ರವಿಚಂದ್ರನ್ ಅವರನ್ನು ಈ ಪರಿ ಟೀಕಿಸುವ ಮೊದಲು ನಾವು ಗಮನಿಸಬೇಕಿರುವ ಅವರ ಅಪೂರ್ವ ಹೆಜ್ಜೆಗಳು

sridharamurthy

ಎನ್.ಎಸ್.ಶ್ರೀಧರ ಮೂರ್ತಿ

ಕನ್ನಡ ಚಿತ್ರರಂಗದಲ್ಲಿ ‘ಕನಸುಗಾರ’ ಎಂದೇ ಹೆಸರಾಗಿರುವ ರವಿಚಂದ್ರನ್ ತಮ್ಮ ಹೊಸ ಚಿತ್ರ ‘ಅಪೂರ್ವ’ದೊಂದಿಗೆ ಸುದ್ದಿಯಲ್ಲಿದ್ದಾರೆ. ಇದರ ತಾಂತ್ರಿಕ ಚಮತ್ಕಾರದ ಬಗ್ಗೆ ಮೆಚ್ಚಿಗೆಯ ಮಾತುಗಳು ಬಂದಂತೆ ‘ಅವರಿನ್ನು ಚಿತ್ರ ಮಾಡಬಾರದು’ಎನ್ನುವ ಅತಿರೇಕದ ವಿಶ್ಲೇಷಣೆಗಳೂ ಬಂದಿವೆ. ‘ಅಪೂರ್ವ’ ಹಾಗೆ ನೋಡಿದರೆ ಸರ್ವಶ್ರೇಷ್ಠ ಚಿತ್ರವೇನೂ ಅಲ್ಲ. ರವಿಚಂದ್ರನ್ ಅವರ ಚಿತ್ರಗಳಲ್ಲಿ ತರ್ಕಬದ್ದ ಕಥೆಗೆ ಎಂದಿನಿಂದಲೂ ಮಹತ್ವ ಕಡಿಮೆ. ಅವರದು ಏನಿದ್ದರೂ ಅನುಭವ ಕಟ್ಟಿಕೊಡುವ ಪ್ರಯತ್ನ. ಕನ್ನಡ ಚಿತ್ರರಂಗಕ್ಕೆ ದೃಶ್ಯಗಳ ಮೂಲಕ ಮಹತ್ವದ್ದನ್ನು ಹಿಡಿಯುವ ಭೂಮಿಕೆ ಕಟ್ಟಿಕೊಟ್ಟವರೇ ಅವರು. ‘ಅಪೂರ್ವ’ದಲ್ಲಿಯೂ ಅದು ಎದ್ದು ಕಾಣುತ್ತದೆ.

ಎಷ್ಟೋ ದೃಶ್ಯಗಳು ಮಾತಿನ ಹಿಡಿತ ಮೀರಿ ಅನುಭವದ ಆಳಕ್ಕೆ ಇಳಿಯುವ ಗಟ್ಟಿತನ ಪಡೆದಿವೆ. ಚಿರ ಯೌವನದ ನಾಯಕನ ಕಲ್ಪನೆ ಇರುವ ಭಾರತೀಯ ಚಿತ್ರರಂಗದಲ್ಲಿ ಬಿಳಿಕೂದಲುಗಳೊಂದಿಗೆ 61 ವರ್ಷ ಎಂದು ಪಾತ್ರದ ಸ್ವರೂಪವನ್ನು ಘೋಷಿಸಿಕೊಂಡೇ ಅಭಿನಯಿಸುವುದು ಒಂದು ರೀತಿಯಲ್ಲಿ ರಿಸ್ಕ್. ಇಂತಹ ರಿಸ್ಕ್ ಗಳ ಮೂಲಕವೇ ರವಿಚಂದ್ರನ್ ಬೆಳೆಯುತ್ತಾ ಬಂದವರು. ಬಹಳ ಮುಖ್ಯವಾಗಿ ಈ ಸಿನಿಮಾದಲ್ಲಿ ಅವರು ‘ಲಿಫ್ಟ್’ಅನ್ನು ಬಳಸಿಕೊಂಡಿರುವ ಕ್ರಮ ಸಿನಿಮಾ ಭಾಷೆಯ ಕುರಿತು ಅವರೆಷ್ಟು ಅಪ್‍ಡೇಟ್ ಆಗುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ರವಿಚಂದ್ರನ್ ಚಿತ್ರಗಳು ಎಂದರೆ ‘ಪ್ರೇಮಲೋಕ’ದ ಬೇರೆ ಬೇರೆ ಸಮೀಕರಣಗಳೇ.

ಈ ಚಿತ್ರ ಕೂಡ ಇನ್ನೊಂದು ವಿಲೋಮ ಸಮೀಕರಣದ ಕುರಿತು ಮಾತನಾಡಿದೆ. ಚಿತ್ರವನ್ನು ಇಷ್ಟ ಪಡದವರೂ ಕೂಡ ಅದರ ದೃಶ್ಯ ವೈಭವವನ್ನು, ಅನುಭವದ ಗಾಢತೆಯನ್ನು ಅಷ್ಟು ಸುಲಭವಾಗಿ ನಿರಾಕರಿಸಲಾರರು. ರವಿಚಂದ್ರನ್ ಮಾತುಗಳಲ್ಲಿ ‘ಅತಿಯಾದ ಆತ್ಮವಿಶ್ವಾಸ’ ಯಾವಾಗಲೂ ಇರುತ್ತದೆ. ಅದೊಂದು ರೀತಿಯಲ್ಲಿ ಅವರ ಶಕ್ತಿಯಾದಂತೆ ಮಿತಿ ಕೂಡ ಹೌದು. ಕನ್ನಡ ಚಿತ್ರರಂಗ ಸಂಕ್ರಮಣ ಸ್ಥಿತಿಯಲ್ಲಿರುವಾಗ. ಅದರ ಶಕ್ತಿಯ ಕುರಿತು ಮಾತನಾಡುವುದು ವಿವೇಕದ ಸಂಗತಿ ಕೂಡ ಹೌದು.

ರವಿಚಂದ್ರನ್ ಚಿತ್ರರಂಗಕ್ಕೆ ಬಂದಿದ್ದು ಅವರ ತಂದೆ ಎನ್.ವೀರಸ್ವಾಮಿಯವರ ನಿರ್ದೇಶನದ ‘ಕುಲಗೌರವ’ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ. ಮಗ ನಟನಾಗುವುದು ತಂದೆಗೆ ಇಷ್ಟವಿರಲಿಲ್ಲ. ಹೀಗಾಗಿ ಇದು ಮುಂದುವರೆಯಲಿಲ್ಲ. ತಂದೆಯವರ ಸ್ನೇಹಿತ ಎಂ.ಪಿ.ಶಂಕರ್ ಹಾಲಿವುಡ್ ಚಿತ್ರ ‘ವೈಟ್ ಅಂಟಿಲ್ ಡಾರ್ಕ್‍’ಅನ್ನು ಕನ್ನಡಕ್ಕೆ ತಂದಾಗ ರವಿಚಂದ್ರನ್ ಇರಲಿ ಎಂದು ಒತ್ತಾಯಿಸಿದರು. ಹೀಗೆ ಮೂಡಿ ಬಂದ ‘ನಾನೇ ರಾಜ’ ಚಿತ್ರಕ್ಕೆ ‘ಒಂದು ಚಿತ್ರದ ಮಟ್ಟಿಗೆ’ ಎನ್ನುವ ಶರತ್ತಿನ ಅನುಮತಿ ಸಿಕ್ಕಿತು. ತೆಲುಗಿನಲ್ಲಿ ಮೋಹನ್ ಬಾಬು ಅವರಿಗೆ ರಚಿತವಾಗಿದ್ದ ಸ್ಕ್ರಿಪ್ಟ್ ಒಂದು ಗಾಂಧಿನಗರವನ್ನೆಲ್ಲಾ ಸುತ್ತಿ ಘಟಾನುಘಟಿಗಳ ಬಳಿ ‘ಇಲ್ಲ’ಎನ್ನಿಸಿಕೊಂಡು ವೀರಸ್ವಾಮಿಯವರ ಬಳಿ ಬಂದಿತ್ತು. ಅವರೂ ಒಲ್ಲೆ ಎಂದಿದ್ದರು. ಆದರೆ ಅದನ್ನು ಓದಿದ ರವಿಚಂದ್ರನ್. ‘ಇದು ಗೆದ್ದೇ ಗೆಲ್ಲುತ್ತದೆ’ಎಂದು ಪಟ್ಟು ಹಿಡಿದರು. ತಂದೆಯ ಸ್ನೇಹಿತ ರಾಮನಾಥ್ ಹೇಳಿದರು ‘ಮಗ ಅಷ್ಟೊಂದು ಇಷ್ಟ ಪಟ್ಟಿದ್ದಾನೆ, ಹೊಸ ಜನರೇಷನ್‍ಗೆ ಇಷ್ಟವಾಗ ಬಹುದು, ಸಿನಿಮಾ ಮಾಡಿ’ ಆ ಮಾತು ಸುಳ್ಳಾಗಲಿಲ್ಲ. ಹೀಗೆ ಮೂಡಿ ಬಂದ ‘ಚಕ್ರವ್ಯೂಹ’ ಕನ್ನಡ ಚಿತ್ರರಂಗದಲ್ಲೇ ಮೈಲಿಗಲ್ಲು ಎನ್ನಿಸಿಕೊಂಡಿತು.

ಅಲ್ಲಿಂದ ಮುಂದೆ ವೀರಸ್ವಾಮಿಯವರು ಮಗನ ಬಗ್ಗೆ ನಂಬಿಕೆ ಇಷ್ಟು ಸಿನಿಮಾಗಳನ್ನು ಮಾಡಲು ಆರಂಭಿಸಿದರು. ಆದರೆ ಆರಂಭದಲ್ಲಿ ಸಿಕ್ಕಿದ್ದು ಗೆಲುವಲ್ಲ. ಪ್ರಳಯಾಂತಕ, ಪ್ರೇಮಿಗಳ ಸವಾಲ್, ಸಾವಿರ ಸುಳ್ಳು, ಸ್ವಾಭಿಮಾನ, ನಾನೂ ನನ್ನ ಹೆಂಡ್ತಿ ಹೀಗೆ ಒಂದೋ ಸೋಲು ಇಲ್ಲವೆ ಅವ್ರೇಜ್ ಗೆಲುವನ್ನು ಅವರ ಚಿತ್ರಗಳು ಕಂಡವು. ಆದರೆ ‘ಪ್ರೇಮಲೋಕ’ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿತು. ಕನ್ನಡ ಚಿತ್ರರಂಗ ಅದುವರೆಗೆ ಕಂಡಿರದ ದೃಶ್ಯ ವೈಭವಗಳು ಚಿತ್ರದಲ್ಲಿದ್ದವು. ಇದರ ಜೊತೆಗೆ ಹಂಸಲೇಖ ಅವರ ಸಂಗೀತದ ಹೊಸತನ ಇತ್ತು. ಅಲ್ಲಿಂದ ಮುಂದೆ ಸಾಗಿದ್ದು ಅಕ್ಷರಶಃ ಸಂಗೀತದ ಅಲೆಗಳ ಮೇಲೆ ಪ್ರೀತಿಯ ಮೆರವಣಿಗೆ 58 ಚಿತ್ರಗಳಿಂದ 441 ಸುಮಧುರ ಗೀತೆಗಳನ್ನು ಈ ಜೋಡಿ ನೀಡಿದೆ. ಈ ಜೋಡಿ ಬ್ರೇಕ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ಆದ ನಷ್ಟ ಕೂಡ ಹೌದು.

‘ಅಪೂರ್ವ’ ನೋಡುವಾಗ ಕೊರತೆ ಎನ್ನಿಸಿವುದು ಹಂಸಲೇಖ ಅವರ ಸಂಗೀತ. ಆ ದೃಶ್ಯ ವೈಭವಕ್ಕೆ ಸಂಗೀತದ ಸೊಗಸೂ ಸೇರಿದ್ದರೆ ಆಗುತ್ತಿದ್ದ ಪರಿಣಾಮ ಬೇರೆಯದೇ! ರಣಧೀರ ಚಿತ್ರದ ಮೂಲಕ ರವಿಚಂದ್ರನ್ ಚಿತ್ರಗೀತೆಗಳ ಆಡಿಯೋ ವ್ಯವಹಾರದಲ್ಲಿ ಎಷ್ಟು ಹಣವಿದೆ ಎಂದು ತೋರಿಸಿಕೊಟ್ಟರು. ಅಲ್ಲಿಂದ ಮುಂದೆ ಕನ್ನಡ ಚಿತ್ರಗೀತೆಗಳಿಗೆ ಶುಕ್ರದೆಸೆ ಆರಂಭವಾಯಿತು. ರವಿಚಂದ್ರನ್ ಅವರ ಪಯಣ ಹೂವಿನ ಹಾಸಿಗೆಯೇ ಆಗಿತ್ತು ಎಂದೇನೂ ಇಲ್ಲ. ಅವರ ಬಹುನಿರೀಕ್ಷೆಯ ಚಿತ್ರ ‘ಶಾಂತಿ ಕ್ರಾಂತಿ’ ಇನ್ನಿಲ್ಲದಂತೆ ನೆಲ ಕಚ್ಚಿತ್ತು. ಆಗ ತಂದೆಯವರಿಗೆ ಅನಾರೋಗ್ಯ ಚಿಕಿತ್ಸೆಗೆ ಸಿಂಗಾಪುರಕ್ಕೆ ಹೋಗ ಬೇಕು ಎಂದರು ವೈದ್ಯರು. ‘ನನ್ನ ಟ್ಯಾಲೆಂಟ್‍ ಪಣಕ್ಕಿಟ್ಟು ಚಿತ್ರ ನಿರ್ಮಿಸುವೆ’ ಎಂದವರು ಲೋ ಬಜೆಟ್‍ನಲ್ಲೇ ಕಟ್ಟಿಕೊಟ್ಟ ಚಿತ್ರ ‘ರಾಮಾಚಾರಿ’. ರಾಜ್ಯದ ಆರು ಕೇಂದ್ರಗಳಲ್ಲಿ ಶತದಿನ ಕಂಡ ಈ ಚಿತ್ರವನ್ನು ಗೆಲ್ಲಿಸಿದ್ದು ಕೂಡ ಸಂಗೀತವೇ.

ಮುಂದೆ ರವಿಚಂದ್ರನ್ ‘ಏಕಾಂಗಿ’ಯಾದರು. ಸಾಹಿತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ತಮ್ಮದೇ ಎಂದರು. ಇದೇಕೂ ಅತಿಯಾಯಿತು ಎನ್ನಿಸಿದರೂ ಅವರ ಆತ್ಮವಿಶ್ವಾಸದ ಸ್ವರೂಪವೇ ಅಂತಹದು. ಸಿನಿಮಾ ಗ್ರಾಮರ್ ಮುರಿದು ಹೊಸತನ ತಂದ ‘ಏಕಾಂಗಿ’ ಎಲ್ಲರ ಮೆಚ್ಚಿಗೆ ಪಡೆದರೂ ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ‘ಪ್ರೇಕ್ಷಕರಿಗೆ ಅರ್ಥವಾಗಲಿಲ್ಲ’ ಎಂದು ಸರಳವಾಗಿ ರೂಪಿಸಿದ ಚಿತ್ರ ‘ಮಲ್ಲ’ ಗೆದ್ದಿತು. ಚಿತ್ರ ಗೆಲ್ಲಲಿ ಸೋಲಲಿ ರವಿಚಂದ್ರನ್ ಕನಸಿನ ಪಯಣ ಮಾತ್ರ ಎಂದಿಗೂ ವಿನೂತನವಾದದ್ದು.

‘ಪ್ರೇಮಲೋಕ’ “ಏಕಾಂಗಿ’ಚಿತ್ರಗಳು ನಿರೀಕ್ಷಿತ ಆರಂಭ ಪಡೆಯದಿದ್ದಾಗ ‘ಪ್ರೇಕ್ಷಕರ ಗ್ರಹಿಕೆಯ ಬಗ್ಗೆ’ ಅನುಮಾನ ವ್ಯಕ್ತ ಪಡಿಸಿದ್ದ ರವಿಚಂದ್ರನ್’ ಅಪೂರ್ವ’ ಕುರಿತೂ ಅದೇ ಮಾತನ್ನಾಡುತ್ತಿದ್ದಾರೆ. ಅಡಿಯನ್ಸ್ ವರ್ಷನ್ ಕೂಡ ತಂದಿದ್ದಾರೆ. ‘ಅಪೂರ್ವ’ವನ್ನು ಟೀಕಿಸುತ್ತಿರುವವರು ಗಮನಿಸ ಬೇಕಾದ ಸಂಗತಿ ಎಂದರೆ ‘ಕನ್ನಡ ಚಿತ್ರಗಳನ್ನೂ ಕುತೂಹಲದಿಂದ ಬೇರೆ ಭಾಷೆಯವರು ಗಮನಿಸುವಂತೆ ಮಾಡಿದವರು ರವಿಚಂದ್ರನ್. ಅಷ್ಟೇ ಅಲ್ಲ ಅವರಂತೆ ಅಪ್ ಡೇಟ್ ಆಗುತ್ತಿರುವ ಕನಸುಗಾರರು ಭಾರತೀಯ ಚಿತ್ರರಂಗದಲ್ಲೇ ಬೆರಳೆಣಿಕೆಯಷ್ಟು ಮಂದಿ ಇರಬಹುದು!

Leave a Reply