ಫೇಸ್ಬುಕ್ ಯಜಮಾನ ಜುಕರ್ಬರ್ಗ್ ಖಾತೆಗಳಿಗೇ ಕನ್ನ, ನಾವು ನೀವೆಲ್ಲ ಒಂದ್ ಲೆಕ್ಕಾನಾ?

ಡಿಜಿಟಲ್ ಕನ್ನಡ ಟೀಮ್:

ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಕಂಪನಿ ಮುನ್ನಡೆಸುತ್ತಿರುವ ಮಾರ್ಕ್ ಜುಕರ್ಬರ್ಗ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಅಗ್ದೀ ಜಾಣರಾಗಿರುತ್ತಾರೆ ಎಂದುಕೊಂಡಿದ್ದರೆ, ಹಾಗೇನಿಲ್ಲ ಅಂತ ಶಾಕ್ ಕೊಡುವಂತೆ ಅವರ ಪಿಂಟರೆಸ್ಟ್, ಟ್ವಿಟ್ಟರ್ ಮತ್ತು ಲಿಂಕ್ಡ್ ಇನ್ ಖಾತೆಗಳ ಪಾಸ್ವರ್ಡ್ ಗಳಿಗೆ ಖನ್ನ ಬಿದ್ದಿರೋದು ವರದಿಯಾಗಿದೆ!

‘ಅವರ್ ಮೈನ್’ ಎಂಬ ಜಾಲಕನ್ನದ ಗುಂಪು ಈ ಕೆಲಸ ಮಾಡಿದ್ದು, ಯಾವುದೇ ಕೋಲಾಹಲ ಸೃಷ್ಟಿಸುವ ಉದ್ದೇಶವೇನೂ ಇವರಿಗಿದೆ ಇದ್ದಂತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ‘ನಿಮ್ಮ ಟ್ವಿಟ್ಟರ್, ಪಿಂಟರೆಸ್ಟ್ ಖಾತೆಯೊಳಕ್ಕೆ ನಮಗೆ ಸಂಪರ್ಕ ಸಿಕ್ಕಿದೆ. ನಾವು ಸುರಕ್ಷತೆ ಪರೀಕ್ಷಿಸುತ್ತಿದ್ದೆವಷ್ಟೆ. ದಯವಿಟ್ಟು ಡಿಎಂ (ನೇರ ಸಂದೇಶ) ಮಾಡಿ’ ಎಂದು ಜುಕರ್ಬರ್ಗ್ ಉದ್ದೇಶಿಸಿ ಹೇಳಲಾಗಿದೆ.

ಜುಕರ್ಬರ್ಗ್ ಅವರ ಫೇಸ್ಬುಕ್, ಇನ್ಸ್ತಾಗ್ರಾಂ ಖಾತೆಗಳೆಲ್ಲ ಭದ್ರ. ಈಗ ವಿಶ್ಲೇಷಣೆಗೊಳಗಾಗುತ್ತಿರುವಂತೆ ಜುಕರ್ಬರ್ಗ್ ಸಹ ನಾವೆಲ್ಲ ಮಾಡುವ ಪ್ರಮಾದವನ್ನೇ ಮಾಡಿದ್ದರು. ಅದೆಂದರೆ ಕಳ್ಳತನವಾಗಿರೋ ಎಲ್ಲ ಖಾತೆಗಳಿಗೆ ಒಂದೇ ಪಾಸ್ವರ್ಡ್ ಬಳಸುತ್ತಿದ್ದದ್ದು. ಹೀಗಾಗಿ ಒಂದನ್ನು ತಿಳಿದುಕೊಂಡಿದ್ದೇ ಉಳಿದೆಲ್ಲವುಗಳ ಕೀಲಿಕೈ ಸಿಕ್ಕಂತಾಗಿದೆ.

ಲಿಂಕ್ಡ್ ಇನ್ ಬಗ್ಗೆ ಹೇಳುವುದಾರೆ ಅದು ತೀರ ಇತ್ತೀಚೆಗೆ ಹಾಗೂ 2012ರಲ್ಲಿ ಭಾರಿ ಮಟ್ಟದ ಪಾಸ್ವರ್ಡ್ ಕಳ್ಳತನಕ್ಕೆ ಒಳಗಾಗಿತ್ತು. ಸದಸ್ಯರನ್ನು ಫೋನ್ ಮೂಲಕ ಸಂಪರ್ಕಿಸಿ ಅವನ್ನೆಲ್ಲ ಸರಿ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ.

ಬಿಡಿ, ಇಂಥ ತಂತ್ರಜ್ಞಾನ ದೈತ್ಯರಿಗೆ ಇಂಥ ಸವಾಲು ಎದುರಾದಾಗ ಅವರು ಪರಿಣತರಿಂದ ತಕ್ಷಣ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಆದರೆ, ಸಾಮಾನ್ಯರ ಮಾಹಿತಿಗಳು ಇ ಮೇಲ್ ಗಳಿಂದಲೋ, ಆನ್ ಲೈನ್ ಬ್ಯಾಂಕ್ ವ್ಯವಹಾರದಿಂದಲೋ ಜಾಲಕಳ್ಳರಿಗೆ ಸಿಗುವಂತಾದರೆ ಬದುಕನ್ನೇ ಕದಡಿಬಿಡಬಲ್ಲದು. ನಮ್ಮ ನಡುವೆ ಡಾಟಾ ಕ್ರಾಂತಿ ಆಗುತ್ತಲೇ ಕಾಡುತ್ತಿರುವ ಆತಂಕ ಇದಾಗಿದೆ. ಫೇಸ್ಬುಕ್ ಮುಖ್ಯಸ್ಥನ ಸಾಮಾಜಿಕ ತಾಣಗಳ ಖಾತೆಗೇ ಕನ್ನ ಹಾಕಬಹುದಾದರೆ ಈ ಜಾಲಕಳ್ಳರಿಗೆ ನಾವೆಲ್ಲ ಯಾವ ಲೆಕ್ಕ ಅಲ್ವಾ?

Leave a Reply