ಕನ್ನಡ ಅವತರಣಿಕೆ ಪ್ರಾರಂಭಿಸಿದೆ ಪ್ರಧಾನಿ ಕಚೇರಿ ಜಾಲತಾಣ, ಕೇಂದ್ರದ ಕೇಳಿಸಿಕೊಳ್ಳುವ ಗುಣ ತಂದಿದೆ ಸಮಾಧಾನ

 

ಡಿಜಿಟಲ್ ಕನ್ನಡ ಟೀಮ್:

ಕೆಲವಾರಗಳ ಹಿಂದೆ ಪ್ರಧಾನಿ ಕಾರ್ಯಾಲಯದ ಜಾಲತಾಣವು ಆರು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾದಾಗ ಅದರಲ್ಲಿ ಕನ್ನಡ ಇರಲಿಲ್ಲ. ತಮಿಳು, ತೆಲಗು, ಮರಾಠಿಗಳಿಗೆಲ್ಲ ಪ್ರಥಮ ಪ್ರಾಶಸ್ತ್ಯದಲ್ಲೇ ಜಾಗ ಸಿಕ್ಕಿರುವಾಗ ಕನ್ನಡಕ್ಕೇಕಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು.

ಈ ಎಲ್ಲ ಅಭಿಪ್ರಾಯಗಳಿಗೆ ತ್ವರಿತವಾಗಿ ಸ್ಪಂದಿಸಿದಂತಿರುವ ಪ್ರಧಾನಿ ಕಾರ್ಯಾಲಯ ತ್ವರಿತವಾಗಿಯೇ ಕನ್ನಡ ಅವತರಣಿಕೆಯನ್ನೂ ಲಭ್ಯವಾಗಿಸಿದೆ. ಪ್ರಧಾನಿ ಅಮೆರಿಕ ಭೇಟಿಯ ವರದಿಗಳು ಕನ್ನಡದಲ್ಲಿ ದೊರಕುತ್ತಿವೆ. ಹಲವು ಕಡೆಗಳಲ್ಲಿ ಇಂಗ್ಲಿಷ್ ನಲ್ಲೇ ಬರಹಗಳಿದ್ದು, ಇದನ್ನು ಕನ್ನಡದಲ್ಲಿ ದೊರಕಿಸಲಾಗುವುದು ಎಂಬ ಭರವಸೆಯನ್ನು ಅಲ್ಲಿಯೇ ನೀಡಲಾಗಿದೆ. ಈಗಷ್ಟೇ ಪ್ರಾರಂಭಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚುಕಟ್ಟು ಮಾದರಿಗಳನ್ನು ನಿರೀಕ್ಷಿಸಬಹುದಾಗಿದೆ.

ಪ್ರಾದೇಶಿಕ ಭಾಷೆಗಳ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ಇಲ್ಲದಿರುವುದರ ಬಗ್ಗೆ ಟ್ವಿಟ್ಟರ್ ನಲ್ಲಿ ಹಲವು ಕನ್ನಡಿಗರು ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ಸೌಲಭ್ಯ ಉದ್ಘಾಟಿಸಿದ್ದ ಸುಷ್ಮಾ ಸ್ವರಾಜ್ ಅವರನ್ನು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ಬಹಳ ತ್ವರಿತವಾಗಿ ಕನ್ನಡ ಅವತರಣಿಕೆ ಲಭ್ಯವಾಗಿದೆ. ಅಂತೆಯೇ ರಾಜ್ಯಸಭೆಗೆ ಕರ್ನಾಟಕದಿಂದ ನಾಮಪತ್ರ ಸಲ್ಲಿಸಿರುವ ಬಿಜೆಪಿಯ ನಿರ್ಮಲಾ ಸೀತಾರಾಮನ್ ಸಹ ಕನ್ನಡ ಕಲಿಯಲು ಪ್ರಯತ್ನಿಸಿ, ಕೇಂದ್ರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡುವುದಾಗಿ ಹೇಳಿದ್ದರು. ಇವೆಲ್ಲವೂ ಒಂದೆಡೆ ಕನ್ನಡಿಗರು ತಮ್ಮ ಹಕ್ಕುಗಳನ್ನು ಮಂಡಿಸುತ್ತಿರುವ ಮಾದರಿಯನ್ನು ಹಾಗೂ ಮತ್ತೊಂದೆಡೆ ಇಂಥ ಜನಾಗ್ರಹಗಳನ್ನು ಕೇಂದ್ರ ಸರ್ಕಾರ ಕೇಳಿಸಿಕೊಳ್ಳುತ್ತದೆ ಎಂಬ ಭರವಸೆಯನ್ನೂ ಒಟ್ಟಿಗೇ ನೀಡುತ್ತಿವೆ.

3 COMMENTS

  1. ಈಗ ನಮ್ಮ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಷ್ಟು ಸಂತೋಷವಾಗಿದೆ ಧನ್ಯವಾದಗಳು ಗೌರವಾನ್ವಿತ ಪ್ರಧಾನಮಂತ್ರಿಗಳಾದ ನಮೋ ಜಿ ಗೆ.

  2. ಕನ್ನಡಕ್ಕೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ವಂದನೆಗಳು

Leave a Reply