ಮಾಡೋದು ಮಾಡಿ ಮಾಧ್ಯಮದವರನ್ನ ಯಾಕ್ರೀ ಬೈತೀರಾ ಮಿಸ್ಟರ್ ಪಾಟೀಲ್ & ಜಿ.ಟಿ. ದೇವೇಗೌಡ?

ಡಿಜಿಟಲ್ ಕನ್ನಡ ಟೀಮ್:

ಮಾಡೋ ತಪ್ಪು ಮಾಡ್ಬಿಟ್ಟು ಮೀಡಿಯಾದವರನ್ನ ಬೋ.. ಮಕ್ಕಳು, ಆ ಮಕ್ಕಳು, ಈ ಮಕ್ಕಳು ಅಂತಾ ಬೈತಾ ಇರೋ ಈ ರಾಜಕಾರಣಿಗಳನ್ನು ಏನಂತ ಕರೀಬೇಕು?

ರಾಜ್ಯಸಭೆ ಅಭ್ಯರ್ಥಿಗೆ ವೋಟು ಹಾಕಲು ನೋಟು ಕೇಳಿ ಮಾಧ್ಯಮ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುವ ಶಾಸಕರ ಪೈಕಿ ಕೆಲವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರ ಮಾತಿನಲ್ಲಿ  ಸಮರ್ಥನೆ ಮಾಯವಾಗಿ ಬರೀ ಹತಾಶೆ, ಸಿಟ್ಟು, ಅವಮಾನ ವಿಜೃಂಭಿಸುತ್ತಿದೆ.

ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಮಾಧ್ಯಮ ಸಂಕುಲವನ್ನು ಬಾಯಿಗೆ ಬಂದಂತೆ ಬೈದಿದ್ದಾರೆ. ಚಾನೆಲ್ ಇದೆ ಅಂತಾ ಏನೂ ಬೇಕಾದರೂ ಮಾಡಬಹುದಾ ಇದರಿಂದ ನಮ್ಮ ಮನೆಯಲ್ಲಿ ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ಹಾರಾಡಿದ ಪಾಟೀಲ್ ಅವರನ್ನು ಸಿದ್ದರಾಮಯ್ಯ ಸಮಾಧಾನ ಮಾಡಿದ್ದಾರೆ. ಬೆಂಗಳೂರು ಬಿಟ್ಟು ಎಲ್ಲೂ ಹೋಗ್ಬೆಡಯ್ಯಾ, ಇಲ್ಲೇ ಇರು ಅಂತ ಮೈದಡವಿದ್ದಾರೆ.

ಇನ್ನೊಂದು ಕಡೆ ತಮ್ಮ ಪ್ರತಿಕ್ರಿಯೆ ಬಯಸಿದ ಮಾಧ್ಯಮದವರಿಗೆ ಜಿ.ಟಿ. ದೇವೇಗೌಡ ಅವರು, ‘ಸ್ಟಿಂಗ್ ಆಪರೇಷನ್ ಮಾಡಿದ ಆ ಬೋ.. ಮಕ್ಕಳು ಟಿವಿ ಚಾನೆಲ್ ನವರನ್ನು ಕರ್ಕೊಂಡು ಬನ್ನಿ ನನ್ನ ಹತ್ತಿರ. ನೀವು ಪ್ರಶ್ನೆ ಕೇಳಬೇಕಾಗಿರೋದು ನನ್ನನ್ನಲ್ಲ, ಆ ಬೋ… ಮಕ್ಕಳನ್ನು, ಡಿಫಮೇಷನ್ ಕೇಸ್ ಹಾಕ್ತೀನಿ ನೋಡಿ’ ಅಂತಾ ಸಿಕ್ಕಾಪಟ್ಟೆ ಎಗರಾಡಿದ್ದಾರೆ.

ಇದರಲ್ಲಿ ಮೀಡಿಯಾದವರದು ಏನು ತಪ್ಪಿದೆ? ನೀವು ಸರಿಯಾಗಿದ್ದರೆ ಯಾವ ಯಾವ ಸ್ಟಿಂಗ್ ಆಪರೇಷನ್ ನಿಮ್ಮನ್ನು ಏನು ಮಾಡೋಕೆ ಆಗಲ್ಲವಲ್ಲಾ? ಇಷ್ಟಕ್ಕೂ ಸ್ಟಿಂಗ್ ಆಪರೇಷನ್ ನಲ್ಲಿ ನೀವು ಏನು ಮಾತಾಡಿದ್ದೀರೋ ಅಷ್ಟೇ ತಾನೇ ಬಂದಿರೋದು. ನೀವು ಮಾತಾಡದೇ ಇರೋದನ್ನ ಅದರಲ್ಲೇನು ತುರುಕಲು ಆಗುವುದಿಲ್ಲವಲ್ಲ. ನೀವು ದುಡ್ಡು ಕೇಳಿದ್ರೆ ಕೇಳಿದ್ರೀ ಅಂತಾ ಬರ್ತದೆ. ನೀವು ಪರಮ ಪಾವನರಾಗಿದ್ದರೆ ಪರಮ ಪಾವನರೇ ಅಂತಾ ಬರ್ತದೆ ಅಲ್ಲವೇ? – ಈ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅಗತ್ಯ ನಿಂದಕರದು.

ರಾಜಕಾರಣಿಗಳಿಗೆ ಅವರ ಕೆಲಸ ಎಷ್ಟು ಮುಖ್ಯವೋ ಮಾಧ್ಯಮದವರಿಗೂ ಕೂಡ ಅವರ ಕೆಲಸ ಅಷ್ಟೇ ಮುಖ್ಯ. ಇವರು ತಪ್ಪೇ ಮಾಡಿಲ್ಲ ಅಂತಾದರೆ ಇಷ್ಟೆಲ್ಲ ಕೂಗಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದಾದರೂ ಏಕೆ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸನಭೆಗಳಿಗೆ ಅದರದೇ ಆದ ಘನತೆ, ಗೌರವ ಇದೆ. ಅದರ ಸದಸ್ಯರಾಗಿರುವವರಿಗೂ ಆ ಗೌರವ ಕಾಪಾಡುವ, ಆ ಮೂಲಕ ತಮ್ಮ ಮರ್ಯಾದೆಯನ್ನೂ ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಇದೆ. ಅದನ್ನು ಬಿಟ್ಟು ಕೆಟ್ಟ ಪದಗಳ ಬೈಗುಳಕ್ಕೆ ಇಳಿದರೆ ಹರಾಜಾಗುವುದು ರಾಜಕಾರಣಿಗಳ ಮರ್ಯಾದೆಯೇ! ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರೆಂಥ ಶಬ್ದವೀರರು, ವಾಗ್ಪ್ರವೀಣರು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ಹೀಗಾಗಿ ನಾಲಿಗೆ ಮೇಲೆ ಹತೋಟಿ ಇಟ್ಟುಕೊಳ್ಳುವುದು ಶಾಸಕರ ಮರ್ಯಾದೆ ದೃಷ್ಟಿಯಿಂದಲೇ ಒಳಿತು. ಇಲ್ಲದಿದ್ದರೆ ಸ್ಟಿಂಗ್ ಆಪರೇಷನ್ ನಲ್ಲಿ ಈಗಾಗಲೇ ಆಗಿರುವ ಹಾನಿ ಈ ರೀತಿಯ ದುರ್ವರ್ತನೆಯಿಂದ ಮತ್ತಷ್ಟು ಹೆಚ್ಚಳಿದೆ.

ಅಂದಹಾಗೆ ಇಂಡಿಯ ಟುಡೆ ಮತ್ತು ಟೈಮ್ಸ್ ನೌ ಆಂಗ್ಲ ಚಾನೆಲ್ ಗಳು ರಾಜ್ಯಸಭೆ ಚುನಾವಣೆ ಕುದುರೆ ವ್ಯಾಪಾರದ ಹಿನ್ನೆಲೆಯಲ್ಲಿ ಜೆಡಿಎಸ್ ನ ಮಲ್ಲಿಕಾರ್ಜುನ ಕೂಬಾ, ಜಿ.ಟಿ. ದೇವೇಗೌಡ, ಅವರ ಅಳಿಯ ರಾಮ್, ಆಳಂದದ ಬಿ.ಆರ್. ಪಾಟೀಲ್, ವರ್ತೂರು ಪ್ರಕಾಶ್ ಮತ್ತಿರರನ್ನು ಸ್ಟಿಂಗ್ ಆಪರೇಷನ್ ಮಾಡಿದ್ದು, ವಿವಾದ ಸೃಷ್ಟಿಸಿದೆ. ಆಯಾಯ ಪಕ್ಷದ ಮುಖಂಡರು ಕುದುರೆ ವ್ಯಾಪಾರಕ್ಕೆ ಆಸ್ಪದ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಚುನಾವಣೆ ಆಯೋಗ ಕೇಂದ್ರ ಆಯೋಗಕ್ಕೆ ಮಾಹಿತಿ ರವಾನಿಸಿದ್ದು, ಚುನಾವಣೆ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ.

Leave a Reply