$100 ಮಿಲಿಯನ್ ಮೌಲ್ಯದ ಸಾಂಸ್ಕೃತಿಕ ಸಂಪತ್ತನ್ನು ಹಿಂತಿರುಗಿಸಿತು ಅಮೆರಿಕ, ಈ ಸಂದರ್ಭದಲ್ಲಿ ಮೋದಿ ಹೇಳಿದ ಮಿನಿಸ್ಕರ್ಟ್ ಕತೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರಿಗೆ ಅಲ್ಲಿನ ಆಡಳಿತ ಭಾರತಕ್ಕೆ ಸೇರಿದ್ದ 200 ಸಾಂಸ್ಕೃತಿಕ ಕಲಾಕುಸುರಿಗಳನ್ನು ಹಿಂತಿರುಗಿಸಿದೆ. ಧಾರ್ಮಿಕ ವಿಗ್ರಹಗಳು, ಕಂಚು ಮತ್ತು ಟೆರ್ರಾ ಕೊಟ್ಟಾದಲ್ಲಿ ಅರಳಿಸಿರುವ ಶಿಲ್ಪಗಳು ಇವನ್ನೆಲ್ಲ ಒಳಗೊಂಡ ಈ ಸಂಪತ್ತುಗಳು ಸುಮಾರು 2000 ವರ್ಷಗಳಿಗೂ ಹಿಂದಿನದಾಗಿದ್ದು ಇವತ್ತಿಗೆ 100 ಮಿಲಿಯನ್ ಡಾಲರ್ ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿದೆ.

ಇವನ್ನೆಲ್ಲ ಭಾರತಕ್ಕೆ ಹಿದಿರುಗಿಸಿದ ಅಮೆರಿಕಕ್ಕೆ ಧನ್ಯವಾದ ಹೇಳುತ್ತ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಮಾತುಗಳು ಗಮನಾರ್ಹ. ‘ವ್ಯಾಪಾರ ಮಾಡುವವರಿಗೆ ಇದು ಅರಬ್ ಡಾಲರುಗಳಲ್ಲಿ ಅಳೆಯುವ ಸರಕಾಗಿರಬಹುದು. ಆದರೆ ನಮಗೆ ಇವು ನಮ್ಮ ಪಾಲಿಗೆ ನಮ್ಮ ಸಾಂಸ್ಕೃತಿಕ ಗುರುತು ಹಾಗೂ ಭವ್ಯ ಇತಿಹಾಸವನ್ನು ಸಾರುವಂಥವುಗಳು. ಇಂದು ನಾವು ಸ್ಕರ್ಟ್ ಧರಿಸಿ ಕೈಯಲ್ಲಿ ಪರ್ಸ್ ಹಿಡಿದ ಆಧುನಿಕ ಮಹಿಳೆಯನ್ನು ಕಾಣುತ್ತೇವೆ. ಆದರೆ 2000 ವರ್ಷಗಳ ಹಿಂದೆಯೇ ಕೋನಾರ್ಕದ ದೇವಾಲಯ ಆವರಣದಲ್ಲಿ ಅಂಥದೊಂದು ಚಿತ್ರವನ್ನು ನಮ್ಮ ಶಿಲ್ಪಿಗಳು ಕಲ್ಲಿನಲ್ಲಿ ನಿರ್ಮಿಸಿದ್ದರು’ ಎನ್ನುವ ಮೂಲಕ ಉದಾರವಾದಿ ಅಮೆರಿಕ ನೆಲದಲ್ಲಿ ನಿಂತು, ನರೇಂದ್ರ ಮೋದಿಯವರು ಭಾರತವೂ ಬಹಳ ಮುಂಚೆಯೇ ಮಾಡರ್ನ್ ಆಗಿತ್ತು ಎಂದು ಸಾರಿದಂತಿತ್ತು.

ಇನ್ನು ಅಮೆರಿಕವು ಭಾರತಕ್ಕೆ ಹಿಂತಿರುಗಿಸಿರುವ ಈ ಸಾಂಸ್ಕೃತಿಕ ಸಂಪತ್ತು ನಿಜಕ್ಕೂ ಅಮೂಲ್ಯವೇ. ಇದರಲ್ಲಿ ಸಾವಿರ ವರ್ಷ ಹಳೆಯದೆಂದು ಅಂದಾಜಿಸಲಾದ ಗಣೇಶನ ವಿಗ್ರಹ ಇದೆ. 850 ಎ.ಡಿ ಕಾಲಮಾನಕ್ಕೆ ಸೇರಿದ ಚೋಳರ ಕಾಲದ ಸಂತಕವಿಯ ವಿಗ್ರಹವಿದೆ. ಇದನ್ನು ಚೆನ್ನೈನ ಶಿವ ದೇವಾಲಯದಿಂದ ಕದಿಯಲಾಗಿತ್ತು.

modi artifacts

ಹೌದು.. ಇವೆಲ್ಲ ಅಮೆರಿಕ ತಲುಪಿದ್ದು ಹೇಗೆ?

ಈ ವಿಷಯ ಗಮನಿಸಿದ್ದೇ ಆದರೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಪುರಾತನ ವಸ್ತುಗಳ ಕಳ್ಳಸಾಗಾಣಿಕೆ ಮಾಫಿಯಾ ಬಗ್ಗೆ ಅರಿವು ಮೂಡುತ್ತದೆ. 2007ರಲ್ಲಿ ಅಮೆರಿಕದ ‘ಹೋಮ್ ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್’ ನಡೆಸಿದ ‘ಆಪರೇಷನ್ ಹಿಡನ್ ಐಡಲ್’ ಕಾರ್ಯಾಚರಣೆಯಲ್ಲಿ ಸಿಕ್ಕ ಸಂಪತ್ತು ಇದು. ಭಾರತದಿಂದ ಅಮೆರಿಕಕ್ಕೆ ಬರುತ್ತಿರುವ ಹಡಗಿನಲ್ಲಿ ಶಂಕಾಸ್ಪದ ವಸ್ತುಗಳಿವೆ ಎಂಬ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಪುರಾತನ ವಸ್ತುಗಳ ಕಳ್ಳಸಾಗಣೆ ಬಯಲಾಯಿತು. ಈ ವಸ್ತುಗಳನ್ನು ಅಲ್ಲಿಗೆ ತರಿಸಿಕೊಂಡಿದ್ದವ ಆರ್ಟ್ ಆಫ್ ದಿ ಪಾಸ್ಟ್ ಗ್ಯಾಲರಿಯ ಮಾಲಿಕ ಸುಭಾಷ್ ಕಪೂರ್. ಈತನ ವಿರುದ್ಧ ಚೆನ್ನೈನಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಅಕ್ರಮ ಆಸ್ತಿಗಳಲ್ಲಿ ಕೆಲವನ್ನು ಗೊತ್ತಿಲ್ಲದೇ ಖರೀದಿಸಿದ್ದ ಹೊನಲುಲು ವಸ್ತುಸಂಗ್ರಹಾಲಯ ಹಾಗೂ ‘ಪೀಬಾಡಿ ಎಸ್ಸೆಕ್ಸ್’ ಸಹ ಭಾರತಕ್ಕೆ ಸೇರಿದ ಕಲಾಕೃತಿಗಳನ್ನು ಹಿಂತಿರುಗಿಸಿವೆ.

ಹಾಗೆಂದೇ ಮೋದಿ ಈ ಬಗ್ಗೆ ಒಬಾಮಾ ಆಡಳಿತಕ್ಕೆ ಭಾರತದ ಪರ ಕೃತಜ್ಞತೆ ಸಲ್ಲಿಸಿದ್ದಾರೆ.

ಕೊಲಂಬಿಯಾದ ಸ್ಪೇಷ್ ಶಟಲ್ ಸ್ಮಾರಕಕ್ಕೆ ಭೇಟಿ ನೀಡಿ ದಿವಂಗತ ಬಾಹ್ಯಾಕಾಶ ತಾರೆ ಕಲ್ಪನಾ ಚಾವ್ಲಾರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಇದೇ ಸಂದರ್ಭದಲ್ಲಿ ಚಾವ್ಲಾರ ಕುಟುಂಬವನ್ನೂ ಭೇಟಿ ಮಾಡಿದರು. ಚಾವ್ಲಾ ಪತಿ, ಸಹೋದರಿ ಹಾಗೂ ತಂದೆ ಜತೆ ಕುಶಲೋಪರಿ ನಡೆಸಿದರು. ಮಾತುಕತೆ ವೇಳೆ ಗುಜರಾತಿ ರಿವಾಜಿನಲ್ಲಿಯೇ ತಮ್ಮನ್ನು ದೀಪಕ್ ಭಾಯ್ ಎಂದು ಪ್ರಧಾನಿ ಸಂಬೋಧಿಸಿದ್ದು ಕಲ್ಪನಾರ ತಂದೆಗೆ ಎಲ್ಲಿಲ್ಲದ ಖುಷಿ ತಂದಿತ್ತು. ಅದನ್ನವರು ಮಾಧ್ಯಮಗಳ ಮುಂಚೆ ಹಂಚಿಕೊಂಡರು.

modi america1

Leave a Reply