ಕೇರಳದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು, ಇದು ಸಾರುತ್ತಿರುವುದೇನನ್ನು?

ಡಿಜಿಟಲ್ ಕನ್ನಡ ಟೀಮ್:

ಕಂಪನಿಯೊಂದರಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ವಿರುದ್ಧ ಎಫ್ ಐ ಆರ್ ದಾಖಲು!

ವರ್ಷಗಳ ಹಿಂದೆ ಊಹಿಸಲೂ ಆಗದಂಥ ವಿದ್ಯಮಾನವಿದು. ತಿರುವನಂತಪುರದಲ್ಲಿ ‘ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡಿವಲಪ್ಮೆಂಟ್ ಸ್ಟಡಿ’ ಕಟ್ಟಡ ಕಟ್ಟಿದ್ದ ಹೀದರ್ ಕನ್ಸ್ಟ್ರಕ್ಷನ್ ಕಂಪನಿಯು ಈ ವಿಷಯದಲ್ಲಿ ನೀಡಬೇಕಿದ್ದ ಹಣವನ್ನು ಬಾಕಿ ಉಳಿಸಿಕೊಂಡಿರುವುದಕ್ಕಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕೇರಳದ ಹಲವು ನಾಯಕರ ವಿರುದ್ಧ ಎಫ್ ಐ ಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದೆ.

ಈ ಒಟ್ಟಾರೆ ಪ್ರಕರಣ ಈ ರೂಪು ತಾಳುವುದಕ್ಕೆ ಅವಕಾಶ ಒದಗಿಸಿದ್ದು ಕೇರಳ ಕಾಂಗ್ರೆಸ್ ಒಳಗೆ ರೂಪುಗೊಳ್ಳುತ್ತಿರುವ ಭಿನ್ನಮತ ಎಂಬುದು ಗಮನಾರ್ಹ. ಕೇರಳ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಮೇಶ್ ಚೆನ್ನಿತಾಲ, ಅಗ್ರ ನಾಯಕಿಯನ್ನು ಖುಷಿಪಡಿಸುವುದಕ್ಕೆ ಕೈಗೊಂಡ ಕಾಮಗಾರಿಗೆ ನಾವೇಕೆ ಹಣ ಕೊಡೋಣ ಎಂಬ ಯೋಚನೆ ಈಗ ಅಲ್ಲಿ ಪಕ್ಷದ ಅಧಿಕಾರ ಸೂತ್ರ ಹಿಡಿದವರ ಮನಸ್ಸಿನಲ್ಲಿರೋದೇ ಈ ಅವಾಂತರಕ್ಕೆ ಕಾರಣ ಎಂಬುದು ಈಗ ಸಿಗುತ್ತಿರುವ ಚಿತ್ರಣ.

2005ರ ಅಕ್ಟೋಬರ್ ನಲ್ಲಿ ಸೋನಿಯಾ ಗಾಂಧಿ ಅವರೇ ಈ ಸಂಸ್ಥೆಯನ್ನು ಉದ್ಘಾಟಿಸಿದ್ದರು. ಬಾಕಿ ಹಣ ಪಾವತಿಸದಿರುವ ಬಗ್ಗೆ ನೋಟೀಸ್ ಜಾರಿಯಾದ ನಂತರ ಸ್ವತಃ ಸೋನಿಯಾ ಅವರೇ ಬಾಕಿ ಹಣವನ್ನು ಪಾವತಿ ಮಾಡುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ, ಕಂಪನಿ ಈವರೆಗೂ ಯಾವುದೇ ಹಣ ಸ್ವೀಕರಿಸದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿ ಉಳಿದಂತೆ ಈ ಇನ್ಸ್ ಟಿಟ್ಯೂಟ್ ಮುಖ್ಯಸ್ಥ ರಮೇಶ್ ಚೆನ್ನಿತಾಲ, ಕೇರಳ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಹಾಗೂ ಕೇರಳ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ವಿ.ಎಂ ಸುಧೀರನ್ ವಿರುದ್ಧ ಕಂಪನಿ ದೂರು ನೀಡಿದೆ.

ಕಂಪನಿಗೆ ಬಾಕಿ ಉಳಿಸಿಕೊಂಡಿರುವ ಹಣ ಪಾವತಿ ಮಾಡುವ ಬಗ್ಗೆ ಕೆಪಿಸಿಸಿ ಹೇಳುವುದಿಷ್ಟು. ‘ಈ ಯೋಜನೆಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ಚೆನ್ನಿತಾಲ ಅವರ ಕಾಲದಲ್ಲಿ ಘೋಷಣೆ ಮಾಡಲಾಗಿದ್ದು, ಈಗ ಹಣ ಪಾವತಿ ಮಾಡಲು ಪಕ್ಷದ ಬಳಿ ದುಡ್ಡಿಲ್ಲ. ಅಲ್ಲದೆ ಈ ಇನ್ಸ್ ಟಿಟ್ಯೂಟ್ ನಿರ್ಮಾಣದ ಅಗತ್ಯವೂ ಇರಲಿಲ್ಲ’ ಎಂದು.

ಈ ನಡುವೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಆರ್.ಎ ಸುರ್ಜೇವಾಲಾ, ಮುಂದಿನ 24 ಗಂಟೆಗಳಲ್ಲಿ ಈ ಬಾಕಿ ಪಾವತಿಯ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply