ಶಸ್ತ್ರಾಸ್ತ್ರ ವ್ಯಾಪಾರವಷ್ಟೇ ಸ್ನೇಹ ಅಲ್ಲ, ಇದು ‘ಅಫ್ಘನ್-ಭಾರತ ಸ್ನೇಹದ ಡ್ಯಾಮ್’ ವಿಶ್ವಕ್ಕೆ ಹೇಳುತ್ತಿರೋ ಪಾಠ!

ಡಿಜಿಟಲ್ ಕನ್ನಡ ಟೀಮ್:

ತಾಲಿಬಾನ್ ಉಗ್ರರ ಉಪಟಳದಿಂದ ಸಂತೈಸಿಕೊಳ್ಳುತ್ತಿರುವ ಅಫ್ಘಾನಿಸ್ತಾನಕ್ಕೆ ಭಾರತ ಹಲವು ರೀತಿಯಿಂದ ಸಹಕರಿಸುತ್ತಿರುವುದು ತಿಳಿದೇ ಇದೆ. ಇತ್ತೀಚೆಗೆ ಭದ್ರತೆಯ ಸಲುವಾಗಿ ಅಫ್ಘನ್ ಗೆ ಯುದ್ಧ ವಿಮಾನಗಳನ್ನೂ ಭಾರತ ನೀಡಿತ್ತು. ಆದರೆ, ಮಿಲಿಟರಿ ಸಹಕಾರವಷ್ಟೇ ಬಾಂಧವ್ಯವಲ್ಲ. ಹಾಗೆಂದೇ ಯುದ್ಧ ಸಂತ್ರಸ್ತ ಅಫ್ಘಾನಿಸ್ತಾನಕ್ಕೆ ನೀರುಣಿಸುವ ಮತ್ತು ವಿದ್ಯುತ್ ಕೊಡುವ ಕೆಲಸದಲ್ಲೂ ಸಹಯೋಗ ಒದಗಿಸಿದೆ ಭಾರತ.

ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಶನಿವಾರ ‘ಅಫ್ಘನ್-ಭಾರತ ಸ್ನೇಹದ ಅಣೆಕಟ್ಟ’ನ್ನು ಉದ್ಘಾಟನೆ ಮಾಡಿದ್ದಾರೆ. ಈ ಯೋಜನೆಯಿಂದ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು 75 ಸಾವಿರ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರು ಪೂರೈಸುವ ಗುರಿ ಇದೆ. ಇದರಿಂದ ಭವಿಷ್ಯದಲ್ಲಿ ಈ ಭಾಗದ ಜನರ ಏಳಿಗೆಗೆ ಈ ಅಣೆಕಟ್ಟು ಮಹತ್ವದ ಪಾತ್ರ ವಹಿಸಲಿದೆ.

ಈ ಅಣೆಕಟ್ಟು ಪ್ರಯತ್ನ ನಿನ್ನೆಇವತ್ತಿನದಲ್ಲ. ಇದು ಅಫ್ಘಾನಿಸ್ತಾನದ 30 ವರ್ಷಗಳ ಕನಸು. 1976 ರಲ್ಲಿ ಅಲ್ಲಿನ ಹರಿ ನದಿಗೆ ಹೆರಾತ್ ಪ್ರದೇಶದಲ್ಲಿ ಸಲ್ಮಾ ಡ್ಯಾಮ್ ಕಟ್ಟಲು ನಿರ್ಧರಿಸಲಾಗಿತ್ತು. ಇದರ ನಿರ್ಮಾಣದ ಜವಾಬ್ದಾರಿ ಭಾರತದ ಡಬ್ಲ್ಯೂಎಪಿಸಿಒಎಸ್ ಲಿಮಿಟೆಡ್ ಕಂಪನಿ ವಹಿಸಿಕೊಂಡಿತ್ತು. ಆದರೆ, 1979 ರಿಂದ ’89 ರವರೆಗೆ ಸುದೀರ್ಘ 10 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ನಡೆದ ಆಂತರಿಕ ಸಂಘರ್ಷ ಈ ಅಣೆಕಟ್ಟನ್ನು ಕನಸಾಗಿಯೇ ಉಳಿಸಿತು.

ಯುದ್ಧ ಸಂತ್ರಸ್ತ ದೇಶಗಳ ಪುನಶ್ಚೇತನಕ್ಕೆ ಬದ್ಧ ಎಂಬ ಧ್ಯೇಯದೊಂದಿಗೆ ಭಾರತ 2006 ರಲ್ಲಿ ಈ ಅಣೆಕಟ್ಟು ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಲು ನಿರ್ಧರಿಸಿತು. ಈ ಕಾಮಗಾರಿಯಲ್ಲಿ ಉಭಯ ದೇಶಗಳ ಸುಮಾರು 1500 ಎಂಜಿನಿಯರ್ ಗಳು ಕಾರ್ಯ ನಿರ್ವಹಿಸಿದ್ದರು. 2013 ರ ಜನವರಿಯಲ್ಲಿ ₹ 1,457 ಕೋಟಿ ಹಣ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿತು. ಮೂರು ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಮೋದಿ ಉದ್ಘಾಟಿಸಿದ್ದಾರೆ.

ಉದ್ಘಾಟನೆ ನಂತರ ಉಭಯ ದೇಶಗಳ ನಾಯಕರು ಹೇಳಿದ ಮಾತುಗಳು ಹೀಗಿವೆ:

  • ಮೋದಿ ಅವರ ಎರಡನೇ ಮನೆಗೆ ಸ್ವಾಗತಿಸುತ್ತೇನೆ. ದೇಶದ ಸುದೀರ್ಘ ಕನಸು ಭಾರತದ ನೆರವಿನೊಂದಿಗೆ ಸಕಾರಗೊಂಡಿದೆ. ಈ ಅಣೆಕಟ್ಟು ಉಭಯ ದೇಶಗಳ ಸ್ನೇಹ ಮತ್ತು ಸಹಕಾರ ಹೆಚ್ಚಿಸಿದೆ. ನಮ್ಮ ದೇಶದ ಜನರು ರಸ್ತೆ, ಅಣೆಕಟ್ಟು ಹಾಗೂ ಇತರೆ 200 ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಭಾರತವನ್ನು ನೆನೆಸಿಕೊಳ್ಳಲಿದ್ದಾರೆ ಎಂಬುದು ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ನುಡಿ.
  • ಅಫ್ಘಾನಿಸ್ತಾನದ ಪ್ರತಿ ಭಾಗಕ್ಕೂ ಭಾರತದ ನೆರವು ವಿಸ್ತರಣೆಯಾಗಲಿದೆ. ಇಲ್ಲಿ ಅಣೆಕಟ್ಟಿನ ಉದ್ಘಾಟನೆ ಮೂಲಕ ಹೊಸ ಬದುಕಿಗೆ ನಾಂದಿ ಹಾಡಿದ್ದೇವೆ. ಭವಿಷ್ಯದಲ್ಲಿ ಅಫ್ಘಾನಿಸ್ತಾನದ ಏಳಿಗೆಗೆ ಇದು ಸಹಕಾರಿಯಾಗುವ ವಿಶ್ವಾಸವಿದೆ. ಈ ಅಣೆಕಟ್ಟಿಗೆ ‘ಅಫ್ಘನ್-ಭಾರತ ಸ್ನೇಹ ಅಣೆಕಟ್ಟು’ ಎಂದು ಹೆಸರಿಟ್ಟಿರುವುದಕ್ಕೆ ಧನ್ಯವಾದಗಳು ಎಂದರು ಮೋದಿ.

ಕೇವಲ ಶಸ್ತ್ರಾಸ್ತ್ರ ಪೂರೈಕೆ, ಭದ್ರತಾ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ದೇಶಗಳ ಸ್ನೇಹ ಸಂಬಂಧವನ್ನು ಅಳೆಯುತ್ತಿರೋ ಸಂದರ್ಭದಲ್ಲಿ ಮಾನವೀಯತೆ, ಹೃದಯವಂತಿಕೆಯ ನೆಲೆಗಟ್ಟಿನಲ್ಲಿ ನೀಡಿದ ನೆರವು ನಿಜವಾದ ಸ್ನೇಹ ಎಂಬ ಸಂದೇಶವನ್ನು ಈ ಅಣೆಕಟ್ಟು ರವಾನಿಸಿದೆ.

ಈ ಹೆರಾತ್ ಪ್ರಾಂತ್ಯ ಮಧ್ಯ ಪ್ರಾಚ್ಯ, ಕೇಂದ್ರ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಚಾಲ್ತಿಯಲ್ಲಿದ್ದ ಪ್ರಾಚೀನ ವ್ಯಾಪಾರ ಮಾರ್ಗದ ಪ್ರಮುಖ ಬಿಂದು ಆಗಿತ್ತು. ಇಲ್ಲಿನ ರಸ್ತೆಗಳು ಇರಾನ್, ತುರ್ಕ್ ಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನದ ಇತರೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತವೆ. ಈ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯಗಳು ಭಾರತದ ವ್ಯಾಪಾರ ವಿಸ್ತರಣೆ ಕಾರ್ಯತಂತ್ರದ ಭಾಗವೂ ಹೌದು.

Leave a Reply