ಪರಮಾಣು ಗುಂಪಲ್ಲಿ ತೂರಿಕೊಳ್ಳೋದಕ್ಕೂ ಮೊದಲು ಕ್ಷಿಪಣಿ ಕ್ಲಬ್ ಸದಸ್ಯತ್ವ, ಮೋದಿ ವಿದೇಶ ಪ್ರವಾಸದ ಸೂತ್ರ!

 

ಡಿಜಿಟಲ್ ಕನ್ನಡ ವಿಶೇಷ:

ಅಫ್ಘನ್ ಪ್ರವಾಸ ಮುಗಿಸಿ ಕತಾರ್ ಗೆ ತೆರಳಿರುವ ಪ್ರಧಾನಿ ಮೋದಿ ವಿದೇಶ ಪ್ರವಾಸವು ಅಮೆರಿಕದಲ್ಲಿ ಕೊನೆಗೊಳ್ಳಲಿದೆ. ಈ ಪ್ರವಾಸದ ಮುಖ್ಯ ಕಾರ್ಯಸೂಚಿ ಏನು?

ಭಾರತದ ಇಂಧನ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳುವುದು. ಅದು ತೈಲಕ್ಕೆ ಸೀಮಿತವಾಗಿರದೇ ಪರಮಾಣುವಿನವರೆಗೆ ಹೋಗಿದೆ. ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿನ (ಎನ್ ಎಸ್ ಜಿ) ಸದಸ್ಯನಾಗುವುದು ಈ ನಿಟ್ಟಿನಲ್ಲಿ ಭಾರತದ ಮುಖ್ಯ ಪ್ರಯತ್ನ. ಇದಕ್ಕೆ ಅಮೆರಿಕದ ಒತ್ತಾಸೆ ಇದೆ. ಯಥಾಪ್ರಕಾರ ಪಾಕ್ ಸ್ನೇಹಿ ಚೀನಾ ಇದಕ್ಕೆ ಅಡ್ಡಗಾಲು ಹಾಕುತ್ತಿದೆ.

ಭಾರತವನ್ನು ಈ ಸಮೂಹಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈ ತಿಂಗಳು ಎನ್ಎಸ್ ಜಿ ಸದಸ್ಯರ ಸಭೆ ಸೇರಲಿದ್ದು ಅಂತಿಮ ನಿರ್ಧಾರ ಹೊರಬೀಳಲಿದೆ. ಇದು ಸಾಕಾರವಾದಾಗ ಆಗಲಿ ಅಂತ ಕೈಕಟ್ಟಿಕೊಳ್ಳುವ ಜಾಯಮಾನ ಭಾರತದ್ದಲ್ಲ. ಈ ಗ್ಯಾಪಿನಲ್ಲಿ ಎನ್ ಎಸ್ ಜಿ ಸೇರುವುದಕ್ಕೆ ಸಹಾಯಕವಾಗುವಂಥ ಇನ್ಯಾವುದಾದರೂ ಮಾರ್ಗದಲ್ಲಿ ಸಾಗೋಣ ಎಂಬುದು ಭಾರತದ ಲೆಕ್ಕಾಚಾರ.

ಹೀಗಾಗಿ…

ಎಂಟಿಸಿಆರ್ ಸದಸ್ಯನಾಗುವತ್ತ ಭಾರತ ಹೆಜ್ಜೆ ಹಾಕಿದೆ. ಹೇಗೆ ಪರಮಾಣು ಪೂರೈಕೆಗೆ ಒಂದಿಷ್ಟು ದೊಣೆನಾಯಕರು ಸೇರಿ ಗುಂಪು ರಚಿಸಿಕೊಂಡಿದ್ದಾರೋ ‘ಕ್ಷಿಪಣಿ ತಂತ್ರಜ್ಞಾನದ ನಿಯಂತ್ರಣ ಆಡಳಿತ’ ಅನ್ನೋ ಗುಂಪು ಕ್ಷಿಪಣಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ರಫ್ತು ಮಾಡುವುದಕ್ಕೆ ರಚಿಸಿಕೊಂಡಿರೋ ದೊಣೆನಾಯಕರ ಗುಂಪು. ಇಲ್ಲಿ ತಾನೂ ಸೇರಿಕೊಳ್ಳುವುದು ಭಾರತದ ಈಗಿನ ಇಂಗಿತ.

ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಎನ್ಎಸ್ ಜಿಯ ಸದಸ್ಯತ್ವಕ್ಕಿಂತ ಎಂಟಿಸಿಆರ್ ಸದಸ್ಯತ್ವ ಸುಲಭವಾಗಿ ದೊರೆಯುವ ಅವಕಾಶಗಳಿವೆ. ಮೊದಲು ಎಂಟಿಸಿಆರ್ ಸದಸ್ಯತ್ವ ಪಡೆದು ಈ ಅರ್ಹತೆಯೊಂದಿಗೆ ಎನ್ಎಸ್ ಜಿ ಪ್ರವೇಶಿಸುವ ಹಾದಿ ಸುಗಮಗೊಳಿಸಿಕೊಳ್ಳುವುದು ಭಾರತದ ಗುರಿ. 34 ರಾಷ್ಟ್ರಗಳ ಸದಸ್ಯತ್ವ ಇರುವ ಈ ಗುಂಪು ಕ್ಷಿಪಣಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕುರಿತ ನಿಯಂತ್ರಣವನ್ನು ಹೊಂದಿವೆ.

ಇಲ್ಲಿ ಚೀನಾದ ಅಡ್ಡಗಾಲಿಲ್ಲದಿದ್ದರೂ ಆ ಪಾತ್ರವನ್ನು ಇಷ್ಟು ದಿನ ಇಟಲಿ ಮಾಡುತ್ತಿತ್ತು. ಕೇರಳದ ಮೀನುಗಾರರ ಕೊಲೆ ಪ್ರಕರಣದಲ್ಲಿ ಇಟಲಿಯ ಇಬ್ಬರು ನಾವಿಕರ ಬಂಧನ ಪ್ರಕರಣದ ಕುರಿತಂತೆ ಭಾರತದ ಮೇಲೆ ಇಟಲಿ ಮುನಿಸಿಕೊಂಡಿತ್ತು. ಆದರೆ ಇದೀಗ ಸುಪ್ರೀಂ ತೀರ್ಪಿನ ಪ್ರಕಾರ ಆ ನಾವಿಕ ಸ್ವದೇಶಕ್ಕೆ ತೆರಳಿರುವುದು ಪರಿಸ್ಥಿತಿಯನ್ನು ತಿಳಿಯಾಗಿಸಿದೆ. ಈ ಗುಂಪನ್ನು ಸೇರಿಕೊಳ್ಳುತ್ತಲೇ ತನ್ನಲ್ಲಿನ ಕ್ಷಿಪಣಿ ತಂತ್ರಜ್ಞಾನವನ್ನು ಕೆಲ ನಿಯಮಗಳಿಗೆ ಬದ್ಧವಾಗಿ ತನ್ನ ಮಿತ್ರ  ದೇಶಗಳಿಗೆ ಮಾರುವುದು ಭಾರತಕ್ಕೆ ಸುಲಭವಾಗುತ್ತದೆ.

ಇನ್ನು, ಎನ್ ಎಸ್ ಜಿ ಸದಸ್ಯತ್ವಕ್ಕೆ ಭಾರತಕ್ಕಿರುವ ಅಡ್ಡಿ ಎಂದರೆ ನಾವು ‘ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದ’ಕ್ಕೆ ಸಹಿ ಹಾಕಿಲ್ಲ. ಇದನ್ನೇ ಚೀನಾ ಮುಂದುಮಾಡುತ್ತಿದೆ. ಆದರೆ, ಎನ್ ಎಸ್ ಜಿಯಲ್ಲಿ ಭಾರತ ಸೇರಿಕೊಳ್ಳುವುದು ನಾಗರಿಕ ಬಳಕೆಗಾಗಿನ ಪರಮಾಣು ಪೂರೈಕೆಗಾಗಿಯಾದ್ದರಿಂದ ಇದನ್ನು ವಿರೋಧಿಸಬಾರದೆಂಬುದು ಅಮೆರಿಕದ ಅಭಿಮತ.

ಒಂದುವೇಳೆ ಭಾರತ ಈ ಸಮೂಹದ ಸದಸ್ಯತ್ವ ಪಡೆದುಬಿಟ್ಟರೆ, ಅಂತಾರಾಷ್ಟ್ರೀಯ ಪರಮಾಣು ಮಾರುಕಟ್ಟಿಯಲ್ಲಿ ಭಾರತಕ್ಕೆ ಹೆಚ್ಚಿನ ಸವಲತ್ತುಗಳು ಸಿಗುತ್ತವೆ. ಸದ್ಯ ಈ ಎಲ್ಲ ಸವಲತ್ತುಗಳನ್ನು ಚೀನಾ ಏಕಾಂಗಿಯಾಗಿ ಅನುಭವಿಸುತ್ತಿದ್ದು, ಇದಕ್ಕೆ ಧಕ್ಕೆಯಾಗುವ ಭೀತಿ ಚೀನಾದ್ದಾಗಿದೆ. ಈ ಸದಸ್ಯತ್ವದಿಂದ ಭಾರತ ಅಣ್ವಸ್ತ್ರ ವ್ಯಾಪಾರದ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು, ಏಷ್ಯಾದಲ್ಲಿ ಚೀನಾದ ಪ್ರಾಬಲ್ಯಕ್ಕೆ ಪೆಟ್ಟು ಬೀಳುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಚೀನಾ ಶತಾಯಗತಾಯ ಭಾರತವನ್ನು ಈ ಸಮೂಹದಿಂದ ದೂರವಿಡಲು ಪ್ರಯತ್ನಿಸುತ್ತಿದೆ.

ಸದ್ಯ ಪಂಚ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮುಂದಿನ ದಿನಗಳಲ್ಲಿ ಅಮೆರಿಕ, ಸ್ವಿಜರ್ಲೆಂಡ್ ಹಾಗೂ ಮೆಕ್ಸಿಕೊ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಎನ್ಎಸ್ ಜಿ ಗುಂಪಿನಲ್ಲಿ ಈ ಮೂರು ರಾಷ್ಟ್ರಗಳು ಸದಸ್ಯತ್ವ ಹೊಂದಿದ್ದು, ಈ ರಾಷ್ಟ್ರಗಳ ಬೆಂಬಲ ಗಿಟ್ಟಿಸುವ ಪ್ರಯತ್ನ ನಡೆಯಲಿದೆ.

ಈ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹೇಳಿರುವ ಮಾತು ಹೀಗಿದೆ:

‘ಪರಮಾಣು ಶಕ್ತಿಯಲ್ಲಿ ನಾವು ಗಣನೀಯ ಪ್ರಮಾಣದ ಪ್ರಗತಿಯನ್ನು ಕಾಣುತ್ತಿದ್ದೇವೆ. ಈ ಕ್ಷೇತ್ರದಲ್ಲಿ ಬೆಳವಣಿಗೆಯಾದಂತೆ ಭಾರತ ಸಹ ಪ್ರಮುಖ ಪರಮಾಣು ಪೂರೈಕೆ ರಾಷ್ಟ್ರವಾಗಲಿದೆ. ಈ ಕುರಿತ ನಮ್ಮ ಈ ಹಿಂದಿನ ಸಾಧನೆ ಅತ್ಯುತ್ತಮವಾಗಿದೆ.’

ಎನ್ ಎಸ್ ಜಿ ಸದಸ್ಯತ್ವ ಸಿಗುವುದು ವಿಳಂಬವಾದೀತೇನೋ, ಆದರೆ ಎಂಟಿಸಿಆರ್ ನ 35 ನೇ ಸದಸ್ಯನಾಗಿ ಭಾರತ ಎಂಬ ಘೋಷಣೆ ಈ ಬಾರಿಯ ಅಮೆರಿಕ ಭೇಟಿಯಲ್ಲೇ ಘೋಷಣೆಯಾಗವು ಸಾಧ್ಯತೆಗಳಿವೆ.

Leave a Reply