ಹಿಂಸಾಚಾರಕ್ಕೆ ತಿರುಗಿದ ಅಕ್ರಮ ತೆರವು ಕಾರ್ಯಾಚರಣೆಯಲ್ಲಿ 24 ಬಲಿ, ಇದು ನೇತಾಜಿ ಹೆಸರಿನ ಖಾಸಗಿ ಸೇನೆಯ ಕರಾಳ ಮುಖ!

ಡಿಜಿಟಲ್ ಕನ್ನಡ ಟೀಮ್:

ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಪ್ರದೇಶ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಎಸ್ಪಿ ಮತ್ತು ಎಸ್ಎಚ್ಒ (ಸ್ಟೇಷನ್ ಹೌಸ್ ಆಫಿಸರ್) ಸೇರಿದಂತೆ 24 ಮಂದಿ ಮೃತಪಟ್ಟ ಘಟನೆ ಗುರುವಾರ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಈ ಘಟನೆ ಕುರಿತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಬಾಬಾ ಜೈ ಗುರುದೇವ್ ಸಂಘಟನೆಯ ಕಾರ್ಯಕರ್ತರು ‘ಧರಣಿ’ ಹೆಸರಿನಲ್ಲಿ ಜವಾಹರ್ ಬಾಘ್ ನ ನೂರಾರು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್, ಈ ಅಕ್ರಮ ಒತ್ತುವರಿ ತೆರವುಗೊಳಿಸಲು ಸೂಚಿಸಿತ್ತು.

‘ಸ್ವಾಧೀನ ಭಾರತ’ ಎಂಬ ಸಂಘಟನೆ ಕಟ್ಟಿಕೊಂಡು, ಅದರ ಅಡಿಯಲ್ಲಿ ಹಲವು ಪುಡಿ ಸಂಘಟನೆಗಳನ್ನು ಬೆಳೆಸಿಕೊಂಡಿರುವ ಈ ಅಕ್ರಮ ಒತ್ತುವರಿದಾರರ ಗುಂಪು ತಮ್ಮದೇ ಕಾರ್ಯಸೂಚಿಗಳನ್ನು ಹೊಂದಿದೆ.- ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳ ಚುನಾವಣೆ ರದ್ದುಗೊಳಿಸಬೇಕು, ಈಗಿನ ಆರ್ಬಿಐ ಬ್ರಿಟಿಷರ ಸ್ಥಾಪನೆಯಾದ್ದರಿಂದ ನೇತಾಜಿ ಸ್ಥಾಪಿಸಿದ್ದ ಆಜಾದ್ ಹಿಂದ್ ಬ್ಯಾಂಕ್ ಗೇ ಮನ್ನಣೆ ಸಿಗಬೇಕು,  ₹ 1 ಗೆ 60 ಲೀಟರ್ ಡೀಸೆಲ್ ಮತ್ತು ₹ 1 ಗೆ 40 ಲೀಟರ್ ಪೆಟ್ರೋಲ್ ಮಾರಾಟ ಮಾಡಬೇಕು ಹೀಗೆಲ್ಲ ಬೇಡಿಕೆಗಳ ಪಟ್ಟಿ ಹೊತ್ತಿರುವ ಜೈ ಗುರುದೇವ ಎಂಬ ವ್ಯಕ್ತಿಯ ಅನುಯಾಯಿಗಳ ಗುಂಪು ತಮ್ಮನ್ನು ನೇತಾಜಿ ಸುಭಾಷ್ ಚಂದ್ರ ಬೋಸರ ಕಟ್ಟರ್ ಸಮರ್ಥಕರಾಗಿ ಗುರುತಿಸಿಕೊಳ್ಳುತ್ತಿದೆ. ನೇತಾಜಿಯವರು 109 ವರ್ಷ ಬದುಕಿದ್ದರು ಎಂಬುದು ನೀವು ತಿಳಿದಿರಬೇಕಾದ ಇವರ ಇನ್ನೊಂದು ಪ್ರತಿಪಾದನೆ.

ಕೋರ್ಟ್ ಸೂಚನೆ ಮೇರೆಗೆ ಗುರುವಾರ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದಾಗ ಇವರ ಪಾಳೆಯದಿಂದ ಹೊರಬಂದ ಶಸ್ತ್ರಗಳನ್ನು ಗಮನಿಸಿದರೆ ಇದೊಂದು ಖಾಸಗಿ ಸೇನೆಯಾಗಿ ರೂಪುಗೊಂಡಿರುವುದು ಸ್ಪಷ್ಟ. ಇವರ ಬಳಿ ಗ್ರೈನೇಡ್ ಗಳು- ರೈಫಲ್ ಗಳು ದಂಡಿಯಾಗಿದ್ದವು. ಈ ಕಾರಣದಿಂದಲೇ ಸಾವಿನ ಸಂಖ್ಯೆ ಏರಿರುವುದು. ಪ್ರತಿಭಟನಾಕಾರರ ಪಾಳೆಯದಲ್ಲೂ ಜೀವಹಾನಿ ಗಾಯಗಳಾಗಿವೆ. ಇದರ ವಿರುದ್ಧ ಅಕ್ರಮ ನಿವಾಸಿಗಳು ಪ್ರತಿಭಟನೆಗೆ ಮುಂದಾದರು.

ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಸಿದ್ದು ಹೀಗೆ. ‘ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಜತೆ ಮಾತನಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೇಂದ್ರದಿಂದ ಅಗತ್ಯ ನೆರವು ನೀಡುತ್ತೇವೆ. ಘಟನೆಯಲ್ಲಿ ಪ್ರಾಣ ಹಾನಿಯಾಗಿರುವುದು ತೀವ್ರ ಬೇಸರ ತಂದಿದೆ. ಮೃತರ ಕುಟುಂಬ ಸದಸ್ಯರಿಗೆ ಈ ನೋವು ಸಹಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.’

hemaಈ ಎಲ್ಲ ಬೆಳವಣಿಗೆಗಳ ನಡುವೆ ಮಥುರಾದ ಬಿಜೆಪಿ ಸಂಸದೆಯಾಗಿರೋ ಹೇಮಾ ಮಾಲಿನಿ ಟ್ವಿಟರ್ ನಲ್ಲಿ ತಮ್ಮ ಮುಂದಿನ ಚಿತ್ರದ ಕುರಿತು ಟ್ವೀಟ್ ಮಾಡಿ, ಫೋಟೋ ಸಹ ಹಾಕಿದರು. ಮಥುರಾ ಹೊತ್ತಿ ಉರಿಯುವಾಗ ಹೇಮಾ ಮಾಲಿನಿ ಸಿನಿಮಾ ಟ್ವೀಟ್ ಮಾಡಿರುವ ಬಗ್ಗೆ ವ್ಯಾಪಕ ಟೀಕೆಗಳು ಶುರುವಾಗುತ್ತಲೇ ಅವರುಈ ಟ್ವೀಟ್ ಅಳಿಸಿದರು. ಘಟನಾ ಸ್ಥಳಕ್ಕೆ ತೆರಳುವುದಾಗಿ ಟ್ವೀಟಿಸಿದರು. ಬಿಜೆಪಿ ವಕ್ತಾರರು ಸಹ ‘ಘಟನೆ ಬಗ್ಗೆ ತಿಳಿಯುತ್ತಲೇ ಹೇಮಾ ಮಾಲಿನಿಯವರು ಸಂವೇದನೆ ಮೆರೆದಿದ್ದಾರೆ’ ಅಂತ ತಿಪ್ಪೆ ಸಾರಿದರು.

Leave a Reply