ಅಧಿಕಾರಿಗಳ ಸಭೆಯಲ್ಲಿ ಸಿಎಂ ಗರಂ, ಇತ್ತ ಶೆಣೈ ವಿಷಯಕ್ಕೆ ಕಾಗೋಡು ಸಿಡಿಮಿಡಿ, ‘ಉಡ್ತಾ ಪಂಜಾಬ್’ ಹತ್ತಿಕ್ಕುವ ಸೆನ್ಸಾರ್ ಕ್ರಮಕ್ಕೆ ವ್ಯಾಪಕ ಆಕ್ರೋಶ, ರೇಟ್ ಇಳಿಸದ ರಾಜನ್ ನಿವೃತ್ತಿ ಬಗ್ಗೆ ಏನಂದ್ರು?

 

ಡಿಜಿಟಲ್ ಕನ್ನಡ ಟೀಮ್:

  • ಮೈಸೂರು ಮಹಾರಾಣಿ ಕಾಲೇಜು ವಸತಿ ನಿಲಯದ ಅವ್ಯವಸ್ಥೆಗೆ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೂರು ವರ್ಷಗಳಿಂದ ಅಲ್ಲಿ ಊಟಕ್ಕೆ ಹಣ ಪಡೆಯಲಾಗುತ್ತಿದೆ. ಮೂಲಭೂತ ಸೌಕರ್ಯ ಇಲ್ಲದೇ ಒಂದು ಕೊಠಡಿಯಲ್ಲಿ 10 ರಿಂದ 12 ವಿದ್ಯಾರ್ಥಿಗಳು ಇದ್ದಾರೆ. ಇಷ್ಟಾದರೂ ಒಬ್ಬೇ ಒಬ್ಬ ಅಧಿಕಾರಿ ಹೋಗಿ ನೋಡಿಲ್ಲ ಎಂದರೆ ಸರ್ಕಾರ ಮತ್ತು ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಅಲ್ಲದೇ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಉದ್ದೇಶಿಸಿ ನಿವೇ ಖುದ್ದಾಗಿ ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಆದೇಶಿಸಿದರು. ಮೂರು ವರ್ಷದಿಂದ ಯಾವ ವಿದ್ಯಾರ್ಥಿಗಳು ಹಣ ಪಾವತಿಸಿ ಸೌಲಭ್ಯ ಪಡೆದಿದ್ದರೂ ಅಷ್ಟೂ ಹಣ ಹಿಂತಿರುಗಿಸಬೇಕು ಎಂದು ತಾಕೀತು ಮಾಡಿದರು.

ಅಲ್ಲಿನ್ನೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಲ್ಲ ಎಂಬುದು ಗಮನಕ್ಕೆ ಬರುತ್ತಲೇ ಕೆಂಡಾಮಂಡಲವಾದ ಸಿಎಂ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ನಡುವೆ ಹೊಂದಾಣಿಕೆ ಇಲ್ಲ ಎಂದು ಸಿಡಿಮಿಡಿಗೊಂಡರು.

ಇದು ಮೈಸೂರು ಮಹಾರಾಣಿ ಕಾಲೇಜು ವಿಷಯದಲ್ಲಿ ಆಡಿದ ಮಾತುಗಳಾದರೆ, ಉಳಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಒಂದುಹಂತದ ಕ್ಲಾಸ್ ತೆಗೆದುಕೊಂಡಿದ್ದು ನಿಚ್ಚಳವಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕಾದ ಜವಾಬ್ದಾರಿಯನ್ನು ಉಸ್ತುವಾರಿ ಕಾರ್ಯದರ್ಶಿಗಳು ಹೊರಬೇಕು.

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರ್ಕಾರದ ಮಾನ ಉಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದ್ದಾರೆ. ‘ಪ್ರಮುಖವಾಗಿ ಕೃಷಿ, ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ಹೊಣೆಗಾರಿಕೆ ನಿಭಾಯಿಸದಿದ್ದರೆ  ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಎಂಬ ಗ್ರಹಿಕೆ ತೊಲಗದಿದ್ದರೆ ನಮ್ಮ ಸರ್ಕಾರ ಯಾವ ಭಾಗ್ಯ ಕೊಟ್ಟರೂ ಏನೂ ಪ್ರಯೋಜನವಾಗದು. ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಯಾವ ರೀತಿಯ ಕೆಲಸ ಕಾರ್ಯ ನಡೆಯುತ್ತಿದೆ ಎಂಬುದರ ಬಗ್ಗೆ ಆಗ್ಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಕು. ತಪ್ಪುಗಳು, ವಿಳಂಬ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿ ಕೊಂಡೊಯ್ಯದ ಮತ್ತು ಮಧ್ಯವರ್ತಿಗಳಿಗೆ ಪ್ರೋತ್ಸಾಹ ನೀಡುವಂತಹ ತಹಸೀಲ್ದಾರ್ ಸೇರಿ ಯಾವುದೇ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ. ಅವರಿಗೂ ಭಯ ಬರುತ್ತದೆ. ಕೆಲಸ ಕಾರ್ಯಗಳ ಪ್ರಗತಿ ಬಗ್ಗೆ ಜನರ ಜತೆಯೇ ಮಾತಾಡಿ’ ಎಂಬ ನಿರ್ದೇಶನಗಳು ಮುಖ್ಯಮಂತ್ರಿಯವರಿಂದ ಬಂದವು.

 

  • ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂಭಟ್ ಹೆಸರು ಶಿಫಾರಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮದ ಬಗ್ಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಎಸ್‍ಸಿ ಸಂಸ್ಥೆ ಹಾಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ಹುದ್ದೆಯಲ್ಲ. ಅಲ್ಲಿಗೆ ಹೋಗಬೇಕಾದವರೇ ಬೇರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ ಅನುಪಮಾ ಶೆಣೈ ರಾಜೀನಾಮೆ ಪ್ರಕರಣದಲ್ಲಿ ಮಾತ್ರ ಅಧಿಕಾರಿಯ ವರ್ತನೆ ಬಗ್ಗೆಯೇ ಕಾಗೋಡು ಕಿಡಿ ಕಾರಿದ್ದಾರೆ. ‘ಸರ್ಕಾರ ಎಂದರೆ ಒಂದು ವ್ಯವಸ್ಥೆ. ಆ ವ್ಯವಸ್ಥೆ ವಿರುದ್ಧ ಹೋಗಬಾರದು. ಒಬ್ಬ ಅಧಿಕಾರಿಯಾಗಿ ಅವರದೇ ವ್ಯಾಪ್ತಿ ಇರುತ್ತದೆ. ಬಾಯಿಗೆ ಬಂದಂತೆ ಮಾತನಾಡಬಾರದು. ರಮ್ ಸರ್ಕಾರ ಎಂತೆಲ್ಲಾ ಮಾತನಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ.’ ಎಂಬುದವರ ಪ್ರತಿಕ್ರಿಯೆ.

ಶಾಸಕರ ರೆಸಾರ್ಟ್ ರಾಜಕಾರಣಕ್ಕೆ ಜನರೇ ಬುದ್ಧ ಕಲಿಸಬೇಕಷ್ಟೆ ಎಂದರು ಕಾಗೋಡು.

 

  • ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟು ಹಾಗೂ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಕಾಮೆಡ್‍ಕೆ ಜೊತೆ ಒಂದು ಹಂತದ ಸಭೆ ನಡೆಸಲಾಗಿದ್ದು, ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯವನ್ನು ಕೇಳಲಾಗಿದೆ. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ.

 

  • ಮಂಗಳವಾರವಿಡೀ ಉಡ್ತಾ ಪಂಜಾಬ್ ವಿರುದ್ಧ ಸೆನ್ಸಾರ್ ಮಂಡಳಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಚಿತ್ರಪ್ರೇಮಿಗಳು, ಚಿಂತಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಉಡ್ತಾ ಪಂಜಾಬಿಗೆ ಸುಮಾರು 89 ಕಟ್ ಗಳನ್ನು ನಿರ್ದೇಶಿಸಿರುವ ಸಂಸ್ಥೆಯ ಮುಖ್ಯಸ್ಥ ಪಹ್ಲಾಜ್ ನೆಹ್ಲಾನಿ ಪಂಜಾಬ್ ಮತ್ತು ಅದರ ನಗರಗಳ ಉಲ್ಲೇಖ ತೆಗೆಯಬೇಕೆಂದು ನಿರ್ದೇಶಿಸಿದ್ದಾರೆ. ಇದರ ವಿರುದ್ಧ ತಿರುಗಿಬಿದ್ದಿರುವ ಚಿತ್ರದ ನಿರ್ಮಾಪಕ ಅನುರಾಗ್ ಕಶ್ಯಪ್, ಇದು ಪೆಹ್ಲಾನಿಯ ಸರ್ವಾಧಿಕಾರಿ ಸ್ಥಿತಿ ಎಂದಿದ್ದಾರೆ. ಗಮನಿಸಬೇಕಾದ ವಿಷಯ ಎಂದರೆ ಇವ್ಯಾವುಗಳ ಕುರಿತೂ ಲಿಖಿತವಾಗಿ ಪಹ್ಲಾಜ್ ಆದೇಶ ನೀಡದೇ  ಜೂನ್ 17ರಂದು ಬಿಡುಗಡೆಯಾಗಬೇಕಿರುವ ಚಿತ್ರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಬಗ್ಗೆ ಹೋರಾಡದೇ ಬಿಡುವುದಿಲ್ಲಎಂದಿರುವ ಕಶ್ಯಪ್, ‘ನನಗೆ ನಾರ್ತ್ ಕೊರಿಯಾ ಹೇಗಿರುತ್ತದೆ ಎಂಬ ಕುತೂಹಲವಿತ್ತು. ಈಗ ವಿಮಾನಯಾನದ ಕಷ್ಟವೂ ಇಲ್ಲದೇ ಆ ಸ್ಥಿತಿಯನ್ನು ಇಲ್ಲೇ ಅನುಭವಿಸಬಹುದಾಗಿದೆ’ ಎಂದು ಕಿಡಿ ಕಾರಿದ್ದಾರೆ.

ಉಡ್ತಾ ಪಂಜಾಬಿನಲ್ಲಿ ಪಂಜಾಬಿನ ಉಲ್ಲೇಖ ತೆಗೆಯಬೇಕೆಂಬ ಆಗ್ರಹ ಅಲ್ಲಿನ ಆಡಳಿತಾರೂಢ ಅಕಾಲಿದಳದ್ದು. ಏಕೆಂದರೆ ಮಾದಕ ವಸ್ತುಗಳ ಸಮಸ್ಯೆಯೇ 2017ರ ವಿಧಾನಸಭೆ ಚುನಾವಣೆಯ ಮುಖ್ಯ ವಿಷಯವಾಗುವುದರಿಂದ ತನಗೆ ಇದರಿಂದ ಹೊಡೆತ ಬೀಳುವ ಹೆದರಿಕೆ ಅದರದ್ದು. ಇವರೊಂದಿಗೆ ಕೇಂದ್ರದಲ್ಲಿರುವ ಬಿಜೆಪಿ ಮೈತ್ರಿ ಹೊಂದಿದೆಯಾದ್ದರಿಂದ ಈ ಪ್ರಕರಣಕ್ಕೆ ಅದೂ ತಿಪ್ಪೆ ಸಾರಿಸುತ್ತಿದೆ. ಉಳಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಸೆನ್ಸಾರ್ ನ ಈ ದಮನಿತ ಕ್ರಮವನ್ನು ವಿರೋಧಿಸಿವೆ. ‘ಉಡ್ತಾ ಪಂಜಾಬ್’ ಚಿತ್ರವನ್ನು ಹತ್ತಿಕ್ಕುವುದರಿಂದ ಪಂಜಾಬಿನ ಡ್ರಗ್ ಸಮಸ್ಯೆ ಮುಚ್ಚಿಡಲಾಗದು ಅಂತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಚಿತ್ರಕರ್ಮಿಗಳಾದ ಮುಕೇಶ್ ಭಟ್, ಅಶೋಕ್ ಪಂಡಿತ್ ಸೇರಿದಂತೆ ಹಲವರು ಸೆನ್ಸಾರ್ ಕ್ರಮವನ್ನು ಟೀಕಿಸಿದ್ದಾರೆ. ಈ ರಾಜಕೀಯ ಕ್ರಮದ ಬಗ್ಗೆ ದಿನದ ಹಿಂದೆ ಪ್ರಕಟಿಸಿದ್ದ ಲೇಖನವನ್ನು ಇಲ್ಲಿ ಓದಬಹುದು.

 

  • ಮಂಗಳವಾರದ ಆರ್ಬಿಐ ಸಭೆಯಲ್ಲಿ ಗವರ್ನರ್ ರಘುರಾಮ್ ರಾಜನ್ ರೆಪೋದರವನ್ನಾಗಲೀ, ಕ್ಯಾಶ್ ರಿಸರ್ವ್ ರೇಶಿಯೋವನ್ನಾಗಲೀ ಬದಲಾಯಿಸದೇ ಯಥಾಸ್ಥಿತಿ ಪ್ರಕಟಿಸಿದ್ದಾರೆ. ರಾಜನ್ ರೆಪೋದರ ಇಳಿಸದಿರುವುದಕ್ಕೆ ಆಡಳಿತಾರೂಢ ಬಿಜೆಪಿಯಲ್ಲಿ ಕೆಲವರ ಭಾರಿ ವಿರೋಧ. ಹಾಗೆಂದೇ ಇವರ ನಡೆ ಬಗ್ಗೆ ಎಲ್ಲರ ಕುತೂಹಲ. ಆದರೆ ಪ್ರಧಾನಿ ಮತ್ತು ವಿತ್ತ ಸಚಿವರು ರಾಜನ್ ಕಾರ್ಯವೈಖರಿ ಬಗ್ಗೆ ತೃಪ್ತಿ ಹೊಂದಿರುವುದು ಸ್ಪಷ್ಟ. ಸೆಪ್ಟೆಂಬರ್ ನಲ್ಲಿ ರಾಜನ್ ಅವಧಿ ಮುಗಿಯುವುದರಿಂದ ಅವರನ್ನು ಅದೇ ಹುದ್ದೆಯಲ್ಲಿ ಮುದುವರಿಸಲಾಗುವುದೇ ಎಂಬ ನಿಷ್ಕರ್ಷೆ ಶುರುವಾಗಿದೆ. ಇದನ್ನೇ ಪತ್ರಕರ್ತರು ಆ ಸಭೆಯಲ್ಲಿ ರಾಜನ್ ಅವರಿಗೆ ಕೇಳಿದಾಗ ಅವರು ಹೇಳಿದ್ದು- ‘ನನ್ನ ಅವಧಿಯ ಬಗ್ಗೆ ಸ್ಪಷ್ಟನೆ ನೀಡಿ ಮಾಧ್ಯಮದಲ್ಲಿ ಬರುತ್ತಿರುವ ಊಹೆಯ ಮಜವಾದ ಆಟವನ್ನು ನಿಲ್ಲಿಸುವ ಇಷ್ಟ ನನಗಿಲ್ಲ. ಇರಲಿ, ನನ್ನ ಅವಧಿ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಆಗ ನಿಮಗೆಲ್ಲ ತಿಳಿಸೋಣ.’
  • ದಾವುದ್ ಇಬ್ರಾಹಿಂಗೆ ಬಿಜೆಪಿಯ ಏಕನಾಥ್ ಖಡ್ಸೆ ಮೊಬೈಲ್ ಫೋನ್ ನಿಂದ ಖರೆ ಹೋಗಿದೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದ ನೈತಿಕ ಹ್ಯಾಕರ್ ಗೆ ಮಹಾರಾಷ್ಟ್ರ ಎಟಿಎಸ್ ಸಮನ್ಸ್ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕೆ ಈ ಸಮನ್ಸ್.

Leave a Reply