ಉತ್ತಾರಾಖಾಂಡ ಮೇಘಸ್ಫೋಟ, ಕಲಿಯಲಿಲ್ಲ ವಿಕೋಪ ನಿರ್ವಹಣೆಯ ಪಾಠ

author-ananthramuಉತ್ತರಾಖಾಂಡ ನಿಸರ್ಗದ ಪ್ರಕೋಪಕ್ಕೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ ಕಾಳ್ಗಿಚ್ಚಿನಿಂದ 4,048 ಹೆಕ್ಟೇರು ಕಾಡು ಕಳೆದುಕೊಂಡಿತು, ಸುಧಾರಿಸಿಕೊಳ್ಳುವ ಮೊದಲೇ 2013ರ ಮೇಘಸ್ಫೋಟವನ್ನು ನೆನಪಿಸುವ ಮತ್ತೊಂದು ಮೇಘಸ್ಫೋಟಕ್ಕೆ ಈಗ (ಮೇ 28) ಬಲಿಯಾಗಿದೆ. ನಿಜ, ನೈಸರ್ಗಿಕ ವಿಕೋಪಗಳ ನಿರ್ವಹಣೆಗೆಂದೇ ಕೇಂದ್ರದಲ್ಲಿ ‘ಟಾಸ್ಕ್ ಫೋರ್ಸ್’ ಇದೆ. ಪೂರ್ವ ಕರಾವಳಿಯನ್ನು ಮತ್ತೆ ಮತ್ತೆ ತತ್ತರಿಸುವಂತೆ ಮಾಡುವ ಸೈಕ್ಲೋನ್ ಆದ ಕಡೆ ಪ್ರಾಣ, ಆಸ್ತಿ ಎರಡೂ ನಷ್ಟವಾಗುತ್ತದೆ. ಈಗ ಅದು ದೊಡ್ಡ ಸಮಸ್ಯೆಯಲ್ಲ ಬಿಡಿ. ನಾಲ್ಕು ದಿನ ಮೊದಲೇ ಸೈಕ್ಲೋನ್‍ನ ಚಲನವಲನದ ಮೇಲೆ ಕಣ್ಣಿಡುವ ತಂತ್ರಜ್ಞಾನಗಳು ಬಂದಿವೆ, ಅದರಿಂದ ಬಚಾವಾಗಬಹುದು. ಭೂಕಂಪನವಾದ ಕಡೆ ಸಿಕ್ಕಿಬಿದ್ದಿರುವ ಜನರನ್ನು ಕಟ್ಟಡಗಳ ಅಡಿಯಿಂದ ಮೇಲೆತ್ತಲು ದಿಢೀರೆಂದು ಕ್ರೇನ್‍ಗಳು ಬರುತ್ತವೆ. ನೆರೆಪೀಡಿತರನ್ನು ಸ್ಥಳಾಂತರಿಸಲು ಅಥವಾ ಅವರಿಗೆ ಆಹಾರ ಒದಗಿಸಲು ಕೆಲವೇ ತಾಸುಗಳಲ್ಲಿ ಹೆಲಿಕಾಪ್ಟರ್‍ಗಳು ಹಾರಾಡುತ್ತವೆ. ಈಗ ಸುನಾಮಿ ಎಚ್ಚರಿಕೆಯನ್ನು ಕೊಡುವುದನ್ನು ಭಾರತ ಕಲಿತಿದೆ. ಕೇವಲ ಸುನಾಮಿ ಹುಟ್ಟಿದ ಅರ್ಧ ಗಂಟೆಗೆ ಎಚ್ಚರಿಕೆಯನ್ನು ಮೀಟಿಯರಾಲಜಿ ಇಲಾಖೆ ಕೊಡಬಲ್ಲದು. 2004ರಲ್ಲಿ 10,000 ಜನ ಸುನಾಮಿಗೆ ಸಿಕ್ಕಿ ಸತ್ತನಂತರ ಕಲಿತ ಪಾಠ ಇದು.

ಆದರೆ 2013ರಲ್ಲಿ ಕೇದಾರನಾಥದಲ್ಲೇ ಮೇಘಸ್ಫೋಟವಾಗಿ ಏಕಾಏಕಿ 5,000 ಜನ ಸಾವಿಗೀಡಾದರು. ಬಹುತೇಕ ಇವರೆಲ್ಲರೂ ಯಾತ್ರಾರ್ಥಿಗಳೇ. ದೇಶದ ಅತಿ ಘೋರ ಪ್ರವಾಹ ದುರಂತ ಇದು ಎಂಬ ಹೆಸರನ್ನೂ ಪಡೆಯಿತು. ಆಗ ಮಂದಾಕಿನಿ ನದಿ ಹಿಗ್ಗಿಬಿಟ್ಟಿತು. ಕೇದಾರನಾಥದ ಮೂರು ಕಿಲೋ ಮೀಟರ್ ದೂರದ ಎತ್ತರದಿಂದ ಹಿಮನದಿ ಕರಗಿತು. ಭೂಪಾತವಾಗಿ ಇಡೀ ಕಣಿವೆಯನ್ನೇ ಜಲಾಶಯವನ್ನಾಗಿ ಮಾಡಿ ಪಟ್ ಎಂದು ಅದೂ ಒಡೆದುಹೋಯಿತು. ಅದಾದದ್ದೂ ಕೂಡ ಜೂನ್ ತಿಂಗಳಲ್ಲೇ. ಅದಕ್ಕೂ ಮುಂಚೆ 2002ರಲ್ಲೇ ದೊಡ್ಡ ಪ್ರಮಾಣದ ಮೇಘಸ್ಫೋಟಕ್ಕೆ ಒಳಗಾಗಿ ಉತ್ತರಾಖಾಂಡಕ್ಕೆ ಎಚ್ಚರಿಕೆಯನ್ನು ನೀಡಿತು. ಮೇಘಸ್ಫೋಟ ಎಂಬ ವಿದ್ಯಮಾನ ಭಾರತದಲ್ಲಿ ಪರಿಚಯವಾದದ್ದೇ ಇಲ್ಲಿ. 2004ರಲ್ಲಿ ಇಂಡೋನೇಷ್ಯದ ಭೂಕಂಪನ ಹುಟ್ಟಿಸಿದ ಸುನಾಮಿ ಸಾಮಾನ್ಯ ಜನರಿಗೂ ಈ ಹೆಸರು ತಲೆಯಲ್ಲಿ ನಿಲ್ಲುವಂತೆ ಮಾಡಿತು.

ಕಳೆದವಾರ (ಮೇ 28) ಮತ್ತೆ ಮೇಘಸ್ಫೋಟವಾದದ್ದು ಉತ್ತರಾಖಾಂಡದ ತೆಹರಿ ಜಿಲ್ಲೆಯ ಘನಸ್ಯಾಲ್ ಎಂಬಲ್ಲಿ. ಅದು ತುತ್ತಾಗಿರುವುದು ಎರಡನೆಯ ಸಲ. ಗಂಗೋತ್ರಿ, ಕೇದಾರನಾಥ ಸಂಪರ್ಕಕ್ಕೆ ಘನಸ್ಯಾಲ್ ಮೂಲಕವೇ ಹೋಗಬೇಕು. ಭೂಕುಸಿತವಾಗಿ ಚಾರ್ದಾಮ್ (ಬದರೀನಾಥ್, ದ್ವಾರಕ, ಪುರಿ, ರಾಮೇಶ್ವರ) ಯಾತ್ರಿಕರನ್ನು ಹಿಡಿದಿಟ್ಟಿರುವುದು ಇದೇ ಕೇದಾರನಾಥ ರಸ್ತೆಯೇ. ವಾಸ್ತವವಾಗಿ ಡೆಹರಾಡೂನ್‍ನಿಂದಲೇ ಮೀಟಿಯರಾಲಜಿ ಇಲಾಖೆ ಮೇ 27ರಂದೇ ಭಾರಿ ಮಳೆಯ ಮುನ್ಸೂಚನೆಯ ಜೊತೆಗೆ ಎಚ್ಚರಿಕೆಯನ್ನು ನೀಡಿತ್ತು. ಯಾತ್ರಿಕರು ‘ದೇವರಿದ್ದಾನೆ’ ಎಂದು ಭಾರ ಹಾಕಿ ಹೊರಟಾಗ ಮೇಘಸ್ಫೋಟ ಭೂಪಾತವನ್ನು ತಂದು ಲಂಚಗಾಂವ್, ಕೋಟಾಲ್‍ಗಾಂವ್, ಚೆಮಿಯಾಲದಲ್ಲಿ ಹಿಡಿದುಕೂಡಿಸಿತು. ಹೆಚ್ಚು ಪ್ರಾಣ ಹಾನಿಯಾಗಲಿಲ್ಲ ಎಂಬುದೇ ಸಮಾಧಾನ.

ಏನಿದು ಮೇಘಸ್ಫೋಟ? ನಮ್ಮ ವಿಕೋಪಗಳ ಪಟ್ಟಿಗೆ ಸೇರಿಕೊಳ್ಳುವಷ್ಟು ದೊಡ್ಡ ಸಮಸ್ಯೆಯೆ? ಹೌದು. ಎಲ್ಲಿ ಬೇಕಾದರೂ ಮೇಘಸ್ಫೋಟವಾಗಬಹುದು. ಆದರೆ ದುರಂತ ಹೆಚ್ಚಾಗುವುದು ಪರ್ವತದ ಕಣಿವೆ ಭಾಗದಲ್ಲಿ. ಪರ್ವತ ಪ್ರದೇಶಗಳಲ್ಲಿ ಬಲವಾದ ಗಾಳಿಯ ಪ್ರವಾಹ ಮೇಲೆದ್ದು ಮಳೆಮೋಡವನ್ನು ತನ್ನ ತಲೆಯ ಮೇಲೆ ಹೊತ್ತಿಕೊಳ್ಳುತ್ತದೆ. ಗುಡುಗು ಮಿಂಚು ಉಂಟಾಗುತ್ತಿರುವ ಮಳೆಮೋಡವನ್ನು ಏಕ್‍ದಂ ಗಾಳಿಯ ಪ್ರವಾಹ ನಿಂತು, ಕುಸಿಯುವಂತೆ ಮಾಡುತ್ತದೆ. ತಲೆಯ ಮೇಲೆ ಹೊತ್ತ ಹಂಡೆಯನ್ನು ನೆಲಕ್ಕೆ ಉರುಳಿಸಿದ ಹಾಗೆ. ಗಂಟೆಗೆ ನೂರು ಮಿಲಿ ಮೀಟರಿಗಿಂತಲೂ ಹೆಚ್ಚು ಮಳೆಯಾಗಿಬಿಡುತ್ತದೆ. ಅದು ಒಂದೆರಡು ಗಂಟೆಗಳಲ್ಲೇ. ಮೇಘಸ್ಫೋಟವಾಗುವುದು ಕಿರಿದಾದ ಭಾಗದಲ್ಲೇ. ಕಣಿವೆಗಳಲ್ಲಾದರೆ ಘೋರ ಪ್ರವಾಹವಾಗುತ್ತದೆ. ಇದು ಉತ್ತರಾಖಾಂಡಕ್ಕೆ ಮೀಸಲಾದ ವಿಕೋಪವಲ್ಲ. ಲಡಕ್‍ನ ಲೆಹ್ ಒಂದು ಬಗೆಯ ಮರುಭೂಮಿ ಎನ್ನಬಹುದು. ವರ್ಷಕ್ಕೆ 15 ಮಿಲಿ ಮೀಟರ್ ಮಳೆಯಾದರೆ ಹೆಚ್ಚು. 2010ರಲ್ಲಿ ಒಂದೇ ಗಂಟೆಯಲ್ಲಿ 250 ಮಿಲಿ ಮೀಟರ್ ಮಳೆಬಿದ್ದಿತ್ತು, ಜನರ ಬದುಕನ್ನು ಮೂರಾಬಟ್ಟೆ ಮಾಡಿತ್ತು. 1992ರಲ್ಲಿ ಉತ್ತರಾಖಾಂಡದ ಗರ್ವಾಲ್ ಇಂಥದೇ ಸಂಕಟಕ್ಕೆ ಸಿಕ್ಕಿಕೊಂಡಿತ್ತು. ಉತ್ತರಾಖಾಂಡದಲ್ಲಿ 2013ರಲ್ಲಾದ ಮೇಘಸ್ಪೋಟದಿಂದಾಗಿ ‘ಡಾಪ್ಲರ್ ವೆದರ್ ರಾಡಾರ್ ವ್ಯವಸ್ಥೆ’ ಯನ್ನು ಉತ್ತರಾಖಾಂಡದಲ್ಲಿ ಸ್ಥಾಪಿಸಬೇಕೆಂದು ಸರ್ಕಾರ ಸಂಕಲ್ಪಿಸಿದ್ದು ಈ ಘಟನೆಯಿಂದಲೇ.

uttara

ಡಾಪ್ಲರ್ ರಾಡಾರ್ ನಿಂದ ಏನು ಮಾಹಿತಿ ಪಡೆಯಬಹುದು? ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನು ಪೂರ್ವಭಾವಿಯಾಗಿಯೇ ಇದರಿಂದ ಅರಿಯಬಹುದು. ಮಳೆ ಮೋಡಗಳ ಸಾಂದ್ರತೆಯನ್ನು ಕರಾರುವಾಕ್ಕಾಗಿ ತಿಳಿಯಬಹುದು. ಗಾಳಿ ಬೀಸುವ ದಿಕ್ಕನ್ನು ಲೆಕ್ಕಹಾಕಬಹುದು. ಇದರ ವ್ಯಾಪ್ತಿ ಸುಮಾರು 400 ಕಿಲೋ ಮೀಟರು. ಇಸ್ರೋ ಸಂಸ್ಥೆಯೊಂದಿಗೆ ಮೀಟಿಯರಾಲಜಿ ಇಲಾಖೆ ಡಾಪ್ಲರ್ ವೆದರ್ ರಾಡಾರ್‍ಗಳನ್ನು ಅಭಿವೃದ್ಧಿಪಡಿಸಲು ಕರಾರನ್ನೂ ಮಾಡಿಕೊಂಡಿತ್ತು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ಗೆ ಗುತ್ತಿಗೆಯನ್ನೂ ಕೊಟ್ಟಿತ್ತು. ಹಿಮಾಲಯದ ಭಾಗದಲ್ಲಿ ಇವುಗಳನ್ನು ಸ್ಥಾಪಿಸಲು ಉತ್ಸಾಹ ತೋರಿತ್ತು ಅಷ್ಟೇ. ಈವರೆಗೆ ರಾಡಾರ್ ವ್ಯವಸ್ಥೆಯನ್ನು ಸ್ಥಾಪಿಸಿದಂತಿಲ್ಲ.

ವಿಶೇಷವೆಂದರೆ ಡೆನ್ಮಾರ್ಕ್‍ನಲ್ಲಿ ಮೇಘಸ್ಫೋಟವೆನ್ನುವುದು ತೀರ ಅಪರೂಪ. ನೂರು ವರ್ಷಕ್ಕೆ ಒಂದು ಸಂಭವಿಸಬಹುದು ಅಷ್ಟೇ. ಆದರೂ ಆ ದೇಶ ಅದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕೋಪನ್‍ಹ್ಯಾಗೆನ್‍ನ ವಾಯುಗುಣ ಒಪ್ಪಂದಕ್ಕೆ ಬದ್ಧವಾಗಿ ಡೆನ್ಮಾರ್ಕ್ ಮೇಘಸ್ಫೋಟವನ್ನು ನಿಭಾಯಿಸಲೆಂದೇ ಒಂದು ವಿಶೇಷ ವಿಭಾಗವನ್ನು ತೆರೆದಿದೆ. ಅದೂ ಕೂಡ ಕಣಿವೆ ಭಾಗದಲ್ಲಿರುವ ಹಳ್ಳಿ, ಪಟ್ಟಣಗಳ ಮೇಲೆ ನಿಗಾ ಇಟ್ಟಿದೆ. ಮಳೆನೀರು, ಕೊಳಚೆನೀರು ಚರಂಡಿಗಳನ್ನು ಪ್ರತ್ಯೇಕವಾಗಿ ನಿಭಾಯಿಸುತ್ತಿದೆ. ಮಳೆನೀರಿನ ಚರಂಡಿಗಳು ರಸ್ತೆಯ ಪಕ್ಕದಲ್ಲೂ, ಭೂಗತವಾಗಿಯೂ ಕೊಳವೆಗಳಲ್ಲಿ ಸಾಗಿ ಅಂತಿಮವಾಗಿ ಸಮುದ್ರ ಸೇರುವಂತೆ ಯೋಜನೆಯನ್ನು ರೂಪಿಸುತ್ತಿದೆ. ಇದಕ್ಕಾಗಿ 3.8 ಬಿಲಿಯನ್ ಡ್ಯಾನಿಷ್ ಕ್ರೋನನ್ನು ಖರ್ಚುಮಾಡಲು ತಯಾರಿದೆ.

ಉತ್ತರಾಖಾಂಡದ ಪರಿಸ್ಥಿತಿಯೇ ಬೇರೆ. ಕಳಪೆ ಕಟ್ಟಡಗಳು ಬಿದ್ದೊಡನೆ ಅವೇ ಅಣೆಕಟ್ಟಾಗುತ್ತವೆ. ಕೊಳಚೆ ನೀರು ಇಡೀ ಪರ್ವತದ ಉದ್ದಗಲವನ್ನೂ ಅಳೆಯುವಂತೆ ಹರಿಯುತ್ತಿರುತ್ತದೆ. ಇಂಥ ಅವ್ಯವಸ್ಥೆ ಇರುವಾಗ ಮೇಘಸ್ಫೋಟದ ಎದುರಿಗೆ ನಿಲ್ಲುವ ತಾಕತ್ತು ಎಲ್ಲಿ ಬಂದೀತು? ಇದರಲ್ಲಿ ನಮ್ಮ ಯಾತ್ರಾರ್ಥಿಗಳ ಪಾಲೂ ಇದೆ. ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಆರು ತಿಂಗಳು ಮುಚ್ಚಿ ಮಳೆಗಾಲದಲ್ಲಿ ತೆರೆದಾಗ ಯಾತ್ರಿಕರಿಗೆ ದುಂಬಿಗಳಂತೆ ನುಗ್ಗುವ ಆತುರ. ಭಕ್ತಿ ಎನ್ನುವುದು ಆವೇಶವಾದಾಗ ಯಾವ ಜೀವಾಪಾಯವನ್ನೂ ಲೆಕ್ಕಿಸುವುದಿಲ್ಲ-ನಿಸರ್ಗ ದಯೆ, ದಾಕ್ಷಿಣ್ಯ ಇಡುವುದಿಲ್ಲ ಎಂಬ ಸರಳ ಸೂತ್ರ ಗೊತ್ತಿದ್ದರೂ ಮತ್ತೆ ಮತ್ತೆ ಅದೇ ತಪ್ಪುಗಳನ್ನು ಎಸಗುವುದೇ ನಮ್ಮ ಹಕ್ಕು ಎಂದು ಭಾವಿಸಿದಂತಿದೆ. ಉತ್ತರಾಖಾಂಡದ ಸಮಸ್ಯೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಅಲ್ಲಿಯವರೆಗೂ ನಿಸರ್ಗವನ್ನೇ ದೂಷಿಸುತ್ತ ಹೋಗೋಣ!

ಇದು ಯೂಟ್ಯೂಬಿನಿಂದ ಆಯ್ದ 2013ರ ಉತ್ತರಾಖಂಡ ಮೇಘಸ್ಫೋಟದ ದೃಶ್ಯ.

1 COMMENT

  1. anantharamu sir, eshtu chennagi artha madisteeri.
    liked your article.
    I regularly read all your articles. very interesting and informative. thanks to digital kannada.

Leave a Reply