100 ಗ್ರಾಂ ತೂಕದ ಆರ್ಕ್ಟಿಕ್ ಟೆರ್ನ್ ಪಕ್ಷಿ ವರ್ಷಕ್ಕೆ ಪರ್ಯಟನೆ ನಡೆಸುವ ದೂರವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ಆರ್ಕ್ಟಿಕ್ ಟೆರ್ನ್ ಪಕ್ಷಿಗೆ ಒಪ್ಪುತ್ತದೆ. ಏಕೆಂದರೆ, ಕೇವಲ ಅಂಗೈನಲ್ಲಿ ಹಿಡಿಯುವಷ್ಟು ಗಾತ್ರದ ಈ ಪಕ್ಷಿ ವರ್ಷಕ್ಕೆ ನಡೆಸುವ ಪರ್ಯಟನೆ ಎಲ್ಲರ ಹುಬ್ಬೇರಿಸುತ್ತದೆ. ಸಂತಾನೋತ್ಪತ್ತಿ ಮಾಡಿ ಪರ್ಯಟನೆ ಆರಂಭಿಸುವ ಈ ಪಕ್ಷಿ ಒಂದು ವರ್ಷದಲ್ಲಿ ಸಂಚರಿಸುವ ದೂರವೆಷ್ಟು ಗೊತ್ತೇ? ಬರೋಬ್ಬರಿ 59,650 ಮೈಲು. ಇದರೊಂದಿಗೆ ಅತಿ ದೊಡ್ಡ ಪ್ರಮಾಣದ ಪರ್ಯಟನೆ ನಡೆಸಿದ ಖ್ಯಾತಿಗೆ ಆರ್ಕ್ಟಿಕ್ ಟೆರ್ನ್ ಪಾತ್ರವಾಗಿದೆ.

ನ್ಯೂಕಾಸ್ಟೆಲ್ ಯುನಿವರ್ಸಿಟಿ ನಡೆಸಿದ ಸಂಶೋಧನೆಯಲ್ಲಿ ಈ ರೋಚಕ ಅಂಶ ಬೆಳಕಿಗೆ ಬಂದಿದೆ. ಈ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಈ ಪಕ್ಷಿಯ ಚಲನೆ ಗುರುತಿಸಲು ಇದರ ಕಾಲಿಗೆ 0.7 ಗ್ರಾಂ ತೂಕದ ಕಿರಿದಾದ ಸಾಧನವನ್ನು ಕಟ್ಟಲಾಗಿತ್ತು. ಪಕ್ಷಿಯ ಹಾರಾಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಗುರ ಸಾಧನ ಅಳವಡಿಸಲಾಗಿತ್ತು. ಇದರೊಂದಿಗೆ ಕೇವಲ 100 ಗ್ರಾಂನಷ್ಟು ತೂಗುವ ಈ ಪಕ್ಷಿ ಇಷ್ಟು ದೊಡ್ಡ ಪರ್ಯಟನೆ ನಡೆಸುತ್ತದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಜುಲೈನಲ್ಲಿ ಯುಕೆಯ ಫರ್ನೆ ಐಲ್ಯಾಂಡ್ ನಲ್ಲಿ ವಂಶವೃದ್ಧಿಗೊಳಿಸಿ ಪರ್ಯಟನೆ ಆರಂಭಿಸಿದ ಅರ್ಕ್ಟಿಕ್ ಟೆರ್ನ್, ಪಶ್ಚಿಮ ಆಫ್ರಿಕಾ ತೀರ, ಕೇಪ್ ಆಫ್ ಗುಡ್ ಹೋಪ್, ಹಾಗೂ ಹಿಂದೂ ಮಹಾಸಾಗರ ಮಾರ್ಗವಾಗಿ ನವೆಂಬರ್ ವೇಳೆಗೆ ಅಂಟಾರ್ಟಿಕಾ ಸೇರಿತು. ನಂತರ ಅಲ್ಲಿಂದ ಮರಳಿದ ಅರ್ಕ್ಟಿಕ್ ಟೆರ್ನ್, ಕಳೆದ ಮೇ ತಿಂಗಳಲ್ಲಿ ಫರ್ನೆ ಐಲ್ಯಾಂಡ್ ಗೆ ಬಂದಿದೆ. ಆ ಮೂಲಕ 2 ಬಾರಿ ಭೂಮಿಯನ್ನು ಸುತ್ತಿದೆ.

ಈ ಅಧ್ಯಯನದಲ್ಲಿ 29 ಪಕ್ಷಿಗಳಿಗೆ ಸಂಚಾರ ಗುರುತಿಸುವ ಸಾಧನವನ್ನು ಅಳವಡಿಸಲಾಗಿತ್ತು. ಆ ಪೈಕಿ 20 ಪಕ್ಷಿಗಳು ಮರಳಿವೆ. ಉಳಿದವು ಬೇರೆಡೆ ಸಾಗಿರಬಹುದು ಅಥವಾ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. 15-30 ವರ್ಷಗಳ ಕಾಲ ಈ ಪಕ್ಷಿ ಜೀವಿಸಲಿದ್ದು, ತನ್ನ ಜೀವಿತಾವಧಿಯಲ್ಲಿ ಒಟ್ಟು 3 ಮಿಲಿಯನ್ ಕಿ.ಮೀ ನಷ್ಟು ಸಂಚರಿಸುತ್ತದೆ ಎಂಬುದು ಅಂದಾಜು. ಇದು ಚಂದ್ರನ ಬಳಿಗೆ ನಾಲ್ಕು ಬಾರಿ ಸಂಚರಿಸುವಷ್ಟು ದೂರ ಎಂಬುದು ಮತ್ತೊಂದು ರೋಚಕ ಅಂಶ.

ಆರ್ಕ್ಟಿಕ್ ಟೆರ್ನ್ ಪಕ್ಷಿಯಂತೆ ಪರ್ಯಟನೆಯಲ್ಲಿ ಗಮನ ಸೆಳೆದಿರುವ ಮತ್ತೊಂದು ಪಕ್ಷಿ ಅಲಸ್ಕನ್ ಬಾರ್ಟಾಲ್ಡ್ ಗಾಡ್ವಿಟ್. ಇದು ಆರ್ಕ್ಟಿಕ್ ನಿಂದ ನ್ಯೂಜಿಲೆಂಡ್ ಗೆ ನೇರವಾಗಿ ಕೇವಲ 8 ದಿನಗಳಲ್ಲಿ ತಲುಪುತ್ತದೆ. 7 ಸಾವಿರ ಮೈಲುಗಳಷ್ಟು ದೂರದ ಈ ಪ್ರಯಾಣದಲ್ಲಿ ಆಹಾರಕ್ಕಾಗಿ ನಿಲ್ಲದೇ ನಿರಂತರವಾಗಿ ಸಂಚರಿಸುವುದು ಈ ಪಕ್ಷಿಯ ವೈಶಿಷ್ಟ್ಯ.

Leave a Reply