ಮಕ್ಕಳಿಗೆ ಕಟ್ಟಿ ಕೊಟ್ಟ ಬುತ್ತಿ ಖಾಲಿಯಾಗದೇ ಹಾಗೆ ವಾಪಾಸ್ ಬರುತ್ತಾ..?

author-shama
ಮತ್ತೆ ಶಾಲೆ ಶುರುವಾಗಿದೆ. ಯೂನಿಫಾರ್ಮ್ ಹೊಂದಿಸುವ, ಪುಸ್ತಕ, ಪೆನ್ನು ಪೆನ್ಸಿಲುಗಳ ಖರೀದಿ ಭರಾಟೆ, ಬೈಂಡ್ ಹಾಕುವ ತರಾತುರಿ ಎಲ್ಲವೂ ಸರಾಗವಾಗಿ ನಡೀತಿದೆ. ಯಾವುದೂ ಸಮಸ್ಯೆಯಿಲ್ಲ, ತಲೆನೋವಿಲ್ಲ. ಎಲ್ಲ ಮನೆಯಲ್ಲೂ ಶಾಲೆಯ ಜತೆ ಜತೆಗೇ ಶುರುವಾಗುವ ಮತ್ತು ಸಂಜೆ ಎಲ್ಲೋ ಒಂದೆಡೆ ಸೇರುವ ಅಷ್ಟೂ ಜನ ಅಮ್ಮಂದಿರ ಒಂದೇ ಸಮಸ್ಯೆ ಎಂದರೆ ‘ಲಂಚ್ ಬಾಕ್ಸ್ ಖಾಲಿ ಆಗ್ತಿಲ್ಲ’. ಬಹುಶಃ ಇದು ಈ ತಲೆಮಾರಿನ ಅಮ್ಮಂದಿರನ್ನು ಕಾಡುವ ಪ್ರಶ್ನೆ.

ನಾವೆಲ್ಲ ಚಿಕ್ಕವರಿದ್ದಾಗ ಈಗಿನಂತೆ  ತರಹೇವಾರಿ ಆಹಾರಗಳೂ ಇರಲಿಲ್ಲ; ಬಾಕ್ಸ್ ಗಳು ಕೂಡ ಇರಲಿಲ್ಲ. ಒಂದನೇ ಕ್ಲಾಸಿನಿಂದ ಐದು ಆರನೇ ವರೆಗೆ ಒಂದು ಡಬ್ಬಿ, ನಂತರ ಹೈಸ್ಕೂಲ್ ಮುಗಿಯೋವೆರೆಗೆ ಇನ್ನೊಂದು ಡಬ್ಬಿ. ಪಟ್ಟಣಗಳಲ್ಲಿ ಸುಮಾರಿಗೆ ಉರುಟಾದ ಆಕಾರವಿದ್ದರೆ, ಹಳ್ಳಿ ಕಡೆಯೆಲ್ಲ ಉದ್ದನೆಯ ಹ್ಯಾಂಡಲ್ ಇರುವ ಡಬ್ಬಿ. ಏನು ಹಾಕಿರಬಹುದು ಎನ್ನುವ ಕುತೂಹಲ ಕೂಡ ಇಲ್ಲದಷ್ಟು ಕಾಮನ್ ಆಗಿರುತ್ತಿತ್ತದು. ಇನ್ನು ಮಕ್ಕಳನ್ನು ಕೇಳಿ ಬುತ್ತಿ ಕಟ್ಟುತ್ತಿದ್ದ ಪೋಷಕರು ಬೆರಳೆಣಿಕೆಯಷ್ಟೂ ಇರಲಿಲ್ಲವೇನೋ! ಒಂದೋ ಅನ್ನ ಸಾಂಬಾರ್ ಅಥವಾ ಮಜ್ಜಿಗೆ/ಮೊಸರು ಕಲಸಿ ಜತೆಗೊಂದು ಹೋಳು  ಉಪ್ಪಿನ ಕಾಯಿ ಹಾಕಿ ಕೊಟ್ಟರೆ ಅವತ್ತಿಗದು ಮೃಷ್ಟಾನ್ನ ಭೋಜನ. ಖಾಲಿ ಮಾಡದೆ ವಾಪಾಸ್ ತಂದ ಒಂದು ದಿನವೂ ನನಗೆ ನೆನಪಿಲ್ಲ.

ಇವತ್ತು ಚಿತ್ರ ಪೂರ್ಣ ಬದಲಾಗಿದೆ. ಎಲ್ಲ ಮನೆಗಳಲ್ಲೂ ಪೋಷಕರು “ಹೆಲ್ತ್ ಕಾನ್ಶಿಯಸ್” ಆಗಿದ್ದಾರೆ. ಮಕ್ಕಳಿಗೆ ಶಾಲೆಗೆ ಕಳಿಸುವ ಊಟದ ಕ್ವಾಂಟಿಟಿ, ಕ್ವಾಲಿಟಿ ಎರಡಕ್ಕೂ ಬಹಳ ಆದ್ಯತೆ ಕೊಡುತ್ತಾರೆ. ಖರೀದಿ ಮಾಡುವ ಮನಸ್ಸೊಂದಿದ್ದರೆ ದಿನಕ್ಕೊಂದು ಬಗೆಯ ರುಚಿ ಕೊಡುವಷ್ಟು ತರಹೇವಾರಿ ವಸ್ತುಗಳು ಮಾರುಕಟ್ಟೆಯಲ್ಲಿವೆ. ತಿನ್ನೋ ವಿಚಾರಕ್ಕೆ ಬಂದರೆ ಅಪ್ಪ ಅಮ್ಮ ಚೌಕಾಸಿ ಮಾಡದೇ ತರುತ್ತಾರೆ. ಕೇಳಿ ತಿನ್ನುವ ಮಕ್ಕಳಿದ್ದರೆ ಎಷ್ಟು ಕಷ್ಟವಾದರೂ ಮಾಡಿ ಕೊಡುತ್ತಾರೆ. ಆದರೂ ಮಕ್ಕಳು ತಿನ್ನುತ್ತಿಲ್ಲ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಒಂದಷ್ಟು ಮಟ್ಟಿಗೆ ಇವತ್ತಿನ ಮಕ್ಕಳು ವೈವಿಧ್ಯತೆ ಬಯಸುವುದು ನಿಜ. ಬದಲಾದ ಜಗತ್ತಿನ ನಿಟ್ಟಿನಿಂದ ನೋಡಿದರೆ ಅದು ತಪ್ಪಲ್ಲ. ತಿನ್ನುವ ಪ್ರಕ್ರಿಯೆಯನ್ನೇ ಒಂದು ಶಿಕ್ಷೆ ಎಂಬಂತೆ ನೋಡುವುದೂ ಅಷ್ಟೇ ನಿಜ. ಮನೆಯಲ್ಲಾದರೆ ಪೋಷಕರ ಕಣ್ಗಾವಲು, ತಿನ್ನದೇ ವಿಧಿಯಿಲ್ಲ. ಬೈದು, ಆಸೆ ಆಮಿಷ ತೋರಿಸಿ, ಗದರಿ ಕೊನೆಗೆ ಒಂದು ಏಟು ಕೊಟ್ಟಾದರೂ ತಿನ್ನಿಸುತ್ತಾರೆ. ಸುಮಾರು ಎಲ್.ಕೆ.ಜಿ ವರೆಗೆ ಆಯಾನೋ ಟೀಚರೋ ತಿನ್ನಿಸುವ ಪರಿಪಾಠ ಇರುವ ಕಾರಣ ಒಂದಷ್ಟಂತೂ ಹೊಟ್ಟೆ ಸೇರುತ್ತದೆ.  ಒಂದನೇ ಕ್ಲಾಸಿಗೆ ಸೇರಿದ ನಂತರ ಹಾಗಲ್ಲ. ಬೆಲ್ ಬಾರಿಸಿದಾಗ ಊಟದ ಡಬ್ಬಿ ತೆರೆದರೂ ನಡೆಯುತ್ತದೆ; ತೆರೆಯದಿದ್ದರೂ ಕೇಳುವವರಿಲ್ಲ. ಆ ಸ್ವಾತಂತ್ರ್ಯದ ಸದುಪಯೋಗ (!!) ಪಡೆಯುವಲ್ಲಿ ಮಕ್ಕಳು ಬಲು ಜಾಣರು.

“ನನ್ನ ಮಗನಿಗೆ ಬರ್ಗರ್ ಅಂದರೆ ಜೀವ. ಅದ್ಕೇ ಈ ಬಾರಿ ಬರ್ಗರ್ ಥರದ ಲಂಚ್ ಬಾಕ್ಸ್ ತಂದಿದೀನಿ. ಮೊದಲಿಗಿಂತ ಚೆನ್ನಾಗಿ ಊಟ ಮಾಡ್ತಾನೆ” ಅಂತಿದ್ದಳು ಬಬಿತ. ಇಂಥವೊಂದಷ್ಟನ್ನು ಪ್ರಯತ್ನ ಮಾಡುವುದು ಜಾಣತನ. ಜತೆಗೆ ಆಯ್ಕೆಯನ್ನೂ ಮಕ್ಕಳಿಗೆ ಬಿಟ್ಟು “ನಿಂಗಿಷ್ಟವಾದ್ದನ್ನ ಕೊಡಿಸೋದು ನಮ್ಮ ಕೆಲಸ; ಅದರೊಳಗೆ ಇರೋದನ್ನ ಪೂರ್ತಿ ಖಾಲಿ ಮಾಡೋದು ನಿನ್ನ ಕೆಲಸ” ಎಂಬ ಜವಾಬ್ದಾರಿಯನ್ನೂ ಅವರಿಗೇ  ವಹಿಸಿ ನೋಡಬಹುದು.

ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನಕ್ಕೂ ಹಾಕುವುದು ಅಮ್ಮನ ಕೆಲಸ ಸುಲಭ ಮಾಡೀತು ಆದರೆ ಮಕ್ಕಳಿಗದು ‘ಬೋರ್’ ಅನಿಸೀತು. ಸಾಧ್ಯವಾದಷ್ಟೂ ಬೇರೇನಾದರೂ ಹಾಕುವುದು ಆರೋಗ್ಯ, ವೈವಿಧ್ಯತೆ ಎರಡೂ ದೃಷ್ಟಿಯಿಂದ ಒಳ್ಳೆಯದು. ಅನ್ನ ಸಾಂಬಾರ್ ಕಲಸಿ ತುಂಬಿಸುವ ಬದಲು ಬೇರೆ ಬೇರೆಯೇ ಹಾಕಿ ಕೊಟ್ಟರೆ ರುಚಿಯೂ ಹೆಚ್ಚು, ಅಲ್ಲದೇ ತಮಗೆ ಬೇಕಾದ ಹಾಗೆ ಮಕ್ಕಳು ಕಲಸಿಕೊಳ್ಳಲೂ ಸಾಧ್ಯ.

ಸ್ನಾಕ್ಸ್ ಬ್ರೇಕ್ ಅಥವಾ ಶಾರ್ಟ್ ಬ್ರೇಕ್ ಸಮಯಕ್ಕೆ ಬರೀ ಬಿಸ್ಕೆಟ್ ಹಾಕುವ ಬದಲು ತರಕಾರಿ ಅಥವಾ ಹಣ್ಣುಗಳ ಸಲಾಡ್ ಕಳಿಸಬಹುದು. ಮೊಳಕೆ ಕಾಳುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿ ಹೋಳುಗಳು, ಒಂದ್ನಾಲ್ಕು ದಾಳಿಂಬೆ ಬೀಜ ಸೇರಿಸಿ ಚೂರೇ ಚೂರು ಉಪ್ಪು ಸೇರಿಸಿ ಕೊಟ್ಟರೆ ಅದರ ರುಚಿ ಇನ್ಯಾವುದಕ್ಕೂ ಸಾಟಿಯಿಲ್ಲ. ಜತೆಗೇ ಇದು ತುಂಬಾ ಉತ್ಕೃಷ್ಟ ಗುಣಮಟ್ಟದ ಆಹಾರವೂ ಕೂಡ.

ಇನ್ನು ದೋಸೆ ಮಾಡುವಾಗ ಒಂದಷ್ಟು ಹಿಟ್ಟಿಗೆ ಒಂದು ಮುಷ್ಟಿ ಬೀಟ್^ರೂಟ್ ತುರಿದು ಹಾಕಿದರೆ ಯಾವತ್ತಿನ ಬೋರಿಂಗ್. ಬಿಳಿ ದೋಸೆ ಬದಲು ಪಿಂಕ್ ದೋಸೆ ನೋಡಲು, ತಿನ್ನಲು ಎರಡಕ್ಕೂ ಸೈ. ಇಡ್ಲಿ, ಪಡ್ಡು ಮುಂತಾದ ಹಬೆಯಲ್ಲಿ ಬೇಯಿಸುವಂಥದ್ದಾದರೆ ಟೊಮ್ಯಾಟೋ ಚಕ್ರದಂತೆ ಹೆಚ್ಚಿ ಅದರ ಮೇಲಿಟ್ಟು ಬೇಯಿಸಿದರೆ ನೋಡುವಾಗಲೇ ತಿನ್ನಬೇಕೆನಿಸುತ್ತದೆ. ಯಾವ್ಯಾವುದಕ್ಕೆಲ್ಲ ಸಾಧ್ಯವೋ ಅವಕ್ಕೆಲ್ಲ ಸಣ್ಣಗೆ ಹೆಚ್ಚಿದ ಸೊಪ್ಪು, ಚೂರು ಕಾಯಿ ತುರಿ, ಒಣ ಹಣ್ಣುಗಳು ಇಂಥವನ್ನೆಲ್ಲ ಸೇರಿಸಿ ಬೇಯಿಸುವುದು, ಬಣ್ಣ ಕೊಡಲು ಅರಶಿನ, ಬೀಟ್^ರೂಟ್, ಕ್ಯಾರೆಟ್ ಪೇಸ್ಟ್ ಮುಂತಾದ ನೈಸರ್ಗಿಕವಾದ್ದನ್ನೇ ಹಾಕುವುದರಿಂದ ಆರೋಗ್ಯ ಆನಂದ ಎರಡೂ ವೃದ್ಧಿಸುತ್ತದೆ.

ಅನ್ನದ ಐಟಂಗಳಾದ ಬಾತ್, ಪಲಾವ್, ಪುಳಿಯೋಗರೆ ಮಾಡಿದರೆ ಅದರ ಜತೆಗೆ ಇನ್ನೇನಾದರೂ ಮನೆಯಲ್ಲೇ ಮಾಡಿದ ಆರೋಗ್ಯ ಕೆಡಿಸದಂಥ ಕುರುಕಲು ಕಳಿಸಿದರೆ ಒಳ್ಳೆಯದು. ಮುಂಚಿನ ದಿನ ಹೆಪ್ಪು ಹಾಕಿದ ಮೊಸರಿನ ಬದಲು ಹಾಲು ಮಜ್ಜಿಗೆ ಸೇರಿಸಿ ಡಬ್ಬಿಗೆ ತುಂಬಿಸಿದರೆ ಮಧ್ಯಾಹ್ನದ ಹೊತ್ತಿಗೆ ರುಚಿಯಾದ ಹುಳಿಯಿಲ್ಲದ ಮೊಸರಾಗುತ್ತದೆ. ಒಟ್ಟಿನಲ್ಲಿ ಆಹಾರ ಒಳ ಹೋಗಲೇಬೇಕು; ಬುತ್ತಿ ಖಾಲಿ ಆಗಲೇಬೇಕು. Healthy meal ಅನ್ನೋದು Happy meal ಕೂಡ ಆಗುವಂತೆ ನೋಡಿಕೊಂಡರೆ ಬಹುಶಃ ಮಕ್ಕಳ ಊಟದ ಸಮಸ್ಯೆ ಪೂರ್ಣ ಅಲ್ಲದೇ ಇದ್ದರೂ ಒಂದಷ್ಟು ಮಟ್ಟಿಗೆ ಪರಿಹಾರ ಕಂಡೀತು.

Leave a Reply