ಅಧಿಕೃತ ಅಭ್ಯರ್ಥಿಗಳಿಗೇ ಅಪಜಯದ ಆತಂಕ ತಂದಿರುವ ಆಂತರಿಕ ಕಲಹ, ಹಣದ ವೈಭವ!

ಡಿಜಿಟಲ್ ಕನ್ನಡ ವಿಶೇಷ:

ಮತದಾನ ದೃಢಪಟ್ಟಿರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ತಂತ್ರ-ಕುತಂತ್ರಗಳು ವಿಜೃಂಭಿಸುತ್ತಿದ್ದು, ಪ್ರಥಮ ಆದ್ಯತೆಯ ಅಭ್ಯರ್ಥಿಗಳಿಗೂ ತಮ್ಮ ಸುರಕ್ಷತೆ ಬಗ್ಗೆ ಭಯ ಶುರುವಾಗಿದೆ. ಮತ ಕೊರತೆ ಇರುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಭರದಲ್ಲಿ ಅಧಿಕೃತ ಅಭ್ಯರ್ಥಿಗಳನ್ನು ಕಳೆದುಕೊಳ್ಳುವ  ಭೀತಿ ಎಲ್ಲ ಪಕ್ಷಗಳನ್ನೂ ಕಾಡುತ್ತಿದೆ.

ನಿಜ, ಹಿಂದೆಂದೂ ಕಾಣದ ಜಿದ್ದಾಜಿದ್ದಿಗೆ ಈ ಚುನಾವಣೆ ತೆರೆದುಕೊಂಡಿದೆ. ಈ ಜಿದ್ದಾಜಿದ್ದಿ ಒಂದಷ್ಟು ಸವಾಲುಗಳನ್ನೂ ಸೃಷ್ಟಿಸಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಹೋರಾಡುವುದುರ ಜತೆಗೆ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಕ್ಕೆ ಈ ಚುನಾವಣೆ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಾಯಕರ ಮೇಲಿದೆ. ಎಲ್ಲ ಪಕ್ಷಗಳಲ್ಲೂ ನಾಯಕತ್ವದ ವಿರುದ್ದ ಇರುವ ಅಸಮಾಧಾನ ಪಾಠ ಕಲಿಸುವ ತಂತ್ರಕ್ಕೆ ತಿರುಗಿದ್ದೇ ಆದಲ್ಲಿ, ಅದರಿಂದ ಅಧಿಕೃತ ಅಭ್ಯರ್ಥಿಗಳಿಗೆ ಮುಳುವಾಗುವ ಸಾಧ್ಯತೆಗಳಿವೆ.

ಪಕ್ಷ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಯಲಲ್ಲೇ ಕುಸ್ತಿಗಿಳಿದಿವೆ. ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಅವರನ್ನು ಗೆಲ್ಲಿಸಿಕೊಳ್ಳಲು ಜಮೀರ್ ಅಹಮದ್, ಚಲುವರಾಯ ಸ್ವಾಮಿ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳನ್ನು ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ರಣತಂತ್ರ ರಚಿಸಿದ್ದಾರೆ. ಜಮೀರ್, ಚಲುವರಾಯಸ್ವಾಮಿ ಮೂಲಕ ಇಂಥದೊಂದು ನಡೆ ಚಾಲ್ತಿಯಲ್ಲಿದೆ ಎಂಬುದನ್ನೂ ಸ್ವತಃ ದೇವೇಗೌಡರೇ ಒಪ್ಪಿಕೊಂಡಿದ್ದಾರೆ. ರಾಜ್ಯಸಭೆಗೆ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮೊದಲೇ 5 ಮತಗಳ ಕೊರತೆ ಎದುರಿಸುತ್ತಿರುವ ಜೆಡಿಎಸ್ ಒಳರಾಜಕೀಯದಲ್ಲಿ ಮತ್ತಷ್ಟು ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇದು ಜೆಡಿಎಸ್ ನಾಯಕರ ನೆಮ್ಮದಿಗೆಡಿಸಿದೆ. ಅದರೆ ಇದನ್ನು ಕಾಂಗ್ರೆಸ್ ಆಂತರಿಕ ಅಸಮಾಧಾನ ಸದ್ಬಳಕೆ ಮೂಲಕವೇ ಸರಿದೂಗಿಸಿಕೊಳ್ಳಲು ಗೌಡರು ಮತ್ತು ಕುಮಾರಸ್ವಾಮಿ ಪ್ರತಿತಂತ್ರ ರೂಪಿಸಿದ್ದು, ಮೊದಲ ಅದ್ಯತೆ ಅಭ್ಯರ್ಥಿಗಳಾದ ಆಸ್ಕರ್ ಫರ್ನಾಂಡಿಸ್ ಹಾಗೂ ಜೈರಾಂ ರಮೇಶ್ ಅವರಿಗೆ ತಲೆನೋವು ತಂದಿದೆ.

ಸಿದ್ದರಾಮಯ್ಯ ನಾಯಕತ್ವದ ವಿರುದ್ದ ಕಾಂಗ್ರೆಸ್ಸಿನಲ್ಲೂ ಒಂದಷ್ಟು ಅಸಮಾಧಾನವಿದೆ. 2012 ರ ಮೇಲ್ಮನೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಹಾಗೂ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಅವರನ್ನು ಸೋಲಿಸಿ, ತಮ್ಮ ಆಪ್ತ ಭೈರತಿ ಸುರೇಶ್ ಅವರನ್ನು ಗೆಲ್ಲಿಸಿಕೊಂಡ ಸಿದ್ದರಾಮಯ್ಯನವರ ಬಗ್ಗೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಟ್ಟಿದೆ. ಕೆಲವು ಶಾಸಕರಿಗೆ ಮಂತ್ರಿ ಆಗಲಿಲ್ಲವೆಂಬ ಬೇಸರವಿದ್ದರೆ, ಇನ್ನೂ ಕೆಲವು ಹಿರಿಯ ನಾಯಕರಿಗೆ ಮುಖ್ಯಮಂತ್ರಿ ತಮ್ಮನ್ನು ಕೇರ್ ಮಾಡುತ್ತಿಲ್ಲ ಎಂಬ ಒಳಗುದಿಯಿದೆ. ಹೈಕಮಾಂಡ್ ಗೆ ಆಪ್ತರಾಗಿರುವ ಮೊದಲ ಅದ್ಯತೆಯ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಸೋಲಿಸಿಬಿಟ್ಟರೆ ಅದರ ಹೊಣೆ ನೇರವಾಗಿ ಸಿದ್ದರಾಮಯ್ಯವರ ತಲೆಗೆ ಹೋಗುತ್ತದೆ ಎಂಬುದು ಅವರ ಎಣಿಕೆ. ಇಂಥವರನ್ನೇ ಕುಮಾರಸ್ವಾಮಿ ಗುರಿ ಮಾಡಿಕೊಂಡಿರುವುದು ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಅಧಿಕೃತ ಅಭ್ಯರ್ಥಿಗಳ ನಿದ್ದೆಗೆಡಿಸಿದೆ.

ರಾಜಕೀಯ ಮೇಲಾಟದಿಂದ ಎಚ್ಚೆತ್ತುಕೊಂಡಿರುವ ಆಸ್ಕರ್ ಫರ್ನಾಂಡಿಸ್ ತಮಗೆ ಮತ ಹಾಕಬೇಕಾದ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಅವರೇ ಸಿದ್ಧಪಡಿಸಿದ್ದಾರೆ. ತಮಗೇ ಮತ ಹಾಕುವುದು ನೂರಕ್ಕೆ ನೂರರಷ್ಟು ಖಚಿತ ಎನ್ನಿಸಿದವರ ಹೆಸರನ್ನು ಪಟ್ಟಿ ಮಾಡಿ ಕೊಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಚುನಾವಣೆ ಬೆಳವಣಿಗೆಗಳು ಅವರನ್ನು ಧೃತಿಗೆಡಿಸಿವೆ. ಆದರೆ ಜೈರಾಂ ರಮೇಶ್ ಈ ಹೊಣೆಯನ್ನು ರಾಜ್ಯ ನಾಯಕರಿಗೆ ಬಿಟ್ಟು ತಣ್ಣಗಿದ್ದಾರೆ.

ಇನ್ನು ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇಲ್ಲೂ ಒಂದಷ್ಟು ಗುಂಪುಗಳಿವೆ. ತಮ್ಮ ಆಪ್ತರಿಗಷ್ಟೇ ಮಣೆ ಹಾಕುತ್ತಿರುವ ಹೊಸ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವರ್ತನೆ ಬಗ್ಗೆ ಇತರ ಹಿರಿಯ ನಾಯಕರಿಗೆ ಅಸಮಾಧಾನವಿದೆ. ದಿಲ್ಲಿ ನಾಯಕರು ವೆಂಕಯ್ಯನಾಯ್ಡು ಬದಲು ರಾಜ್ಯಸಭೆ ಅಭ್ಯರ್ಥಿ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸೋಲಿಸಿಬಿಟ್ಟರೆ ಯಡಿಯೂರಪ್ಪ ಅವರಿಗೆ ಪಾಠ ಕಲಿಸಬಹುದು ಎಂಬ ಚಿಂತನೆಗಳಿಗೇನೂ ಇಲ್ಲಿ ಕೊರತೆ ಇಲ್ಲ. ಆದರೆ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಹಿಸಿರುವ ಜವಾಬ್ದಾರಿ ಮುಂದೆ ಯಡಿಯೂರಪ್ಪ ವಿರುದ್ಧದ ಅಸಮಾಧಾನ ಮೇಲುಗೈ ಪಡೆಯ ಸಂಭವ ಕಡಿಮೆ.

ಇನ್ನೂ ವಿಧಾನ ಪರಿಷತ್ ಚುನಾವಣೆಯಲ್ಲಿ ಏಳನೇ ಸ್ಥಾನಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ಏರ್ಪಟ್ಟಿದೆ. ಕೊರತೆ ಮತಗಳಿರುವ ಸ್ಥಾನಕ್ಕೆ ಬಿಜೆಪಿಯಿಂದ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಮತ್ತು ಜೆಡಿಎಸ್ ನಿಂದ ಡಾ. ವೆಂಕಟಾಪತಿ ಅಭ್ಯರ್ಥಿಗಳು. ಬಿಜೆಪಿಗೆ 14 ಹಾಗೂ ಜೆಡಿಎಸ್ ಗೆ 18 ಮತಗಳ ಕೊರತೆ ಇವೆ. ಪಕ್ಷೇತರರು ಸೇರಿ ಕಾಂಗ್ರೆಸ್ಸೇತರ 17 ಇತರ ಮತಗಳಿವೆ. ಯಾರು ಎಷ್ಟನ್ನು ಸೆಳೆಯುತ್ತಾರೆ ಎನ್ನುವುದರ ಮೇಲೆ ಮತವರ್ಗ ಅವಲಂಬಿತ.

ಎಲ್ಲಕ್ಕಿಂತ ಮಿಗಿಲಾಗಿ ಅದು ರಾಜ್ಯಸಭೆ ಇರಲಿ ಅಥವಾ ಮೇಲ್ಮನೆ ಇರಲಿ ಮತಕೊರತೆ ಎದುರಿಸುತ್ತಿರುವ ಸ್ಥಾನಗಳಿಗೆ ಚುನಾವಣೆ ಅವಲಂಬನೆ ಆಗಿರುವುದು ಹಣದ ಮೇಲೆ. ಈ ಸ್ಥಾನಗಳಿಗೆ ನಡೆಯುತ್ತಿರುವ ಕುದುರೆ ವ್ಯಾಪಾರ ಈಗಾಗಲೇ ಜಗಜ್ಜಾಹಿರಾಗಿದೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ಮತ ಎನ್ನುವುದು ಒಂದು ಕಡೆಯಾದರೆ, ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕುವ ತಮಗೆ ಈ ಹಣ ಸಿಗುವುದಿಲ್ಲವಲ್ಲ ಎನ್ನುವ ಸಂಕಟ ಇವರಿಗೆ ಮತ ನಿಷ್ಕರ್ಶೆ ಆಗಿರುವ ಶಾಸಕರ ಪೈಕಿ ಕೆಲವರದು. ಕೋಟಿ, ಕೋಟಿ ಬರುವ ಲಾಭದಿಂದ ವಂಚಿತರಾಗಲು ತಾವೇನೂ ಪಾಪ ಮಾಡಿದ್ದೇವೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಆಸೆಯೇ ಮೇಲುಗೈ ಸಾಧಿಸಿದರೆ ಇಂಥವರ ಮತಗಳು ಎಲ್ಲಿಗೆ ಬೇಕಾದರೂ ವರ್ಗ ಆಗಬಹುದು. ಮೊದಲ ಆದ್ಯತೆ ಅಭ್ಯರ್ಥಿಗಳಿಗೆ ಆತಂಕ ಇರುವುದೇ ಇಲ್ಲಿ. ಇದಕ್ಕೆ ಯಾವುದೇ ಪಕ್ಷವೂ ಹೊರತಲ್ಲ.

Leave a Reply