ಮುಷ್ಕರ ಬೆಂಬಲಿಸೋ ಅಂಗಡಿಗಳ ಶಾಶ್ವತ ಬಂದ್, ಅನುಪಮಾ ವಿಚಾರದಲ್ಲಿ ತಾಳ್ಮೆ ಸಿಎಂ ನಿಲುವು, ಕಾಂಗ್ರೆಸ್-ಬಿಜೆಪಿ ಕುದುರೆ ವ್ಯಾಪಾರಕ್ಕೆ ಗೌಡರ ಸಿಡಿಮಿಡಿ, ಉಡ್ತಾ ಪಂಜಾಬ್ ವಿವಾದ ತಾರಕಕ್ಕೆ…

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದ ಬಳಿ ಕಾವೇರಿ ಸುರಂಗ ಸಂಪನ್ನಗೊಂಡು ಕೊರೆವ ಯಂತ್ರವು ಹೊರಬರುತ್ತಿರುವ ಸಂದರ್ಭದಲ್ಲಿ ಮೆಟ್ರೊ ಕಾರ್ಮಿಕರು ಬುಧವಾರ ಸಂಭ್ರಮಾಚರಣೆಯನ್ನೇ ಮಾಡಿದರು.

ಡಿಜಿಟಲ್ ಕನ್ನಡ ಟೀಮ್:

ಮುಷ್ಕರ, ಬಂದ್ ಕರೆಗೆ ಬೆಂಬಲ ನೀಡುವ ದವಸಧಾನ್ಯ, ಆಹಾರ ಪದಾರ್ಥ ಮಾರಾಟ ಮಳಿಗೆಗಳು, ಚಿಲ್ಲರೆ ಅಂಗಡಿಗಳ ಮಾಲೀಕರ ವಿರುದ್ಧ ಅಗತ್ಯ ಸೇವಾ ಕಾಯ್ದೆಯಡಿ (ಎಸ್ಮಾ) ಕ್ರಮ ಜರುಗಿಸಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಮುಷ್ಕರ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಸಿಗದೆ ನಾಗರಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಚಿಲ್ಲರೆ ವ್ಯಾಪಾರಿಗಳನ್ನು ಎಸ್ಮಾ ಕಾಯ್ದೆಯಡಿ ತರಲು ಅಗತ್ಯ ಕಾನೂನು ರೂಪಿಸಲಾಗುವುದು. ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆ ಉದ್ದೇಶದಿಂದ ವಿದೇಶಿ ಕಂಪನಿಗಳಿಗೆ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಅಂಗಡಿಗಳನ್ನು ಮುಷ್ಕರದಿಂದ ನಿರ್ಬಂಧಿಸುವುದು ಸೇರಿದಂತೆ ಹಲವು ಪ್ರಮುಖ ಅಂಶಗಳುಳ್ಳ ಚಿಲ್ಲರೆ ಮಾರಾಟ ನಿಯಮ ಜಾರಿಗೆ ಸಭೆ ಅನುಮತಿ ನೀಡಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ಚಿಲ್ಲರೆ ಅಂಗಡಿಗಳಲ್ಲಿ ಆಹಾರ ಧಾನ್ಯ ದಾಸ್ತಾನು ಪ್ರಮಾಣ ಹೆಚ್ಚಳ ಮಾಡಲಾಗುವುದು. ಇದರಿಂದ ಕೃತಕ ಅಭಾವ ಸೃಷ್ಟಿಗೆ ಆಸ್ಪದ ಇರುವುದಿಲ್ಲ. ಅದೇ ರೀತಿ ಕೆಲಸಗಾರರ ದುಡಿಮೆ ಅವಧಿ ಇಳಿಕೆಗೆ ಅನುವಾಗುವಂತೆ ಕಾರ್ಮಿಕ ನೀತಿಯನ್ನೂ ಸರಳೀಕರಣಗೊಳಿಸಲಾಗುವುದು ಎಂದರು.

ಮೈಸೂರು ವಿಮಾನ ನಿಲ್ದಾಣ ಸೇವೆ ಒದಗಿಸಲು ಹಲವು ರಿಯಾಯ್ತಿ ನೀಡುವ ಸಂಬಂಧ ಭಾರತೀಯ ವಿಮಾನ ಪ್ರಾಧಿಕಾರದ ಜತೆ ಮಾಡಿಕೊಂಡ ಒಡಂಬಡಿಕೆಯನ್ನು ಐದು ವರ್ಷಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ. ಕಳೆದ ನವೆಂಬರ್ ನಿಂದ ಮೈಸೂರಿನಿಂದ ವಿಮಾನಯಾನ ಯಾನ ಸ್ಥಗಿತಗೊಂಡಿದೆ. ನಿರೀಕ್ಷಿತ ಆದಾಯ ಇಲ್ಲ ಎಂಬ ಕಾರಣಕ್ಕೆ ಏರ್ ಇಂಡಿಯಾ ಹಿಂದೆ ಸರಿದಿದೆ. 2014-15 ರಲ್ಲಿ ಮೈಸೂರು ವಿಮಾನ ನಿಲ್ದಾಣದ ಆದಾಯ ಕೇವಲ 1.53 ಕೋಟಿ ರುಪಾಯಿ. ಆದರೆ ವೆಚ್ಚ 11.96 ಕೋಟಿ ರುಪಾಯಿ. ಹೀಗಾಗಿ ವಿಮಾನ ನಿಲ್ದಾಣ ನಿರ್ವಹಣೆ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಕಷ್ಟಕರವಾಗಿ ಪರಿಣಮಿಸಿತ್ತು. ಪ್ರಯಾಣಿಕರ ಸಂಖ್ಯೆ ಕೇವಲ ಎರಡು, ಮೂರಕ್ಕಿಳಿದು, ದಿನದಿಂದ ದಿನಕ್ಕೆ ನಷ್ಟ ಹೆಚ್ಚುತ್ತಲೇ ಹೋಗಿತ್ತು. ಹೀಗಾಗಿ ಕಿಂಗ್ ಫಿಷರ್ ಏರ್ಲೈನ್ಸ್ ಹಾಗೂ ಜೆಟ್ ಏರ್ವೇಸ್ ಸಂಸ್ಥೆಗಳು ವಿಮಾನ ಯಾನ ಸ್ಥಗಿತಗೊಳಿಸಿವೆ. ಆದರೂ ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯವಾಗಲಿರುವ ಮೈಸೂರಿಗೆ ವಿಮಾನಯಾನ ಸೇವೆ ಅಗತ್ಯ ಎಂಬ ಕಾರಣಕ್ಕೆ ಭಾರತೀಯ ವಿಮಾನಯಾನ ಪ್ರಾಧಿಕಾರದೊಂದಿಗೆ ಮಾಡಿಕೊಂಡ ಒಡಂಬಡಿಕೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ವಿವರಿಸಿದರು.

ಮೈಸೂರಿನ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ನಂಜರಾಜ ಬಹಾದ್ದೂರ್ ಛತ್ರದ ವ್ಯಾಪ್ತಿಯ ಒಂದು ಎಕರೆ ಪ್ರದೇಶ ಹಸ್ತಾಂತರ ಮಾಡಲಾಗುವುದು. ಕೊಡಗಿನ ಹಾರಂಗಿ ಆಣೆಕಟ್ಟು ನಿರ್ಮಿಸುವಾಗ ಭೂಮಿ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದ ಮೂರು ಸಾವಿರ ಎಕರೆ ಅರಣ್ಯ ಭೂಮಿ ಡಿನೋಟಿಫೈ ಮಾಡಲಾಗುವುದು. ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 7300 ಕೋಟಿ ರೂ. ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಕುದುರೆ ವ್ಯಾಪಾರದಲ್ಲಿ ಕಾಂಗ್ರೆಸ್-ಬಿಜೆಪಿ ಷಾಮೀಲು; ದೇವೇಗೌಡ

ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತಕೊರತೆ ಸ್ಥಾನಗಳ ಕುದುರೆ ವ್ಯಾಪಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಷಾಮೀಲಾಗಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆಪಾದಿಸಿದ್ದಾರೆ.

ಪಕ್ಷೇತರ ಶಾಸಕರನ್ನು ಮುಂಬೈ, ಹೈದಾಬಾದ್ ಟೂರ್ ಮಾಡಿಸುತ್ತಿರುವುದು ರೆಸಾರ್ಟ್ ರಾಜಕೀಯ ಅಲ್ಲದೇ ಮತ್ತೇನು? ಇದು ಕುದುರೆ ವ್ಯಾಪಾರವಲ್ಲದೆ ಕತ್ತೆ ವ್ಯಾಪಾರವೇ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಆಯೋಗ ಈ ಎಲ್ಲ ಬೆಳವಣಿಗೆಗಳನ್ನು ಕಣ್ತೆರೆದು ನೋಡಬೇಕು. ರಾಜ್ಯಸಭಾ ಚುನಾವಣೆಯಲ್ಲಿ ಕೇವಲ 32 ಹೆಚ್ಚುವರಿ ಮತಗಳಿದ್ದರೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್ ಬಳಿ 40 ಮತಗಳಿವೆ. ಕುದುರೆ ವ್ಯಾಪಾರ ಯಾರು ಮಾಡುತ್ತಿದ್ದಾರೆ ಎಂಬುದು ಇಲ್ಲೇ ಗೊತ್ತಾಗುತ್ತದೆ. ಮುಂಬೈನಲ್ಲಿ ಸಚಿವರೊಬ್ಬರು ಖುದ್ದು ಹಾಜರಿದ್ದು, ಪಕ್ಷೇತರ ಶಾಸಕರ ಉಪಚಾರ ಮಾಡಿದ್ದಾರೆ. ಈ ಸಚಿವರ ಪಾರುಪತ್ಯೆಗೆ ಬಿಜೆಪಿ ಸಂಪೂರ್ಣ ಬೆಂಬಲ ಕೊಟ್ಟಿದೆ. ವಿಧಾನ ಪರಿಷತ್ತಿನಲ್ಲಿ ಎರಡನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಜತೆ ಬಿಜೆಪಿ ಕೈ ಜೋಡಿಸಿದೆ ಎಂದರು.

ವಿಜಯ್ ಮಲ್ಯ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆ ಮಾಡಿದಾಗ ಜೆಡಿಎಸ್ ಬಳಿ ಇದ್ದದ್ದು ಕೇವಲ ನಾಲ್ಕು ಹೆಚ್ಚುವರಿ ಮತಗಳು. ಆಗ 21 ಮಂದಿ ಜೆಡಿಯು ಸದಸ್ಯರಿದ್ದರು. ಆದರೆ ಈಗ ದೇಶಾದ್ಯಂತ ಜೆಡಿಎಸ್ ಮಾನ ಹರಾಜು ಹಾಕಲಾಗುತ್ತಿದೆ.

ಜೂನ್ 12 ರಂದು ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಂಡಾಯಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಕ್ಷ ಉಳಿಸಿ, ಬೆಳೆಸುವ ದೃಷ್ಟಿಯಿಂದ ಅಂದು ಸಭೆ ಕರೆಯಲಾಗಿದೆ. ಪಕ್ಷದ ಕೆಲ ನಾಯಕರ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅನೇಕ ಕಾರ್ಯಕರ್ತರು ಪತ್ರ ಬರೆದಿದ್ದಾರೆ, ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಸಭೆಯಲ್ಲಿ  ಹೊಸ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗುವುದು. ಯಾರು ಇರಲಿ, ಬಿಡಲಿ ಎಲ್ಲ  ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಕಟ್ಟಿ ಬೆಳೆಸುತ್ತೇನೆ ಎಂದರು.

ಅನುಪಮಾ ಶೆಣೈ ವಿಷಯದಲ್ಲಿ ಆತುರ ನಿರ್ಧಾರ ಇಲ್ಲ; ಸಿದ್ದರಾಮಯ್ಯ

ಕೂಡ್ಲಗಿ ಉಪವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ವಿಷಯದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಅವರ ಮನವೊಲಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆಣ್ಣು ಮಗಳು ಡಿವೈಎಸ್ಪಿ ಹುದ್ದೆಯಲ್ಲಿ ಮುಂದುವರಿಯಬೇಕೆಂದು ಸರ್ಕಾರ ಬಯಸುತ್ತದೆ. ಆದರೆ ಅಧಿಕಾರಿಗಳು ಸರ್ಕಾರಕ್ಕೆ ವಿಧೇಯರಾಗಿರಬೇಕು. ಸರ್ಕಾರದ ಮುಂದೆ ಯಾರೂ ದೊಡ್ಡವರಲ್ಲ ಎಂದು

ಮೌಂಟ್ ಎವರೆಸ್ಟ್ ಏರಿದ ಕೊಪ್ಪಳ ಐಎಫ್‍ಎಸ್ ಅಧಿಕಾರಿ ಪ್ರಭಾಕರ್ ಅವರನ್ನು ವಿಧಾನಸೌಧದಲ್ಲಿ ಸನ್ಮಾನಿಸಿ ಸಂದರ್ಭದಲ್ಲಿ ಬುಧವಾರ ತಿಳಿಸಿದರು.

ಅನುಪಮಾ ಶೆಣೈ ಅವರಿಗೆ ಕಿರುಕುಳವಾಗಿದ್ದರೆ ದೂರು ನೀಡಲಿ. ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ರಾಜೀನಾಮೆ ಕೊಟ್ಟಿರುವುದು ಸರಿಯಲ್ಲ. ಅವರ ರಾಜೀನಾಮೆ ಪ್ರಕರಣದಲ್ಲಿ ಕೆಲ ಮಾಧ್ಯಮಗಳೇ ತೀರ್ಪುಗಾರರ ಕೆಲಸ ಮಾಡುತ್ತಿವೆ. ಸರ್ಕಾರದ ವಿರುದ್ಧ ಸಮರ ಸಾರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನುಪಮಾ ಅವರು ‘ರಮ್ ರಾಜ್ಯ’, ‘ಬೃಹನ್ನಳೆಯರು’ ಎಂದೆಲ್ಲಾ ಫೇಸ್‍ಬುಕ್‍ನಲ್ಲಿ ಅವಹೇಳನ ಮಾಡಿದ್ದಾರೆ ಎನ್ನಲಾದ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದರು.

ಮೌಂಟ್ ಎವರೆಸ್ಟ್ ಏರುವ ಮೂಲಕ ಐಎಫ್‍ಎಸ್ ಅಧಿಕಾರಿ ಪ್ರಭಾಕರ್ ಅವರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮೌಂಟ್ ಎವರೆಸ್ಟ್ ಏರುವುದು ಹುಡುಗಾಟದ ವಿಷಯವಲ್ಲ. ಅದಕ್ಕೆ ತಾಳ್ಮೆ, ಧೈರ್ಯ ಇರಬೇಕು. ಜೀವದ ಹಂಗು ತೊರೆದು ಪ್ರಯತ್ನ ಮಾಡಬೇಕು. ಅದನ್ನು ನಮ್ಮ ಪ್ರಭಾಕರ್ ಮಾಡಿರುವುದು ಶ್ಲಾಘನೀಯ ಎಂದರು.

 

ಉಡ್ತಾ ಪಂಜಾಬ್: ಪಹ್ಲಾಜ್ ವರ್ಸಸ್ ಅನುರಾಗ್

ಸಾಕಷ್ಟು ವಿವಾದದಿಂದ ಸುದ್ದಿಯಾಗಿರೋ ‘ಉಡ್ತಾ ಪಂಜಾಬ್’ ಚಿತ್ರದ ಸೆನ್ಸಾರ್ ವಿಷಯದಲ್ಲಿ ನನಗೆ ಯಾವುದೇ ರಾಜಕೀಯ ಒತ್ತಡಗಳಿಲ್ಲ ಎಂದು ಸಿಬಿಎಫ್ ಸಿ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ತಿಳಿಸಿದ್ದಾರೆ.

ದಿನ ಕಳೆದಂತೆ ಈ ವಿವಾದ ದೊಡ್ಡದಾಗುತ್ತಿದ್ದು, ರಾಜಕೀಯ ಬಣ್ಣವೂ ಪಡೆಯುತ್ತಿದೆ. ಬುಧವಾರ ಈ ಕುರಿತು ಪಹ್ಲಾಜ್ ನಿಹಲಾನಿ ಮತ್ತು ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಮಾತಿನ ಸಮರ ನಡೆದಿದೆ. ಅನುರಾಗ್ ಕಶ್ಯಪ್ ಸಿಬಿಎಫ್ ಸಿ ನಿರ್ಧಾರದ ವಿರುದ್ಧ ಬಾಂಬೆ ಹೈ ಕೋರ್ಟ್ ಮೆಟ್ಟಿಲು ಸಹ ಏರಿದ್ದಾರೆ.

ಈ ವಿವಾದದ ಬಗ್ಗೆ ಉಭಯರು ಹೇಳಿರುವ ಮಾತು ಹೀಗಿವೆ.

– ಸೆನ್ಸಾರ್ ಮಂಡಳಿ ಉಡ್ತಾ ಪಂಜಾಬ್ ಚಿತ್ರವನ್ನು ತಡೆಯುತ್ತಿದೆ ಎಂದು ಹೇಳುವುದು ಸರಿಯಲ್ಲ. ಕೆಲವು ಕಡೆ ಚಿತ್ರಕ್ಕೆ ಕತ್ತರಿ ಹಾಕಿದರೆ ಖಂಡಿತವಾಗಿಯೂ ಚಿತ್ರವನ್ನು ಪ್ರಮಾಣೀಕರಿಸುತ್ತೇವೆ. ಚಿತ್ರದಲ್ಲಿ ಕತ್ತರಿ ಪ್ರಯೋಗ ಸೂಚಿಸಿರುವುದಕ್ಕೂ ಮುಂದಿನ ವರ್ಷ ಪಂಜಾಬ್ ವಿಧಾನ ಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಎಂದಿಗೂ ಸೆನ್ಸಾರ್ ಮಂಡಳಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೀಗಾಗಿ ನನ್ನ ಮೇಲೆ ಯಾವುದೇ ರಾಜಕೀಯ ಒತ್ತಡ ಇಲ್ಲ. ಚಿತ್ರದಲ್ಲಿ ಎಲ್ಲೆಲ್ಲಿ ಕತ್ತರಿ ಪ್ರಯೋಗಿಸಬೇಕು ಎಂಬುದು ಸೋಮವಾರವೇ ತಿಳಿಸಿದ್ದೆವು. ಆದರೆ, ಅನುರಾಗ್ ಕಶ್ಯಪ್ ಇದನ್ನು ಒಪ್ಪುತ್ತಿಲ್ಲ. ಅನುರಾಗ್ ಕಶ್ಯಪ್ ಆಮ್ ಆದ್ಮಿ ಪಕ್ಷದಿಂದ ಹಣ ಪಡೆದಿದ್ದಾರೆ ಎಂಬ ಮಾತು ಸಹ ಕೇಳಿದೆ ಎಂಬುದು ನಿಹಲಾನಿ ವಾದ.

– ನಿಹಲಾನಿ ಅವರು ವಿನಾಕಾರಣ ಸುಳ್ಳು ಹೇಳುವಂತಿಲ್ಲ. ನಾನು ಹಣಪಡೆದಿದ್ದೇನೆ ಎಂಬ ಆರೋಪವನ್ನು ಸಾಬೀತುಪಡಿಸಬೇಕು. ನನ್ನ ಪ್ರಾಮಾಣಿಕತೆಯ ಬಗ್ಗೆ ಅವರು ಮಾತನಾಡುವ ಅಗತ್ಯವಿಲ್ಲ. ಅವರಿಗೆ ಸರಿಯಾಗಿ ಸುಳ್ಳು ಹೇಳಲೂ ಬರುವುದಿಲ್ಲ. ಚಿತ್ರದಲ್ಲಿ ಪಂಜಾಬ್ ಹೆಸರು ಹಾಗೂ ಪಂಜಾಬ್ ರಾಜ್ಯಕ್ಕೆ ಸಂಬಂಧಿಸಿದ ದೃಶ್ಯಗಳಿಗೆ ಕತ್ತರಿ ಹಾಕುವುದಿಲ್ಲ. ಸೆನ್ಸಾರ್ ಮಂಡಳಿ ಚಿತ್ರದ ಪ್ರಮಾಣೀಕರಣದ ಬಗ್ಗೆ ಲಿಖಿತ ರೂಪದಲ್ಲಿ ನಿರ್ಧಾರವನ್ನು ತಿಳಿಸಿಲ್ಲ. ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದೆ. ಹೀಗಾಗಿ ಮಂಡಳಿಯ ವಿರುದ್ಧ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮಂಡಳಿಯ ಅಧಿಕೃತ ನಿರ್ಧಾರದ ಬಗ್ಗೆ ಲಿಖಿತ ರೂಪದಲ್ಲಿ ದಾಖಲೆ ಸಿಕ್ಕ ನಂತರ ಮುಂದಿನ ಕ್ರಮದ ಬಗ್ಗೆ ಹೇಳುತ್ತೇನೆ ಎಂದರು ಅನುರಾಗ್ ಕಶ್ಯಪ್.

ನಿಹಲಾನಿ ಅವರ ನಿರ್ಧಾರದ ವಿರುದ್ಧ ಬಾಲಿವುಡ್ ಚಿತ್ರರಂಗ ವಿರೋಧ ವ್ಯಕ್ತಪಡಿಸಿದೆ. ಚಿತ್ರ ತಂಡದ ಜತೆ ನಿರ್ಮಾಪಕ ಮಹೇಶ್ ಭಟ್ ಸೇರಿದಂತೆ ಹಲವು ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಸೆನ್ಸಾರ್ ಮಂಡಳಿ ಕ್ರಮವನ್ನು ಖಂಡಿಸಿದರು. ಮತ್ತೊಂದೆಡೆ ಆಮ್ ಆದ್ಮಿ ಪಕ್ಷ ಸುದ್ದಿಗೋಷ್ಠಿ ನಡೆಸಿ, ಮುಂಬರುವ ಚುನಾವಣೆಯಲ್ಲಿ ಮಾದಕ ಸೇವನೆ ವಿಷಯವನ್ನು ಜನರ ಮುಂದಿಡುತ್ತೇವೆ ಎಂದಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು..

  • ನಿರೀಕ್ಷೆಯಂತೆ ಬುಧವಾರ ನೈರುತ್ಯ ಭಾರತದಲ್ಲಿ ಮಾನ್ಸೂನ್ ಪ್ರವೇಶವಾಗಿದೆ. ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಮಳೆಯಾಗಿದ್ದು, ಅಧಿಕೃತವಾಗಿ ಮುಂಗಾರಿನ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲವೆಡೆ ಮಳೆಯಾಗಿದೆ. ಇನ್ನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ಮಹಾರಾಷ್ಟ್ರದ ಕರಾವಳಿ ಭಾಗಕ್ಕೂ ವಿಸ್ತರಿಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
  • ಕಳಸಾ ಬಂಡೂರಿ ಯೋಜನೆ ವಿರುದ್ಧ ಬೆಳಗಾವಿ ರೈತರ ಪ್ರತಿಭಟನೆ ವೇಳೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಧರ್ಮಣ್ಣ ತಹಸಿಲ್ದಾರ ಎಂಬ ರೈತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ಮೃತ ರೈತನ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ₹ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದೆಯಾದರೂ, ರೈತರು ತಮ್ಮ ಪಟ್ಟು ಬಿಡದೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸರ್ಕಾರದ ವಿರುದ್ಧವೂ ರೈತರು ಘೋಷಣೆ ಕೂಗಿದರು.

Leave a Reply