ಸಮಾನತೆ, ಆರ್ಥಿಕ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಹೆಣ್ಣು ತನ್ನ ಮೂಲ ಕರ್ತವ್ಯದಿಂದ ವಿಮುಖಳಾಗುತ್ತಿದ್ದಾಳೆಯೇ?

author-geetha‘ನಾನು ದೊಡ್ಡವನಾದ ಮೇಲೆ ಪೈಲೆಟ್ ಆಗ್ತೀನಿ.. ಏರೋಪ್ಲೇನ್ ಡ್ರೈವ್ ಮಾಡ್ತೀನಿ.’

‘ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗ್ತೀನಿ.. ಆಪರೇಷನ್ ಮಾಡ್ತೀನಿ..’

‘ನಾನು ದೊಡ್ಡವಳಾದ ಮೇಲೆ ಫಿಲ್ಮ್ ಸ್ಟಾರ್ ಆಗ್ತೀನಿ.. ಡ್ಯಾನ್ಸ್ ಮಾಡ್ತೀನಿ..’

‘ನಾನು ದೊಡ್ಡವಳಾದ ಮೇಲೆ ಮನೆಯಲ್ಲೇ ಇರ್ತೀನಿ.. ಅಡಿಗೆ ಮಾಡ್ತೀನಿ. ಬೇಬೀಸ್ ನೋಡ್ಕೋಳ್ತೀನಿ..’

ನಗುತ್ತಾ ಮಕ್ಕಳ ಮಾತು ಕೇಳಿಸಿಕೊಳ್ಳುತ್ತಾ ಇದ್ದ ನಾವು ಘೊಳ್ಳನೆ ನಕ್ಕಿದ್ದೆವು.

ಮೂವತ್ಮೂರು ವರ್ಷಗಳ ಹಿಂದೆ! ನಮ್ಮಪ್ಪ, ನಾನು, ನಮ್ಮಮ್ಮ ಸಂಜೆ ಮುಂದೆ ನಮ್ಮನೆ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಕುಳಿತಿದ್ದೆವು. ಆಡಿ ಸುಸ್ತಾಗಿ ನಮ್ಮಮ್ಮ ಕೊಟ್ಟ ನೀರು ಕುಡಿಯುತ್ತಾ ಆ ಮಕ್ಕಳು ನಿಂತಾಗ, ನಮ್ಮಪ್ಪ ಕೇಳಿದ ಪ್ರಶ್ನೆಗೆ (ದೊಡ್ಡವರಾದ ಮೇಲೆ ಏನಾಗುತ್ತೀರಿ?) ಬಂದ ಉತ್ತರಗಳು ಮೇಲೆ ನಾನು ಕೊಟ್ಟಿರುವುದು.

ಕೊನೆಯ ಉತ್ತರ ಕೊಟ್ಟ ಮಗು ಶ್ರವಂತಿ! ‘ಅಡಿಗೆ ಮಾಡ್ತೀನಿ.. ಬೇಬೀಸ್ ನ ನೋಡಿಕೊಳ್ತೀನಿ’ ಎಂದು ಅವಳು ಹೇಳಿದಾಗ ಅವಳ ವಯಸ್ಸು ಎಂಟೋ ಒಂಬತ್ತೋ.. ಅವಳ ತಾಯಿ ನಮ್ಮ ಎದುರು ಮನೆಯ ಮಾಲಾ, ಬ್ಯಾಂಕ್ ಉದ್ಯೋಗಿ. ಶ್ರವಂತಿ ನಾಲ್ಕು ತಿಂಗಳ ಮಗು.. ಅವರು ಆ ಮನೆಗೆ ಬಂದಾಗ. ಅವಳನ್ನು ಬೇಬಿ ಸಿಟ್ಟಿಂಗ್ ಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು ಆಕೆ. ಬರುವಾಗ ಆಕೆ ಅಥವಾ ಆಕೆಯ ಗಂಡ ಮಗುವನ್ನು ಕರೆ ತರುತ್ತಿದ್ದರು. ನಂತರ ಶಾಲೆಗೆ ಹೋಗಲಾರಂಭಿಸಿದ ಮೇಲೂ ಅಷ್ಟೇ. ಶಾಲೆಯಿಂದ ಪ್ಲೇ ಹೋಂ ಗೆ ಹೋಗಿ ನಂತರ ಅಪ್ಪ ಅಥವಾ ಅಮ್ಮನೊಂದಿಗೆ ಮನೆಗೆ ಹಿಂತಿರುಗುವುದು. ಸಂಜೆವರೆಗೂ ಶಾಲೆಯಾದ ಮೇಲೆ ಸೀದಾ ಮನೆಗೆ ವ್ಯಾನಿನಲ್ಲಿ. ಅವರಿಬ್ಬರೂ ಇನ್ನೂ ಬಂದಿರದಿದ್ದರೆ ಅವರು ಬರುವವರೆಗೂ ನಮ್ಮ ಮನೆಯಲ್ಲಿ.. ಇದು ಮೂವತ್ಮೂರು ವರ್ಷಗಳ ಹಳೆಯ ಕಥೆ.

ಈಗ ಏನು ಮಾಡುತ್ತಿದ್ದಾಳೋ ಶ್ರವಂತಿ.. ನನಗೆ ಗೊತ್ತಿಲ್ಲ. ಅವಳು ನನಗೆ ನೆನಪಾಗಿದ್ದು, ಮೊನ್ನೆ internet ನಲ್ಲಿ ಒಂದು ಲೇಖನ ಓದುತ್ತಿದ್ದಾಗ. ಆ ಲೇಖನ, ತನ್ನ ತಾಯಿ ಆಲಿಸ್ ವಾಕರ್ ಅವರನ್ನು ಕುರಿತು ರೆಬೆಕ್ಕಾ ವಾಕರ್ ಬರೆದದ್ದು. ಎನ್. ಸಂಧ್ಯಾರಾಣಿ ಅವರು ಬರೆದ ಲೇಖನ ಒಂದನ್ನು ಓದಿ, ನಾನು ಇಂಟರ್ ನೆಟ್ ಜಾಲಾಡಿ ಆ ಲೇಖನ ಹುಡುಕಿ ಓದಿದೆ.

ಆಲಿಸ್ ವಾಕರ್ ಕಟ್ಟಾ ಸ್ತ್ರೀವಾದಿ. ಕಾದಂಬರಿ, ಲೇಖನ ಬರೆದು, ಭಾಷಣಗಳನ್ನು ಮಾಡಿ ಸ್ತ್ರೀವಾದಕ್ಕೆ ಒಂದು ನೆಲೆ ಕಟ್ಟಿಕೊಟ್ಟವರು ಆಕೆ. ಅದಕ್ಕಾಗಿ ಪ್ರಪಂಚದ ಉದ್ದಗಲಕ್ಕೂ ಓಡಾಡಿ, ಸ್ತ್ರೀಯರ ಸ್ಥಾನಮಾನಕ್ಕೆ ಹೋರಾಡಿದವರು.

ಅವರ ಮಗಳು ರೆಬೆಕ್ಕಾ ಬರೆದ ಲೇಖನದ ತಲೆಬರಹ, ‘how my mother’s fanatical views tore us apart.’

ತನ್ನ ತಾಯಿಯ ಸ್ತ್ರೀವಾದದಿಂದ, ತಾಯ್ತನವನ್ನು ಅವಳು ಒಂದು ಬಂಧನ ಎಂದುಕೊಂಡಿದ್ದರಿಂದ ತನಗಾದ ಕಷ್ಟಗಳನ್ನು, ಎದುರಿಸಿದ ಒಂಟಿತನವನ್ನು ಹೇಳಿಕೊಳ್ಳುತ್ತಾಳೆ ರೆಬೆಕ್ಕಾ. ಮಹಿಳಾ ಸ್ವಾತಂತ್ರ್ಯ ಎಂದು ತನ್ನ ತಾಯಿ ಹೊರಟ್ಟಿದ್ದರಿಂದ ತಾನು ಕಳೆದುಕೊಂಡ ತಾಯಿಯ ಬಗ್ಗೆ ಹೇಳುತ್ತಾಳೆ. ತಾಯಿಯ ಸಾಂಗತ್ಯವಿಲ್ಲದ ಬಾಲ್ಯ, ಅವಳ ಅಕ್ಕರೆಯ ಆಸರೆಯಿಲ್ಲದೆ ಯೌವನಕ್ಕೆ ಕಾಲಿಟ್ಟ ಕಾಲಘಟ್ಟ, ತಂದೆಯಿಲ್ಲದ ಬದುಕು.. (ತಂದೆ-ತಾಯಿ ವಿಚ್ಛೇಧಿತರು) – ಹೀಗೆ ಒಂದೊಂದಾಗಿ ಎತ್ತಿ ಹೇಳುತ್ತಾ ಬರೆಯುತ್ತಾಳೆ.

ತಾಯಿಯ ಸ್ಥಾನದಲ್ಲಿ ನಿಂತು ತನಗೆ ಹೇಳಬೇಕಾದ ಮಾತು, ತಿಳಿಸಿಕೊಡಬೇಕಾದ ವಿಚಾರ, ಹಾಕಬೇಕಿದ್ದ ನಿರ್ಬಂಧ.. ಇವ್ಯಾವೊಂದನ್ನೂ ತನ್ನ ತಾಯಿ ಮಾಡಲಿಲ್ಲ ಎನ್ನುತ್ತಾಳೆ ರೆಬೆಕ್ಕಾ.. ‘ಸ್ತ್ರೀವಾದಕ್ಕೆ, ಸಮಾನತೆಗೆ ಬೆಲೆಯಾಗಿ ತನ್ನ ತಾಯ್ತನವನ್ನು ಕೊಟ್ಟಳು ನನ್ನ ತಾಯಿ..’ ಎನ್ನುತ್ತಾಳೆ.

ಹೌದೇ.. ಫೆಮಿನಿಸಂ, ಸ್ತ್ರೀವಾದ.. ಸಮಾನತೆಯ ಹೋರಾಟ ಹೆಣ್ಣಿನ ಒಂದು ಪ್ರಮುಖ ಪಾತ್ರವಾದ ತಾಯ್ತನಕ್ಕೆ ಮಾರಕವೇ?

ಸಮಾನತೆಗೆ ಹೋರಾಡಿ.. ವಿದ್ಯೆಯಲ್ಲಿ ಉದ್ಯೋಗದಲ್ಲಿ ಪುರುಷನಿಗೆ ಸಮನಾದ ಸ್ಥಾನಮಾನ ಪಡೆಯುವ ಹೆಣ್ಣು, ತನ್ನ ತಾಯ್ತನದ ಕರ್ತವ್ಯವನ್ನು ಪೂರ್ಣವಾಗಿ ನಿಭಾಯಿಸಲಾರಳೇ?

ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೊರಗೆ ದುಡಿಯುವ ಹೆಣ್ಣು, ತನ್ನ ಮೂಲ (ಪ್ರಕೃತಿದತ್ತ) ಕರ್ತವ್ಯದಿಂದ ವಿಮುಖಲಾಗುತ್ತಿದ್ದಾಳೆಯೇ? ಮಕ್ಕಳಿಗೆ ನೀಡಬೇಕಾದಷ್ಟು ಸಮಯ, ಸಂಯಮ ಅವಳಲ್ಲಿ ಈಗ ಇಲ್ಲವೇ?

ರೆಬೆಕ್ಕಾಳದು ಒಂದು ಉತ್ಪ್ರೇಕಿತ ಉದಾಹರಣೆ. ಹೋರಾಟಕ್ಕೆ ನಿಂತ ಸ್ತ್ರೀಯೊಬ್ಬಳ ಮಗಳ ಅಳಲು. ಅದನ್ನು ಪಕ್ಕಕ್ಕೆ ಎತ್ತಿಟ್ಟು ಅವಲೋಕಿಸುವುದು ಉತ್ತಮ.

ತನ್ನ ವ್ಯಕ್ತಿತ್ವಕ್ಕೆ ಬೆಲೆ ಕೊಡದೆ, ತಾಯಿ ಎಂಬ ಸ್ಥಾನಕ್ಕೆ, ಪಾತ್ರಕ್ಕೆ ತನ್ನದೆಲ್ಲವನ್ನು ಕೊಟ್ಟು ನಿಂತರಷ್ಟೇ ಗೌರವವೇ? ಪ್ರಕೃತಿ ಬಯಸಿದ್ದು ಅದೆಯೇ? ಹಳೆಯ ಹಾಡುಗಳು, ಕಥೆ, ಕಾದಂಬರಿಗಳು, ಹಲವಾರ ಜೀವನ ಚರಿತ್ರೆ, ಈಗಲೂ ಕೆಲವರು ತಮ್ಮ ತಾಯಿಯ ತ್ಯಾಗದ ಬಗ್ಗೆ ಬರೆಯುವ ಲೇಖನಗಳು ಅದನ್ನು ಪುಷ್ಠೀಕರಿಸುತ್ತವೆ.

ನಾನು ಒಬ್ಬಳು ಹೆಣ್ಣು, ಒಂದು ವ್ಯಕ್ತಿ ಮೊದಲು.. ನಂತರ ಹೆಂಡತಿ, ತಾಯಿ ಎಲ್ಲಾ.. ಎನ್ನುವ ಹೆಣ್ಣು ಸ್ವಾರ್ಥಿಯಂತೆ ಕಾಣುತ್ತಾಳೆ. ಅದೇ ಗಂಡಸಿಗೆ ಆ ತಾಪತ್ರಯವಿಲ್ಲ. ಅವನ ವ್ಯಕ್ತಿತ್ವ ಮುಖ್ಯ. ಅವನ ಕೆಲಸಕ್ಕೆ ಮೊದಲ ಆದ್ಯತೆ.

ನಿಜ. ಹೊರುವವಳು, ಹೆರುವವಳು, ಹಾಲುಡಿಸುವವಳು ಹೆಣ್ಣು, ಆದ್ದರಿಂದ ಮಕ್ಕಳ ಜವಾಬ್ದಾರಿ ಅವಳಿಗೆ ಹೆಚ್ಚು. ಹಾಗೆಂದು ಅವಳು ಬೇರೇನು ಮಾಡಬೇಕಾಗಿಯೇ ಇಲ್ಲವೇ? ಆರ್ಥಿಕ ಸುಭದ್ರತೆ, ಸ್ವಾತಂತ್ರ್ಯ ಅವಳಿಗೆ ತಂದುಕೊಡುವ ಸ್ವಾಭಿಮಾನವನ್ನು ಅಲ್ಲಗೆಳೆಯಲಾಗುತ್ತದೆಯೇ? ಹೊರಗೆ ನಾಲ್ಕು ಜನರೊಂದಿಗೆ ಬೆರೆಯುವಾಗ ವಿಕಸಿತಗೊಳ್ಳುವ ಅವಳ ವ್ಯಕ್ತಿತ್ವ, ಮೂಡುವ ಸ್ಥೈರ್ಯ ಅವಳಿಗೆ ಬೇಕಲ್ಲವೇ..

ಕೆಲವು ದಿನಗಳ ಹಿಂದೆ ನಟಿಯೊಬ್ಬಳು, ಹೆಣ್ಣನ್ನು ಪ್ರಕೃತಿ ಸೃಷ್ಠಿಸಿರುವುದೇ ಮನುಜಕುಲ ಮುಂದುವರಿಸಲು.. ತಾಯಿಯಾಗುವುದು ಅವಳ ಮೂಲ ಕರ್ತವ್ಯ ಎಂಬಂತ ಹೇಳಿಕೆ ನೀಡಿ ಹಲವು ಮಂದಿಯ ಅಸಹನೆಗೆ ಗುರಿಯಾದಳು.

ಹೆಣ್ಣು ಸ್ವಾರ್ಥಿಯಾದರೆ ಸಹಿಸದ ಸಮಾಜ, ತಾಯಿ ಸ್ವಾರ್ಥಿಯಾದರೆ ಸಹಿಸುವುದೇ?

ಯಾರೋ ಸಹಿಸುವುದಿಲ್ಲ, ಮತ್ಯಾರೋ ಹೊಗಳುತ್ತಾರೆ ಎಂದಲ್ಲ. ತಾನು ಹೊತ್ತು ಹೆತ್ತು ಬೆಳಸಿದ ಮಗು (ಮಕ್ಕಳು) ತನ್ನಾಗಿರಬೇಕು ಎಂದು ಪ್ರತಿ ತಾಯಿಯೂ ಬಯಸುತ್ತಾಳೆ. ಹೆತ್ತ ಮಗುವನ್ನು ಮಾರುವ ಬಡತಾಯಿ ಕೂಡ ಮಾರುವುದೇ ಆ ಮಗುವಿನ ಸುಖಕ್ಕಾಗಿ.

ಶ್ರವಂತಿಯ ತಾಯಿ ಮಾಲಾ ಅವರಂತೆಯೂ ಬೇಡ, ರೆಬೆಕ್ಕಾ ವಾಕರ್ ಳ ತಾಯಿ ಆಲಿಸ್ ವಾಕರ್ ಳಂತೆಯೂ ಬೇಡ.. ಪ್ರತಿ ತಾಯಿ ತನ್ನ ಮಗುವಿಗೆ ತಕ್ಕಂತೆ ತಾಯಿಯಾದರೆ ಸಾಕು.

ಪ್ರತಿ ಮಗುವಿನ ಎಮೋಷನಲ್ ನೀಡ್ಸ್ ಬೇರೆ ಬೇರೆ ಇರುತ್ತದೆ. ಅದನ್ನು ತಾಯಿಯಾದವಳು ಗುರುತಿಸಬೇಕು.. ತನ್ನ ಕೆರಿಯರ್, ಸ್ವಂತಿಕೆಗಿಂತ ಪುಟ್ಟಕಂದನ ಒಳಿತು ಮುಖ್ಯ.. ಮೊದಲ ಕೆಲವು ವರ್ಷಗಳಾದರೂ ಎಂಬುದರ ಅರಿವು ಮುಖ್ಯ.

ನನ್ನ ಇರವು ಮುಖ್ಯವಾಗಿ (the feeling of being wanted and loved) ಇರಬೇಕು ತನ್ನ ತಾಯಿಗೆ ಎಂದು ಪ್ರತಿ ಮಗುವೂ ಬಯಸುತ್ತದೆ. ಆ ಭಾವನೆ ಮೂಡಿದ ಮೇಲೆ ತಾಯಿ ಸದಾ ತನ್ನ ಬಳಿಯಲೇ ಇರುವ ಅಗತ್ಯವಿಲ್ಲ. ತಾನು ಭೂಮಿಗೆ ತಂದ ಮಗುವಿನ ಬಗ್ಗೆ ಅಷ್ಟು ಪ್ರೀತಿ ಖಂಡಿತಾ ತೋರಬಲ್ಲಳು ತಾಯಿ. ಸಹನೆ, ಸಂಯಮ, ಸ್ಪರ್ಶ ಸಂವಹನ ಮುಖ್ಯ, ಅಷ್ಟೇ. ಸ್ತ್ರೀತ್ವ, ತಾಯ್ತನ ಎರಡೂ ಮೇಳೈಸಿಯೇ ಹೆಣ್ಣು. ಪುರುಷರೊಂದಿಗೆ ಸಮಾನತೆ ಬೇಡ ಅದನ್ನು ಮೀರಿ ನಿಂತಿರುವವಳೇ ಸ್ತ್ರೀ.

Leave a Reply