ನಿರೀಕ್ಷೆಯಂತೆ ಹುಸಿಯಾಯ್ತು ಪೊಲೀಸರ ಮುಷ್ಕರ, ಒತ್ತಡಕ್ಕೆ ಮಣಿದು ರಾಜಿನಾಮೆ ಕೊಟ್ರು ಖಡ್ಸೆ, ಕತಾರ್ ನತ್ತ ಪ್ರಯಾಣ ಬೆಳೆಸಿದ್ರು ಮೋದಿ

ಜಯನಗರದ 8ನೇ ಬ್ಲಾಕ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಪಾರ್ಕ್ ಉಳಿಸಿ’ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ, ಪ್ರಜಾವಾಣಿ ಸಂಪಾದಕರಾದ ಶಾಂತಕುಮಾರ್, ಟಿ.ಎನ್.ಸೀತಾರಾಮ್, ಮುದ್ದುಕೃಷ್ಣ, ಶ್ರೀನಿವಾಸ ವೈದ್ಯ ಮತ್ತು ಡಾ.ಪ್ರಸಾದ್ ಪಾಲ್ಗೊಂಡು ಮಾತನಾಡಿದರು.

ಡಿಜಿಟಲ್ ಕನ್ನಡ ಟೀಮ್:

ಹಲವು ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸ್ತೀವಿ ಅಂತಾ ಮುಂದಾಗಿದ್ದ ಪೊಲೀಸರು ಸರ್ಕಾರದ ಎಚ್ಚರಿಕೆಗೆ ಮಣಿದು ತಮ್ಮ ನಿರ್ಧಾರ ಬದಲಿಸಿದ್ದಾರೆ. ಈ ಮಧ್ಯೆ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಮುಂದಾಗಿದೆ. ಇದರೊಂದಿಗೆ ಪೊಲೀಸ್ ಸಿಬ್ಬಂದಿಗಳು ಮುಷ್ಕರ ಮಾಡ್ತೀವಿ ಅಂದಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ ಎಂಬುದು ಖಾತರಿಯಾಗಿದೆ.

ಪ್ರತಿಭಟನೆಯಲ್ಲಿ ಪೊಲೀಸರು ಭಾಗಿಯಾದರೆ ಸೇವೆಯಿಂದ ವಜಾಗೊಳಿಸುವುದಲ್ಲದೆ, ಅಂತಹವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಸರ್ಕಾರ ಎಚ್ಚರಿಸಿತ್ತು. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಎಂದಿನಂತೆ ಕರ್ತವ್ಯಕ್ಕೆ ನಿಗದಿತ ಸಮಯಕ್ಕೂ ಮೊದಲೇ ಹಾಜರಾಗಿದ್ದರು. ಸರ್ಕಾರದ ಎಚ್ಚರಿಕೆಯ ಪರಿಣಾಮ ಇತರೆ ದಿನಕ್ಕಿಂತ ಇಂದು ಸೇವೆಗೆ ಹಾಜರಾಗಿದ್ದ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿತ್ತು.

ಕೇಂದ್ರ ಗಡಿ ಭದ್ರತಾ ಪಡೆ, ಮೀಸಲು ಪಡೆ, ಕೈಗಾರಿಕೆ ಭದ್ರತಾ ಪಡೆ ಹಾಗೂ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು. ಕೇಂದ್ರ ಮಹಿಳಾ ಪೊಲೀಸ್ ಪಡೆ ಹಾಗೂ 11 ಸಾವಿರಕ್ಕೂ ಹೆಚ್ಚು ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ಮಧ್ಯೆ ವೇತನ ತಾರತಮ್ಯ, ಪೊಲೀಸ ಒತ್ತಡ ಕಡಿಮೆ ಮಾಡಲು ಅಗತ್ಯ ಸಿಬ್ಬಂದಿಗಳ ನೇಮಕದಂತಹ ಬೇಡಿಕೆಗಳನ್ನು ಕಾಲಮಿತಿಯೊಳಗೆ ಸರ್ಕಾರ ಜಾರಿಗೊಳಿಸಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಮೂರು ಹಂತಗಳಲ್ಲಿ ಪೊಲೀಸರು ಹಾಗೂ ಸಬ್ ಇನ್ಸ್ ಪೆಕ್ಟರ್ ಗಳ ನೇಮಕಾತಿಗೆ ಚಾಲನೆ ನೀಡುತ್ತೇವೆ. ಈಗಾಗಲೇ 16 ಸಾವಿರ ಪೊಲೀಸರ ನೇಮಕಾತಿಗೆ ಚಾಲನೆ ದೊರೆತಿದೆ. ಇದಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 15 ಸಾವಿರ ಪೊಲೀಸರ ನೇಮಕಾತಿಯಾಗಲಿದೆ ಎಂದರು.

ಈ ವೇಳೆ ಪ್ರತಿಭಟನೆಗೆ ಮುಂದಾಗಿದ್ದ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಬಂಧನದ ಬಗ್ಗೆ ಕೇಳಲಾಗ ಪ್ರಶ್ನೆಗೆ ಗರಂ ಆದ ಸಚಿವರು ಮಾಧ್ಯಮದವರಿಗೂ ಬೆದರಿಕೆ ಹಾಕಿದರು. ಅವರು ಹೇಳಿದಿಷ್ಟು. ‘ಶಶಿಧರ್ ಸಿಪಾಯಿದಂಗೆ ನಡೆಸುತ್ತೇವೆ ಎಂದಿದ್ದರು. ಹೀಗಾಗಿ ರಾಷ್ಟ್ರವಿರೋಧಿ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ನೀವೂ ಸಿಪಾಯಿದಂಗೆ ಆಗಬೇಕು ಎಂದರೆ, ಶಶಿಧರ್ ಜತೆ ನೀವು ಇರುತ್ತೀರಿ.’

  • ನವದೆಹಲಿಯಲ್ಲಿ ನಡೆದ ಮರ್ಸಿಡೀಸ್ ಕಾರು ಹಿಟ್ ಅಂಡ್ ರನ್ ಪ್ರಕರಣದಲ್ಲಿನ ಅಪ್ರಾಪ್ತ ಆರೋಪಿಯನ್ನು ವಯಸ್ಕ ಎಂದೇ ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿ ಸಿಕ್ಕಿದೆ. ಈ ಬಗ್ಗೆ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜ್ಯುವೆನಿಲ್ ಜಸ್ಟೀಸ್ ಬೋರ್ಡ್ (ಜೆಜೆಬಿ) ಒಪ್ಪಿಗೆ ನೀಡಿದೆ. ಈ ತೀರ್ಮಾನವನ್ನು ಸಂತ್ರಸ್ತನ ಕುಟುಂಬ ಸ್ವಾಗತಿಸಿದೆ.
  • ಭೂಗತ ಪಾತಕಿ ದಾವುದ್ ಇಬ್ರಾಹಿಂ ಜತೆಗೆ ದೂರವಾಣಿ ಸಂಪರ್ಕ ಮತ್ತು ಅಕ್ರಮವಾಗಿ ಸರ್ಕಾರಿ ಭೂಮಿ ಮಾರಾಟ ಪ್ರಕರಣದಲ್ಲಿ ಸಿಲುಕಿರುವ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ ಖಡ್ಸೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಈ ಆರೋಪಗಳಿಂದ ಸ್ವತಃ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಖಡ್ಸೆ ಕೊನೆಗೂ ಒತ್ತಡಕ್ಕೆ ಮಣಿದಿದ್ದಾರೆ. ಶನಿವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದ್ದಾರೆ.
  • ಅಫ್ಘಾನಿಸ್ತಾನದಲ್ಲಿ ಶನಿವಾರ ‘ಅಫ್ಘನ್-ಭಾರತ ಸ್ನೇಹ ಅಣೆಕಟ್ಟು’ ಉದ್ಘಾಟಿಸಿದ ಭಾರತ ಪ್ರಧಾನಿ ನರೇಂದ್ರ ಮೋದಿ, ಕತಾರ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಪಂಚ ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ ಕತಾರ್ ನಲ್ಲಿ ಇಂಧನ ವಿಷಯವನ್ನು ಪ್ರಮುಖವಾಗಿ ಚರ್ಚಿಸಲಿದ್ದಾರೆ. ನಂತರ ಕ್ರಮವಾಗಿ ಸ್ವಿಜರ್ಲೆಂಡ್, ಅಮೆರಿಕ ಮತ್ತು ಮೆಕ್ಸಿಕೊ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

Leave a Reply