ಅಪ್ರಸ್ತುತವಾಗಲಿದ್ದ ಅಂಚೆಗೆ ಬ್ಯಾಂಕಿಂಗ್- ಇ ಕಾಮರ್ಸ್ ಲೇಪ, ಗ್ರಾಮೀಣರ ಹಣಕಾಸು ಬದುಕಿನ ಭಾಗವಾಗಿ ಮತ್ತೆ ವಿಜೃಂಭಿಸಲಿದೆ ಈ ಹೊಸ ಸ್ವರೂಪ!

 

ಡಿಜಿಟಲ್ ಕನ್ನಡ ವಿಶೇಷ:

ಇನ್ನೇನು… ತಂತ್ರಜ್ಞಾನದ ಆವಿಷ್ಕಾರದಿಂದ ಇ-ಮೇಲ್ ಹಾಗೂ ಚಾಟಿಂಗ್ ಆ್ಯಪ್ ನಂತಹ ಸಾಧನಗಳು ಜನರ ಜೀವನ ಶೈಲಿಗಳಲ್ಲಿದಟ್ಟವಾಗುತ್ತಲೇ ಭಾರತದ ಅಂಚೆಕಚೇರಿಗಳು ಗತವನ್ನು ಸೇರುವ ದಿನಗಳು ಬಂದಾಯ್ತು ಅಂತಲೇ ಎಲ್ಲರೂ ಅಂದುಕೊಂಡಿದ್ದರು. 180 ವರ್ಷಗಳ ಇತಿಹಾಸ ಹೊಂದಿರುವ, ವಿಶ್ವದ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆ ಎಂಬ ಖ್ಯಾತಿ ಗಳಿಸಿರೋ ಭಾರತೀಯ ಅಂಚೆಯನ್ನು ಹಾಗೆಯೇ ಬಿಟ್ಟಿದ್ದರೆ ಸಹಜವಾಗಿಯೇ ಅದು ಅಂಚೆ ಅಣ್ಣನ ಪದ್ಯಗಳಿಗೆ, ಗತಕಾಲದ ರಮ್ಯ ನೆನಪುಗಳಿಗೆ ಸೀಮಿತವಾಗಿ ಶಿಥಿಲವಾಗಿ ಉದುರಿಬಿಡುತ್ತಿತ್ತು.

ಆದರೆ…

ಕೇಂದ್ರ ಸರ್ಕಾರದ ಅನ್ವೇಷಕ ಯೋಜನೆಗಳಿಂದ ಭಾರತೀಯ ಪೋಸ್ಟ್ ಹೊಸಕಾಲಕ್ಕೆ ಒಗ್ಗಿಕೊಂಡು ಮತ್ತೊಂದು ಮಹಾನ್ ಯಶೋಗಾಥೆಯನ್ನು ಬರೆಯಲಿಕ್ಕೆ ಹೊರಟಿದೆ. ಕೇಂದ್ರ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಘೋಷಿಸಿರುವಂತೆ ಭಾರತದ ಪೋಸ್ಟ್ ಆಫೀಸ್ ಗಳು ಪೇಮಂಟ್ ಬ್ಯಾಂಕ್ ಆಗಲಿವೆ! ಈ ಪಾವತಿ ಬ್ಯಾಂಕ್ ಮುಂದಿನ ವರ್ಷ (2017) ಸೆಪ್ಟೆಂಬರ್ ನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಏನಿದು ಪೇಮೆಂಟ್ ಬ್ಯಾಂಕ್? ಈ ಬ್ಯಾಂಕ್ ಗಳಲ್ಲಿ ₹1 ಲಕ್ಷದವರೆಗೂ ಠೇವಣಿ ಇಡುವ ಅವಕಾಶವಿರುತ್ತದೆ.  ಗ್ರಾಹಕರಿಗೆ ಡೆಬಿಟ್ ಕಾರ್ಡ್ ಹಾಗೂ ಇತರೆ ಬ್ಯಾಂಕಿಂಗ್ ಸೌಲಭ್ಯಗಳು ಸಿಗುತ್ತವೆ. ಆದರೆ ಪೇಮೆಂಟ್ ಬ್ಯಾಂಕ್ ಗಳಿಗೆ ಸಾಲ ನೀಡುವ ಅಧಿಕಾರ ಇರುವುದಿಲ್ಲ. ಕಳೆದ ವರ್ಷವೇ ಆರ್ಬಿಐ ಖಾಸಗಿ ಕಂಪನಿಗಳೂ ಸೇರಿದಂತೆ ಹಲವರಿಗೆ ಪೇಮೆಂಟ್ ಬ್ಯಾಂಕ್ ಗೆ ಅನುಮತಿ ನೀಡಿತ್ತು. ಅನುಮತಿ ಪಡೆದಿದ್ದ ಹಲವರು ಈ ವಲಯದಲ್ಲಿ ಲಾಭ ಮಾಡುವುದಕ್ಕೆ ದೀರ್ಘಾವಧಿ ಬೇಕು ಎಂಬ ಕಾರಣಕ್ಕೆ ಹಿಂದೆ ಸರಿದರು. ಪೇಟಿಎಂ, ವೊಡಾಫೋನ್ ಸೇರಿದಂತೆ ಕೆಲವೇ ಕಂಪನಿಗಳ ಜತೆ ಭಾರತದ ಪೋಸ್ಟಾಫೀಸು ಸಹ ಸ್ಪರ್ಧೆಯಲ್ಲಿದೆ.

ಆದರೆ, ಉಳಿದವರಿಗೆ ಹೋಲಿಸಿದರೆ ಪೋಸ್ಟಾಫೀಸಿಗಿರುವ ಲಾಭ ಏನು ಗೊತ್ತಾ? ಅದಾಗಲೇ ದೇಶದ ಮೂಲೆ ಮೂಲೆಗಳಲ್ಲಿ ಇದರ ಜಾಲ ಹರಡಿಬಿಟ್ಟಿದೆ. ಹಣಕಾಸು ಜಗತ್ತಿನಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಇರಬೇಕು ಎಂಬ ಮೋದಿ ಸರ್ಕಾರದ ಆಶಯವನ್ನು ಈಡೇರಿಸಿಕೊಳ್ಳುವುದಕ್ಕೆ ಪೋಸ್ಟಾಫೀಸುಗಳಿಗಿಂತ ಉತ್ತಮ ಮಾರ್ಗ ಇಲ್ಲವೇ ಇಲ್ಲ. ದೇಶದ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿ ಐ ಸಹ ಪೋಸ್ಟಾಫೀಸಿನ ವಿಶಾಲ ವ್ಯಾಪ್ತಿಯನ್ನು ಹೊಂದಿಲ್ಲ. 1,54,000 ಅಂಚೆ ಕಚೇರಿಗಳೊಂದಿಗೆ ದೇಶದ ಶೇ. 90 ರಷ್ಟು ಭಾಗ ತಲುಪುತ್ತಿದೆ ಭಾರತೀಯ ಅಂಚೆ. ಇದಕ್ಕಾಗಿ ₹800 ಕೋಟಿ ಬಂಡವಾಳ ಹೂಡಲಾಗುತ್ತಿದ್ದು, ಪ್ರತ್ಯೇಕ ಸಿಇಒ ಒಳಗೊಂಡಂತೆ ಇದನ್ನು ವೃತ್ತಿಪರವಾಗಿ ನಿರ್ವಹಿಸಲಾಗುವುದು ಎಂದಿದ್ದಾರೆ ಸಚಿವ ರವಿಶಂಕರ್ ಪ್ರಸಾದ್. ದೇಶದ ನಾನಾ ಭಾಗಗಳಲ್ಲಿ ಭಾರತೀಯ ಅಂಚೆಯ ಒಟ್ಟು 5000 ಎಟಿಎಂಗಳು ತಲೆಎತ್ತಲಿವೆ. ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಬಂಡವಾಳ ಹೂಡುವುದಕ್ಕೆ ಅದಾಗಲೇ ಹಲವು ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಆಸಕ್ತಿ ತೋರಿಸುತ್ತಿವೆ.

ಅಂದಹಾಗೆ, ನಿಮಗೆ ಗೊತ್ತಿರಬೇಕು…

ಈ ಪೇಮಂಟ್ ಬ್ಯಾಂಕಿಂಗ್ ಅವಕಾಶ ತೆರೆದುಕೊಳ್ಳದಿದ್ದರೇ ಭಾರತದ ಅಂಚೆಗೆ ನಷ್ಟದ ದಿನವೇ ಇತ್ತು ಎಂದೇನೂ ಅಲ್ಲ. ಏಕೆಂದರೆ ಕಳೆದ ಮೂರು ವರ್ಷಗಳಿಂದ ಇ ಕಾಮರ್ಸ್ ಮೂಲಕ ಅಂಚೆ ಇಲಾಖೆಗೆ ಬರುತ್ತಿರುವ ಆದಾಯ ದೊಡ್ಡಮಟ್ಟದ್ದಾಗಿದೆ. ಫ್ಲಿಪ್ ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್, ಮಿಂತ್ರ, ಯೆಪ್ ಮೆ… ಇವೆಲ್ಲ ಅಂತರ್ಜಾಲದಲ್ಲಿ ಆರ್ಡರ್ ತೆಗೆದುಕೊಂಡು ನಿಮಗೆ ವಸ್ತುಸೇವೆಗಳನ್ನು ನೀಡುತ್ತವೆ. ಆದರೆ ಮಹಾನಗರಗಳ ಆಚೆಗೆ ವಿತರಣಾ ವ್ಯವಸ್ಥೆ ಇವಕ್ಕಿಲ್ಲ. ಹೀಗಾಗಿ ಅಂಚೆ ಜತೆ ಇವು ಒಪ್ಪಂದ ಮಾಡಿಕೊಂಡಿವೆ. ಪರಿಣಾಮ ಏನು ಗೊತ್ತೇ? 2013-14ರಲ್ಲಿ ಈ ಮೂಲದಿಂದ ₹ 100 ಕೋಟಿ ಆದಾಯ ಬಂದಿತ್ತು. 2014-15ರಲ್ಲಿ ಇದು ₹ 500 ಕೋಟಿಗೇರಿತು. 2015-16ರಲ್ಲಿ ₹ 1000 ಕೋಟಿಗಳ ಆದಾಯ ಪಡೆದಿದೆ.

ಭಾರತೀಯ ಅಂಚೆಯ ಈ ವಿತರಣಾ ಶಕ್ತಿಯನ್ನು ತಾನೂ ಉಪಯೋಗಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರವೀಗ ಯೋಜನೆ ಹಾಕಿದೆ. ಗಂಗಾಜಲ ಎಂಬುದು ಹೆಚ್ಚಿನ ಭಾರತೀಯರ ಶ್ರದ್ಧೆಯಲ್ಲವೇ? ತಂತ್ರಜ್ಞಾನ ಬಳಸಿಕೊಂಡು ಗಂಗಾಜಲಕ್ಕೆ ಬೇಡಿಕೆ ಸ್ವೀಕರಿಸಿ ಅದನ್ನು ಅಂಚೆ ಜಾಲದ ಮೂಲಕ ವಿತರಿಸುವ ಯೋಜನೆ ಸರ್ಕಾರದ ಮುಂದಿದೆ. ಇದೇ ಮಾದರಿಯಲ್ಲಿ ಮಥುರೆಯ ಕೃಷ್ಣಪ್ರಸಾದವನ್ನು ತಲುಪಿಸುವ ಯೋಜನೆಯನ್ನೂ ಕೈಗೊಳ್ಳಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ ಸಚಿವ ರವಿಶಂಕರ ಪ್ರಸಾದ್. ಬಹುಶಃ ಮುಂದಿನ ದಿನಗಳಲ್ಲಿ ಇಂಥದೇ ಹಲವು ಮಾದರಿಗಳು ಸೇರಿಕೊಳ್ಳಬಹುದು.

ಏನೇ ಹೇಳಿ, 1.9 ಲಕ್ಷ ಮಂದಿಗೆ ಉದ್ಯೋಗ ನೀಡಿರುವ ಅಂಚೆ ವ್ಯವಸ್ಥೆಯನ್ನು ಅಪ್ರಸ್ತುತಗೊಂಡು ಶಿಥಿಲವಾಗಲು ಬಿಡದೇ ಇಂಥ ಯೋಜನೆಗಳನ್ನು ಹಮ್ಮಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ ಸಲ್ಲಬೇಕು.

Leave a Reply