ಡ್ರಗ್ ಮಾಫಿಯಾ ಬಗ್ಗೆ ಎಬಿವಿಪಿ ಮಾತಾಡಿದರೆ ಅದು ಅಧ್ಯಯನ, ಅನುರಾಗ್ ಕಶ್ಯಪ್ ಸಿನಿಮಾ ಮಾಡಿದರೆ ಪಂಜಾಬಿಗೆ ಅವಮಾನ!

ಡಿಜಿಟಲ್ ಕನ್ನಡ ವಿಶೇಷ:

ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹ್ಲಾಜ್ ನಿಹ್ಲಾನಿ ಮಾಧ್ಯಮಗಳೆದುರು ಮಾತನಾಡಿರುವುದರಿಂದ ‘ಉಡ್ತಾ ಪಂಜಾಬ್’ ಚಿತ್ರದಲ್ಲಿ ಅವರಿಗೆ ಆಕ್ಷೇಪಕರ ಎನ್ನಿಸಿದ ಅಂಶಗಳ್ಯಾವವು ಅಂತ ಸ್ಪಷ್ಟವಾಗಿದೆ. ಮಾದಕ ವಸ್ತು ಜತೆ ಪಂಜಾಬ್ ಅನ್ನು ಸಮೀಕರಿಸಿರುವುದೇ ನಿಹ್ಲಾನಿಯವರಿಗೆ ಆಗಿಬಂದಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಅದರಲ್ಲಿ ಪಂಜಾಬಿನ ನಗರಗಳ ಉಲ್ಲೇಖ ತೆಗೆದುಹಾಕಬೇಕು ಎಂದರವರು.

ಬಯ್ಗುಳದ ಶಬ್ದಗಳಿವೆ, ಅವನ್ನೆಲ್ಲ ಅಳಿಸಬೇಕು ಎಂಬುದು ಅವರ ಇನ್ನೊಂದು ಆಗ್ರಹ. ಚಿತ್ರಕ್ಕೆ ಎ ಎಂಬ ವಯಸ್ಕರು ಮಾತ್ರ ನೋಡಬಹುದಾದ ಪ್ರಮಾಣಪತ್ರ ಸಿಕ್ಕಿರುವುದರಿಂದ ಅದನ್ನು ವಯಸ್ಕರ ನಿಷ್ಕರ್ಶೆಗೆ ಬಿಟ್ಟರಾಯಿತು. ಇದರಲ್ಲಿ ಸೆನ್ಸಾರ್ ಮಂಡಳಿ ಅಳಿಸುವ ಹೆಡ್ಮಾಸ್ಟರಿಕೆ ಮಾಡುವುದಿದ್ದರೆ ‘ಎಫ್ ಶಬ್ದ’ಗಳನ್ನೇ ಹಾಸಿಹೊದ್ದಿರುವ ‘ಡೆಲ್ಲಿ ಬೆಲ್ಲಿ’ ಥರದ ಚಿತ್ರಗಳು ಬರಲೇಬಾರದಿತ್ತು. ಇಷ್ಟಕ್ಕೂ ಇಂಥದೊಂದು ಚಿತ್ರ ಮಾಡಿ ಅದಕ್ಕೆ ಯುನಿವರ್ಸಲ್ ಪ್ರಮಾಣಪತ್ರ ಕೇಳಿದ್ದರೆ ಅನುರಾಗ್ ಕಶ್ಯಪ್ ಅವರನ್ನು ಆಕ್ಷೇಪಿಸಬಹುದಿತ್ತು. ಆದರೆ ಅಡಲ್ಟ್ ಚಿತ್ರ ಎಂದು ಘೋಷಿಸಿಕೊಂಡೇ, ಅದೇ ಪ್ರಮಾಣಪತ್ರ ಪಡೆದು ಬರುತ್ತಿರುವಾಗ ಚೌಕಾಶಿ ದುರುದ್ದೇಶಪೂರ್ವಕ.

ಇನ್ನು ಉಡ್ತಾ ಪಂಜಾಬ್ ಪೊಲಿಟಿಕಲ್ ಪ್ರಶ್ನೆಗಳನ್ನು ಎತ್ತಿದೆಯಲ್ಲ ಎನ್ನುವುದಾರೆ.. ಹೌದು ಏನೀಗ?

ಪಂಜಾಬಿನ ಮಾದಕ ವ್ಯಸನ ಸಾಮ್ರಾಜ್ಯದ ಬಗ್ಗೆ ಕೇವಲ ವರ್ಷದ ಹಿಂದಷ್ಟೇ, ಇದೇ ಅಕಾಲಿದಳ- ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಪ್ರಶ್ನೆಗಳೆದ್ದಿದ್ದವು. ಅದನ್ನು ಎತ್ತಿದ್ದು ಆಮ್ ಆದ್ಮಿ ಪಾರ್ಟಿಯವರೇನಲ್ಲ. ಕೇಸರಿ ಪಡೆಯಲ್ಲೇ ಇರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್. ಆಫ್ ಕೋರ್ಸ್… ತಮ್ಮದೇ ಪರಿವಾರದ ಬಿಜೆಪಿ ಪಂಜಾಬಿನ ಅಧಿಕಾರದಲ್ಲಿ ಪಾಲು ಹೊಂದಿದ್ದರೂ ಡ್ರಗ್ ಮಾಫಿಯಾ ಬಗ್ಗೆ ಧ್ವನಿ ಎತ್ತಿದ ಎಬಿವಿಪಿಯನ್ನು ಪ್ರಶಂಸಿಸಬೇಕು. ಆದರೆ ಎಬಿವಿಪಿ ಎತ್ತಿರುವ ಪ್ರಶ್ನೆಗಳನ್ನೇ ಬೇರೊಬ್ಬರು ಕಲಾ ಮಾಧ್ಯಮವಾದ ಸಿನಿಮಾದಲ್ಲಿ ಅಭಿವ್ಯಕ್ತಿಸಿದರೆ ಪಂಜಾಬಿನ ಮಾನ ಹೋಗುವ ವಿಷಯವಾಗುತ್ತದೆಯೇ? ಇದ್ಯಾವ ಸೀಮೆ ತರ್ಕ?

ಎಬಿವಿಪಿ ಪಂಜಾಬಿನ ಮಾದಕ ವ್ಯಸನ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಿದ್ದಷ್ಟೇ ಅಲ್ಲದೇ ಶಿರೋಮಣಿ ಅಕಾಲಿದಳದ ನಾಯಕ, ರಾಜ್ಯದ ಕಂದಾಯ ಸಚಿವ ಮಜಿಥಾ ರಾಜೀನಾಮೆ ಕೊಡಬೇಕು ಅಂತಲೂ ಒತ್ತಾಯಿಸಿತ್ತು. ಆ ವೇಳೆಗೆ ಜಾರಿ ನಿರ್ದೇಶನಾಲಯವು ಬಹುಕೋಟಿ ಮಾದಕ ಜಾಲದ ಸಂಬಂಧ ಮಾಜಿಥಾರನ್ನು ಪ್ರಶ್ನೆಗೂ ಒಳಪಡಿಸಿತ್ತು. ಆಗ ಪಂಜಾಬ್ ಡ್ರಗ್ ಮಾಫಿಯಾ ಸಂಬಂಧ ಎಬಿವಿಪಿ ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆಗಳು ಈಗಲೂ ಅಂತರ್ಜಾಲದಲ್ಲಿ ಸಾರ್ವಜನಿಕ ಅವಗಾಹನೆಗೆ ಲಭ್ಯವಾಗುವ ದಾಖಲೆಗಳಾಗಿ ಉಳಿದುಕೊಂಡಿವೆ.

abvp on punjab drug menace

ಇಲ್ಲೆಲ್ಲ ಎಬಿವಿಪಿ ಪ್ರತಿಪಾದಿಸಿದ್ದ ಅಂಶಗಳು ಹೀಗಿದ್ದವು.

– ಪಂಜಾಬಿನಿಂದ ಸಶಸ್ತ್ರ ಪಡೆ ಸೇರುತ್ತಿದ್ದ ಯುವಕರ ಪ್ರಮಾಣ ಶೇ. 17ರಿಂದ ಶೇ. 0.75ಕ್ಕೆ ಕುಸಿಯುವುದಕ್ಕೆ ಯುವಕರು ಮಾದಕ ವ್ಯಸನಿಗಳಾಗುತ್ತಿರುವುದೇ ಕಾರಣ.

– ನಾವು ಯಾವ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ. ಆದರೆ ಪಂಜಾಬಿನಲ್ಲಿ ಬೇರುಮಟ್ಟದಿಂದಲೇ ಡ್ರಗ್ ನಿರ್ಮೂಲನ ಮಾಡುವುದು ಜನರ ಹಿತದೃಷ್ಟಿಯಿಂದ ತುಂಬ ಮುಖ್ಯವಾಗಿದೆ. ಇದಕ್ಕೆ ಅಧಿಕಾರದಲ್ಲಿರುವ ಯಾರನ್ನೇ ಎದುರುಹಾಕಿಕೊಳ್ಳುವುದಕ್ಕೂ ನಾವು ಹಿಂಜರಿಯುವುದಿಲ್ಲ.

ಇದು ಎಬಿವಿಪಿ ಕತೆಯಾದರೆ, ಬಾಬಾ ರಾಮ್ದೇವ್ ಸಹ ‘ಪಂಜಾಬಿನ ಶೇ. 80ರಷ್ಟು ಯುವಕರು ಮಾದಕ ವ್ಯಸನಿಗಳು ಅಂತ ಪತ್ರಿಕೆಗಳಲ್ಲಿ ಓದಿ ತಿಳಿದಿದ್ದೇನೆ. ಹೀಗಾಗಿ ಅಲ್ಲಿಗೆ ಯೋಗವನ್ನು ಕೊಂಡೊಯ್ಯುವ ಅಗತ್ಯ ತುಂಬ ಇದೆ’ ಎಂದಿದ್ದು ಸಹ ಮಾಧ್ಯಮಗಳಲ್ಲಿ ವ್ಯಾಪಕವಾಗಿಯೇ ವರದಿಯಾಗಿತ್ತು.

ಈ ಒಂದು ವರ್ಷದಲ್ಲಿ ಪಂಜಾಬ್ ರಾಮರಾಜ್ಯವಾಗಿದೆಯೇ? ನಿರ್ಮಾಪಕ ಅನುರಾಗ್ ಕಶ್ಯಪ್ ಹೇಳಿರುವಂತೆ ಸಿನಿಮಾದ ಸ್ಕ್ರಿಪ್ಟ್ ಪ್ರಕ್ರಿಯೆ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಆ ವಿವರ ಕಡೆಗಣಿಸಿದರೂ ಚಿತ್ರವೊಂದು ಸಿದ್ಧವಾಗುವುದಕ್ಕೆ ಆರು ತಿಂಗಳಿಂದ ವರ್ಷದ ಅವಧಿ ಬೇಕೇ ಬೇಕು. ಅಲ್ಲಿಗೆ… 2015ರಲ್ಲಿ ಎಬಿವಿಪಿ ಪ್ರತಿಪಾದಿಸಿದ್ದಕ್ಕೂ ಇವತ್ತಿಗೂ ಬದಲಾಗಿಬಿಟ್ಟಿರೋದಾದ್ರೂ ಏನು? ಪಂಜಾಬ್ ಮಾದಕ ವ್ಯಸನ ಸಮಸ್ಯೆ ಬಗ್ಗೆ ಉಡ್ತಾ ಪಂಜಾಬ್ ಚಿತ್ರಕ್ಕೆ ಸಹ ತನ್ನದೇ ಮಾರ್ಗ- ಮಾದರಿಗಳಲ್ಲಿ ಪ್ರಶ್ನೆಗಳನ್ನೆತ್ತುವ ಹಕ್ಕು ಇದ್ದೇ ಇದೆ. ಅದೇನು ಎಬಿವಿಪಿಗಷ್ಟೇ ಸೀಮಿತವೇ?

ಇನ್ನು ಶೀಲ- ಅಶ್ಲೀಲಗಳ ಪ್ರಶ್ನೆ. ಪಹ್ಲಾಜ್ ಕಾಲದಲ್ಲಿ ಯಾವ ಆಂಗಿಕ ಅಭಿನಯ- ಮೈ ತೋಯುವ ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸುವ ಅವಕಾಶವಿತ್ತೋ, ‘ಉಡ್ತಾ ಪಂಜಾಬ್’ನ ಟ್ರೈಲರ್ ಗಳಲ್ಲಿ ಕೇಳಸಿಗುವ ‘ಕಸ್’ ಶಬ್ದಗಳಿಗೂ ಆಕ್ಷೇಪಕ್ಕೆ ಜಾಗವಿದ್ದಿರಬಹುದು. ಆದರೆ ಅಡಲ್ಟ್ ಹಣೆಪಟ್ಟಿಯಲ್ಲೂ ಹೊರಬರುವುದನ್ನು ತಡೆಯಬೇಕು ಎನ್ನುವುದೇ ವಾದವಾಗಿದ್ದರೆ, ಇದೇ ಪಹ್ಲಾಜ್ ನಿಹ್ಲಾನಿ ಈ ಹಿಂದೆ ಹಣ ಹೂಡಿದ್ದ ಕೆಲವು ಚಿತ್ರಗಳು ಅಶ್ಲೀಲದ ಮುದ್ರೆ ಹೊತ್ತು ಕೊಳೆಯಬೇಕಾಗಿತ್ತು. ಹಾಗೇನೂ ಆಗಿಲ್ಲ. ನಿಹ್ಲಾನಿ ನಿರ್ಮಾಣದ ಚಿತ್ರಗಳ ಹಾಡು- ದೃಶ್ಯಗಳಿಗೆ ಇರುವ ಮೈ ಬಿಸಿ ಏರಿಸೋ ತಾಕತ್ತು ಬಹುಶಃ ಎಷ್ಟೇ ಅಬ್ಬರಿಸಿದರೂ ಅನುರಾಗ್ ಕಶ್ಯಪ್ ಚಿತ್ರಗಳಿಗೆ ದಕ್ಕಲಿಕ್ಕಿಲ್ಲ… ಈ ಮಾತಲ್ಲಿ ನಂಬಿಕೆ ಇಲ್ಲದಿದ್ದರೆ ನೀವು ಮಡಿವಂತಿಕೆ ಬಿಟ್ಟು ಪಹ್ಲಾಜ್ ನಿಹ್ಲಾನಿ ನಿರ್ಮಿಸಿರುವ ‘ಆಗ್ ಕಾ ಗೋಲಾ’ ಹಾಗೂ ‘ಆಂಖೇನ್’ ಚಿತ್ರದ ಕೆಲಭಾಗಗಳನ್ನು ಕಣ್ಣುತುಂಬಿಸಿಕೊಳ್ಳಬಹುದು.

ಕೊನೆಯಲ್ಲಿ, ಹಿಂದಿನ ವರ್ಷ ‘ಪ್ರೇಮ ರತನ್ ಧನ್ ಪಾಯೋ’ ಚಿತ್ರದ ಮಧ್ಯೆ ಪ್ರದರ್ಶಿತಗೊಂಡ ನಿಹ್ಲಾನಿ ನಿರ್ದೇಶಿತ ಮೋದಿ ಭಜನೆಯನ್ನು ವೀಕ್ಷಿಸುವ ಶ್ರಮ ತೆಗೆದುಕೊಂಡರೆ ಅಸಹ್ಯ- ಅಶ್ಲೀಲ ಎಂಬ ಪದಗಳಿಗೆ ಬೇರೆಯದೇ ಅರ್ಥವೂ ನಿಮಗೆ ಸ್ಫುರಿಸೀತು!

Leave a Reply