ಭೂಮಿ ಎಂಬ ಮನೆಯನ್ನು ಜೀವಿಸಲು ಯೋಗ್ಯವಾಗಿಸುವುದು ನಮ್ಮ ಜವಾಬ್ದಾರಿಯಲ್ಲವೇ?

sumangala (2)ಸುಮಂಗಲಾ ಎಸ್. ಮುಮ್ಮಿಗಟ್ಟಿ

‘ನನ್ನ ಮನೆ..’

ವಿಶ್ವ ಪರಿಸರ ದಿನದ ಅಂಗವಾಗಿ ಇಂದು ಇಡೀ ಜಗತ್ತು ಈ ಭೂಮಿಯ ಪರಿಸರ, ಇಲ್ಲಿಯ ಜೈವಿಕ ವೈವಿಧ್ಯ, ಏರುತ್ತಿರುವ ತಾಪಮಾನ ಮುಂತಾದ ವಿಷಯಗಳ ಕುರಿತು ಚರ್ಚಿಸುತ್ತಿರುವಾಗ ನಮಗೆ ಗೋಚರವಾಗುವುದು ಸ್ವಾರ್ಥದ ಸುತ್ತ ಸುತ್ತುವ ಈ ಎರಡು ಪದಗಳು.

ಹೌದು, ‘ನನ್ನ ಮನೆ’ ಎಂಬ ಈ ಎರಡು ಪದಗಳಲ್ಲಿ ಎಂತಹ ಆಪ್ತ ಭಾವನೆ ಅಡಗಿದೆ! ನಾವು ನಮ್ಮ ಮನೆಗಾಗಿ, ಮನೆಯ ಸದಸ್ಯರ ಸುಖ, ಸಂತೋಷಕ್ಕಾಗಿ ಏನೆಲ್ಲಾ ಮಾಡುತ್ತೇವೆ, ಮಾಡಲು ಸಿದ್ಧವಾಗುತ್ತೇವೆ. ಅದೇ ಆಪ್ತ ಭಾವನೆ, ಅದೇ ಸ್ವಾರ್ಥ ಭಾವನೆ ಈ ನಮ್ಮ ಭೂಮಿಯ ಬಗೆಗೆ ಪ್ರತಿಯೊಬ್ಬರ ಮನದಲ್ಲಿ ಹುಟ್ಟದಿರುವುದು ಆಶ್ಚರ್ಯವಾಗಿದೆ, ಅದು ಹುಟ್ಟುವುದು ಅನಿವಾರ್ಯವೂ ಆಗಿದೆ. ಇದು ಕೇವಲ ಭಾವನಾತ್ಮಕ ಹೇಳಿಕೆಯಲ್ಲ. ವಾಸ್ತವ. ನೀವೀ ಲೇಖನವನ್ನು ಓದುತ್ತಿರುವಾಗ ನಿಮ್ಮ ತಲೆಯ ಮೇಲೆ ತಿರುಗುತ್ತಿರುವ ಫ್ಯಾನ್, ನಿಮ್ಮ ಕಾರಿನ ಎಸಿ, ಇಲ್ಲ ನೀವು ಚಲಿಸುತ್ತಿರುವ ವಾಹನ ಎಲ್ಲವೂ ಇದೇ ಗತಿಯಲ್ಲಿ ಎಂದಿನಂತೆ ಘಟಿಸುತ್ತಿರಬೇಕು ಎಂದು ಬಯಸುವುದಾದರೆ ನಾವೀ ಕಾರ್ಯವನ್ನು ಕೈಗೊಳ್ಳಲೇಬೇಕು.

ಈ ಭೂಮಿಯ ಪರಿಸರ, ಅದರ ಅಧ್ಯಯನವನ್ನು ‘ಇಕಾಲಜಿ’ ಎಂದು ಕರೆಯುತ್ತಾರೆ. ಗ್ರೀಕ್ ಭಾಷೆಯಲ್ಲಿ OIKOS ಎಂದರೆ ‘ಮನೆ’ ಎಂದರ್ಥ. ನಾವಿರುವ ಈ ‘ಭೂಮಿ’ಯೇ ನಮ್ಮ ನಿಮ್ಮೆಲ್ಲರ ಮನೆ. ಈ ಮನೆಯ ಪರಿಸರ, ಇಲ್ಲಿರುವ ಎಲ್ಲ ಸದಸ್ಯರ ಸುಖ, ಸಂತೋಷ, ನಮ್ಮೆಲ್ಲರ ಜವಾಬ್ದಾರಿ.

ವಾಸಯೋಗ್ಯವಾಗಿಸುವುದು ಎಂದರೇನು? ನಾವೀಗ ಇಲ್ಲಿ ವಾಸವಾಗಿದ್ದೇವೆ. ಚೆನ್ನಾಗಿಯೇ ಇದ್ದೇವೆ ಎನ್ನಬಹುದು. ಆದರೆ, ನಾವೇ ಅನುಭವಿಸುತ್ತಿರುವಂತೆ, ಏರುತ್ತಿರುವ ತಾಪಮಾನ, ಹೆಚ್ಚುತ್ತಿರುವ ಮಾಲಿನ್ಯ, ಶುದ್ಧ ನೀರು ಶುದ್ಧ ಗಾಳಿಯ ಸಮಸ್ಯೆಗಳು ದಿನ ದಿನಕ್ಕೆ ಉಲ್ಬಣಿಸುತ್ತಲೇ ಇವೆ. ಅದಕ್ಕೆಂದೇ ಈ ಬಾರಿಯ ವಿಶ್ವ ಪರಿಸರ ದಿನದ ಧ್ಯೇಯ ‘ಈ ಭೂಮಿಯನ್ನು ವಾಸಯೋಗ್ಯವಾಗಿಸಲು ಪೈಪೋಟಿಗಿಳಿಯಿರಿ’ (Join the race to make this world better place to live) ಎಂದಾದರೆ ಘೋಷಣೆ ವನ್ಯವುಳಿಸಿ- ಜೀವವುಳಿಸಿ (go wild for life) ಎಂದಿದೆ.

ಈ ಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯನ್ನು ‘ಧ್ಯೇಯ’ ನೆನಪಿಸುತ್ತದೆ. ರಾಷ್ಟ್ರ ಶ್ರೀಮಂತವಿರಲಿ, ಬಡವಾಗಿರಲಿ, ಅಭಿವೃದ್ಧಿ ಹೊಂದಿರಲಿ ಅಥವಾ ಹೊಂದುತ್ತಿರಲಿ ಎಲ್ಲರೂ ಈ ಕ್ರಿಯೆಯಲ್ಲಿ ಕೈ ಜೋಡಿಸುವುದು ಅದರಲ್ಲೂ ಪೈಪೋಟಿಗಿಳಿದವರಂತೆ ಕೈ ಜೋಡಿಸಬೇಕಿರುವುದು ಅನಿವಾರ್ಯ. ಬಳಕೆ ಮತ್ತು ಬೇಡಿಕೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ. ಆದರೆ ಇಂದು ಹಾಗಾಗುತ್ತಿಲ್ಲ ನಮ್ಮ ಬೇಡಿಕೆಯ ಮಿತಿ ಮೀರಿದೆ. ಉದಾ: ಒಂದು ವರ್ಷದ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ವರ್ಷಕ್ಕೆ ಮುಂಚೆಯೇ ಮುಗಿಸುತ್ತಿದ್ದೇವೆ. ‘ಆ ದಿನವನ್ನು ಮಿತಿ ಮೀರಿದ ಬಳಕೆಯ ದಿನ’ ಎನ್ನುತ್ತಾರೆ. ಅದು ಪ್ರತಿ ವರ್ಷವೂ ಹಿಂದಕ್ಕೆ ಸರಿಯುತ್ತ 2016ರಲ್ಲಿ ಆಗಸ್ಟ್ 8ಕ್ಕೆ ಬಂದಿದೆ. ಅಂದರೆ, ಡಿಸೆಂಬರ್ ಅಂತ್ಯದವರೆಗೆ ಬಳಸಬೇಕಾಗಿದ್ದ ಸಂಪನ್ಮೂಲಗಳನ್ನು ನಾವು ಕೇವಲ 8 ತಿಂಗಳಲ್ಲಿ ಮುಗಿಸಿ ಹಾಕುತ್ತಿದ್ದೇವೆ ಎಂದರ್ಥ. ಹಾಗಾದರೆ ಉಳಿದ ಬಳಕೆಗೆ? ‘ಸಾಲ’ ಮಾಡುತ್ತಿದ್ದೇವೆ. ಪೃಥ್ವಿ ಮುಂದಿನ ಪೀಳಿಗೆಗಾಗಿ ಜತನವಾಗಿರಿಸಿಕೊಂಡಿರುವ ಸಂಪನ್ಮೂಲಗಳನ್ನು ಬಳಸಿ ಬರಿದು ಮಾಡುತ್ತಿದ್ದೇವೆ. ಹೀಗೆಯೇ ಮಾಡುತ್ತಾ ಹೋದಲ್ಲಿ ಸಂಪನ್ಮೂಲಗಳೇನೂ ಅಕ್ಷಯವಲ್ಲ. ಅದರ ವಿಪರೀತ ಪರಿಣಾಮಗಳನ್ನು ಅನುಭವಿಸಲೇ ಬೇಕಾಗುತ್ತದೆ. ಅದರತ್ತ ಗಮನಕೊಡುವುದು ಅಗತ್ಯವಾಗಿದೆ. ಆ ಅರಿವನ್ನು ಮೂಡಿಸುವ ಪ್ರಯತ್ನ ಈ ಬಾರಿಯ ವಿಶ್ವ ಪರಿಸರ ದಿನದ ಧ್ಯೇಯದಲ್ಲಿದೆ.

ಪ್ರತಿ ಬಾರಿಯೂ ವಿಶ್ವ ಪರಿಸರ ದಿನವನ್ನು ಒಂದು ರಾಷ್ಟ್ರ ತಾನು ಅತಿಥೇಯ ರಾಷ್ಟ್ರವಾಗಿದ್ದುಕೊಂಡು ಆಚರಿಸುತ್ತದೆ. ಅದರಂತೆ ಈ ಬಾರಿಯ ಅತಿಥೇಯ ರಾಷ್ಟ್ರ ಅಂಗೋಲವಾಗಿದೆ. ಅಂಗೋಲಾದಲ್ಲಿ ವನ್ಯ ಜೀವಿಗಳ ವಿನಾಶ ವಿಶೇಷವಾಗಿ ಆನೆಗಳ ಸಂಖ್ಯೆಯಲ್ಲಿ ಆಗಿರುವ ಗಣನೀಯ ಪ್ರಮಾಣದ ಇಳಿಕೆ ಆಗಿರುವುದರ ಕಡೆಗೆ ಗಮನ ಸೆಳೆದು ಅವುಗಳನ್ನು ಸಂರಕ್ಷಿಸುವ ಕಡೆಗೆ ಗಮನ ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ‘ವನ್ಯಜೀವಿ’ ಎಂದಾಕ್ಷಣ ಪ್ರಾಣಿ, ಪಕ್ಷಿ ಮುಂತಾದ ದೊಡ್ಡ ಜೀವಿಗಳೇ ಆಗಬೇಕೆಂದೇನೂ ಇಲ್ಲ. ಮಾನವನ ಸಾಕಣಿಕೆಗೆ, ಪಳಗಿಸುವಿಕೆಗೆ ಸಿಕ್ಕಿದ ಎಲ್ಲ ಜೀವಿಗಳೂ ವನ್ಯ ಜೀವಿಗಳೇ ಅದರಲ್ಲಿ ಸಸ್ಯ ಸಂಕುಲವೂ ಬರುತ್ತದೆ. ಅದುದರಿಂದಲೇ ಪ್ರೊಟೆಕ್ಟ್ ಟೈಗರ್, ಪ್ರೊಟೆಕ್ಟ್ ಎಲಿಫೆಂಟ್ ನಂತಹ ಬೃಹತ್ ಕಾರ್ಯಕ್ರಮಗಳು ಕೇವಲ ಆ ದೊಡ್ಡ ಸಸ್ತನಿಗಳನ್ನು ಮಾತ್ರ ರಕ್ಷಿಸುವುದಿಲ್ಲ. ಬದಲಿಗೆ ಅದರೊಂದಿಗೆ ಆ ಪ್ರದೇಶದಲ್ಲಿರುವ ಎಲ್ಲ ಜೀವಿಗಳನ್ನು ಸಂರಕ್ಷಿಸುತ್ತವೆ. ವನ್ಯ ಜೀವಿಗಳನ್ನೇಕೆ ಉಳಿಸಬೇಕು? ಎಂಬ ಪ್ರಶ್ನೆಗೆ ಬಹಳ ದೀರ್ಘವಾದ ಉತ್ತರವನ್ನೇ ನೀಡಬೇಕಾಗುತ್ತದೆ. ಸದ್ಯಕ್ಕೆ ಇಷ್ಟನ್ನು ತಿಳಿದುಕೊಳ್ಳುವುದು ಅವಶ್ಯ. ಅದೆಂದರೆ,

ಈ ಭೂಮಿಯ ಮೇಲೆ ‘ನಾವು’ ವಿಕಾಸವಾಗುವುದಕ್ಕೆ ಮುಂಚೆಯೇ ಹಲವಾರು ಜೀವಿಗಳು ಬದುಕಿ ಬಾಳಿವೆ. ಮಾನವ ವಿಕಾಸವಾದದ್ದು ಕೇವಲ 20 ಸಾವಿರ ವರ್ಷಗಳ ಹಿಂದೆ. ನಾಗರೀಕನಾಗಿ ನೆಲೆಸಿ ಜೀವಿಸಲಾರಂಭಿಸಿದ್ದು 10 ಸಾವಿರ ವರ್ಷಗಳ ಹಿಂದೆ. ಭೂಮಿಯ ದೀರ್ಘ ಇತಿಹಾಸದ ಅವಧಿಯಲ್ಲಿ ಇದು ಬಹಳ ಸಣ್ಣ ಅವಧಿ. ಈ ಸಣ್ಣ ಅವಧಿಯಲ್ಲಿಯೇ ಮಾನವ ಭೂಮಿಯನ್ನು ವಾಸಿಸಲು ಸೂಕ್ತವಲ್ಲದಂತೆ ಮಾಡಿದ್ದಾನೆ. ಅದಕ್ಕಾಗಿ ಇದೀಗ ‘ವನ್ಯ’ (wild) ಪರಿಸ್ಥಿತಿಯನ್ನು ಅದಿರುವಂತೆಯೇ ಉಳಿಸಿದಲ್ಲಿ, ಜೀವ ಸಂಕುಲವನ್ನು ರಕ್ಷಿಸಬಹುದು ಎನ್ನುವ ಆಶಯದಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.

ಈ ‘ವನ್ಯ’ ಭೂಮಿಯ ಪರಿಸರ, ಏರುತ್ತಿರುವ ತಾಪಮಾನ ಇವುಗಳೆಲ್ಲಾ ನಾವೇನು ಮಾಡಬಹುದು? ಎನ್ನುವುದನ್ನು ಮುಂಬರುವ ಅಂಕಣದಲ್ಲಿ ಚರ್ಚಿಸೋಣ. ಅದಕ್ಕೆ ಮುನ್ನ ಇಂದು ‘ಭೂಮಿ’ಗಾಗಿ ಏನು ಮಾಡಲಿದ್ದೀರಿ? ಯೋಚಿಸಿ ನೋಡಿ. ಅದು ಪೇಪರ್ ಬಳಕೆಯ ನಿಷೇಧವಾಗಿರಬಹುದು, ಸೋರುತ್ತಿರುವ ಟ್ಯಾಪ್ ರಿಪೇರಿ, ಇಲ್ಲ ಎಲ್ಇಡಿ ಬಲ್ಬ್ ಅಳವಡಿಕೆ ಈ ರೀತಿ ಯಾವುದೇ ಆಗಿರಬಹುದು. ಉಣ್ಣುವ ತಟ್ಟೆಯಲ್ಲಿ ಅನ್ನ ಬಿಟ್ಟು ಕೈತೊಳೆಯುವುದರಿಂದ ಅದೆಷ್ಟು ಸಂಪನ್ಮೂಲ ಲೂಟಿ ಬಲ್ಲಿರಾ? ಹಾಗಾದರೆ ಈ ದಿನ ನೀವೇನು ಮಾಡಿದಿರಿ? ಈ ಭೂಮಿಯ ಪರಿಸರ ಸಂರಕ್ಷಣೆಗೆ ಯಾವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದಿರಿ? ನಿಮ್ಮನ್ನು ನೀವು ಕೇಳಿಕೊಳ್ಳಿ, ಸಾಧ್ಯವಾದರೆ ನಮಗೂ ತಿಳಿಸಿ.

(ಲೇಖಕಿಯು ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದು, ಪರಿಸರ, ವಿಜ್ಞಾನ ಮತ್ತಿತರ ವಿಷಯ ಕುರಿತ 37 ಪುಸ್ತಕಗಳ ಕರ್ತೃ. ಲಂಡನ್ನಿನ ಪರಿಸರ ಅಧ್ಯಯನ ಸಂಸ್ಥೆ ಮನ್ನಣೆ, ರಾಜ್ಯ ಪರಿಸರ ಪತ್ರಿಕೋದ್ಯಮ, ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.)

Leave a Reply