ತಮ್ಮ ನೋವಿಗೆ ಧ್ವನಿಯಾಗಿ ನಿಂತ ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದ್ದಾರೆಯೇ ಅನುಪಮಾ ಶೆಣೈ?

(ಅನುಪಮಾ ಶೆಣೈ ಹೆಸರಿನಲ್ಲಿರುವ ಫೇಸ್ಬುಕ್ ಖಾತೆಯಿಂದ ಆಯ್ದ ಚಿತ್ರ)

ಡಿಜಿಟಲ್ ಕನ್ನಡ ವಿಶೇಷ:

ಡಿವೈಎಸ್ ಪಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕಣ್ಮರೆಯಾಗಿದ್ದ ಅನುಪಮಾ ಶೆಣೈ, ಗುರುವಾರ ಬಳ್ಳಾರಿಯ ಕೂಡ್ಲಗಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಹಾಗೆ ಕಾಣಿಸಿಕೊಳ್ಳುತ್ತಲೇ ಉಡಾಫೆ ಹೇಳಿಕೆ ನೀಡುವ ಮೂಲಕ ಅನುಪಮಾ ಶೆಣೈ ತಮ್ಮನ್ನು ಬೆಂಬಲಿಸಿಕೊಂಡು ಬಂದಿರುವ ಜನರ ವಿಶ್ವಾಸ ಅಲ್ಲಾಡುವಂತೆ ಮಾಡಿದ್ದಾರೆ.

ರಾಜಿನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ ಅಂದಿದ್ದಾರೆ. ಹಾಗಂತ ನೇರವಾಗಿ ಎಸ್ಪಿ ಬಳಿ ತೆರಳಿ ಆ ಪ್ರಕ್ರಿಯೆ ಮುಗಿಸಿದರಾ ಅಂದರೆ ಅದೂ ಇಲ್ಲ. ಯಾವ ಕಾರಣದಿಂದ ರಾಜಿನಾಮೆ ಕೊಡಬೇಕಾಯಿತು, ಯಾವ ಒತ್ತಡದಿಂದ ಈ ಪರಿಸ್ಥಿತಿ ಬಂದಿದೆ ಎಂಬುದನ್ನೂ ವಿವರಿಸಲಿಲ್ಲ. ಹಾಗಿರುವಾಗ ಸಹಜವಾಗಿಯೇ ಫೇಸ್ಬುಕ್ ಪೋಸ್ಟ್ ಗಳ ಕುರಿತು ಪ್ರಶ್ನೆ ಏಳುತ್ತದೆ. ಇದನ್ನೇ ವಿಚಾರಿಸಿದ ವರದಿಗಾರರಿಗೆ ಮನೆಬಾಗಿಲಲ್ಲಿ ಅವರು ಕೊಟ್ಟ ವ್ಯಂಗ್ಯ-ಅಸಡ್ಡೆ ಉತ್ತರವಾದರೂ ಏನು? ಫೇಸ್ಬುಕ್ ನಲ್ಲಿ ಮಂತ್ರಿಗಳ ವಿರುದ್ಧ ಒಂದರ ಹಿಂದೊಂದರಂತೆ ಸ್ಟೇಟಸ್ ಅಪ್ಡೇಟ್ ಆಗುತ್ತಿತ್ತಲ್ಲ ಎಂಬ ಪ್ರಶ್ನೆಗೆ ಅನುಪಮಾ ಶೆಣೈ ನೀಡಿದ ಉತ್ತರ ಬೇಜವಾಬ್ದಾರಿತನದಿಂದ ಕೂಡಿತ್ತು. ಗಾಂಭಿರ್ಯ ಮಾಯವಾಗಿತ್ತು. ಅಚ್ಚರಿ ಅಂಶವೆಂದರೆ ‘ನನಗೆ ಫೇಸ್ಬುಕ್ ಖಾತೆಯೇ ಇಲ್ಲ’ ಅಂದರು. ಅಷ್ಟಕ್ಕೇ ಬದ್ಧರಾದಾರಾ? ಇಲ್ಲ… ಅದೇ ಉಸಿರಿನಲ್ಲಿ ‘ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಆಗಿದ್ದಿರಬಹುದಲ್ಲ? ಮತ್ಯಾರೋ ನನ್ನ ಹೆಸರಲ್ಲಿ ಸ್ಟೇಟಸ್ ಹಾಕಿರಬಹುದು’ ಅಂದರು. ಹೋಗಲಿ, ಇಷ್ಟಕ್ಕೇ ನಿಂತರಾ? ‘ಏನದು? ಫೇಸ್ಬುಕ್ ಅಂದ್ರೇನು ಅಂತಲೇ ನನಗೆ ಗೊತ್ತಿಲ್ಲ’ ಅಂತಾ ವ್ಯಂಗ್ಯಭರಿತ ನಗೆ ಬಿಸಾಕಿದರು.

ಹಾಗಾದರೆ ಇವರು ರಾಜಿನಾಮೆ ಕೊಟ್ಟಿದ್ದು ಯಾಕೆ? ಆ ಪತ್ರವನ್ನು ಪೊಲೀಸ್ ಕಾನ್ಸ್ ಟೇಬಲ್ ಮೂಲಕ ಎಸ್ಪಿ ಚೇತನ್ ಅವರಿಗೆ ಕಳುಹಿಸಿಕೊಟ್ಟದ್ದು ಏಕೆ ?ನಾಲ್ಕು ದಿನಗಳ ಕಾಲ ಅಜ್ಞಾತವಾಸ ಅನುಭವಿಸಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇಲ್ಲ.

ಅಲ್ಲಿಗೆ ಅನುಪಮಾ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲಿಸಿಕೊಂಡಿದ್ದವರ, ಅವರ ಪರ ನಿಂತಿದ್ದ ನಾಡಿನ ಜನರ ಭಾವನಾಸೌಧ ಕುಸಿದಂತಾಯಿತು. ಇದ್ಯಾವ ಮಕ್ಕಳ ಕತೆ ಹೇಳ್ತಿದಾರೆ ಅನುಪಮಾ ಶೆಣೈ? ಡಿವೈಎಸ್ಪಿ ಹುದ್ದೆಯಲ್ಲಿರುವವರಿಗೆ ಫೇಸ್ಬುಕ್ ಅಂದರೇನು ಅಂತ ಗೊತ್ತಿಲ್ಲ ಅಂದ್ರೆ ನಂಬುವ ಮಾತೇ.. ನಾಲ್ಕು ದಿನಗಳ ಮಟ್ಟಿಗೆ ಖಾತೆ ಹ್ಯಾಕ್ ಆಗಿದ್ದೇ ಆದರೆ ಜನ ಸಾಮಾನ್ಯರೇ ದೂರು ಕೊಡುತ್ತಾರೆ. ಫೇಸ್ಬುಕ್ ಅಕೌಂಟ್ ಬ್ಲಾಕ್ ಮಾಡಿಸುತ್ತಾರೆ, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತಾರೆ. ಅಂಥಾದ್ದರಲ್ಲಿ ಅಪರಾಧ ಜಗತ್ತನ್ನು ಹತ್ತಿರದಿಂದ ನೋಡಿಕೊಂಡಿರುವ ಅಧಿಕಾರಿಗೆ ಈ ಬಗ್ಗೆ ದೂರು ದಾಖಲಿಸಬೇಕು ಎನ್ನಿಸುವುದೇ ಇಲ್ಲ ಅಂತಂದ್ರೇ ಇದಕ್ಕೇನು ಹೇಳಬೇಕು?

ಇವೆಲ್ಲ ಹಿನ್ನೆಲೆಗಳನ್ನು ಗಮನಿಸಿದಾಗ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯೆ ಸೂಕ್ತವಾಗಿರುವಂತಿದೆ. ಒಂದೆಡೆ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಶೆಣೈ ವಿದ್ಯಮಾನಕ್ಕೆ ಮುಖ್ಯಮಂತ್ರಿಯವರನ್ನೇ ದೂರುತ್ತ ಇಲ್ಲಿ ಪ್ರಾಮಾಣಿಕ ಅಧಿಕಾರಿ ಮೇಲೆ ರಾಜಕೀಯ ಒತ್ತಡ ಏರ್ಪಟ್ಟಿದೆ ಎಂದು ಆರೋಪಿಸಿದರೆ, ಸುದ್ದಿವಾಹಿನಿಗಳ ಜತೆ ಮಾತನಾಡಿದ ಯಡಿಯೂರಪ್ಪ ಮಾತ್ರ, ‘ಈ ವಿಷಯದಲ್ಲಿ ಅನುಪಮಾ ಅವರು ಹಠ ಮುಂದುವರಿಸುವುದು ಸರಿ ಅಲ್ಲ. ಅನುಪಮಾ ಅವರು ತಮ್ಮ ಸಮಸ್ಯೆ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ಪರಿಹಾರ ಮಾಡಲಾಗುವುದೆಂದು ಮುಖ್ಯಮಂತ್ರಿ ಹೇಳಿರುವಾಗ, ಇವರು ತಮಗೆ ಬೇಕಿರುವ ಪೋಸ್ಟಿಂಗ್ ಮತ್ತು ಸಮಸ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಹಠ ಹಿಡಿಯುವುದರಿಂದ ಒಳ್ಳೆಯದಾಗಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ ಸರ್ಕಾರವು ಶೆಣೈ ಅವರನ್ನು ಸೇವೆಯಲ್ಲಿ ಉಳಿಸಿಕೊಳ್ಳುವ ಆಯ್ಕೆಯನ್ನು ಇನ್ನೂ ತೆರೆದಿರಿಸಿದೆ. ಅವರ ಆಹವಾಲು ಆಲಿಸಲು, ಮನವೊಲಿಸಲು ಅಧಿಕಾರಿಗಳ ವಿಶೇಷ ತಂಡವನ್ನೂ ರಚಿಸಿದೆ. ಇದೆಲ್ಲದರಿಂದ ಈಗ ಜವಾಬ್ದಾರಿ ಅನುಪಮಾರ ಮೇಲೆಯೇ ಹೆಚ್ಚಾಗಿದೆ.

ಅನುಪಮಾ ಶೆಣೈ ದಕ್ಷ, ಪ್ರಾಮಾಣಿಕ ಅಧಿಕಾರಿ, ಬಳ್ಳಾರಿಯಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಂಬುದೆಲ್ಲ ನಿಜವೇ. ಆದರೆ ಅದು ಇನ್ನಷ್ಟು ನೇರವಂತಿಕೆಗೆ ದಾರಿ ಮಾಡಿಕೊಡಬೇಕೇ ಹೊರತು ಉಡಾಫೆಗಲ್ಲ. ಈ ವಿಷಯದಲ್ಲಿ ಜನ ತಮ್ಮ ಮೇಲೆ ಹೂಡಿರುವ ಭಾವನೆಗಳನ್ನು ಅಲ್ಲಾಡಿಸುವ ಬದಲು, ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಹೊಣೆ ಅನುಪಮಾ ಶೆಣೈ ಅವರ ಮೇಲೆಯೇ ಇದೆ.

Leave a Reply