ಡಿಜಿಟಲ್ ಕನ್ನಡ ಟೀಮ್:
ರಾಜಕೀಯ ಒತ್ತಡದಿಂದಲೇ ತಾವು ರಾಜೀನಾಮೆ ಕೊಡಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂಬುದನ್ನು ಸಾಮಾಜಿಕ ತಾಣದ ಮೂಲಕ ಡಿವೈಎಸ್ಪಿ ಅನುಪಮಾ ಶೆಣೈ ಸ್ಪಷ್ಟಪಡಿಸಿದ್ದಾರೆ.
– ಮತದಾನ ಏನನ್ನಾದರೂ ಬದಲಾಯಿಸುವಂತಿದ್ದರೆ ಇವರು ಅದನ್ನೇ ಕಾನೂನು ಬಾಹಿರ ಎಂದು ಸಾರಿಬಿಡುತ್ತಿದ್ದರು.
– ನೀವು ಯಾವತ್ತಾದರೂ ತಲೆತಗ್ಗಿಸುವುದಿದ್ದರೆ ಅದು ನಿಮ್ಮ ಶೂವನ್ನು ಪ್ರಶಂಸಿಸೋದಕ್ಕೆ ಮಾತ್ರವಾಗಿರಬೇಕು.
-ಅನ್ಯಾಯವೇ ಕಾಯ್ದೆ ಆದಾಗ ಬಂಡಾಯ ಕರ್ತವ್ಯವಾಗುತ್ತದೆ.
ಇತ್ಯಾದಿ ಫೇಸ್ಬುಕ್ ಸ್ಟೇಟಸ್ ಗಳ ಮೂಲಕ ಶೆಣೈ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಸಾವಿರಾರು ಮಂದಿ ಈ ವಿಷಯದಲ್ಲಿ ಶೆಣೈ ಅವರನ್ನು ಬೆಬಲಿಸಿ ಸರ್ಕಾರವನ್ನು ದೂರುತ್ತಿದ್ದಾರೆ.
ಇನ್ನೊಂದೆಡೆ, ಪಿ. ಟಿ ಪರಮೇಶ್ವರ ನಾಯಕ್ ಅವರಿಗೆ ಶೆಣೈ ತಮ್ಮ ಪೋಸ್ಟಿಂಗ್ ಗಳ ಮೂಲಕ ರಾಜಿನಾಮೆಗೆ ಒತ್ತಾಯಿಸಿರುವುದಾಗಿಯೂ ವರದಿಗಳಿವೆ. ಇಲ್ಲದಿದ್ದರೆ ಆಡಿಯೋ ಸಂಭಾಷಣೆಯೊಂದನ್ನು ಬಯಲಿಗೆಳೆಯುವುದಾಗಿ ಹೇಳಿರುವುದಾಗಿ ಟಿವಿ ವರದಿಗಳು ಹೇಳುತ್ತಿವೆ.
ಚಿಕ್ಕಮಗಳೂರಿನ ಹೋಟೆಲ್ ಒಂದರಲ್ಲಿ ತಂಗಿದ್ದ ಪರಮೇಶ್ವರ್ ನಾಯಕ್, ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಮುಖಕ್ಕೆ ಪೇಪರ್ ಮುಚ್ಚಿಕೊಂಡು ವಾಹನದಲ್ಲಿ ನಿರ್ಗಮಿಸುತ್ತಿರುವ ದೃಶ್ಯಾವಳಿಗಳನ್ನೂ ಕೆಲವು ಕನ್ನಡ ಸುದ್ದಿವಾಹಿನಿಗಳು ತೋರಿಸಿವೆ. ‘ಅನುಪಮಾ ಶೆಣೈ ಫೇಸ್ಬುಕ್ ಬರಹಗಳ ಬಗ್ಗೆ ತಮಗೆ ಗೊತ್ತೇ ಇಲ್ಲ’ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವು. ಸದ್ಯಕ್ಕೆ ಶೆಣೈ ರಾಜಿನಾಮೆ ಸ್ವೀಕೃತವಾಗಿಲ್ಲ.
ಈ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ಜನ ಸಾಮಾಜಿಕ ತಾಣಗಳಲ್ಲಿ ಕಟುವಾಗಿ ಪ್ರಶ್ನೆಗೆ ಒಳಪಡಿಸುತ್ತಿದ್ದಾರೆ. ಈ ಹಿಂದಿನ ಡಿ. ಕೆ ರವಿ, ಪಿ ಎಸ್ ಐ ಬಂಡೆ ಪ್ರಕರಣಗಳನ್ನೆಲ್ಲ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಳ್ಳೋದು, ಸಾಯುವುದು ಇಲ್ಲವೇ ರಾಜಿನಾಮೆ ಕೊಡೋದೆ ನಿಷ್ಠ ಅಧಿಕಾರಿಗಳಿಗಿರುವ ಮಾರ್ಗವೇ ಎಂಬ ಪ್ರಶ್ನೆಗಳು ತೂರಿಬಂದಿವೆ. ಮಾತೆತ್ತಿದರೆ ಅಂಬೇಡ್ಕರ್ ಎನ್ನುವವರು ಅಂಬೇಡ್ಕರ್ ಭವನಕ್ಕೆ ದಾರಿ ಮಾಡಿಕೊಡುವಲ್ಲಿ ಯತ್ನಿಸುತ್ತಿದ್ದಾಗಲೇ ಸಂಕಷ್ಟಕ್ಕೆ ಗುರಿಯಾದ ಅನುಪಮಾರ ಸಹಾಯಕ್ಕೆ ಬರುತ್ತಿಲ್ಲವೇಕೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.