ನಾಳೆ ಪೊಲೀಸರ ಮುಷ್ಕರ ನಡೆಯಲ್ವಂತೆ, ಕುಟುಕು ಕಾರ್ಯಾಚರಣೆ- ನಮ್ಮ ತಪ್ಪಿಲ್ಲ ಎಂದ ನಾಯಕರು, ಮಾನನಷ್ಟ ಮೊಕದ್ದಮೆ ಈಗ ಅಪ್ರಸ್ತುತ ಅಂದ್ರು ನ್ಯಾ. ನಾಗಮೋಹನ್

‘ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಮಾನನಷ್ಟ ಮೊಕದ್ದಮೆ- ಮಾಧ್ಯಮದ ಮೇಲೆ ಅದರ ಪರಿಣಾಮ’ ಎಂಬ ವಿಚಾರ ಸಂಕಿರಣ ಬೆಂಗಳೂರಿನಲ್ಲಿ ನಡೆಯಿತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ರಾವ್, ‘ಡಿಜಿಟಲ್ ಕನ್ನಡ’ ಮುಖ್ಯ ಸಂಪಾದಕ ಪಿ. ತ್ಯಾಗರಾಜ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ಧರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಪಾಲ್ಗೊಂಡಿದ್ದರು.

ಡಿಜಿಟಲ್ ಕನ್ನಡ ಟೀಮ್:

ಪೊಲೀಸರು ನಾಳೆ ಮುಷ್ಕರ ನಡೆಸುವುದಿಲ್ಲ. ಒಂದುವೇಳೆ ಅವರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರೆ, ಅವರನ್ನು ಪೊಲೀಸ್ ವಸತಿ ಗೃಹದಿಂದ ಹೊರ ಹಾಕುತ್ತೇವೆ.. ಇದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ಪ್ರತಿಭಟನೆಗೆ ಮುಂದಾಗಿರುವ ಪೊಲೀಸ್ ಸಿಬ್ಬಂದಿಗೆ ನೀಡಿರೋ ಎಚ್ಚರಿಕೆ.

ಪ್ರತಿಭಟನೆ ನಡೆಸುವುದಕ್ಕಾಗಿ ರಜೆಯ ಅರ್ಜಿ ಸಲ್ಲಿಸಿದ್ದ ಪೊಲೀಸ್ ಸಿಬ್ಬಂದಿ ತಮ್ಮ ನಿಲುವು ಬದಲಿಸಿ ಅರ್ಜಿ ಹಿಂದಕ್ಕೆ ಪಡೆದಿದ್ದಾರೆ. ಇತರರೂ ಸಹ ತಮ್ಮ ನಿಲುವಿನಿಂದ ಹಿಂದೆ ಸರಿಯುವ ವಿಶ್ವಾಸವಿದೆ. ನಾಳೆ ಯಾವುದೇ ಕಾರಣಕ್ಕೂ ಪೊಲೀಸರಿಂದ ಮುಷ್ಕರ ಇರುವುದಿಲ್ಲ. ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಅವರ ಅನೇಕ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಬೇಡಿಕೆಗಳನ್ನೂ ಈಡೇರಿಸುತ್ತೇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ. ಸಿಬ್ಬಂದಿ ಜತೆ ಹೇಗೆ ನಡೆದುಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದೇವೆ.

ಪೊಲೀಸರು ವಾಸಿಸುವ ವಸತಿ ಗೃಹಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ತಕ್ಷಣ ಕಲ್ಪಿಸುವಂತೆ ಆದೇಶ ಮಾಡಲಾಗಿದೆ. ಹೊರಗಿನ ಶಕ್ತಿಗಳಿಂದ ಪೊಲೀಸ್ ಇಲಾಖೆಯನ್ನು ಹೊಡೆಯುವ ಪ್ರಯತ್ನ ನಡೆದಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು ಪರಮೇಶ್ವರ್.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಿಷ್ಟು. ‘ಸರ್ಕಾರದ ಎಚ್ಚರಿಕೆಯನ್ನು ಕಡೆಗಾಣಿಸಿ, ಮುಷ್ಕರದಲ್ಲಿ ಪಾಲ್ಗೊಂಡರೆ ಅಂತಹ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ.’

ಈ ಬೆಳವಣಿಗೆಗಳ ನಡುವೆ ಕರ್ನಾಟಕ ಪೊಲೀಸರ ಸಮಸ್ಯೆಗಳ ಬಗೆಹರಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ರಾಜ್ಯ ಸಭೆ ಮತಚಲಾವಣೆಗೆ ಲಂಚ: ಇತರರ ಮೇಲೆ ಗೂಬೆ ಕೂರಿಸೋ ಪ್ರಯತ್ನ

ರಾಷ್ಟ್ರ ಮಟ್ಟದ ಸುದ್ದಿ ವಾಹಿನಿಗಳು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ರಾಜ್ಯ ಸಭೆ ಅಭ್ಯರ್ಥಿ ಆಯ್ಕೆ ಚುನಾವಣೆಯ ಮತದಾನದಲ್ಲಿ ತಮ್ಮ ಮತ ಮಾರಿಕೊಳ್ಳಲು ರಾಜ್ಯದ ಶಾಸಕರು ಮುಂದಾಗಿರುವ ಕುಟುಕು ಕಾರ್ಯಾಚರಣೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಎಲ್ಲ ಪ್ರಮುಖ ರಾಜಕೀಯ ನಾಯಕರು ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡು ಇತರ ಪಕ್ಷಗಳ ಮೇಲೆ ಗೂಬೆ ಕೂರಿಸುವುವ ಪ್ರಯತ್ನ ನಡೆಸಿದ್ದಾರೆ.

ಈ ಕುಟುಕು ಕಾರ್ಯಾಚರಣೆ ಕುರಿತು ಯಾರು ಏನು ಹೇಳಿದರು ಎಂಬುದು ಇಲ್ಲಿದೆ.

  • ಜೆಡಿಎಸ್ ಪಕ್ಷವನ್ನು ಮುಗಿಸಲೆಂದೇ ಸ್ಟಿಂಗ್ ಆಪರೇಷನ್ ಮಾಡಲಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜೊತೆಗೆ ಕಳೆದ ಮೂರು ತಿಂಗಳಿನಿಂದ ನಮ್ಮ ಪಕ್ಷದ ಜಮೀರ್ ಅಹ್ಮದ್ ಮತ್ತು ಚಲುವರಾಯ ಸ್ವಾಮಿ ಕೈಜೋಡಿಸಿದ್ದಾರೆ. ಈ ಹಿಂದೆ ಎಷ್ಟೋ ಬಾರಿ ಪಕ್ಷವನ್ನು ಮುಗಿಸಲು ಈ ರೀತಿಯ ಸಂಚು ನಡೆದಿದೆ. ಮಲ್ಲಿಕಾರ್ಜುನ ಖೂಬಾ, ಜಿ.ಟಿ.ದೇವೇಗೌಡ ಅವರು ಹುಡುಗಾಟಿಕೆಗೆ ಕುಟುಕು ಕಾರ್ಯಾಚರಣೆ ವೇಳೆ ಹಾಗೇ ಹೇಳಿರಬೇಕು, ಜಿ.ಟಿ. ದೇವೇಗೌಡರಿಗೂ ಸ್ಟಿಂಗ್ ಕಾರ್ಯಾಚರಣೆಗೂ ಸಂಬಂಧವಿಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಅವರ ಷಡ್ಯಂತ್ರ ಇದೆ ಎಂಬುದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪ.
  • ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ಹಣವನ್ನು ಸಂವಿಧಾನ ಬಾಹಿರವಾಗಿ ಪಕ್ಷೇತರ ಹಾಗೂ ಇತರೆ ಪಕ್ಷಗಳ ಶಾಸಕರಿಗೆ ನೀಡುತ್ತಿದ್ದಾರೆ. ಆಡಳಿತ ರೂಢ ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕುದುರೆ ವ್ಯಾಪಾರ ನಡೆಸುತ್ತಿದೆ. ಸ್ವತಃ ಅಭ್ಯರ್ಥಿ ರಾಮಮೂರ್ತಿಯವರೇ ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ. ಈ ಕುಟುಕು ಕಾರ್ಯಾಚಣೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಚುನಾವಣೆ ಪ್ರಕ್ರಿಯೆ ರದ್ದುಗೊಳಿಸಿ, ರಾಮಮೂರ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬುದು ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ ಅವರ ಆಗ್ರಹ.
  • ಜೆಡಿಎಸ್ ಪಕ್ಷದ ಆಂತರಿಕ ವಿಚಾರದಲ್ಲಿ ನಾನು ಎಂದೂ ಕೈ ಹಾಕಿಲ್ಲ. ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅನಗತ್ಯವಾಗಿ ನನ್ನ ಹೆಸರು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಶಾಸಕರು ಒಗ್ಗಟ್ಟಾಗಿರಬೇಕು ಎಂಬ ಕಾರಣಕ್ಕೆ ಅನಿಲ್ ಕುಮಾರ್ ನಾಮಪತ್ರ ಹಿಂಪಡೆದಿದ್ದಾರೆ. ಇದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೀಡಿರೋ ಸ್ಪಷ್ಟನೆ.
  • ರಾಜ್ಯಸಭೆ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲು ಐದು ಕೋಟಿ ಬೇಡಿಕೆ ಇಟ್ಟಿದ್ದೇನೆ ಎಂದು ಪ್ರಚಾರ ಮಾಡುವ ಮೂಲಕ ನನ್ನ ತೇಜೋವಧೆ ಮಾಡಲಾಗಿದೆ. ನಾನು ಯಾರ ಬಳಿಯೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಲು ಹಣ ಕೊಡಿ ಎಂದು ಹೇಳುವ ಅನೈತಿಕತೆಯೂ ನನ್ನದಲ್ಲ. ಬದುಕಿನುದ್ದಕ್ಕೂ ಒಂದು ಮೌಲ್ಯವನ್ನು ಆಧರಿಸಿ ಕೆಲಸ ಮಾಡುತ್ತಾ ಬಂದವನು ನಾನು. ಕೆಜೆಪಿಯಿಂದ ಗೆದ್ದು ಬಂದ ನಾನು ಮನಸ್ಸು ಮಾಡಿದ್ದರೆ ಮಹತ್ವದ ಸ್ಥಾನಮಾನಗಳನ್ನು ಪಡೆಯಬಹುದಿತ್ತು. ಆಡದ ಮಾತುಗಳನ್ನು, ನಡೆಯದ ಘಟನೆಯನ್ನು ನಡೆದಿದೆ ಎಂದು ಅಪಪ್ರಚಾರ ಮಾಡಲಾಗಿದೆ… ಇದು ವಿಧಾನಸೌಧದ ಬಳಿ ಶುಕ್ರವಾರ ಧರಣಿ ನಡೆಸಿದ ಅಳಂದ ಶಾಸಕ ಬಿ.ಆರ್.ಪಾಟೀಲ್ ಅವರ ಮಾತು.

b r patil

ಮಾನನಷ್ಟ ಮೊಕದ್ದಮೆ ಈಗ ಅಪ್ರಸ್ತುತ: ನಿವೃತ್ತ ನ್ಯಾ.ಎಚ್.ಎನ್ ನಾಗಮೋಹನ್

ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಮಾನನಷ್ಟ ಮೊಕದ್ದಮೆ ಕಾನೂನನ್ನು ರೂಪಿಸಲಾಗಿತ್ತು. ಈಗ ಇದು ಅಪ್ರಸ್ತುತ. ಹೀಗಾಗಿ ಈ ಕಾನೂನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಮಾನನಷ್ಟ ಮೊಕದ್ದಮೆ-ಮಾಧ್ಯಮದ ಮೇಲೆ ಅದರ ಪರಿಣಾಮ’ ಎಂಬ ಸಂವಾದ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿದರು. ಈ ವೇಳೆ ಅವರು ಹೇಳಿದ ಮಾತುಗಳು ಹೀಗಿವೆ.

‘1860ರಲ್ಲಿ ಐಪಿಸಿ ಕಾನೂನುಗಳನ್ನು ರಚಿಸಲಾಗಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಕಾನೂನುಗಳನ್ನು ರೂಪಿಸಲಾಯಿತು. ಈ ಕಾನೂನು ಸದ್ಬಳಕೆಗಿಂತ ದುರ್ಬಳಕೆಗೇ ಹೆಚ್ಚಾಗಿದೆ. ಬ್ರಿಟಿಷರು ಕೂಡ ಮಹಾತ್ಮಾ ಗಾಂಧೀಜಿ, ನೆಹರು, ಬಾಲಗಂಗಾಧರನಾಥ ತಿಲಕ್ ಅವರಂಥ ಗಣ್ಯರನ್ನು ಇದೇ ಕಾನೂನು ಬಳಸಿಕೊಂಡು ಜೈಲಿನಲ್ಲಿಟ್ಟಿದ್ದರು. ಇತ್ತೀಚೆಗೆ ತಮಿಳುನಾಡಿನಲ್ಲಿ ಕೋಲನ್ ಎಂಬ ಕಲಾವಿದ, ಗುಜರಾತ್ ನಲ್ಲಿ ಹಾರ್ದಿಕ್ ಪಟೇಲ್ ಎಂಬ ಹೋರಾಟಗಾರ, ದೆಹಲಿಯ ಜೆಎನ್ ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಹಾಗೂ ಆತನ ಸ್ನೇಹಿತರನ್ನು ಇದೇ ಕಾನೂನು ಬಳಸಿಕೊಂಡು ಜೈಲಿಗೆ ಹಾಕಲಾಗಿದೆ. ಒಂದೆಡೆ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರವೂ ಇದೆ. ಮತ್ತೊಂದೆಡೆ ಅದಕ್ಕೆ ಕಡಿವಾಣ ಹಾಕುವ ಪರಿಚ್ಛೇದಗಳನ್ನೂ ಅಳವಡಿಸಲಾಗಿದೆ. ಸ್ವಾತಂತ್ರ್ಯದ ನಂತರ ಹೊಸದಾಗಿ ಅಳವಡಿಸಿಕೊಂಡ ಸಂವಿಧಾನದಲ್ಲಿ ಮಾನನಷ್ಟ ಮೊಕದ್ದಮೆ, ರಾಜದ್ರೋಹದಂತ ಕಾಯ್ದೆಗಳನ್ನು ಯಥಾವತ್ತಾಗಿ ಮುಂದುವರೆಸಿದ್ದೇವೆ. ಪ್ರಸ್ತುತ ಕಾಲಕ್ಕೆ ಇವು ಸೂಕ್ತ ಅಲ್ಲ. ರಾಜದ್ರೋಹ ಮತ್ತು ಮಾನಷ್ಟ ಮೊಕದ್ದಮೆಗಳಂತಹ ಕಾನೂನುಗಳನ್ನು ರದ್ದುಗೊಳಿಸಬೇಕು. ತನ್ನ ವಿರುದ್ಧ ದನಿ ಎತ್ತುವವರನ್ನು ಹತ್ತಿಕ್ಕಲು ಸರ್ಕಾರ ಈ ರೀತಿಯ ಕಾನೂನುಗಳನ್ನು ಬಳಸಿಕೊಳ್ಳುತ್ತಿದೆ. ಇದು ಸರಿಯಲ್ಲ. ಒಂದು ವೇಳೆ ದೇಶದಲ್ಲಿ ಅರಾಜಕತೆ ಉಂಟಾದರೆ ಪತ್ರಕರ್ತರು, ನ್ಯಾಯಾಧೀಶರು, ವಕೀಲರು ಬಲಿಯಾಗುವುದು ನಿಶ್ಚಿತ. ನ್ಯಾಯಾದಾನ ವಿಳಂಬ ತಪ್ಪಿಸಲು ವಿಶೇಷ ನ್ಯಾಯಾಲಯ ಸ್ಥಾಪನೆ, ಅಭಿಯೋಜಕರ ನೇಮಕ ಮತ್ತು ಸೌಲಭ್ಯಗಳನ್ನು ಒದಗಿಸಬೇಕು. ನ್ಯಾಯಾಂಗ ನಿಂದನೆ ಪ್ರಕರಣವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಕುರಿತು ಪುನರ್ ವಿಮರ್ಶೆಯಾಗಬೇಕು.’ ಎಂದರು.

‘ಡಿಜಿಟಲ್ ಕನ್ನಡ’ ಸಂಪಾದಕ ಪಿ. ತ್ಯಾಗರಾಜ್ ತಮ್ಮ ಅಭಿಪ್ರಾಯ ಮಂಡಿಸಿ, ಮಾನನಷ್ಟವನ್ನು ಕ್ರಿಮಿನಲ್ ಪ್ರಕರಣಗಳ ಪಟ್ಟಿಯಲ್ಲಿಡುವುದರಿಂದ ಪತ್ರಕರ್ತರು ಎದುರಿಸುವ ಆತಂಕಗಳನ್ನು ವಿವರಿಸಿದರು.

Leave a Reply