ಚುನಾವಣೆ ಮುಂದೂಡದಿರಲು ದಿಗ್ವಿಜಯ್ ಮನವಿ, ರೆಸಾರ್ಟು, ಕುದುರೆ ವ್ಯಾಪಾರ ಗೊತ್ತಿಲ್ಲ ಅಂದ್ರು ಸಿದ್ರಾಮಯ್ಯ, ಪಲಾಯನ ಮಾಡಲ್ವಂತೆ ಕುಮಾರಸ್ವಾಮಿ

Chief Minister Siddaramaiah, Minister, Dept. of Infrastructure and Development, Roshan Baig, Minister, Dept. of Social Welfare and Backward Classes Development, Anjaneya, paying respects to Devaraj Urs at Vidhan Soudha in Bengaluru on Monday.

ವಿಧಾನ ಸೌಧದ ಬಳಿ ಸೋಮವಾರ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ರೋಶನ್ ಬೇಗ್ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ.

ಡಿಜಿಟಲ್ ಕನ್ನಡ ಟೀಮ್:

ಯಾವುದೇ ಕಾರಣಕ್ಕೂ ರಾಜ್ಯಸಭಾ ಚುನಾವಣೆಯನ್ನು ಮುಂದೂಡಬಾರದು ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕೇಂದ್ರ ಚುನಾವಣಾ ಆಯೋಗವನ್ನು ಸೋಮವಾರ ಒತ್ತಾಯಿಸಿದ್ದಾರೆ.

ಶಾಸಕರ ಖರೀದಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕು ಎಂಬ ದೂರುಗಳ ಕೇಂದ್ರ ಚುನಾವಣೆ ಆಯೋಗ ತಲುಪಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ನಸೀಮ್ ಅವರನ್ನು ನಿಯೋಗದಲ್ಲಿ ಅವರು ಭೇಟಿ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಆಮಿಷವೊಡ್ಡಲಾಗಿದೆ, ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬುದೆಲ್ಲ ಸುಳ್ಳು. ಚುನಾವಣೆ ಮುಂದಕ್ಕೆ ಹಾಕಿಸಲು ಪ್ರತಿಪಕ್ಷಗಳು ಮಾಡುತ್ತಿರುವ ಹುನ್ನಾರ ಎಂದು ಹೇಳಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ದಿಗ್ವಿಜಯ್ ಸಿಂಗ್,  ಶಾಸಕರ ಕ್ಷೇತ್ರಕ್ಕೆ ನೂರು ಕೋಟಿ ರುಪಾಯಿ ಅನುದಾನದ ಆಮಿಷ ಒಡ್ಡಲಾಗಿದೆ ಎಂಬುದು ಸುಳ್ಳು. ಆಮಿಷ ಒಡ್ಡುವ ಸಂಸ್ಕೃತಿ ಕಾಂಗ್ರೆಸ್ ದಲ್ಲ. ಸಂಸದರ ನಿಧಿಯಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನ ಹೋಗಲೇಬೇಕು. ಇದು ನಡೆದು ಬಂದಿರುವ ಸಂಪ್ರದಾಯ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ರೆಸಾರ್ಟೂ ಗೊತ್ತಿಲ್ಲ, ಕುದುರೆ ವ್ಯಾಪಾರವೂ ಗೊತ್ತಿಲ್ಲ; ಸಿದ್ದರಾಮಯ್ಯ

ಪಕ್ಷೇತರ ಶಾಸಕರು ಮುಂಬೈ ರೆಸಾರ್ಟಿಗೆ ಹೋಗಿರುವುದಾಗಲಿ, ಕುದುರೆ ವ್ಯಾಪಾರ ನಡೆಯುತ್ತಿರುವುದಾಗಲಿ ತಮಗೆ ಗೊತ್ತಿಲ್ಲ. ಯಾರಿಗಾದರೂ ಆಮಿಷವೊಡ್ಡುವುದಾಗಲಿ, ಅವರನ್ನು ಹಿಡಿದಿಟ್ಟುಕೊಳ್ಳುದಾಗಲಿ ತಮ್ಮ ಜಾಯಮಾನ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯ ವಿಧಾನ ಸಭೆಯಿಂದ ರಾಜ್ಯ ಸಭೆಯ ಮೂರು ಹಾಗೂ ವಿಧಾನ ಪರಿಷತ್‍ನ ನಾಲ್ಕು ಸ್ಥಾನಗಳಿಗೂ ನನ್ನ ಅಭ್ಯರ್ಥಿಗಳು ಈಗಾಗಲೇ ಗೆದ್ದಾಗಿದೆ. ಫಲಿತಾಂಶ ಅಷ್ಟೇ ಪ್ರಕಟ ಆಗಬೇಕು. ಏಕೆಂದರೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬೇಕಿರುವುದಕ್ಕಿಂತ ಹೆಚ್ಚಿನ ಮತಗಳು ತಮ್ಮ ಬಳಿ ಇವೆ. ವಾಮಮಾರ್ಗ ಹಿಡಿಯೋ ಅಗತ್ಯವಿಲ್ಲ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಬಳಿ ಅಗತ್ಯ ಮತ ಇಲ್ಲದಿದ್ದರೂ ರಾಜ್ಯ ಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿರುವಾಗ, ನಮ್ಮಲ್ಲಿ ಹೆಚ್ಚು ಮತಗಳಿಟ್ಟುಕೊಂಡು ಮೂರನೇ ಅಭ್ಯರ್ಥಿಯನ್ನು ಏಕೆ ಕಣಕ್ಕಿಳಿಸಬಾರದು ಎಂದು ಪ್ರಶ್ನಿಸಿದರು.

ಪಕ್ಷೇತರರು ಸ್ವಂತ ಕೆಲಸದ ಮೇಲೆ ಮುಂಬೈಗೆ ಹೋಗಿರಬಹುದು. ಎಸ್.ಟಿ. ಸೋಮಶೇಖರ್ ಗೂ ಮುಂಬೈನಲ್ಲಿ ಸ್ವಂತ ಕೆಲಸ ಇರಬಹುದು. ಶಾಸಕರ ಜತೆ ಅವರು ಹೋದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅನೈತಿಕ ರಾಜಕಾರಣದ ಬೀಜಾಂಕುರ ಮಾಡಿದ್ದೇ ಬಿಜೆಪಿ ಮತ್ತು ಜೆಡಿಎಸ್
ಎಂದರು.

ನಾವು ಪಲಾಯನ ಮಾಡುವುದಿಲ್ಲ; ಕುಮಾರಸ್ವಾಮಿ

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಲಾಯನ ಮಾಡುವುದಿಲ್ಲ. ಗೆಲ್ಲಲು ಎಲ್ಲ ಹೋರಾಟ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಆಭ್ಯರ್ಥಿಗಳ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ. ಯಡಿಯೂರಪ್ಪ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಒಳ ಒಪ್ಪಂದದ ಪ್ರಕಾರ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿರುವ ಪಕ್ಷೇತರರು ವಿಧಾನಪರಿಷತ್‍ನಲ್ಲಿ ಬಿಜೆಪಿ ಎರಡನೇ ಅಭ್ಯರ್ಥಿಗೆ ಮತ ಹಾಕಲಿದ್ದಾರೆ. ಇದರ ಜತೆಗೆ ಕಾಂಗ್ರೆಸ್ ಹೆಚ್ಚುವರಿ ಮತಗಳೂ ವರ್ಗಾವಣೆ ಆಗುತ್ತವೆ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂಚಕರಾಗಿ ಸಹಿ ಮಾಡಿದ ಪಕ್ಷೇತರರನ್ನು ಇದೀಗ ಕಾಂಗ್ರೆಸ್ ಸೆಳೆದುಕೊಂಡಿದೆ. ನಾಳೆ ಕಾಂಗ್ರೆಸ್ ಶಾಸಕರು ನಮಗೆ ಮತ ಹಾಕಬಹುದು. ಕಾಂಗ್ರೆಸ್‍ನವರು ಬಿಜೆಪಿಗೆ, ಬಿಜೆಪಿಯವರು ಕಾಂಗ್ರೆಸ್‍ಗೆ, ಮತ್ತೊಬ್ಬರು ಜೆಡಿಎಸ್‍ಗೆ – ಹೀಗೆ ಮತಗಳು ಚದುರಿ ಹೋಗುವುದು ಫಲಿತಾಂಶದ ನಂತರ ಗೊತ್ತಾಗುತ್ತದೆ. ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸದಿದ್ದರೆ ಪಕ್ಷೇತರರು ಹಾಗೂ ನಮ್ಮ ಪಕ್ಷದಲ್ಲಿ ಅಪಸ್ವರ ಎತ್ತಿರುವವರಿಗೆ ಡಿಮ್ಯಾಂಡ್ ಇರುತ್ತಿರಲಿಲ್ಲ. ಅವರನ್ನು  ಕೇಳೋರೇ ದಿಕ್ಕು ಇರುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.

ವಿಕಲಚೇತನರಿಗೆ ತರಬೇತಿ, ರಿಯಾಯತಿ ಬಡ್ಡಿದರದಲ್ಲಿ ಕೇಂದ್ರ ಸಾಲ

ವಿವಿಧ ಉದ್ದಿಮೆಗಳಲ್ಲಿ ತರಬೇತಿ ನೀಡಿ, ರಿಯಾಯ್ತಿ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ವಿಕಲಚೇತನರನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡುವ ಮಹತ್ವದ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಸಚಿವ ತಾವರ್‍ಚಂದ್ ಗೆಲ್ಹೋಟ್ ತಿಳಿಸಿದ್ದಾರೆ.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ವಿಕಲಚೇತನರಿಗೆ 17 ಉದ್ಯಮಗಳಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 3 ಸಾವಿರ ರುಪಾಯಿ ಭತ್ಯೆ ನೀಡಿ, ಅನಂತರ ಹಣಕಾಸು ಸಂಸ್ಥೆಗಳಿಂದ ಶೇ.4ರ ಬಡ್ಡಿ ದರದಲ್ಲಿ ಸಾಲ ಕೊಡಿಸಲಾಗುವುದು ಎಂದು ಬೆಂಗಳೂರಿನಲ್ಲಿ ಸೋಮವಾರ ನಡೆದ ನಾಲ್ಕನೇ ವಲಯ ಸಹಭಾಗಿತ್ವ ಸಮಿತಿ ಸಭೆಯಲ್ಲಿ ಹೇಳಿದರು.

ಈವರೆಗೂ ಪೋಷಕರ ಮೇಲೆ ಅವಲಂಬಿತರಾಗಿದ್ದ 46 ಸಾವಿರ ವಿಕಲಚೇತನರು ಇದೀಗ ಸ್ವಾಲಂಬಿಗಳಾಗಿ ತಮ್ಮ ಪೋಷಕರನ್ನೇ ನೋಡಿಕೊಳ್ಳುತ್ತಿದ್ದಾರೆ. ಐದು ವರ್ಷದೊಳಗಿನ ಕಿವುಡ ಮತ್ತು ಮೂಕ ಮಕ್ಕಳನ್ನು  ಕ್ಯಾಕುಲರ್ ಪ್ಲಾಂಟೇಷನ್ ಚಿಕಿತ್ಸೆ ಮೂಲಕ ಸರಿಪಡಿಸಬಹುದು. ಹೀಗಾಗಿ ಸಾರ್ವಜನಿಕರು ತಮ್ಮ ನೆರೆಹೊರೆಯ ಇಂತಹ ವಿಕಲಚೇತನ ಮಕ್ಕಳನ್ನು ಗುರುತಿಸಿ ಸಾಮಾಜಿಕ ನ್ಯಾಯ ಇಲಾಖೆ ನೆರವಿನ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದರು.

ಎನ್ಎಸ್ ಜಿ ಸದಸ್ಯತ್ವಕ್ಕೆ ನೆರವು ನೀಡ್ತಿವಿ ಅಂತೂ ಸ್ವಿಡ್ಜರ್ ಲೆಂಡ್

ಪರಮಾಣು ಪೂರೈಕೆ ಸಮೂಹದ ಸದಸ್ಯತ್ವಕ್ಕೆ ಭಾರತ ಸಲ್ಲಿಸಿರುವ ಅರ್ಜಿಯನ್ನು ಬೆಂಬಲಿಸುವುದಾಗಿ ಸ್ವಿಡ್ಜರ್ ಲೆಂಡ್ ಭರವಸೆ ನೀಡಿದೆ. ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕದಿಂದ ಸ್ವಿಡ್ಜರ್ ಲೆಂಡ್ ಗೆ ತೆರಳಿದರು. ಈ ವೇಳೆ ಮೋದಿ ಅವರನ್ನು ಸ್ವಾಗತಿಸಿದ ಸ್ವಿಸ್ ಕಾನ್ಫೆಡರೇಷನ್ ಅಧ್ಯಕ್ಷ ಜೊಹಾನ್ ಸ್ಕೈಂಡರ್ ಅಮ್ಮನ್ ಈ ಆಶ್ವಾಸನೆ ನೀಡಿದ್ದಾರೆ.

ಎನ್ಎಸ್ ಜಿ ಸದಸ್ಯತ್ವ ಪಡೆಯುವ ಪ್ರಯತ್ನದಲ್ಲಿರುವ ಭಾರತಕ್ಕೆ ನಮ್ಮ ಬೆಂಬಲವಿದೆ. ಈ ಗುಂಪಿಗೆ ಭಾರತವನ್ನು ಸ್ವಾಗತಿಸಲು ಇಚ್ಛಿಸುತ್ತೇವೆ ಎಂದರು ಜೊಹಾನ್. ಇದೇ ವೇಳೆ ತೆರಿಗೆ ವಂಚಿಸಿರುವ ಕಪ್ಪು ಹಣ ಕುರಿತ ತೀರ್ಮಾನದ ಬಗ್ಗೆ ಈ ಉಭಯ ನಾಯಕರು ಚರ್ಚೆ ನಡೆಸಿದರು.

ಸುಶೀಲ್ ಒಲಿಂಪಿಕ್ಸ್ ಕನಸು ಭಗ್ನ, ನರಸಿಂಗ್ ಪರ ತೀರ್ಪು ಕೊಟ್ಟ ದೆಹಲಿ ಹೈ ಕೋರ್ಟ್

ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯ 74 ಕೆ.ಜಿ ವಿಭಾಗದಲ್ಲಿ ನರಸಿಂಗ್ ಯಾದವ್ ಬದಲಾಗಿ ಭಾರತವನ್ನು ಪ್ರತಿನಿಧಿಸುವ ಸುಶೀಲ್ ಕುಮಾರ್ ಹೋರಾಟ ಅಂತ್ಯಗೊಂಡಿದೆ. ಭಾರತ ಪ್ರತಿನಿಧಿಸಲು ಮುಕ್ತ ಟ್ರಯಲ್ಸ್ ನಡೆಸಬೇಕೆಂದು ಸುಶೀಲ್ ಕುಮಾರ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ. ಈ ವಿಭಾಗದಲ್ಲಿ ಭಾರತದ ಅರ್ಹತೆ ಗಿಟ್ಟಿಸಿದ ನರಸಿಂಗ್ ಯಾದವ್ ಪ್ರತಿನಿಧಿಸುವುದೇ ಸೂಕ್ತ ಎಂದು ಘೋಷಿಸಿದೆ. ‘ಸುಶೀಲ್ ಕುಮಾರ್ ಅವರು ದೇಶಕ್ಕೆ ನೀಡಿರುವ ಕಾಣಿಕೆ ಅಪಾರ. ಆದರೆ, ಪ್ರಸ್ತುತ ವಿಷಯದಲ್ಲಿ ಭಾರತೀಯ ಬಾಕ್ಸಿಂಗ್ ಸಂಸ್ಥೆಯ ನಿರ್ಧಾರವನ್ನು ತಡೆಯಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ತಿಳಿಸಿದೆ. ಇದರೊಂದಿಗೆ ಸುಶೀಲ್ ಕುಮಾರ್ ಒಲಿಂಪಿಕ್ಸ್ ಕನಸು ಭಗ್ನಗೊಂಡಿದೆ.

Leave a Reply