ಮಥುರಾ ಹೊತ್ತಿ ಉರಿವಾಗ ಮೇಕಪ್ ಮಗ್ನ ಹೇಮಾ ಮಾಲಿನಿ ಟೀಕೆಗೆ ಅರ್ಹ, ಆದರೆ ಅಖಿಲೇಶ್ ಯಾದವ್ ಮುಖ್ಯ ಜವಾಬುದಾರ

ಪ್ರವೀಣಕುಮಾರ್

ಮಥುರಾದಲ್ಲಿ ಇಬ್ಬರು ಪೋಲೀಸರು ಹಾಗೂ ಇನ್ನೂ 22 ಮಂದಿಯನ್ನು ಬಲಿತೆಗೆದುಕೊಂಡ ಪ್ರಕರಣದ ಬೆನ್ನಲ್ಲೇ ಅಲ್ಲಿನ ಸಂಸದೆ ಹೇಮಾಮಾಲಿನಿ ಟೀಕೆಗೆ ಒಳಗಾದರು. ಮಥುರಾ ಹೊತ್ತಿ ಉರಿಯುವಾಗ ಅಭಿನಯಕ್ಕೆ ಮೇಕ್ ಅಪ್ ಮಾಡಿಕೊಳ್ಳುತ್ತಿದ್ದ ಹೇಮಾರನ್ನು ಪ್ರಶ್ನೆಗೆ ಒಳಪಡಿಸೋದರಲ್ಲಿ ತಪ್ಪಿಲ್ಲ. ವಿಮಾನದಲ್ಲೇ ರಾತ್ರಿ ನಿದ್ದೆ ಮಾಡಿ ಪ್ರಧಾನಿ ಹಗಲಿರುಳೂ ಶ್ರಮಿಸುತ್ತಿದ್ದಾರೆ  ಎಂದು ಹೇಳುವ ಬಿಜೆಪಿ, ತನ್ನ ಕಲಾವಿದ ವೃತ್ತಿಯಲ್ಲಿ ಪುರಸೊತ್ತು ಸಿಕ್ಕಾಗ ಮಥುರೆಗೆ ಬರುತ್ತೇನೆ ಎನ್ನುವ ಹೇಮಾ ಮಾಲಿನಿಯನ್ನು ಸಂಸದೆಯಾಗಿ ಹೊಂದಬೇಕಾದ ಕರ್ಮ ಏಕಿದೆಯೋ? ಅತಿಕ್ರಮಣ ತೆರವುಗೊಳಿಸೋದು ರಾಜ್ಯ ಸರ್ಕಾರದ ಹೊಣೆಯೇ ಆದರೂ ಹೀಗೊಂದು ಗಂಭೀರ ಸಮಸ್ಯೆ ತನ್ನ ಕ್ಷೇತ್ರದಲ್ಲಿ ರೂಪುತಳೆಯುತ್ತಿದೆ ಎಂಬ ಅರಿವೇ ಹೇಮಾಮಾಲಿನಿಗಿರಲಿಲ್ಲ ಎಂಬುದು ಅವರ ಟಿವಿ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟವಾಗುತ್ತಿತ್ತು.

ಆದರೆ…

ಗ್ಲಾಮರ್ ಮುಖ ಹೇಮಾಮಾಲಿನಿ ಮೇಲೆ ಮಾತ್ರ ಪ್ರಶ್ನೆ ಎಸೆಯುತ್ತ, ಅಖಿಲೇಶ್ ಯಾದವ್ ಎಂಬ ಮುಖವನ್ನು ಮರೆಗೆ ತಳ್ಳುವುದು ಬೇಡ. ಆಡಳಿತಾರೂಢ ಸಮಾಜವಾದಿ ಪಕ್ಷ ಬರೋಬ್ಬರಿ ಎರಡು ವರ್ಷಗಳಿಂದ ಈ ಜೈ ಗುರುದೇವ್ ಗುಂಪಿಗೆ ಅವರದ್ದಲ್ಲದ ಸ್ಥಳದಲ್ಲಿ, ಅದೂ ಒಂದೆರಡಲ್ಲ 260 ಎಕರೆಗಳಷ್ಟು ಜಾಗದಲ್ಲಿ ತಮ್ಮ ಟೆಂಟ್ ಹಾಕಿಕೊಂಡು ಇರುವುದಕ್ಕೆ ಬಿಟ್ಟಿದ್ದೇಕೆ?

ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ರಾಕೆಟ್ ಸೈನ್ಸ್ ಏನೂ ಬೇಕಿಲ್ಲ. ಇದು ಯಾವ ಗುರುದೇವ್ ಬಾಬಾ ಹೆಸರಲ್ಲಿ ನಡೆಯುತ್ತಿದೆಯೋ ಆ ಮನುಷ್ಯನ ಹೆಸರು ತುಳಸಿದಾಸ್ ಮಹಾರಾಜ್. ಈತ ಗತಿಸಿ ಹಲವು ವರ್ಷಗಳಾದವು. ಈ ತುಳಸಿ ಮಹಾರಾಜ್ ಹೇಳಿಕೇಳಿ ಯಾದವ ಜನಾಂಗಕ್ಕೆ ಸೇರಿದವ. ಅಲ್ಲದೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತಕ್ಷೇತ್ರ ಇತ್ವಾಕ್ಕೆ ಸೇರಿದವ. ಈ ತುಳಸಿ ಮಹಾರಾಜ್ ಅಲಿಯಾಸ್ ಜೈ ಗುರುದೇವ್  ಅನುಯಾಯಿಗಳು ಪುಂಡರೇ ಆದರೂ ಸಮಾಜವಾದಿ ಪಕ್ಷಕ್ಕೆ ಅವರೆಲ್ಲ ಓಟುಗಳೇ ತಾನೇ? ಸಾಲದ್ದಕ್ಕೆ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಜೈ ಗುರುದೇವ್ ಅನುಯಾಯಿಗಳಂತೆ.

ಅಲ್ಲಿಗೆ ಸಮಾಜವಾದಿ ಪಕ್ಷದ ಮುಸ್ಲಿಂ ತುಷ್ಟೀಕರಣದಷ್ಟೆ ಯಾದವ ತುಷ್ಟೀಕರಣವೂ ಗಟ್ಟಿಯಾಗಿದೆ ಎಂದಾಯಿತು. ಜೈ ಗುರುದೇವ್ ಅನುಯಾಯಿಗಳನ್ನು ಏಳಿಸುವುದಕ್ಕೆ ಪೋಲೀಸರು ಧಾವಿಸಿದ್ದು ಅಲಹಾಬಾದ್ ಹೈಕೋರ್ಟಿನ ಆದೇಶ ಬಂದಮೇಲಷ್ಟೆ. ಇದೀಗ ಘಟನೆಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪೋಲೀಸರನ್ನೇ ದೂರುತ್ತಿದ್ದಾರೆ!

ಇದು ರಾಜಕೀಯ ತುಷ್ಟೀಕರಣದ ಮಾತಾದರೆ, ಜನರು ಎಚ್ಚೆತ್ತುಕೊಳ್ಳಬೇಕಾದ ಇನ್ನೊಂದು ಅಪಾಯವನ್ನುಈ ಪ್ರಕರಣ ಅರುಹಿದೆ. ಸಂತನೆಂದು ಹೇಳಿಕೊಳ್ಳುವವರೆಲ್ಲರ ಕಾಲಿಗೆ ಅಡ್ಡಡ್ಡ ಬೀಳುವ ಚಟ ಅಂತ್ಯಗೊಳ್ಳಬೇಕು. ಇಂಥ ಭಕ್ತಿಗೆ ದೇಶಭಕ್ತಿಯ ಮಿಶ್ರಣ ಮಾಡಿಕೊಂಡರೆ ಮುಗಿದೇಹೋಯಿತು. ಅಧ್ಯಾತ್ಮದ ಹೆಸರಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಳ್ಳುವುದಕ್ಕೆ ರಾಜಮಾರ್ಗ. ಈ ದಿವಂಗತ ಗುರುದೇವರ ಕತೆಯನ್ನೇ ಗಮನಿಸಿದರೆ, ಮೊದಲಿಗೆ ಶಾಂತಿ- ಉಪನ್ಯಾಸ ಹೀಗೆ ಬೆಳೆದುಬಂದಿದ್ದ ಅವರ ಅಧ್ಯಾತ್ಮಮಾದರಿ ಅವರು ಗತಿಸುವ ವೇಳೆಗೆ ಸುಭಾಷ್ ಚಂದ್ರರ ಹೆಸರನ್ನು ಸೇರಿಸಿಕೊಂಡು ‘ಸ್ವಾಧೀನ ಭಾರತ ಸುಭಾಷ್ ಸೇನೆ’ ಆಗಿಹೋಯಿತು. ಈ ಗುರುದೇವ್ ದಿವಂಗತರಾಗುವುದಕ್ಕೂ ಮುಂಚೆ ತಮ್ಮದೇ ದೇವಸ್ಥಾನ ನಿರ್ಮಿಸಿಕೊಂಡಿದ್ದರು. ಈಗವರ ವಾರಸುದಾರಿಕೆಗೆ ಮುಂಚೂಣಿಯಲ್ಲಿದ್ದವರು ಈ ಪ್ರಕರಣದ ನಂತರ ತಲೆಮರೆಸಿಕೊಂಡಿದ್ದಾರೆ.

ಇವರ ಅನುಯಾಯಿಗಳಾಗಿ ಬೆನ್ನಿಗಿರುವವರು ಹುಚ್ಚು ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವಾಗಬಹುದು. ಆದರೆ ಈ ಪ್ರಕರಣವಾಗುತ್ತಲೇ ಟಿವಿ ವಾಹಿನಿ ಎದುರು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಹೇಳಿದ್ದು- ‘ನಾವು ಹೇಳುತ್ತಲೇ ಇದ್ದೆವು. ಇವರು ಶಸ್ತ್ರ ಹೊಂದಿದ್ದಾರೆ, ಅಕ್ರಮವಾಗಿ ಇಲ್ಲಿ ಕುಳಿತಿದ್ದಾರೆ ಹಾಗೂ ಭಾರಿ ಅಪಾಯಕಾರಿ ಜನ ಅಂತ. ಆದರೆ ಪ್ರಶಾಸನ ನಮ್ಮ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ.’

ಅಂದರೆ ಇವರೆಲ್ಲ ಎರಡು ವರ್ಷಗಳಿಂದ ಠಿಕಾಣಿ ಹೂಡಿ, ಶಸ್ತ್ರಾಸ್ತ್ರಗಳನ್ನೆಲ್ಲ ಹೊಂದಿರುವುದಕ್ಕೆ ಕಾನೂನು- ಸುವ್ಯವಸ್ಥೆ ಸುಧಾರಣೆಯ ಉತ್ತರ ಪ್ರದೇಶ ಸರ್ಕಾರ ಉತ್ತರದಾಯಿಯಾಗಬೇಕೋ, ಬೇಡವೋ? ಕೊನೆಗೂ ಪೋಲೀಸ್ ಕಾರ್ಯಾಚರಣೆ ಆಗಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಹೈಕೋರ್ಟ್ ನೀಡಿದ ಆದೇಶದಿಂದ ಹೊರತು ಸರ್ಕಾರ ಮನಸ್ಸು ಮಾಡಿದ್ದರಿಂದ ಅಲ್ಲ.

ಹೀಗಿರುವಾಗ ಉತ್ತರ ಪ್ರದೇಶ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸದೇ, ಹೇಮಾಮಾಲಿನಿ ಚರ್ಚೆಯ ಕೇಂದ್ರವಾದರೆ ಏನು ಪ್ರಯೋಜನ?

—-

ಮಥುರಾ ಹಿಂಸೆಯಲ್ಲಿ ಹುತಾತ್ಮ ಎಸ್ ಪಿ ಮುಕುಲ್ ದ್ವಿವೇದಿ
ಮಥುರಾ ಹಿಂಸೆಯಲ್ಲಿ ಹುತಾತ್ಮ ಎಸ್ ಪಿ ಮುಕುಲ್ ದ್ವಿವೇದಿ

Leave a Reply