ಅಕಾಲಿ ದಳದ ಮಿತ್ರರನ್ನು ಉಳಿಸಿಕೊಳ್ಳಲು ಉಡ್ತಾ ಪಂಜಾಬ್ ಗೆ ಕಷ್ಟ ಕೊಡ್ತಿದೆಯೇ ಕೇಂದ್ರ?

ಡಿಜಿಟಲ್ ಕನ್ನಡ ಟೀಮ್:

ಪಂಜಾಬ್ ಮಾದಕ ವ್ಯಸನ ಸಮಸ್ಯೆಯ ಮೇಲೆ ಬಾಲಿವುಡ್ ನಲ್ಲಿ ನಿರ್ಮಾಣಗೊಂಡಿರುವ ‘ಉಡ್ತಾ ಪಂಜಾಬ್’ ಚಿತ್ರ ವಿಘ್ನಗಳ ಸುಳಿಯಿಂದ ತಪ್ಪಿಸಿಕೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಚಿತ್ರದ ಶೀರ್ಷಿಕೆಯಲ್ಲಿ ಪಂಜಾಬ್ ರಾಜ್ಯದ ಹೆಸರು, ಅಲ್ಲಿನ ರಾಜಕೀಯ ಮತ್ತು ಚುನಾವಣೆಯ ಅಂಶವನ್ನು ತೆಗೆದು ಹಾಕುವಂತೆ ಸೆನ್ಸಾರ್ ಮಂಡಳಿ ಪಟ್ಟು ಹಿಡಿದಿದೆ. ಇಲ್ಲಿ ರಾಜಕೀಯ ಪ್ರಭಾವವಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಈ ವಿವಾದದ ಕುರಿತಂತೆ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧಿಕರಣ (ಎಫ್ ಸಿ ಎ ಟಿ) ರಚಿಸಿದ ಸಮಿತಿಯು ಕಳೆದ ಶುಕ್ರವಾರ ಚಿತ್ರವನ್ನು ವೀಕ್ಷಿಸಿತ್ತು. ಸಮಿತಿ ಸೋಮವಾರ ಈ ಕುರಿತು ಶಿಫಾರಸ್ಸು ನೀಡಿದ್ದೂ, ಪಂಜಾಬ್ ರಾಜ್ಯದ ಹೆಸರು, ರಾಜಕೀಯ ಹಾಗೂ ಚುನಾವಣೆಗೆ ಸಂಬಂಧಿಸಿದ ಅಂಶವನ್ನು ಕಿತ್ತು ಹಾಕಬೇಕು ಎಂದು ಸೂಚನೆ ನೀಡಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.

ಚಿತ್ರದಲ್ಲಿ ಅತಿಯಾಗಿ ಮದ್ಯ ವ್ಯಸನದ ಅಂಶವನ್ನು ಹೊಂದಿದೆ ಎಂಬ ಕಾರಣಕ್ಕೆ ಕಳೆದ ತಿಂಗಳು ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಲು ನಿರಾಕರಿಸಿತ್ತು. ಆರಂಭದಲ್ಲಿ ಈ ಕುರಿತ ವರದಿಗಳನ್ನು ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ತಿರಸ್ಕರಿಸಿದರು. ಆದರೆ, ಸಿನಿಮಾದಲ್ಲಿ ದೃಶ್ಯ, ಹಾಡು ಸೇರಿದಂತೆ ಒಟ್ಟು 40 ಬಾರಿ ಕತ್ತರಿ ಪ್ರಯೋಗಕ್ಕೆ ಸೆನ್ಸಾರ್ ಮುಂದಾದ ಪರಿಣಾಮ ಅನುರಾಗ್ ಕಶ್ಯಪ್, ವಾರ್ತಾ ಹಾಗೂ ಪ್ರಸಾರ ಇಲಾಖೆಯ ಭಾಗವಾಗಿರೋ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧಿಕರಣ (ಎಫ್ ಸಿ ಎ ಟಿ) ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡರು.

ಆದರೆ ಬಹಳ ಮುಖ್ಯವಾಗಿ ತಗಾದೆ ಇರೋದು ಶೀರ್ಷಿಕೆಯೊಂದನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಪಂಜಾಬ್ ಉಲ್ಲೇಖವನ್ನು ತೆಗೆಯಬೇಕು ಅನ್ನೋದು! ಇದ್ಯಾವ ಹೊಸ ನಿಯಮ? ಇಷ್ಟಕ್ಕೂ ಪಂಜಾಬಿನಲ್ಲಿ ಇಲ್ಲದನ್ನು ಆರೋಪಿಸಲಾಗುತ್ತಿದೆಯೇ? ಅಲ್ಲಿನ ಡ್ರಗ್ ಸಮಸ್ಯೆ ಬಗ್ಗೆ ಬಲಪಂಥೀಯ ಸಂಘಟನೆಗಳೇ ಈ ಹಿಂದೆ ಧ್ವನಿ ಎತ್ತಿವೆ. ಅದನ್ನು ಚಿತ್ರದಲ್ಲಿ ತೋರಿಸಬಾರದು ಎಂಬ ದ್ವಂದ್ವವೇಕೆ?

ಪಂಜಾಬ್ ನಲ್ಲಿ ಮಾದಕ ವ್ಯಸನದ ಸಮಸ್ಯೆ ಎಲ್ಲರಿಗೂ ಗೊತ್ತಿರೋ ವಿಚಾರವೇ. ಕೆಲ ವರ್ಷಗಳ ಹಿಂದೆ ನಡೆದಿದ್ದ ಸಮೀಕ್ಷೆ ಪ್ರಕಾರ ಪಂಜಾಬ್ ನ ಶೇ.73 ರಷ್ಟು ಯುವಕರು ಮಾದಕ ವ್ಯಸನಿಗಳು ಎಂಬ ಆಘಾತಕಾರಿ ಅಂಶ ಹೊರಬಿದ್ದಿತ್ತು. ದೇಶದ ಸಶಸ್ತ್ರ ಪಡೆಯನ್ನು ಸೇರುತ್ತಿದ್ದವರ ಪ್ರಮಾಣ ಶೇ. 17ರಿಂದ ಶೇ. 0.75ಕ್ಕೆ ಇಳಿದಿದೆ ಹಾಗೂ ಇದಕ್ಕೆ ಮಾದಕ ವ್ಯಸನವೇ ಕಾರಣ ಎಂದಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಪ್ರತಿಪಾದನೆ ಈ ಸಮಸ್ಯೆಯ ಭೀಕರತೆಗೆ ಸಾಕ್ಷಿ.

ಸೆನ್ಸಾರ್ ಮೂಲಕ ರಾಜಕೀಯ ಒತ್ತಡ..

ಇಂತಹ ದೊಡ್ಡ ಸಮಸ್ಯೆ ಕುರಿತು ನಿರ್ಮಿಸಲಾದ ಚಿತ್ರದ ಮೇಲೆ ಸೆನ್ಸಾರ್ ಮಂಡಳಿಯ ಬಲ ಪ್ರಯೋಗ ಹಲವು ಅನುಮಾನಗಳಿಗೂ ಎಡೆ ಮಾಡಿಕೊಡುತ್ತಿದೆ.

ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರೋ ಶಿರೋಮಣಿ ಅಕಾಲಿ ದಳ ಈ ಚಿತ್ರದಲ್ಲಿ ಡ್ರಗ್ಸ್ ಸಮಸ್ಯೆಯ ಬಳಕೆ ಕುರಿತು ಈ ಹಿಂದೆ ತಗಾದೆ ಎತ್ತಿತ್ತು. ಮುಂದಿನ ವರ್ಷ ಜನವರಿಯಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಸರ್ಕಾರಕ್ಕೆ ಈ ಸಮಸ್ಯೆ ಕೇಂದ್ರೀಕರಿಸಿ ನಿರ್ಮಾಣವಾಗಿರೋ ಚಿತ್ರ ಮುಳುವಾಗುವ ಭಯವಿದೆ. ಮತ್ತೊಂದೆಡೆ ಆಮ್ ಆದ್ಮಿ ಹಾಗೂ ಇತರೆ ಪಕ್ಷಗಳು ಮಾದಕ ವ್ಯಸನದ ಸಮಸ್ಯೆಯನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಅಕಾಲಿ ದಳ, ಬಿಜೆಪಿ ಜತೆಗಿನ ಸ್ನೇಹದ ಪ್ರಭಾವ ಬಳಸಿಕೊಂಡು ಸೆನ್ಸಾರ್ ಮಂಡಳಿಯ ಮೂಲಕ ಚಿತ್ರದ ಮೇಲೆ ಒತ್ತಡದ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯ ವಿವಾದ ಕುರಿತು ಸರ್ಕಾರದಿಂದ ನೇಮಿತವಾಗಿದ್ದ ಶ್ಯಾಮ್ ಬೆನಗಲ್ ನೇತೃತ್ವದ ಸಮಿತಿ ತನ್ನ ಶಿಫಾರಸ್ಸು ನೀಡಿತ್ತು. ಅದರಲ್ಲಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡಬೇಕೇ ಹೊರತು ಕತ್ತರಿ ಪ್ರಯೋಗಕ್ಕೆ ಮುಂದಾಗ ಬಾರದು ಎಂದು ತಿಳಿಸಿತ್ತು. ಇದರ ಬೆನ್ನಲ್ಲೆ ಜೂನ್ 17 ಕ್ಕೆ ತೆರೆಕಾಣಲು ಪ್ರಯತ್ನಿಸುತ್ತಿರುವ ಉಡ್ತಾ ಪಂಜಾಬ್ ಚಿತ್ರಕ್ಕೆ ಎದುರಾಗಿರುವ ಸೆನ್ಸಾರ್ ಸಮಸ್ಯೆ ನಿಜಕ್ಕೂ ಖಂಡನೀಯ.

Leave a Reply