ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಹಿಂದಿರುವುದು ಮದ್ಯ ಲಾಬಿಯೋ, ಭಾವನಾತ್ಮಕ ಪಲಾಯನವಾದವೋ?

ಡಿಜಿಟಲ್ ಕನ್ನಡ ವಿಶೇಷ:

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ದೂರವಾಣಿ ಕರೆ ಸ್ವೀಕರಿಸಲಿಲ್ಲವೆಂದು ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ ಅನುಪಮಾ ಅವರು ಇದೀಗ ಮದ್ಯಲಾಬಿ ಪ್ರೇರಿತ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ ನೀಡಿ, ತಮ್ಮೂರಿಗೆ ತೆರಳಿದ್ದಾರೆ. ಹಾಗೆ ಅವರು ರಾಜೀನಾಮೆ ಕೊಡುವ ಮುನ್ನ ಎದುರಾದ ಸವಾಲನ್ನು ಎದುರಿಸದೇ ಹೋದದ್ದು ‘ಭಾವನಾತ್ಮಕ ಪಲಾಯನವಾದ’ ಎಂಬ ಬಣ್ಣನೆಗೂ ಆಸ್ಪದ ಕೊಟ್ಟಿದೆ!

ಈ ಹಿಂದೆ ಮಂತ್ರಿ ಪರಮೇಶ್ವರ್ ದಬ್ಬಾಳಿಕೆ ಮಾಡಿದಾಗ ಇಡೀ ರಾಜ್ಯವೇ ಆಕೆಯ ಬೆನ್ನಿಗೆ ನಿಂತಿತ್ತು. ರಾಜ್ಯ ಸರಕಾರ ತನ್ನ ಕೈ ಹಿಸುಕಿಕೊಳ್ಳುವಂತೆ ಮಾಡಿತ್ತು. ವರ್ಗಾವಣೆ ರದ್ದುಪಡಿಸುವ ಅನಿವಾರ್ಯತೆಯನ್ನೂ ಸೃಷ್ಟಿಸಿತ್ತು. ಇಂಥ ಜನಶಕ್ತಿ ತಮ್ಮ ಬೆಂಬಲಕ್ಕೆ ಇರುವುದನ್ನು ಅನುಪಮಾ ಅವರು ಒಮ್ಮೆ ನೆನೆದಿದ್ದರೆ ರಾಜೀನಾಮೆ ನೀಡದೆಯೇ ಪರಿಸ್ಥಿತಿಯನ್ನು ಎದುರಿಸಬಹುದಿತ್ತೇನೋ ಎಂಬ ಭಾವನೆ ಮೂಡದಿರದು.

ಕೂಡ್ಲಿಗಿ ಬಸ್ ನಿಲ್ದಾಣ ಸಮೀಪ ಕಾಂಗ್ರೆಸ್ ನಾಯಕ, ಲಿಂಗಾಯತ ಸಮುದಾಯದ ವೀರೇಂದ್ರಕುಮಾರ್ ಅವರಿಗೆ ಸೇರಿದ ಮದ್ಯದಂಗಡಿ ಇದೆ. ಅದರ ಸಮಿಪ ಅಂಬೇಡ್ಕರ್ ಭವನ ನಿರ್ಮಾಣ ಆಗುತ್ತಿದೆ. ಈ ಭವನದ ದಾರಿಯಲ್ಲಿ ವೀರೇಂದ್ರಕುಮಾರ್ ಮದ್ಯದಾಸ್ತಾನು ಕಟ್ಟಡ ಕಟ್ಟಲು ಶುರುಮಾಡಿದಾಗ ದಲಿತ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಭವನಕ್ಕೆ ಹೋಗುವ ದಾರಿ ಬಂದ್ ಆಗುತ್ತದೆ ಹಾಗೂ ಅಂಬೇಡ್ಕರ್ ಭವನ ಪಕ್ಕದಲ್ಲೇ ಮದ್ಯದಂಗಡಿ ಇರುವುದು ಸರಿಯಲ್ಲ ಎಂದು ದೂರು ನೀಡಿದಾಗ ಕಾಮಗಾರಿ ನಿಲ್ಲಿಸುವಂತೆ ಸಂಬಂಧಪಟ್ಟವರಿಗೆ ಅನುಪಮಾ ಶೆಣೈ ಸೂಚನೆ ನೀಡಿದ್ದಾರೆ. ವಿಷಯ ಅತಿ ಸೂಕ್ಷ್ಮವಾಗಿದ್ದು, ಕೊಂಚ ಯಡವಟ್ಟಾದರೂ ಕೋಮು ಗಲಭೆ ಸೃಷ್ಟಿಯಾಗುತ್ತದೆ ಎಂದು.

ವಿಷಯ ಇತ್ಯರ್ಥ ಆಗುವವರೆಗೂ ಸುಮ್ಮನಿರಿ ಎಂದು ಹೇಳಿದ್ದರೂ ಡಿವೈಎಸ್ಪಿ ಸೂಚನೆ ಧಿಕ್ಕರಿಸಿ ವೀರೇಂದ್ರಕುಮಾರ್ ಮಾವ ರವಿಕುಮಾರ್, ಅವರದೇ ಸಮುದಾಯದ ಪಟ್ಟಣ ಪಂಚಾಯಿತಿ ಸದಸ್ಯ ರಜನಿಕಾಂತ್ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಾರ್ ಮೇನೇಜರ್ ಕೃಷ್ಣಪ್ಪ ಕಟ್ಟಡ ಕಾಮಗಾರಿ ಮುಂದುವರಿಸುತ್ತಾರೆ. ಒಂದು ಕಡೆ ದಲಿತರ ವಿರೋಧ, ಮತ್ತೊಂದು ಕಡೆ ಮೇಲ್ವರ್ಗ, ಹಿಂದುಳಿದ ವರ್ಗದವರ ಮೊಂಡುತನ. ವಿಷಯ ಕೈ ಮೀರಬಹುದು ಎಂದು ಭಾವಿಸಿ ಅನುಪಮಾ ಅವರು ರವಿಕುಮಾರ್, ರಜನಿಕಾಂತ್ ಹಾಗೂ ಕೃಷ್ಣಪ್ಪ ಅವರನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳುತ್ತಾರೆ.

ಪ್ರಕರಣ ತಿರುವು ಪಡೆಯುವುದೇ ಇಲ್ಲಿ. ಬೇರೆ-ಬೇರೆ ಒತ್ತಡಗಳಿಗೆ ಮಣಿದ ಠಾಣೆಯ ಇನ್ಸ್ ಪೆಕ್ಟರ್ ನಾಗಪ್ಪ ಬಂಕಾಳಿ, ಸಬ್ ಇನ್ಸ್ ಪೆಕ್ಟರ್ ಹಾಲೇಶ್ ಈ ಮೂವರಿಂದ ಮುಚ್ಚಳಿಕೆ ಬರೆಯಿಸಿಕೊಂಡು, ಮನೆಗೆ ಕಳುಹಿಸುತ್ತಾರೆ. ಆದರೆ ಮೇಲಧಿಕಾರಿ ಅನುಪಮಾ ಅವರ ಗಮನಕ್ಕೆ ಇದನ್ನು ತರುವುದಿಲ್ಲ. ಆದರೆ ತಮ್ಮ ಗಮನಕ್ಕೆ ತಾರದೇ ಬಿಟ್ಟು ಕಳುಹಿಸಿದ ಮೂವರನ್ನು ಮತ್ತೆ ಠಾಣಾಧಿಕಾರಿಗಳಿಂದಲೇ ಕರೆತರಿಸಿ, ಅವರ ವಿರುದ್ಧ ಕೇಸು ಹಾಕಿಸುತ್ತಾರೆ ಅನುಪಮಾ. ಇಲ್ಲಿಂದಾಚೆಗೆ ಶುರುವಾಗುತ್ತದೆ ಅನುಪಮಾ ವಿರುದ್ಧ ಲಿಂಗಾಯತ ಹಾಗೂ ವಾಲ್ಮೀಕಿ ಸಂಘಟನೆಗಳ ಪ್ರತಿಭಟನೆ. ದೂರು ಇಲ್ಲದಿದ್ದರೂ ಕೇಸು ಹಾಕಿದ್ದಾರೆ ಎಂದು. ಆದರೆ ಜಾತಿ ಸಂಘರ್ಷ, ಕೋಮುಗಲಭೆಗೆ ಆಸ್ಪದವಿರುವ ಸೂಕ್ಷ್ಮ ಸನ್ನಿವೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಜರುಗಿಸಲು, ಸ್ವಯಂ ದೂರು ದಾಖಲಿಸಲು (ಸೂಮೊಟೊ) ಕಾನೂನಿನಲ್ಲಿ ಅವಕಾಶವಿದೆ. ಆದರೆ ಅಧೀನ ಅಧಿಕಾರಿಗಳು ನಡೆದುಕೊಂಡ ರೀತಿ ಹಾಗೂ ಈ ಪ್ರತಿಭಟನೆಗೆ ಬೇಸತ್ತು ಅನುಪಮಾ ರಾಜೀನಾಮೆ ಕೊಟ್ಟು, ಊರಿಗೆ ತೆರಳಿದ್ದಾರೆ.

ಅನುಪಮಾ ಅವರು ಕೂಡ್ಲಿಗಿ ಉಪವಿಭಾಗಕ್ಕೆ ಬಂದ ನಂತರ ಆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಿಸಿದ್ದರು. ಕುಡಿತದ ಕೆಡಕುಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಫಲವಾಗಿ ಕೆಲವು ಹಳ್ಳಿಗಳಲ್ಲಿ ಮದ್ಯಮಾರಾಟ ಸಂಪೂರ್ಣ ನಿಷೇಧವೂ ಆಗಿತ್ತು. ಇದು ಸಹಜವಾಗಿಯೇ ಮದ್ಯಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಆ ಮದ್ಯ ಲಾಬಿ ಈಗ ಪರಿಸ್ಥಿತಿಯ ಲಾಭ ಪಡೆಯಲು ಹೊರಟಿರುವುದರ ಪರಿಣಾಮವೇ ಅನುಪಮಾ ವಿರುದ್ಧದ ಪ್ರತಿಭಟನೆಗಳು.

ವ್ಯವಸ್ಥೆಯಲ್ಲಿ ಇಂಥವೆಲ್ಲ ನಡೆಯುವಂಥದ್ದೇ. ಆದರೆ ಇದನ್ನು ಎದುರಿಸಲಾಗದೇ ಅನುಪಮಾ ಅವರು ರಾಜೀನಾಮೆ ನೀಡಿ, ಹೋಗಿರುವುದು ಸಮರ್ಥನೀಯ ನಡೆ ಅಲ್ಲ. ಅವರಿಗೆ ಬೇಸರ ಆಗಿರಬಹುದು. ಆದರೆ ಅದಕ್ಕೆ ಭಾವನಾತ್ಮಕ ತೀರ್ಮಾನಗಳು ಪರಿಹಾರವಲ್ಲ. ಪೊಲೀಸ್ ಇಲಾಖೆ ಬೇಡುವ ಒಂದಷ್ಟು ಮೊಂಡುತನದಿಂದಲೇ ಇಂಥ ಭಂಡತನಗಳನ್ನು ಜಯಿಸಿಕೊಳ್ಳಬೇಕಾಗುತ್ತದೆ. ಆದರೆ ಅದನ್ನು ಬಿಟ್ಟು ರಾಜೀನಾಮೆ ಮೊರೆ ಹೋಗಿರುವುದು ಭಾವನಾತ್ಮಕ ಪಲಾನಯವಾದ ಅಂತಲೂ ಅನ್ನಿಸುತ್ತದೆ. ಏಕೆಂದರೆ ಅವರು ರಾಜೀನಾಮೆ ನೀಡಿರುವುದನ್ನು ತಮಗಾದ ನಷ್ಟ ಎಂದು ಪೊಲೀಸ್ ಇಲಾಖೆಯೂ ಅಂದುಕೊಳ್ಳುವುದಿಲ್ಲ, ರಾಜ್ಯ ಸರಕಾರವೂ ಅಂದುಕೊಳ್ಳುವುದಿಲ್ಲ. ಸಚಿವ ಪರಮೇಶ್ವರ ನಾಯಕ್ ಅವರಂಥವರು ಸಂಭ್ರಮಿಸುತ್ತಾರೆ ಅಷ್ಟೇ!

Leave a Reply