ಸಿಹಿಸುದ್ದಿ, ಎರಡು ಮೂರು ದಿನಗಳಲ್ಲಿ ಮುಂಗಾರು ಪ್ರವೇಶ ಅಂದಿದೆ ಹವಾಮಾನ ಇಲಾಖೆ

ಡಿಜಿಟಲ್ ಕನ್ನಡ ಟೀಮ್

ಇಡೀ ದೇಶ ಕಾಯುತ್ತಿರುವ ಮುಂಗಾರು ಇನ್ನೆರಡು ದಿನಗಳಲ್ಲಿ ಕೇರಳ ಮೂಲಕ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ.

ಸಾಮಾನ್ಯವಾಗಿ ನೈರುತ್ಯ ಭಾಗದಲ್ಲಿ ಕೇರಳ ಮುಖೇನ ಮುಂಗಾರಿನ ಪ್ರವೇಶ ಆಗುತ್ತದೆ. ಎರಡು ಮೂರು ದಿನಗಳಲ್ಲಿ ಪ್ರವೇಶವಾಗಲಿದ್ದು, ಜೂ. 10ರ ವೇಳೆಗೆ 2.5 ಎಂಎಂ ಮಳೆ ದಾಖಲಾಗುವ ನಿರೀಕ್ಷೆ ಇದೆ. ಜೂನ್ 15 ರ ವೇಳೆಗೆ ದೇಶಾದ್ಯಂತ ಮಾನ್ಸೂನ್ ಆವರಿಸಲಿದೆ ಎಂದು ಇಲಾಖೆ ತಿಳಿಸಿದೆ.

ದೇಶದ ಇತರೆ ಭಾಗಗಳಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆಯಾಗಿರುವ ಬಗ್ಗೆ ಸ್ಕೈಮೇಟ್ ವರದಿ ಮಾಡಿದೆ. ಬಿಹಾರ, ಜಾರ್ಖಂಡ್, ಅಸ್ಸಾಂ, ಮೇಘಾಲಯ, ಛತ್ತೀಸ್ ಗಢ ಮತ್ತಿತರ ರಾಜ್ಯಗಳಲ್ಲಿ ಮಳೆಯ ಸಿಂಚನ ಆಗಿದೆ. ಮಾನ್ಸೂನ್ ಆಗಮನಕ್ಕೆ ಮುನ್ನ ವಾತಾವರಣದಲ್ಲಿ ತೇವಾಂಶ ಹೆಚ್ಚಿ ಕೆಲ ಪ್ರದೇಶಗಳಲ್ಲಿ ಮೋಡಗಟ್ಟಿ ಮಳೆಯಾಗುತ್ತದೆ. ಈ ಪ್ರದೇಶಗಳಲ್ಲಿ ಆಗಿರುವುದು ಅದೇ.

ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿ ಮಳೆಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ಮುಂದುವರಿಯಲಿದೆ. ಆಂಧ್ರಪ್ರದೇಶದ ಕಡಲ ತೀರ ಪ್ರದೇಶಕ್ಕೂ ತಲುಪಲಿದೆ. ಈ ಬಾರಿ ಜೂನ್ ಎರಡನೇ ವಾರ ಅಂದರೆ ತಡವಾಗಿ ಮುಂಗಾರು ಪ್ರವೇಶಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗುತ್ತದೆ ಎಂದು ವರದಿ ತಿಳಿಸಿದೆ.

Leave a Reply