ಪುಕ್ಕಟೆ ಸ್ಯಾಲರಿ ಬೇಡ ಅಂದ್ರು! ಬಿಟ್ಟಿ ಭಾಗ್ಯಕ್ಕೆ ಬಾಯಿಬಿಡೋರಿಗೆ ಆದರ್ಶವಾಗಬೇಕಿರೋ ಸ್ವಿಸ್ ಪ್ರಜೆಗಳ ನಡೆ

ಡಿಜಿಟಲ್ ಕನ್ನಡ ಟೀಮ್:

ಬಿಟ್ಟಿ ಸಿಕ್ರೆ ನಂಗೂ ಒಂದಿರಲಿ, ನಮ್ಮಪ್ಪಂಗೂ ಒಂದಿರಲಿ ಅನ್ನೋ ಜಾಯಮಾನದವರೇ ಹೆಚ್ಚು ಎಲ್ಲಕಡೆ. ಆದರೆ, ಈ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಂಡು ಆದರ್ಶ ಮೆರೆೆದಿದ್ದಾರೆ ಸ್ವಿಜರ್ಲೆಂಡ್ ಪ್ರಜೆಗಳು. ಅದೇಗೆ ಅಂದ್ರೆ, ಹೆಚ್ಚುತ್ತಿರುವ ಯಂತ್ರಗಳ ಬಳಕೆಯಿಂದ ನಿರುದ್ಯೋಗ ಸೃಷ್ಟಿ ಆಗಬಹುದಾದ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ವೇತನ ನೀಡುವ ಸರಕಾರದ ಪ್ರಸ್ತಾವವನ್ನು ಅಲ್ಲಿನ ಪ್ರಜೆಗಳು ಜನಮತದೊಂದಿಗೆ ತಿರಸ್ಕರಿಸಿದ್ದಾರೆ.

ದೇಶದ ಪ್ರತಿ ಕ್ಷೇತ್ರದಲ್ಲಿ ರೊಬೋಟ್ ಹಾಗೂ ಯಂತ್ರಗಳ ಬಳಕೆ ಹೆಚ್ಚುತ್ತಿವೆ. ಪರಿಣಾಮ ಮನುಷ್ಯನ ಕೆಲಸಗಳನ್ನು ರೊಬೋಟ್ ಗಳು ತಿನ್ನುತ್ತಿವೆ. ಇದರಿಂದ ಭವಿಷ್ಯದಲ್ಲಿ ಉದ್ಯೋಗ ಸಮಸ್ಯೆಯ ಆತಂಕ ಸೃಷ್ಠಿಯಾಗಿದೆ. ಈ ಪರಿಸ್ಥಿತಿಯಲ್ಲಿ ದೇಶದ ಜನರ ಸುರಕ್ಷತೆಗೆ ಕನಿಷ್ಠ ವೇತನ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿತ್ತು.

ಕೆಲಸ ಮಾಡದಿದ್ದರೂ ಪ್ರಜೆಗಳಿಗೆ ಸಾಮಾನ್ಯ ಸಂಬಳ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಪ್ರಕಾರ ಪ್ರತಿ ಪ್ರಜೆಗೆ ತಿಂಗಳಿಗೆ ಕನಿಷ್ಠ 2500 ಫ್ರ್ಯಾಂಕ್ಸ್ (₹ 1.71 ಲಕ್ಷ), ಮಕ್ಕಳಿಗೆ 625 ಫ್ರ್ಯಾಂಕ್ಸ್ (₹ 42,804) ವೇತನ ನೀಡಲು ಪ್ರಸ್ತಾಪಿಸಲಾಗಿತ್ತು.

ಕಡಿಮೆ ಜನಸಂಖ್ಯೆ ಇರುವ ಈ ದೇಶದಲ್ಲಿ ಪ್ರಮುಖ ವಿಷಯಗಳ ಸಂಬಂಧ ಜನಮತ ಗಣನೆ ಮೂಲಕ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ. ಈ ವಿಷಯದ ಬಗ್ಗೆ ಭಾನುವಾರ ನಡೆದ ಜನಮತದಲ್ಲಿ ಶೇ. 79.9 ರಷ್ಟು ಪ್ರಜೆಗಳು ಈ ಪ್ರಸ್ತಾವನೆ ವಿರೋಧಿಸಿದ್ದಾರೆ. ಉಳಿದವರು ಸಮ್ಮತಿ ಸೂಚಿಸಿದ್ದಾರೆ. ಈ ನಿರ್ಧಾರದಿಂದ ದೇಶದ ಆರ್ಥಿಕತೆಗೆ ಸಾಕಷ್ಟು ಪೆಟ್ಟು ಬೀಳಲಿದೆ. ದುಡಿಮೆ ಹಾಗೂ ಆದಾಯದ ನಡುವೆ ಸಂಪರ್ಕ ಕಡಿದು ಹೋದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಹೀಗಾಗಿ ಈ ಯೋಜನೆ ಬೇಡ ಎಂದು ಪ್ರಸ್ತಾವನೆ ತಿರಸ್ಕರಿಸಿರುವ ಅಲ್ಲಿನ ಪ್ರಜೆಗಳ ಪ್ರಬುದ್ಧತೆ ಮತ್ತು ಆದರ್ಶ ಇತರರಿಗೂ ಅನುಕರಣೀಯ.

ಅದರಲ್ಲೂ ಬಿಟ್ಟಿಭಾಗ್ಯ, ಯೋಜನೆಗಳ ಮೂಲಕ ಜನರನ್ನು ಸೋಮಾರಿ ಮಾಡಿ, ದುಡಿಯುವ ಅವರ ಕೈಗಳನ್ನು ಕಟ್ಟಿ ಹಾಕುವ ಭಾರತದ ಅನೇಕ ರಾಜ್ಯ ಸರಕಾರಗಳು ಕೇವಲ ಮತಬ್ಯಾಂಕ್ ರಕ್ಷಣೆಗಾಗಿ ಅವುಗಳು ಕೊಡುವ ಪುಗಸಟ್ಟೆ ಭಾಗ್ಯಕ್ಕೆ ಹಾತೊರೆಯುವ ಮನಸುಗಳು ಒಮ್ಮೆ ಸ್ವಿಜರ್ಲೆಂಡ್ ಪ್ರಜೆಗಳ ನಿಲುವನ್ನು ನೋಡಿ ಕಲಿಯಬೇಕು.

Leave a Reply