ಅಖಾಡದ ಆಚೆಗೂ ಮೊಹಮದ್ ಅಲಿ ಕದನ, ಅಲ್ಲಿ ಸಿಗಬಹುದಾದ ಬದುಕಿನ ದರ್ಶನ

ಡಿಜಿಟಲ್ ಕನ್ನಡ ವಿಶೇಷ:

ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದ ವಿಶ್ವವಿಖ್ಯಾತ ಬಾಕ್ಸರ್ ಮೊಹಮದ್ ಅಲಿ ತಮ್ಮ 74ನೇ ವಯಸ್ಸಿನಲ್ಲಿ ಶುಕ್ರವಾರ ತೀರಿಕೊಂಡಿದ್ದಾರೆ. ಈ ಸುದ್ದಿ ತಿಳಿದು ಬಾಕ್ಸಿಂಗ್ ಆಸಕ್ತರು ಅವರ ಹಳೆಯ ಸೆಣೆಸಾಟಗಳನ್ನು ಮೆಲುಕು ಹಾಕಿಯಾರು. ಮೊಹಮದ್ ಅಲಿ ದಾಖಲೆಗಳನ್ನು ಸೃಷ್ಟಿಸಿದ ಪಂದ್ಯಗಳ ಲೆಕ್ಕ ಕೊಡಬಹುದು.

ಬಾಕ್ಸಿಂಗ್ ಅನ್ನು ರೂಪಕವಾಗಿಟ್ಟುಕೊಂಡು ಬದುಕಿನ ಹೋರಾಟವನ್ನು ನೋಡಬಹುದಾದರೆ ಅದು ಅಲಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ.

ಕೆಲ ನಿಯಮಗಳಿಗೆ ಬದ್ಧರಾಗಿ ಇಬ್ಬರು ಕೊಟ್ಟುಕೊಳ್ಳುವ ಪಂಚ್ ಗಳು ಏಕೆ ಒಂದು ರೋಮಾಂಚನವನ್ನು ಹುಟ್ಟುಹಾಕುತ್ತವೆ? ಏಕೆಂದರೆ ಬದುಕು ಸಹ ಕೆಲವು ಪಂಚ್ ಗಳ ಸಮೀಕರಣ. ಅವುಗಳನ್ನು ಆನಂದಿಸುತ್ತಲೇ ವೇಳೆ ಕಳೆಯಬೇಕು.

ಕಾಸ್ಸಿಯಸ್ ಮರ್ಕೆಲ್ಲುಸ್ ಕ್ಲೆ ಆಗಿದ್ದ ವ್ಯಕ್ತಿ ಮೊಹಮದ್ ಅಲಿ ಏಕಾದ ಅಂತ ನೋಡುವುದು ಒಂದು ಪಂಚ್. ಅಮೆರಿಕದ ಈ ಹೆಮ್ಮೆಯ ಕ್ರೀಡಾಳು, ಒಂದು ಹಂತದಲ್ಲಿ ಸರ್ಕಾರಕ್ಕೆ ಸಡ್ಡು ಹೊಡೆದು ತಾನು ಸೇನೆ ಸೇರುವುದಿಲ್ಲಎಂದು ಹೇಳಿ ತನ್ನ ಬಾಕ್ಸಿಂಗ್ ಪರವಾನಗಿ ಕಳೆದುಕೊಂಡಿದ್ದರ ವಿವರ ಇನ್ನೊಂದು ಪಂಚ್. ಕ್ರೀಡಾಳು ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ದುಡಿದವರು ಇಂಥ ವಿವರಗಳನ್ನು ಬಿಟ್ಟು ಹೋಗುವುದರಿಂದ ಅಲ್ಲೊಂದು ಕತೆ- ಶ್ರದ್ಧಾಂಜಲಿಗೆ ಜಾಗವಿರುತ್ತದೆಯೇ ಹೊರತು ಸುಮ್ಮನೇ ಹೊಡೆದಾಡಿದರೆಂಬ ಮಾತ್ರಕ್ಕೆ ಜಗತ್ತು ನೆನಪಿಸುವುದಿಲ್ಲ.

1964ರಲ್ಲಿ ತನ್ನ 22 ನೇ ವಯಸ್ಸಿಗೆ ವಿಶ್ವ ಹೆವಿವೇಟ್ ಚಾಂಪಿಯನ್ ಆದ ಅಲಿ ಅರ್ಥಾತ್ ಅವತ್ತಿನ ಕ್ಲೆ, ‘ನೇಷನ್ ಆಫ್ ಇಸ್ಲಾಂ’ ಸಂಘ ಸೇರಿ ಮತಾಂತರವಾಗಿದ್ದು, ನಂತರ 1975ರಲ್ಲಿ ಸುನ್ನಿ ಇಸ್ಲಾಂ ಅಪ್ಪಿಕೊಂಡಿದ್ದು ಕೊನೆಯಲ್ಲಿ ಸೂಫಿ ರಾಗ ಹಾಡಿದ್ದು ಇವೆಲ್ಲವೂ ಬಹುಶಃ ಅಲಿ ಒಳಗೆ ನಡೆಯುತ್ತಿದ್ದ ಬಾಕ್ಸಿಂಗ್ ಜಲಕುಗಳು. ಅಮೆರಿಕ ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದನ್ನು ವಿರೋಧಿಸುತ್ತ ಹಾಗೂ ಧಾರ್ಮಿಕ ನಂಬಿಕೆಗಳ ಸಲುವಾಗಿ ತಾನು ಸೇನೆ ಸೇರುವುದಿಲ್ಲ ಎಂದಿದ್ದಕ್ಕೆ ಅವತ್ತಿನ ಸರ್ಕಾರಗಳು ಅಮೆರಿಕದ ಎಲ್ಲ ರಾಜ್ಯಗಳಲ್ಲಿ ಆತನ ಬಾಕ್ಸಿಂಗ್ ಲೈಸೆನ್ಸ್ ತೆರವುಗೊಳಿಸಿದವು. ಅಲಿ ಬಂಧನಕ್ಕೊಳಗಾಗಿ ತನ್ನ ವೃತ್ತಿಯ ಅತ್ಯುಚ್ಛ ದಿನಗಳ ನಾಲ್ಕು ವರ್ಷಗಳನ್ನು ಕಳೆದುಕೊಂಡರು. ಆ ನಂತರ ನ್ಯಾಯಾಲಯ ಇವರ ಮೇಲಿನ ಪ್ರತಿಬಂಧ ತೆಗೆದುಹಾಕಿ ಮತ್ತೆ ಅಲಿಯ ಬಾಕ್ಸಿಂಗ್ ಜಮಾನಾ ಶುರುವಾಯಿತು.

ಬಾಕ್ಸಿಂಗ್ ಸಂಘರ್ಷವಷ್ಟೇ ಅಲ್ಲದೇ ಬದುಕಿನ ಸಂಘರ್ಷವೂ ಇದ್ದಿದ್ದರಿಂದ ಅಲಿ ಹೊಡೆದಾಟದ ವಿವರಗಳ ಹೊರತಾದ ಬೇರೆ ಪಾಕವನ್ನೂ ಸೃಷ್ಟಿಸಿದರೆನಿಸುತ್ತದೆ. ಅತಿ ಆತ್ಮವಿಶ್ವಾಸದ ಅಹಂಕಾರಿ ಎನಿಸುತ್ತಿದ್ದ ಮಾತುಗಳಿಂದಲೇ ಸೆಣಸಷ್ಟೇ ಅಲ್ಲದೇ ಜಾಣ್ಮೆಯನ್ನೂ ತೋರಿಸಿ ಹೋದರು ಅಲಿ.

ಮೊಹಮದ್ ಅಲಿ ಮಾತಿನ ಪಂಚುಗಳು ಆತನ ಅಹಂಕಾರದ ನಡುವೆಯಬ ಮೊಳೆತ ಜಾಣ್ಮೆಯನ್ನು ಸಾರುವಂತಿವೆ.

– 1964ರಲ್ಲಿ ಸೋನಿ ಲಿಸ್ಟನ್ ಜತೆಗಿನ ಸೆಣೆಸಿಗೂ ಮೊದಲು ಈತ ಹೇಳಿದ್ದನ್ನು ಕಾವ್ಯದಂತೆ ಕಂಠಪಾಠ ಒಪ್ಪಿಸುವವರಿದ್ದಾರೆ- ‘ಪಾತರಗಿತ್ತಿಯಂತೆ ತೇಲು, ಜೇನಿನಂತೆ ಕುಟುಕು, ಅಬ್ಬರಿಸು ಯುವಕನೇ ಸಿಡಿಲಿನಂತೆ…’

– ನನ್ನಂತೆ ಶ್ರೇಷ್ಠತೆ ಸಾಧಿಸಿರುವ ವ್ಯಕ್ತಿಗೆ ವಿನಮ್ರನಾಗಿರುವುದಕ್ಕೆ ಕಷ್ಟವಾಗುತ್ತೆ!

– ಸರ್ಕಾರ ಜೈಲಿಗಟ್ಟಿದಾಗ ಹೇಳಿದ್ದು: ‘ನನಗೇನು ಸರಿ ಅನಿಸಿತೋ ನಾನದನ್ನು ಮಾಡಿದೆ. ಅವರಿಗೇನು ಸರಿ ಅನಿಸಿತೋ ಅದನ್ನವರು ಮಾಡಿದರು.’

– ಫಿಲಿಪ್ಪೀನ್ಸ್ ಅಧ್ಯಕ್ಷನ ಭೇಟಿ ಮಾಡಿದಾಗ ಅಲಿ ಹೀಗೆ ಹೇಳಿದ್ದ: ‘ನಿಮ್ಮ ಹೆಂಡತಿಯನ್ನು ನೋಡಿದ ಮೇಲೆ ಗೊತ್ತಾಯಿತು, ನಮ್ಮ ಕಣ್ಣಿಗೆ ಕಾಣಿಸುವಷ್ಟು ದಡ್ಡರು ನೀವಲ್ಲ ಅಂತ!’

ಇವೆಲ್ಲ ವಿವರಗಳ ನಂತರವೂ ಮುಖ್ಯವಾಗುವುದು, ಪಾರ್ಕಿನ್ಸನ್ ಕಾಯಿಲೆಗೆ ತುತ್ತಾದ ನಂತರವೂ ಅಲಿ ವಿಷಾದವಿಲ್ಲದೇ ಬದುಕನ್ನು ಮುಗಿಸಿದರು ಎಂಬ ಅಂಶ. ಆ ನಿಟ್ಟಿನಲ್ಲಿ ಅಲಿ ಮಾತುಗಳು ಎದೆಗಿಳಿಯಬೇಕಾದ ಅಲ್ಟಿಮೇಟ್ ಪಂಚ್ ಗಳಂತಿವೆ-

‘ನಾನೀಗ ದೈಹಿಕವಾಗಿ ನರಳುತ್ತಿದ್ದರೂ ಬದುಕಿನಲ್ಲಿ ಸಾಧಿಸಿದ್ದಕ್ಕೆ ಹೋಲಿಸಿದರೆ ಈ ನೋವಿನಲ್ಲಿ ಅರ್ಥವಿದೆ. ರಿಸ್ಕ್ ತೆಗೆದುಕೊಳ್ಳುವ ಧೈರ್ಯ ತೋರದ ಮನುಷ್ಯ ಬದುಕಿನಲ್ಲಿ ಏನನ್ನೂ ಸಾಧಿಸಲಾರ.’

‘ಜನ ಹೇಳುತ್ತಾರೆ ನಾನು ಈ ದಿನಗಳಲ್ಲಿ ಬಹಳ ನಿಧಾನವಾಗಿ ಮಾತನಾಡುತ್ತೇನೆ ಅಂತ. ಅದರಲ್ಲಿ ಆಶ್ಚರ್ಯವೇನಿಲ್ಲ. ನಾನು ಲೆಕ್ಕ ಇಟ್ಟಿರೋ ಪ್ರಕಾರ 29 ಸಾವಿರ ಪಂಚ್ ಗಳನ್ನು ತಿಂದಿದ್ದೇನೆ. ಆದರೆ 57 ಮಿಲಿಯನ್ ಡಾಲರ್ ಗಳಿಸಿ ಅದರಲ್ಲಿ ಅರ್ಧದಷ್ಟನ್ನು ಉಳಿಸಿದ್ದೇನೆ. ಹೀಗಾಗಿ ಇನ್ನೊಂದಿಷ್ಟು ಹೊಡೆತಗಳನ್ನು ತೆಗೆದುಕೊಂಡೆ. ತಮ್ಮ ಹೆಸರಲ್ಲಿ ಪುಡಿಗಾಸೂ ಇಲ್ಲದ ಅವೆಷ್ಟು ಕಪ್ಪು ಜನರನ್ನು ಪ್ರತಿವರ್ಷ ಗನ್ನು ಚಾಕುಗಳಲ್ಲಿ ಇರಿದು ಕೊಲ್ಲಲಾಗುತ್ತಿದೆ ಗೊತ್ತೇ? ನನ್ನ ಮಾತು ನಿಧಾನವಾಗಿರಬಹುದು ಆದರೆ ಮನಸ್ಸು ತಿಳಿಯಾಗಿದೆ.’

—–

ಉಳಿದಂತೆ ನೀವು ತಿಳಿದುಕೊಳ್ಳಬೇಕಾದ ವಿವರಗಳು-

– 1960 ರಿಂದ 1980 ರ ಸುಮಾರಿಗೆ ಅಂದರೆ, 2 ದಶಕಗಳ ಬಾಕ್ಸಿಂಗ್ ರಿಂಗ್ ನಲ್ಲಿ ಮಿಂಚು ಹರಿಸಿದ ಚಾಂಪಿಯನ್ ಮೊಹಮದ್ ಅಲಿ. ಈ ಅವಧಿಯಲ್ಲಿ ಅಲಿ, ತಾನಷ್ಟೇ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಲಿಲ್ಲ. ತಮ್ಮ ಪ್ರತಿಭೆಯೊಂದಿಗೆ ಬಾಕ್ಸಿಂಗ್ ಕ್ರೀಡೆಯನ್ನೂ ಮೇಲ್ಮಟ್ಟಕ್ಕೆ ಕರೆದೋಯ್ದ ಕೀರ್ತಿ ಇವರದು. 1960 ರ ರೋಮ್ ಒಲಿಂಪಿಕ್ಸ್ ಲೈಟ್ ಹೆವಿವೇಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 3 ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್ ಶಿಪ್ (1964, 1974, 1978) ಅಲಿ ಅವರ ಮುಡಿ ಅಲಂಕರಿಸಿದ ವಿಶ್ವಶ್ರೇಷ್ಠ ಗರಿಗಳು. ಈ ಎರಡು ದಶಕಗಳ ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಲಿ 61 ಪಂದ್ಯಗಳ ಪೈಕಿ 56 ಜಯ ಹಾಗೂ ಕೇವಲ 5 ಸೋಲು, ಇವರ ಪಾರಮ್ಯಕ್ಕೆ ಸಾಕ್ಷಿ.

– ಮೊಹಮದ್ ಅಲಿ ಬಾಕ್ಸಿಂಗ್ ರಿಂಗ್ ನಲ್ಲಿನ ಚುರುಕುತನ, ವೃತ್ತಾಕಾರದಲ್ಲಿ ತಿರುಗುತ್ತಾ ಎದುರಾಳಿಯ ಮೇಲೆ ನಿಯತ್ರಣ ಸಾಧಿಸುತ್ತಿದ್ದ ಶೈಲಿ, ಅವರ ಫುಟ್ ವರ್ಕ್ ಎಲ್ಲರ ಗಮನ ಸೆಳೆದಿತ್ತು. ಇದರೊಂದಿಗೆ ಬಾಕ್ಸಿಂಗ್ ನಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದರು. ಈಗಲೂ ಬಹುತೇಕ ಬಾಕ್ಸರ್ ಗಳು ಅಲಿ ಅವರ ಶೈಲಿ ಅನುಕರಣೆ ಮಾಡುತ್ತಾರೆ. ಅಲಿ ಕೇವಲ ರಿಂಗ್ ನಲ್ಲಿ ಬಾಕ್ಸಿಂಗ್ ಕರಾಮತ್ತು ತೋರಿದವರಲ್ಲ. ರಿಂಗ್ ಆಚೆಗೂ ಎದುರಾಳಿಗಳ ಚಿತ್ತ ಗೆಡಿಸುತ್ತಿದ್ದರು.

ಪಂದ್ಯಕ್ಕೂ ಮುನ್ನ ಎದುರಾಳಿ ವಿರುದ್ಧ ತಮ್ಮ ಮಾತಿನಿಂದಲೇ ಹೀಯಾಳಿಸಿ ಮಾನಸಿಕ ತಿಕ್ಕಾಟಕ್ಕೆ ಮುಂದಾಗುತ್ತಿದ್ದದ್ದು ಅಲಿ ಅವರ ಮತ್ತೊಂದು ತಂತ್ರಗಾರಿಕೆ. ಎದುರಾಳಿಗಳ ಏಕಾಗ್ರತೆ ಕಳೆದುಕೊಳ್ಳುವಂತೆ ಮೈಂಡ್ ಗೇಮ್ ಆರಂಭಿಸಿ ಅವರ ಮೇಲೆ ಪ್ರಾಬಲ್ಯ ಸಾಧಿಸುತ್ತಿದ್ದರು. ಮುಂದೆ ಇದು ‘ಟಾಕಿಂಗ್ ತ್ರ್ಯಾಶ್’ ಎಂದೇ ಖ್ಯಾತಿ ಪಡೆಯಿತು.

– 12ನೇ ವಯಸ್ಸಿನಲ್ಲಿ ತನ್ನ ಸೈಕಲ್ ಅನ್ನು ಕದಿಯಲು ಪ್ರಯತ್ನಿಸಿದ ಕಳ್ಳರಿಗೆ ಮಾಂಜ ಕೊಟ್ಟಿದ್ದ. ಇದನ್ನು ಕಂಡ ಲೂಯಿಸ್ವಿಲ್ಲೆ ಪೊಲೀಸ್ ಅಧಿಕಾರಿ ಹಾಗೂ ಬಾಕ್ಸಿಂಗ್ ಕೋಚ್ ಜೋ ಇ ಮಾರ್ಟೀನ್, ಕ್ಲೇಗೆ ಬಾಕ್ಸಿಂಗ್ ನತ್ತ ಗಮನ ಹರಿಸುವ ಸಲಹೆ ನೀಡಿದರು. ಈ ಒಂದು ಮಾತಿನಿಂದ ಸ್ಫೂರ್ತಿಗೊಂಡ ಅಲಿ, 12ನೇ ವಯಸ್ಸಿನಿಂದಲೇ ಕಟ್ಮನ್ ಚಕ್ ಬೊಡಕ್ ನಲ್ಲಿ  ಬಾಕ್ಸಿಂಗ್ ತರಬೇತಿ ಪಡೆದ ಕ್ಲೇ, ನೋಡ ನೋಡುತ್ತಿದ್ದಂತೆ ಯಶಸ್ಸಿನ ಹಾದಿಯಲ್ಲಿ ಸಾಗಿದ. ಆರಂಭದಲ್ಲೇ ಕ್ಲೇ 6 ಬಾರಿ ಕೆಂಟುಕಿ ಗೋಲ್ಡನ್ ಗ್ಲೌವ್ಸ್, 2 ರಾಷ್ಟ್ರೀಯ ಗೋಲ್ಡನ್ ಗ್ಲೈವ್ಸ್, ಅಮೇಚುರ್ ಅಥ್ಲೇಟಿಕ್ ಯೂನಿಯನ್ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡರು. ಅಮೇಚುರ್ ಬಾಕ್ಸಿಂಗ್ ನಲ್ಲಿ 100 ಜಯ ದಾಖಲಿಸಿದ ಸಾಧನೆ ಇವರದು.

– ರೋಮ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಬಂದ ನಂತರ ‘ವೈಟ್ಸ್ ಓನ್ಲಿ’ ಎಂಬ ರೆಸ್ಟೋರೆಂಟ್ ನಲ್ಲಿ ಆದ ಅಪಮಾನ ಅಲಿಗೆ ತೀವ್ರ ಬೇಸರ ತಂದಿತ್ತು. ಇಲ್ಲಿ ಅಲಿಗೆ ಸರ್ವೀಸ್ ಮಾಡಲು ಅಲ್ಲಿನ ಬಿಳಿಯರು ನಿರಾಕರಿಸಿದರು. ಇದರಿಂದ ಕೋಪಗೊಂಡ ಕ್ಲೇ ಬಿಳಿಯರ ಗುಂಪುನೊಂದಿಗೆ ಗುದ್ದಾಡಿದ್ದು ಉಂಟು. ಈ ವರ್ಣಬೇಧದಿಂದ ಬೇಸತ್ತು ಒಲಿಂಪಿಕ್ಸ್ ನಲ್ಲಿ ಗೆದ್ದ ಚಿನ್ನದ ಪದಕವನ್ನು ಒಹಿಯೊ ನದಿಗೆ ಬಿಸಾಕಿದ್ದಾಗಿ ಸ್ವತಃ ಅಲಿ 1975 ರಲ್ಲಿ ಬರೆದ ಆತ್ಮಚರಿತ್ರೆ ದ ಗ್ರೇಟೆಸ್ಟ್: ಮೈ ಓನ್ ಸ್ಟೋರಿ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಅಲಿ ಅವರ ನಿರ್ಗಮನ ಕೇವಲ ಬಾಕ್ಸಿಂಗ್ ಅಷ್ಟೇ ಅಲ್ಲ, ವಿಶ್ವ ಕ್ರೀಡಾರಂಗದ ಧ್ರುವತಾರೆ ಕಳಚಿ ಬಿದ್ದಂತಾಗಿದೆ.

1 COMMENT

  1. You have so many things to speak about this man. Just don’t choose what you want to choose, there is always an another view to look into it. Look through those views, you will not find records, you will find his personality. He was legend who embraced truth, lived it and died with it. Salute.

Leave a Reply