಿಂದ ಮಾನವ ಹಕ್ಕುಗಳ ಬಗ್ಗೆ ಭಾರತ ಕಲಿಯಬೇಕೆ? ಅರ್ಹ ನೆಲೆಗಳಲ್ಲಿ, ಸಮಾನ ಲಾಭದ ವಿಷಯಗಳಲ್ಲಿ ಅಮೆರಿಕ ಸಹಕಾರ ಕೊಟ್ಟರೆ ಸಾಕೇ ಹೊರತು ದೊಡ್ಡಣ್ಣನ ಪಾತ್ರ ಬೇಕಿಲ್ಲ.

ಇದನ್ನು ಮೆದುವಾಗಿಯೇ ಪರೋಕ್ಷವಾಗಿ ತಿಳಿಸಿರುವ ಭಾರತದ ಧಾಡಸಿತನ ಅಮೆರಕದ ಕೆಲ ಸಂಸದರಿಗೆ ಮುಟ್ಟುವಂತಾಗಲಿ. ಅಂದಹಾಗೆ, ಅಮೆರಿಕ ಸಂಸತ್ ಉದ್ದೇಶಿಸಿ ಮಾತನಾಡಲಿರುವ ಭಾರತದ ಐದನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನರೇಂದ್ರ ಮೋದಿ, ಈ ಪ್ರವಾಸದ ವೇಳೆ ರಕ್ಷಣೆ, ಭದ್ರತೆ ಮತ್ತು ಇಂಧನ ಕ್ಷೇತ್ರಗಳಲ್ಲಿನ ವ್ಯವಹಾರ ಹಾಗೂ ಸಂಬಂಧ ವೃದ್ಧಿ ಕುರಿತು ಅಮೆರಿಕ ಅಧ್ಯಕ್ಷ ಒಬಾಮಾ ಜತೆ ಮಾತುಕತೆ ನಡೆಸಲಿದ್ದಾರೆ.

Leave a Reply