ಮೋದಿ- ಒಬಾಮಾ ಸ್ನೇಹದಲ್ಲಿ ಅಂಥಾದ್ದೇನಿದೆ? ಇದಕ್ಕೆ ಉತ್ತರ ವಿಯೆಟ್ನಾಮಿನಲ್ಲಿದೆ!

ಚೈತನ್ಯ ಹೆಗಡೆ

ಶ್ವೇತಭವನದಲ್ಲಿ ಮೋದಿ- ಒಬಾಮಾ ಮಂಗಳವಾರದ ಭೇಟಿಯ ಸಾರವನ್ನು ಕೆಲ ಮುಖ್ಯ ಪದಗಳಲ್ಲಿ ಹಿಡಿದಿಡೋದಾದರೆ ಅವನ್ನು ಹೀಗೆ ಹೆಸರಿಸಬಹುದು. ಎಂಟಿಸಿಆರ್, ಮಿತ್ರ ಒಬಾಮಾ, ಎನ್ ಎಸ್ ಜಿ…

ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿಗೆ (ಎನ್ ಎಸ್ ಜಿ) ಭಾರತ ಸೇರಿಕೊಳ್ಳುವುದಕ್ಕೆ ಈ ಮೊದಲೇ ಅಮೆರಿಕ ಒಕೆ ಅಂದಿತ್ತು. ಮಂಗಳವಾರ ಅಮೆರಿಕ ಅಧ್ಯಕ್ಷ ಒಬಾಮಾ ಬಾಯಿಂದಲೇ ಇದು ದೃಢಪಟ್ಟಿತು ಎಂಬುದಷ್ಟೆ ವಿಶೇಷ. ಆದರೆ ಎನ್ ಎಸ್ ಜಿಯ ಪ್ರಮುಖ ಸದಸ್ಯ ರಾಷ್ಟ್ರವಾಗಿರುವ ಚೀನಾ ಒಪ್ಪಿಗೆ ದಕ್ಕಿಲ್ಲವಾದ್ದರಿಂದ ಈಗಲೇ ಬೀಗುವಂತಿಲ್ಲ. ಬೀಗಬೇಕಾದದ್ದು ಎಂ ಟಿ ಸಿಆರ್ (ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಧಿಕಾರ ಗುಂಪು) ಸದಸ್ಯತ್ವವು ಅಮೆರಿಕ ಒಪ್ಪಿಗೆಯೊಂದಿಗೆ ಹೆಚ್ಚು- ಕಡಿಮೆ ಅಖೈರಾಗಿರುವುದಕ್ಕೆ.

ಇದರ ಮಹತ್ವದ ಬಗ್ಗೆ ಈ ಹಿಂದೆಯೇ ಮಾಡಿದ್ದ ವಿಶ್ಲೇಷಣೆಯನ್ನು ನೀವಿಲ್ಲಿ ಓದಬಹುದು.

ವರ್ಷದ ಹಿಂದೆಯೇ ಭಾರತ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿತ್ತು ಹಾಗೂ ಇದಕ್ಕೆ ಆಕ್ಷೇಪ ನೀಡುವುದಕ್ಕೆ ಸದಸ್ಯ ರಾಷ್ಟ್ರಗಳಿಗೆ ಸೋಮವಾರವೇ ಕೊನೆ ದಿನವಾಗಿತ್ತು. ಎಂ ಟಿ ಸಿಆರ್ ಒಪ್ಪಂದ ನೆರವೇರಿರುವುದರಿಂದ ಭಾರತವು ತನ್ನಲ್ಲಿರುವ ಕ್ಷಿಪಣಿ ತಂತ್ರಜ್ಞಾನವನ್ನು ಮಿತ್ರರಾಷ್ಟ್ರಗಳಿಗೆ ಮಾರಬಹುದು ಹಾಗೆಯೇ ಅಮೆರಿಕದಿಂದ ತಾಲಿಬಾನಿಗಳನ್ನು ಸಂಹರಿಸುವಲ್ಲಿ ನೆರವಾದ ‘ಹುಡುಕಿಹೊಡೆಯುವ ಡ್ರೋನ್’ಗಳನ್ನು ಆಮದು ಮಾಡಿಕೊಳ್ಳಬಹುದು.

ಅರೆರೆರೆರೆರೆ… ಅಮೆರಿಕವೇಕೆ ಭಾರತದ ವಿಷಯದಲ್ಲಿ ಈ ಪರಿ ಸಹಕರಿಸುತ್ತಿದೆ? 1968ರಲ್ಲಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದೇ 1998ರಲ್ಲಿ ತನ್ನದೇ ಅಣ್ವಸ್ತ್ರ ಪರೀಕ್ಷೆ ಮಾಡಿದ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೊಡಬಾರದು ಎಂಬ ಒತ್ತಡಗಳನ್ನು ‘ಮಿತ್ರ ಒಬಾಮಾ’ ಕಡೆಗಣಿಸುತ್ತ ಸ್ನೇಹಹಸ್ತ ಚಾಚಿರೋದೇಕೆ? ‘ಗಮನಿಸಲೇಬೇಕ್ರೀ, ಭಾರತ ಅಷ್ಟು ಬಲವಾಗಿದೆ’ ಅಂತ ಶಹಭಾಸ್ ಗಿರಿ ಕೊಟ್ಟುಕೊಂಡರೆ ಖುಷಿಯಾಗುತ್ತದೆ ನಿಜ. ಭಾರತದ ರಾಜಕೀಯ ನೇತೃತ್ವದಲ್ಲೀಗ ಮೈತ್ರಿಗಳ ಮುಲಾಜಿಲ್ಲದೇ ಒಬ್ಬ ನಾಯಕನ ಕೈಯಲ್ಲಿ ನಿರ್ಧಾರದ ಶಕ್ತಿ ಇರುವುದರಿಂದ ಅಮೆರಿಕದ ಉತ್ಸುಕತೆ ಹೆಚ್ಚಾಗಿದೆ ಎಂಬುದನ್ನೂ ಒಪ್ಪಿಕೊಳ್ಳೋಣ. ಆದರೆ ಅದರಾಚೆಗೆ ಅದಕ್ಕೂ ಕೆಲವು ಲಾಭಗಳಿರಬೇಕಲ್ಲ?

ಇದು ಕಾಲದ ಓಟ. ಒಂದು ಹಂತದವರೆಗೆ ಪಾಕಿಸ್ತಾನವನ್ನು ಬಳಸಿಕೊಂಡು ಭಾರತವನ್ನು ಚಿವುಟುತ್ತ, ಆಗಾಗ ನಗಿಸುತ್ತ ಇರುವುದರಲ್ಲಿ ಅಮೆರಿಕ ಕಾಲ ಕಳೆಯಿತು. ಬಹಳ ವರ್ಷಗಳವರೆಗೆ ಭಾರತ-ರಷ್ಯಾ ಸಮೀಕರಣಗಳೂ ಅಮೆರಿಕವನ್ನು ಹೀಗಾಡುವಂತೆ ಪ್ರಚೋದಿಸಿದ್ದಿದೆ. ಆದರೀಗ ಅಮೆರಿಕಕ್ಕೆ ಮಿಲಿಟರಿ ಮತ್ತು ಮಾರುಕಟ್ಟೆ ಬಲಗಳೆರಡರಲ್ಲೂ ಪೈಪೋಟಿ ನೀಡುತ್ತಿರುವುದು ರಷ್ಯಾವಲ್ಲ, ಚೀನಾ. ಇದನ್ನು ಸಮಸ್ಥಿತಿಯಲ್ಲಿ ಇಡುವುದಕ್ಕೆ ಅಮೆರಿಕವು ಏಷ್ಯದಲ್ಲಿ ಆತುಕೊಳ್ಳಬಹುದಾದ ಏಕೈಕ ರಾಷ್ಟ್ರವೆಂದರೆ ಭಾರತವೇ. ಚೀನಾದೊಂದಿಗೆ ಹತ್ತೆಂಟು ಯೋಜನೆಗಳಲ್ಲಿ ಬೆಸಗೊಂಡಿರುವ ಮತ್ತು ಆಡಳಿತಾತ್ಮಕವಾಗಿ ಗಬ್ಬೆದ್ದುಹೋಗಿರುವ ಪಾಕಿಸ್ತಾನವನ್ನು ನೆಚ್ಚಿಕೊಳ್ಳುವ ಮೂರ್ಖತನಕ್ಕೆ ಅಮೆರಿಕ ಸಿದ್ಧವಿಲ್ಲ. ಈ ಮೊದಲು ಪಾಕಿಸ್ತಾನಕ್ಕೆ ಕೊಡುವುದಾಗಿ ಹೇಳಿದ್ದ ಎಫ್ 16 ಯುದ್ಧ ವಿಮಾನಗಳಿಗೆ ಸಬ್ಸಿಡಿ ನೀಡದೇ, ಆ ಪ್ರಕ್ರಿಯೆಯಿಂದಲೇ ಪಾಕ್ ವಾಪಸಾದರೂ ಅಮೆರಿಕ ಒಳ್ಳೇದೆ ಆಯ್ತು ಬಿಡು ಎಂಬಂತೆ ನಡೆದುಕೊಂಡಿದೆ. ಪಾಕ್ ಜತೆಗೆ ಈ ಮೊದಲು ಅದು ಹಾಗೆ ವರ್ತಿಸುತ್ತಿರಲಿಲ್ಲ. ಏಕೆಂದರೆ ಭಾರತವನ್ನು ಸಮಸ್ಥಿತಿಯಲ್ಲಿಡುವುದಕ್ಕೆ ಹೋಗಿ ಪಾಕಿಸ್ತಾನವನ್ನು ರಮಿಸಿದ್ದಕ್ಕೆ ಏನೂ ಫಾಯಿದೆ ಆಗಲಿಲ್ಲವೆಂಬ ಜ್ಞಾನೋದಯವನ್ನು ಅಮೆರಿಕ ಹೊಂದಿದಂತಿದೆ.

ಇದೀಗ ಸಾಕಾರಗೊಂಡಿರುವ ಎಂ ಟಿ ಸಿ ಆರ್ ಒಪ್ಪಂದದಿಂದ ಮೊದಲಿಗೆ ಭಾರತಕ್ಕೆ ಸುಲಭವಾಗಲಿಕ್ಕಿರುವುದು ವಿಯೆಟ್ನಾಂ ಜತೆಗಿನ ಮಿಲಿಟರಿ ವ್ಯವಹಾರದಲ್ಲಿ ಎಂಬುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಜೂನ್ 3ರಿಂದ ಐದು ದಿನಗಳವರೆಗೆ ರಕ್ಷಣಾ ಸಚಿವ ಮನೋಹರ್ ಪಾರಿಕರ್ ವಿಯೆಟ್ನಾಂ ಗೆ ತೆರಳಿದ್ದರು. ಈ ಭೇಟಿಯ ಮುಖ್ಯ ಬೆಳವಣಿಗೆ ಎಂದರೆ ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಮಾರುವುದಕ್ಕೆ ಭಾರತ ಒಪ್ಪಿಕೊಂಡಿರುವುದು. ರಷ್ಯಾ ಜತೆಗಿನ ಸಹಯೋಗದಲ್ಲಿ ರೂಪುಗೊಂಡಿರುವ ಈ ಕ್ಷಿಪಣಿಗಳನ್ನು ವಿಯೆಟ್ನಾಂ ಹಲವು ವರ್ಷಗಳಿಂದ ಕೇಳುತ್ತಿತ್ತು. ಆದರೆ ಚೀನಾದ ಆಕ್ಷೇಪಕ್ಕೆ ಹೆದರಿದ ಯುಪಿಎ ಸರ್ಕಾರ ಇದಕ್ಕೆ ಒಪ್ಪಿರಲಿಲ್ಲ. ಎಂ ಟಿ ಸಿ ಆರ್ ಒಪ್ಪಂದ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ.

ಇತ್ತ, ಅಮೆರಿಕವು ಮೇ ಅಂತ್ಯದಲ್ಲಿ ವಿಯೆಟ್ನಾಂ ಮೇಲೆ ಹೇರಿದ್ದ ಶಸ್ತ್ರಾಸ್ತ್ರ ವಹಿವಾಟು ನಿರ್ಬಂಧವನ್ನು ತೆಗೆದುಹಾಕಿದೆ. 1960-1975 ರ ನಡುವೆ ಯಾವ ವಿಯೆಟ್ನಾಂ ವಿರುದ್ಧ ಅಮೆರಿಕವು ಅತಿ ಭೀಕರ ಯುದ್ಧದಲ್ಲಿ ತೊಡಗಿಸಿಕೊಂಡು ಸಾವಿರಾರು ಮಂದಿಯ ಪ್ರಾಣಹಾನಿಗೆ ಕಾರಣವಾಗಿತ್ತೋ ಅಂಥ ದೇಶಕ್ಕೆ ಖುದ್ದು ಒಬಾಮಾ ಭೇಟಿ ನೀಡಿ ನಿರ್ಬಂಧ ತೆರವಿನ ಘೋಷಣೆ ಮಾಡುತ್ತಾರೆ. ಇಲ್ಲೂ ಕಾರಣವಾಗಿ ಒದಗಿಬಂದಿರುವುದು ಚೀನಾವೇ. ಏಕೆಂದರೆ ಸೌತ್ ಚೀನಾ ಸಮುದ್ರ ಮಾರ್ಗದ ವಿಷಯದಲ್ಲಿ ಚೀನಾದೊಂದಿಗೆ ತಕರಾರು ಹೊಂದಿರುವ ದೇಶಗಳಲ್ಲಿ ವಿಯೆಟ್ನಾಂ ಸಹ ಒಂದು. ಒಟ್ಟಾರೆ ಈ ಸಮುದ್ರ ಪ್ರಾಂತವೇ ಕಾರ್ಯತಂತ್ರ ದೃಷ್ಟಿಯಿಂದ ತುಂಬ ಪ್ರಾಮುಖ್ಯ ಹೊಂದಿದ್ದು, ಇದನ್ನು ಇಡಿ ಇಡಿಯಾಗಿ ಆವರಿಸಿಕೊಳ್ಳುವ ಚೀನಾದ ಪ್ರಯತ್ನದ ವಿರುದ್ಧ ಆ ಪ್ರದೇಶದ ಹಲವು ರಾಷ್ಟ್ರಗಳು ಪ್ರತಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಇಂಥ ಪ್ರತಿರೋಧದ ಧ್ವನಿಗಳಿಗೆ ಅಮೆರಿಕ ಬಲ ನೀಡುತ್ತ ಬಂದಿದೆ. ಇದೀಗ ‘ವಿಯೆಟ್ನಾಂ ಸಿಮೆಂಟ್’ ನಲ್ಲಿ ಭಾರತವನ್ನೂ ಬೆಸೆದಿಡುವ ಅವಕಾಶ ಕಳೆದುಕೊಳ್ಳುವುದಕ್ಕೆ ಅಮೆರಿಕ ಸಿದ್ಧವಿಲ್ಲ.

South_China_Sea_claims_map

ಇದೇ ಶುಕ್ರವಾರ ಅಮೆರಿಕ ಮತ್ತು ಭಾರತದ ಯುದ್ಧನೌಕೆಗಳು ಜಪಾನ್ ಜತೆ ಸೇರಿಕೊಂಡು ಅದರ ಸಮುದ್ರ ತೀರದಲ್ಲಿ ತಾಲೀಮು ನಡೆಸಲಿವೆ. ಇದೂ ಸಹ ಚೀನಾಕ್ಕೆ ಎಚ್ಚರಿಕೆ ಹೇಳುವ ಕಾರ್ಯಕ್ರಮವೇ. ಸೌತ್ ಚೀನಾ ಸೀ ವಿಚಾರದಲ್ಲಿ ಜಪಾನಿಗೆ ಸಹ ಚೀನಾ ಜತೆ ತಕರಾರಿದೆ.

ಭಾರತದ ದೃಷ್ಟಿಯಿಂದ ನೋಡಿದರೂ ಸಹ ಆರ್ಥಿಕತೆ, ಭೌಗೋಳಿಕ ವಿಸ್ತರಣೆ ವಿಷಯದಲ್ಲಿ ಆತಂಕ ಎದುರಾಗಿಸಿರೋದು ಚೀನಾವೇ. ಜತೆಗೆ ಮೊದಲೇ ಹೇಳಿದಂತೆ ಪಾಕಿಸ್ತಾನವನ್ನು ಅಮೆರಿಕ ದೂರ ಮಾಡುತ್ತಿರುವುದೂ ಭಾರತಕ್ಕೆ ಆಶಾದಾಯಕ ಅಂಶ. ಇವೆಲ್ಲ ಮೇಳೈಸಿಕೊಂಡು ಈ ಕ್ಷಣಕ್ಕೆ ಒಬಾಮಾ ನಮ್ಮ ಆಪ್ತ ಮಿತ್ರರಾಗಿದ್ದಾರೆ.

ಇನ್ನು, ಭಾರತ- ಅಮೆರಿಕಗಳ ಅಣುಬಂಧ ಗಟ್ಟಿಯಾಗುತ್ತಿದ್ದಂತೆ ಅಣು ಸ್ಥಾವರಗಳ ನಿರ್ಮಾಣಕ್ಕೆ ಆತುಕೊಳ್ಳಬೇಕಿರುವುದು ಅಮೆರಿಕದ ಕಂಪನಿಗಳನ್ನೇ. ಈ ನಿಟ್ಟಿನಲ್ಲಿ ಎನರ್ಜಿ ತಂತ್ರಜ್ಞಾನಗಳನ್ನು ತಮ್ಮಲ್ಲಿರಿಸಿಕೊಂಡಿರುವ ವೆಸ್ಟಿಂಗ್ ಹೌಸ್ ಮತ್ತು ಜನರಲ್ ಎಲೆಕ್ಟ್ರಿಕ್ ಸಂಸ್ಥೆಗಳು ಒಬಾಮಾಡಳಿತದ ಮೇಲೆ ತಮ್ಮ ಲಾಬಿ ಹೆಚ್ಚಿಸಿರೋದು ಸ್ಪಷ್ಟ. ಅಮೆರಿಕದೊಂದಿಗೆ ಭಾರತ ಮಾಡಿಕೊಳ್ಳುತ್ತಿರುವ ಸೌರ ವಿದ್ಯುತ್ ಕುರಿತ ಒಪ್ಪಂದಗಳಿಂದಲೂ ಕಂಪನಿಗಳಿಗೆ ಲಾಭವಿದೆ.

ಈ ಬಗೆಯ ಚಿಕ್ಕಪುಟ್ಟ ವಿವರಗಳು ಹಲವಿದ್ದರೂ ಮೋದಿ- ಒಬಾಮಾ ಅಪ್ಪುಗೆಯ ಪ್ರತಿಬಿಂಬವನ್ನು ಹುಡುಕಬೇಕಿರುವುದು ದಕ್ಷಿಣ ಚೀನಾ ಸಮುದ್ರದಲ್ಲೇ!

Leave a Reply