ಪಾಕಿಸ್ತಾನವನ್ನು ಪಕ್ಕಕ್ಕಿರಿಸಿ, ಪ್ರಜಾಪ್ರಭುತ್ವದ ಪ್ರಜ್ವಲ ಚಿತ್ರಣದಲ್ಲಿ ಚೀನಾವನ್ನೂ ಮಂಕಾಗಿಸಿ, ಅಮೆರಿಕ-ಭಾರತಗಳೇ ಭವಿಷ್ಯದ ಶಕ್ತಿ ಎಂಬ ನಿರೂಪಣೆಯಲ್ಲಿ ಅಮೆರಿಕ ಸಂಸತ್ತಿನ ಹೃದಯ ಗೆದ್ದ ಮೋದಿ!

 

ಡಿಜಿಟಲ್ ಕನ್ನಡ ಟೀಮ್:

 ಕನಿಷ್ಠ ಆರು ಬಾರಿ ಅಮೆರಿಕ ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ನಡು ನಡುವೆಯೇ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು. ಹೀಗೆ ಎದ್ದು ನಿಂತವರಲ್ಲಿ ಬಹುಶಃ ಅವರನ್ನು ವಿರೋಧಿಸುವ ಸೆನೆಟರ್ ಗಳು ಇದ್ದರು…

ಇದು ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಐತಿಹಾಸಿಕ ಭಾಷಣವನ್ನು ತ್ವರಿತವಾಗಿ- ಸಂಕ್ಷಿಪ್ತವಾಗಿ ತೆರೆದಿಡಬಹುದಾದ ವಿವರಣೆ.

ತಾವು ನಿಂತ ಜಾಗದ ಉಲ್ಲೇಖದೊಂದಿಗೇ ಮಾತು ಪೋಣಿಸುತ್ತ ಹೋದ ನರೇಂದ್ರ ಮೋದಿ ಭಾರತ- ಅಮೆರಿಕಗಳ ಜನ ಹೃದಯಗಳಲ್ಲಿ ಭಾವುಕತೆ- ಹೆಮ್ಮೆ ಎಲ್ಲವನ್ನೂ ಒಸರಿಸುವುದಕ್ಕೆ ಸಂಪೂರ್ಣ ಯಶಸ್ವಿಯಾದರು. ‘ಈ ಪ್ರಜಾಪ್ರಭುತ್ವದ ದೇಗುಲಕ್ಕೆ ನನ್ನನ್ನು ಆಹ್ವಾನಿಸಿದ ನಿಮಗೆ ಕೃತಜ್ಞತೆ. ಏಕೆಂದರೆ ಈ ದೇಗುಲವೇ ಜಗತ್ತಿನ ಹಲವೆಡೆಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ತಲೆಎತ್ತುವುದಕ್ಕೆ ಸ್ಫೂರ್ತಿ ನೀಡಿರುವಂಥದ್ದು’ ಎನ್ನುತ್ತ ಅಮೆರಿಕನ್ನರ ಭಾವತಂತಿ ಮೀಟಿದರು ಮೋದಿ.

ನಂತರ ಅಮೆರಿಕದ ಪ್ರಜಾಪ್ರಭುತ್ವದ ಆಶಯಗಳು ಹಾಗೂ ಭಾರತದ ಪ್ರಜಾಪ್ರಭುತ್ವದ ಆಶಯಗಳು ಹೇಗೆ ಒಂದೇ ಆಗಿವೆ ಎಂಬುದನ್ನು ವಿಸ್ತೃತವಾಗಿ ವಿವರಿಸಿದರು. ಅಬ್ರಹಾಂ ಲಿಂಕನ್ ಹೇಳಿದ ಸ್ವಾತಂತ್ರ್ಯ ಮತ್ತು ಎಲ್ಲ ಮನುಷ್ಯರೂ ಸಮಾನರೆಂಬ ಆಶಯಗಳೆರಡೂ ಭಾರತದ ಪ್ರಜಾಪ್ರಭುತ್ವದಲ್ಲೂ ಧ್ವನಿಸಿವೆ ಎಂದರು.

ಸಂಸತ್ತಿನ ಕಾರ್ಯಕ್ರಮಕ್ಕೂ ಮುಂಚೆ ಸೈನಿಕ ಸ್ಮಾರಕಕ್ಕೆ ಹೋಗಿದ್ದನ್ನು ನೆನಪು ಮಾಡಿಕೊಳ್ಳುತ್ತ, ‘ಈ ನೆಲದ ವೀರಯೋಧರಿಗೆ ಭಾರತ ನಮಿಸುತ್ತದೆ. ಏಕೆಂದರೆ ನಿಮ್ಮ ಯೋಧರು ಯಾವ ತತ್ವಗಳಿಗೆ ಪ್ರಾಣತ್ಯಾಗ ಮಾಡಿದ್ದಾರೋ ಅದೇ ತತ್ವಗಳಿಗೆ ಭಾರತದ ಯೋಧರು ಹಲವು ಯುದ್ಧಗಳಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ’ ಎಂದು ಸಾಮ್ಯವನ್ನು ಬೆಸೆದರು.

ನಂತರದ ಕೆಲಕ್ಷಣಗಳಲ್ಲಿ, ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವವಾಗಿ ಉಳಿಯದು ಎಂದು ಹಲವರು ಸಂಶಯಿಸಿದ್ದ ಭಾರತವು ಹೇಗೆ ತನ್ನ ಹಲವು ವೈವಿಧ್ಯಗಳ ನಡುವೆಯೂ ಒಂದಾಗಿ ತಲೆ ಎತ್ತಿತೆಂಬುದನ್ನು ಬಣ್ಣಿಸಿದರು.

 

ಮೋದಿಯವರು ನೆನೆದ ನಾಲ್ವರು ಭಾರತೀಯರು

ಅಮೆರಿಕ- ಭಾರತ ಬೆಸುಗೆ ಬಣ್ಣಿಸುವಾಗ ನರೇಂದ್ರ ಮೋದಿ ನಾಲ್ವರು ಭಾರತೀಯರನ್ನು ನೆನೆದರು. ಅವರೆಂದರೆ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅಟಲ್ ಬಿಹಾರಿ ವಾಜಪೇಯಿ. ಇವರನ್ನೆಲ್ಲ ಯಾವ ಚೌಕಟ್ಟಿನಲ್ಲಿ ಕಟ್ಟಿಕೊಟ್ಟರೆಂಬುದೂ ಕೌತುಕವೇ.

– ಸ್ವಾಮಿ ವಿವೇಕಾನಂದರ ಮಾನವತೆ ಆಶಯ ಪರಿಣಾಮಕಾರಿಯಾಗಿ ಧ್ವನಿಸಿದ್ದು ಷಿಕಾಗೊದಲ್ಲಿ..

– ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಪ್ರೇರಣೆ ಒದಗಿಸಿದ್ದು ಭಾರತದ ಗಾಂಧಿ. ವಾಷಿಂಗ್ಟನ್ ನಲ್ಲಿ ಕೇವಲ ಮೂರು ಕಿಲೋಮೀಟರ್ ಗಳ ಅಂತರದಲ್ಲಿರುವ ಗಾಂಧಿ ಪ್ರತಿಮೆ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕಗಳು ಈ ಬಂಧವನ್ನು ಎಷ್ಟು ಚೆನ್ನಾಗಿ ಧ್ವನಿಸುತ್ತಿವೆ… ಎಂದು ಮೋದಿ ವರ್ಣಿಸಿದಾಗ ಅಮೆರಿಕ ಸಂಸದರು ರೋಮಾಂಚನಗೊಂಡಿದ್ದು ಸ್ಪಷ್ಟವಾಗಿತ್ತು.

– ಅಮೆರಿಕದ ಕೊಲಂಬಿಯಾ ಯುನಿವರ್ಸಿಟಿಯಲ್ಲಿಓದಿದ ಡಾ. ಬಾಬಾ ಸಾಹೇಬ ಅಂಬೇಡ್ಕರರ ಮೇಲೆ ಇಲ್ಲಿನ ಸಂವಿಧಾನ ಎಂಥ ಪ್ರಭಾವ ಬೀರಿತ್ತು ಎಂದರೆ ಮೂರು ದಶಕಗಳ ನಂತರ ಭಾರತದ ಸಂವಿಧಾನ ರಚನೆಗೆ ಅದು ನೆರವಾಯ್ತು.

– ಅಮೆರಿಕ ಮತ್ತು ಭಾರತಗಳು ಸ್ವಾಭಾವಿಕ ಸ್ನೇಹಿತರು, ಹಿಂಜರಿಕೆ ನೆರಳುಗಳಿಂದ ಹೊರಬರಬೇಕಷ್ಟೆ ಎಂದಿದ್ದರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಈಗದು ಸಾಕಾರವಾಗುತ್ತಿದೆ. ಇತಿಹಾಸದ ಮುಜುಗರಗಳಿಂದ ನಾವು ಹೊರಬಂದಿದ್ದೇವೆ…

 

ಪಾಕಿಸ್ತಾನಕ್ಕೆ ಬಿತ್ತು ಘನವಾದ ಏಟು

ಬಹುಶಃ ಇದು ಮೋದಿ ಭಾಷಣದ ಬಹು ಪ್ರಮುಖ ಮತ್ತು ಪ್ರಖರ ಭಾಗ. ಉಗ್ರವಾದದ ಸವಾಲುಗಳು ಮತ್ತು ಭಾರತ- ಅಮೆರಿಕಗಳು ಅದರ ವಿರುದ್ಧ ಹೇಗೆ ಹೋರಾಡಬೇಕೆಂಬುದನ್ನು ವಿವರಿಸುತ್ತ ಮೋದಿ ಅದ್ಉಬತ ಮತ್ತು ಮಾರ್ಮಿಕವಾಗಿ ಹೇಳಿದ್ದಿಷ್ಟು- ‘ನೀವದನ್ನು ಲಶ್ಕರೆ ತೊಯ್ಬಾ ಎನ್ನಿ, ತಾಲಿಬಾನ್ ಅಥವಾ ಐಸಿಸ್ ಎನ್ನಿ ಇವರೆಲ್ಲರ ಫಿಲಾಸಫಿ ಒಂದೇ. ಅದುವೇ ದ್ವೇಷ. ಇವರು ಭಾರತದ ನೆರೆಯಲ್ಲೂ ಇದ್ದಾರೆ. ಇವರಿಗೆಲ್ಲ ಸ್ಪಷ್ಟ ಸಂದೇಶ ಕಳುಹಿಸಬೇಕು. ಕೇವಲ ಮಿಲಿಟರಿ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಂದ ಇದು ಸಾಕಾರವಾಗುವುದಿಲ್ಲ. ಬದಲಿಗೆ ತಮ್ಮ ನೆಲದಲ್ಲಿ ಉಗ್ರವಾದಕ್ಕೆ ನೀರೆರೆಯುವವರನ್ನು ಏಕಾಂಗಿಯಾಗಿಸಬೇಕು. ಈ ನಿಟ್ಟಿನಲ್ಲಿ ಅಂಥವರಿಗೆ ಸಮ್ಮಾನ ಸಾಧನ ದೊರೆಯದಂತೆ ಹೆಜ್ಜೆ ಇಟ್ಟಿರುವ ಅಮೆರಿಕ ಕಾಂಗ್ರೆಸ್ ಕ್ರಮ ಸೂಕ್ತವಾದದ್ದು..’ ಹೀಗೆ ಹೇಳುತ್ತ ಪಾಕಿಸ್ತಾನಕ್ಕೆ ಯುದ್ಧವಿಮಾನ ಕೊಡುವುದಕ್ಕೆ ಆಕ್ಷೇಪಿಸಿದ ಅಮೆರಿಕ ಸಂಸತ್ತನ್ನು ಪರೋಕ್ಷವಾಗಿ ಪ್ರಶಂಸಿಸಿದರು ಮೋದಿ.

 

ಯೋಗ- ಸ್ಪೆಲ್ಲಿಂಗ್ ಬಿ ಉದಾಹರಣೆ ಮೂಲಕ ಸೆಳೆತ

– ಉಭಯ ದೇಶಗಳ ನಡುವಿನ ಜನರ ಸಂವೇದನೆ ಹೇಗೆ ಸೇರಿಕೊಂಡಿದೆ ನೋಡಿ. ಅಮೆರಿಕದಲ್ಲಿ 3 ಕೋಟಿ ಯೋಗಾಭ್ಯಾಸಿಗಳಿದ್ದಾರಂತೆ. ಇದು ಇಲ್ಲಿನ ಜನಪ್ರಿಯ ‘ಕರ್ವ್ ಬಾಲ್’ ಆಡುವವರಿಗಿಂತ ಹೆಚ್ಚಿನ ಸಂಖ್ಯೆ. ಆದರೂ ಭಾರತವು ಯೋಗದ ಬೌದ್ಧಿಕ ಸ್ವಾಮ್ಯ ನಮಗೇ ಸೇರಬೇಕು ಅಂತ ಹಕ್ಕೊತ್ತಾಯ ಇಟ್ಟಿಲ್ಲ ಅಂತ ಮೋದಿ ಹಾರಿಸಿದ ಚಟಾಕಿಯನ್ನು ಇಡೀ ಅಮೆರಿಕ ಸದನ ಮನಸ್ಫೂರ್ತಿಯಾಗಿ ಸ್ವೀಕರಿಸಿ ನಗೆಗಡಲಲ್ಲಿ ಮುಳುಗಿತು. ಈ ನಗು ಏಕೆಂದರೆ ಮೋದಿ ಮಾತಿನಲ್ಲಿ ನೋವಿಗೆಡೆಯಿಲ್ಲದ ವ್ಯಂಗ್ಯ ತಿವಿತವೂ ಇತ್ತು. ಅಮೆರಿಕನ್ನರು ಎಲ್ಲದಕ್ಕೂ ಹಕ್ಕುಸ್ವಾಮ್ಯ ಬೇಕೆಂಬ ಮನಸ್ಥಿತಿಯವರು. ಆದರೆ ನಾವು ನೋಡಿ ಉದಾರವಾದಿಗಳು ಅಂತ ತಮಾಷೆ ಮಾಡಿದಂತಿತ್ತು ಪ್ರಧಾನಿ ಮಾತು.

– ಭಾರತದಿಂದ ಬಂದವರು ನಿಮ್ಮ ಕಂಪನಿಗಳ ಸಿಇಒ ಆಗಿದ್ದಾರೆ, ಅರ್ಥಶಾಸ್ತ್ರಜ್ಞರಾಗಿ ರೂಪುಗೊಂಡಿದ್ದಾರೆ, ವೈದ್ಯರುಗಳಾಗಿದ್ದಾರೆ… ಅಷ್ಟೇ ಏಕೆ ಸ್ಪೆಲ್ಲಿಂಗ್ ಬಿ ಸ್ಪರ್ಧೆಯನ್ನೂ ಅವರೇ ಗೆಲ್ಲುತ್ತಿದ್ದಾರೆ… ಎಂದಾಗ ಅಮೆರಿಕ ಸಂಸತ್ತು ಇನ್ನೊಮ್ಮೆ ನಗೆಗಡಲಲ್ಲಿ ಮಿಂದೆದ್ದಿತು!

 

ಅಮೆರಿಕಕ್ಕೆ ಥ್ಯಾಂಕ್ಸ್ ಹೇಳಿದ ಸನ್ನಿವೇಶಗಳು…

– ಅಮೆರಿಕ ವಿಜ್ಞಾನಿ ನಾರ್ಮನ್ ಬೊರ್ಲಾಗ್ ಭಾರತಕ್ಕೆ ಹಸಿರು ಕ್ರಾಂತಿ ತಂದು ಆಹಾರ ಭದ್ರತೆ ಕೊಟ್ಟರು.

-ಉಗ್ರರ ದಾಳಿಗಳಾದಾಗ, ವಿಶೇಷವಾಗಿ ಮುಂಬೈ ದಾಳಿ ಸಂದರ್ಭದಲ್ಲಿ ಭಾರತದ ಪರ ನಿಂತ ಅಮೆರಿಕಕ್ಕೆ ಕೃತಜ್ಞತೆಗಳು.

– ಅಣುಬಂಧವು ನಮ್ಮ ಬಾಂಧವ್ಯವನ್ನೇ ಹಸಿರಾಗಿ ಬದಲಿಸಿದೆ. ಅದಕ್ಕಾಗಿ ವಂದನೆ.

 

ಭಾರತ ಚೆನ್ನಾಗಿದ್ರೆ ಅಮೆರಿಕಕ್ಕೆ ಒಳ್ಳೇದಾಗುತ್ತೆ…

ಇದನ್ನು ವಿವರಿಸುವಾಗ ಭದ್ರತೆಗೆ ಒತ್ತು ಕೊಟ್ಟರು ಮೋದಿ. ಹೆಸರು ಪ್ರಸ್ತಾಪವಾಗದಿದ್ದರೂ ಪರೋಕ್ಷವಾಗಿ ಉಭಯ ದೇಶಗಳು ಚೀನಾ ಪಾರಮ್ಯ ಹೇಗೆ ಎದುರಿಸಬಹುದೆಂಬುದಕ್ಕೂ ಈ ಮಾತುಗಳು ಸೂಚನೆ ಕೊಡುತ್ತಿದ್ದವು. ‘ಭಾರತ ಬಲಿಷ್ಠವಾಗಿ ಸಮೃದ್ಧಿಯಿಂದಿರುವುದು ಅಮೆರಿಕದ ಕಾರ್ಯತಂತ್ರ ದೃಷ್ಟಿಯಿಂದ ಒಳ್ಳೆಯದು. ಏಕೆಂದರೆ ಹಿಂದೂ ಮಹಾಸಾಗರದಲ್ಲಿ ಭಾರತ ಪ್ರಬಲವಾಗಿದೆ. ನಾವಿಬ್ಬರೂ ಸೇರಿ ಏಷ್ಯ- ಆಫ್ರಿಕ ಹಾಗೂ ಫೆಸಿಫಿಕ್ ತೀರಗಳಲ್ಲಿ ನಿರ್ಭೀತ ಸಂಚಾರವೊಂದನ್ನು ಸೃಷ್ಟಿಸಬಹುದು. ಇಲ್ಲಿಗೆ ಬರುವುದಕ್ಕೂ ಮುಂಚೆ ಅಫ್ಘಾನಿಸ್ತಾನಕ್ಕೆ ಹೋಗಿ ಸ್ನೇಹದ ಡ್ಯಾಮ್ ಉದ್ಘಾಟಿಸಿರುವೆ. ಅಲ್ಲಿನ ಏಳ್ಗೆಗೆ ಪ್ರಾಣತೆತ್ತ ಅಮೆರಿಕನ್ನರನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅಪ್ಘನ್ ಮರುನಿರ್ಮಾಣದಲ್ಲಿ ಅಮೆರಿಕದಂತೆ ಭಾರತವೂ ಮುಖ್ಯಪಾತ್ರ ವಹಿಸಿದೆ.’

 

ಜೋಕಾಗಿ ಸ್ವೀಕರಿಸಿದ್ದು…

ವಾಸ್ತವ ಹೇಳುವಾಗ ತಮಾಷೆ ಲೇಪ ಬೇರೆ. ಅಂಥ ಮಾತುಗಳನ್ನು ಭಾಷಣದುದ್ದಕ್ಕೂ ಮೋದಿ ಬಳಸಿದರು. ಆದರೆ ಮೋದಿ ಮಾತುಗಳ ಪೈಕಿ ಸಂಸತ್ ಸದಸ್ಯರು ಶುದ್ಧ ಜೋಕಾಗಿ ಸ್ವೀಕರಿಸಿದ್ದು ಮಾತ್ರ ಸಂಸತ್ ಕಲಾಪದ ಹೋಲಿಕೆಯನ್ನು. ‘ಅಮೆರಿಕದ ಸಂಸತ್ತಿನಲ್ಲಿ ಭಾರಿ ಸಾಮರಸ್ಯವಿದೆ ಎಂದು ಕೇಳಿದ್ದೇನೆ. ನಮ್ಮಲ್ಲೂ ಹಾಗೆ ‘ ಎಂದಾಗ ಮಾತ್ರ ಇದು ಸುಳ್ಳೇ ಸುಳ್ಳು ಎಂಬಂತೆ ಸದಸ್ಯರು ನಗೆಸ್ಫೋಟ ಮಾಡಿದರು.

 

ಪರಿಸರ ಕಾಳಜಿ ಬದ್ಧತೆಗೆ ಭಾರಿ ಚಪ್ಪಾಳೆ

ಶೇ. 7.9ರಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಅಮೆರಿಕ ಹೇಗೆಲ್ಲ ಭಾಗವಹಿಸುವ ಅವಕಾಶವಿದೆ ಎಂಬುದನ್ನು ಮೋದಿ ಸಾದ್ಯಂತವಾಗಿ ವಿವರಿಸಿದರು. ಆದರೆ ಸದಸ್ಯರೆಲ್ಲ ಎದ್ದುನಿಂತು ಚಪ್ಪಾಳೆ ಹೊಡೆದಿದ್ದು ಹವಾಮಾನ ಬದಲಾವಣೆ ತಡೆಯುವಲ್ಲಿ ಹಾಗೂ ನವೀಕೃತ ಇಂಧನ ಬಳಕೆಯಲ್ಲಿ ಅಮೆರಿಕ ಹೊಂದಿರುವಂಥದ್ದೇ ಆಶಯಗಳಿಗೆ ಭಾರತವೂ ಬದ್ಧವಾಗಿದೆ ಎಂಬ ಮಾತು ಮೋದಿ ಬಾಯಿಂದ ಕೇಳಿದಾಗ. ಸೌರ ವಿದ್ಯುತ್ ಯೋಜನೆಗಳಲ್ಲಿ ಅಮೆರಿಕದ ಸಹಯೋಗ ದೊರೆಯುತ್ತಿರುವುದನ್ನು ಮೋದಿ ವಿಶೇಷವಾಗಿ ಪ್ರಸ್ತಾಪಿಸಿದರು.

ಈ ಬಾಂಧವ್ಯ ಕೇವಲ ಇಂದಿನ ಲಾಭಕ್ಕಾಗಿರದೇ ದೀರ್ಘಾವಧಿ ಕನಸನ್ನು ಹೊತ್ತಿದೆ. ಇಬ್ಬರ ಸಹಯೋಗದಲ್ಲಿ ಕೇವಲ ಸಂಪತ್ತನ್ನಷ್ಟೇ ಅಲ್ಲದೇ ಮೌಲ್ಯವನ್ನೂ ಸೃಷ್ಟಿಸೋಣ. ನಮ್ಮ ನಡುವೆ ಹೊಸ ಸ್ವರಮೇಳವೊಂದು ಸೃಷ್ಟಿಯಾಗಿದೆ ಎನ್ನುತ್ತ ಮಾತು ಮುಗಿಸಿದರು ಮೋದಿ.

Leave a Reply