ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಕೋತಿಯಂತೆ ಕುಣಿಸುತ್ತಿರುವ ರಾಜ್ಯಸಭೆ ಚುನಾವಣೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಖಡಾಖಡಿ ರಾಜಕೀಯ ಬೆಳವಣಿಗೆಗಳನ್ನು ಸೃಷ್ಟಿಸಿದೆ. ಶತಾಯಗತಾಯ ತನ್ನ ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಪಕ್ಷೇತರ ಶಾಸಕರನ್ನು ಮುಂಬಯಿಗೆ ಹೊತ್ತು ಹಾಕಿದ್ದರೆ, ಇತ್ತ ಕಾಂಗ್ರೆಸ್ ಜತೆ ಷಾಮೀಲಾಗಿ ಜೆಡಿಎಸ್ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿರುವ ಶಾಸಕರ ಜಮೀರ್ ಅಹಮದ್ ಖಾನ್ ನಿವಾಸದ ಮೇಲೆ ಪಕ್ಷದ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿದ್ದಾರೆ.

ರಾಜ್ಯಸಭೆ ಚುನಾವಣೆ ಮಾಜಿ ಪ್ರಧಾನಿ ದೇವೇಗೌಡ, ಪುತ್ರ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್ ನಡುವೆ ಪ್ರತಿಷ್ಠೆ ಸಮರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಬಳಿ 33 ಮತಗಳಿದ್ದು, ರಾಮಮೂರ್ತಿ ಗೆಲುವಿಗೆ 12 ಮತಗಳ ಕೊರತೆ ಇದೆ. ಜೆಡಿಎಸ್ ಅಭ್ಯರ್ಥಿ ಫಾರೂಕ್ ಜಯಕ್ಕೆ ಜೆಡಿಎಸ್ ಹೊರತಾದ 5 ಮತಗಳು ಬೇಕಿವೆ. ಆದರೆ ಜಮೀರ್ ಮತ್ತು ಚಲುವರಾಯಸ್ವಾಮಿ ನೆರವಿನೊಂದಿಗೆ ಕಾಂಗ್ರೆಸ್ ಜೆಡಿಎಸ್ಸಿನ 5 ಮೂಲ ಮತಗಳಿಗೆ ಕೈ ಹಾಕಿದೆ. ಜತೆಗೆ ಫಾರೂಕ್ ಉಮೇದುವಾರಿಕೆಗೆ ಮೊದಲು ಸಹಿ ಹಾಕಿದ್ದ ಪಕ್ಷೇತರರು ಸೇರಿದಂತೆ ಹತ್ತು ಶಾಸಕರ ನಿಷ್ಠೆ ಅಪಹರಿಸುವಲ್ಲಿಯೂ ಯಶಸ್ವಿ ಆಗಿದ್ದು, ಅವರು ಸೇರಿದಂತೆ 12 ಮಂದಿ ಶಾಸಕರನ್ನು ಇದೀಗ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಮುಂಬಯಿ ಜೆ.ಡಬ್ಯೂ. ಚಾರಿಯಟ್ ಹೋಟೆಲ್ ಗೆ ರವಾನಿಸಿದ್ದು, ಅವರು ಚುನಾವಣೆ ಮುನ್ನಾ ದಿನ ಜೂ. 10 ರಂದು ಬೆಂಗಳೂರಿಗೆ ಮರಳಲಿದ್ದಾರೆ.

ಪಕ್ಷೇತರ ಶಾಸಕರನ್ನು ಮತ್ತೆ ತನ್ನ ಕಡೆ ಸೆಳೆದುಕೊಳ್ಳಲು ಜೆಡಿಎಸ್ ಪ್ರಯತ್ನ ನಡೆಸಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ರೆಸಾರ್ಟ್ ರಾಜಕೀಯದ ಮೊರೆ ಹೋಗಿದೆ. ಆದರೆ ಇದಕ್ಕೂ ತಮಗೂ ಸಂಬಂಧ ಇಲ್ಲ, ಕುದುರೆ ವ್ಯಾಪಾರ ಮಾಡೋ ಅಗತ್ಯ ತಮಗಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಕುದುರೆ ವ್ಯಾಪಾರ ಮಾಡುವ ಯಾರೂ ಕೂಡ ಮಾಡ್ತೀವಿ ಅಂತ ಒಪ್ಪಿಕೊಳ್ಳಲ್ಲ. ಇದಕ್ಕೆ ಯಾವ ಪಕ್ಷದವರೂ ಹೊರತಲ್ಲ.  ಈ ರೆಸಾರ್ಟ್ ತಂತ್ರಗಾರಿಕೆ ಹಿಂದೆ ತಮ್ಮ ಪಕ್ಷದ ಶಾಸಕ ಜಮೀರ್ ಅಹಮದ್ ಕೈವಾಡವನ್ನು ಜೆಡಿಎಸ್ ಶಂಕಿಸಿದೆ. ಅಲ್ಲದೇ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ಅವಹೇಳನ ಮಾಡಿರುವ ಜಮೀರ್ ಅವರಿಗೆ ಸೇರಿದ ಯುಬಿ ಸಿಟಿಯಲ್ಲಿರುವ ಫ್ಲಾಟ್ ಗೆ ನುಗ್ಗಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ ಈ ಸಂದರ್ಭದಲ್ಲಿ ಜಮೀರ್ ಅಲ್ಲಿರಲಿಲ್ಲ.

ಫಾರೂಕ್ ಅಭ್ಯರ್ಥಿ ಮಾಡುವ ಮೊದಲು ಮುಖಂಡರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ತಾವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಜಮೀರ್ ಹೇಳಿದ್ದರು. ಅಷ್ಟೇ ಅಲ್ಲ, ದೇವೇಗೌಡರು ಮತ್ತು ಕುಮಾರಸ್ವಾಮಿ ಪಕ್ಷದಲ್ಲಿ ಯಾರ ಏಳಿಗೆಯನ್ನು ಸಹಿಸುವುದಿಲ್ಲ. ಯಾರಿಗೂ ಬೆಳೆಯಲು ಅವಕಾಶ ಕೊಡುವುದಿಲ್ಲ. ಬದಲಿಗೆ ತುಳಿದು ಹಾಕುತ್ತಾರೆ. ಅವರಿಂದಾಗಿ ತಾವೇನೂ ಬೆಳೆದಿಲ್ಲ. ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ತಾವು ಎಂದೆಲ್ಲ ಜಮೀರ್ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಇವತ್ತು ಜಮೀರ್ ಇಂಥ ಹೇಳಿಕೆ ನೀಡುವ ಮಟ್ಟಕ್ಕೆ ಅವರನ್ನು ಬೆಳೆಸಿದವರು ಯಾರು? ಅವರು ಹಿಂದೆ ಏನಾಗಿದ್ದರು, ಈಗ ಏನಾಗಿದ್ದಾರೆ? ಅದಕ್ಕೆ ಕಾರಣರು ಯಾರು ಎಂಬುದರ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.

2013 ರ ವಿಧಾನಸಭೆ ಚುನಾವಣೆ ನಂತರ ಚಲುವರಾಯಸ್ವಾಮಿ, ಜಮೀರ್ ನೇತೃತ್ವದ ಜೆಡಿಎಸ್ ಭಿನ್ನಮತೀಯರ ಗುಂಪು ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದೆ. ಪ್ರಮುಖ ತೀರ್ಮಾನಗಳ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲಿ ಎಂಬುದು ಅವರ ದೂರು. ಆದರೆ ಈ ಗುಂಪು ಸಿದ್ದರಾಮಯ್ಯ ಜತೆ ಷಾಮೀಲಾಗಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂಬುದು ಗೌಡರು ಮತ್ತು ಕುಮಾರಸ್ವಾಮಿ ಆರೋಪ. ಈಗ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಈ ಆಂತರಿಕ ಜಗಳ ತಾರಕ್ಕೇರಿದ್ದು, ಚುನಾವಣೆ ನಂತರ ಜಮೀರ್, ಚಲುವರಾಯಸ್ವಾಮಿ ಅವರನ್ನು ಪಕ್ಷದಿಂದ ಹೊರಹಾಕಲು ಗೌಡರು ಈಗಾಗಲೇ ನಿರ್ಧರಿಸಿದ್ದಾರೆ.

ಈ ಮಧ್ಯೆ, ಕಾಂಗ್ರೆಸ್ ತಂತ್ರಕ್ಕೆ ಜೆಡಿಎಸ್ ಕೂಡ ಪ್ರತಿತಂತ್ರ ರೂಪಿಸುತ್ತಿದೆ. ಪಕ್ಷೇತರರ ನಿಷ್ಠೆ ಅಪಹರಿಸಿರುವ ಕಾಂಗ್ರೆಸ್ಸಿಗೆ ತಿರುಮಂತ್ರ ಹೇಳಲು ತನ್ನೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತಿದ್ದು, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳಿಗೆ ನಿಗದಿ ಆಗಿರುವ ಮತಗಳನ್ನು ಸೆಳೆಯಲು ಯತ್ನಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಆಂತರಿಕ ಕಲಹವನ್ನು ಎಳೆ ಮಾಡಿಕೊಳ್ಳುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚಿನ ರಂಗು ಪಡೆದಿದ್ದು, ರಾಜಕೀಯ ಪಕ್ಷಗಳನ್ನು ಕೋತಿಯಂತೆ ಕುಣಿಸುತ್ತಿದೆ!

Leave a Reply