ಕೆಲ ಪ್ರಾಣಿಗಳ ಶಿಕಾರಿಗೆ ಅನುಮತಿ: ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ವಿರುದ್ಧ ಮನೇಕಾ ಗಾಂಧಿ ಗರಂ

ಡಿಜಿಟಲ್ ಕನ್ನಡ ಟೀಮ್:

ಕಾಡು ಪ್ರಾಣಿ ಹಾವಳಿ ಇರುವ ಪ್ರದೇಶಗಳಲ್ಲಿ ಪ್ರಾಣಿ ಹತ್ಯೆಗೆ ಪರವಾನಗಿ ನೀಡಬೇಕೆಂದು ಕೇಂದ್ರ ಪರಿಸರ ಸಚಿವಾಲಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ವಿವಾದಕ್ಕೆ ಕಾರಣವಾಗಿದೆ. ಸಚಿವಾಲಯದ ಈ ಕ್ರಮದ ವಿರುದ್ಧ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಕಿಡಿ ಕಾರಿದ್ದಾರೆ.

ಕಾಡು ಪ್ರಾಣಿಗಳ ಸಂತತಿ ಅವನತಿ ಅಂಚಿನಲ್ಲಿದೆ. ಇವುಗಳ ರಕ್ಷಣೆ ಅಗತ್ಯ ಎಂಬ ಕೂಗು ವಿಶ್ವದಾದ್ಯಂತ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಸಚಿವಾಲಯದ ಈ ನಿರ್ಧಾರ ವ್ಯಾಪಕ ಟೀಕೆಗೆ ದಾರಿ ಮಾಡಿಕೊಟ್ಟಿದೆ. ಕಾಡು ಪ್ರಾಣಿಗಳ ಉಪಟಳವಿರುವ ಪ್ರದೇಶಗಳಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವಣ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಪ್ರದೇಶಗಳಲ್ಲಿ ಕಾಡು ಪ್ರಾಣಿ ದಾಳಿಯಿಂದ ಬೆಳೆ ಹಾನಿಯಾಗುತ್ತಿರುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇಂತಹ ಪ್ರದೇಶಗಳಲ್ಲಿ ಕೆಲವು ಪ್ರಾಣಿಗಳ ಹತ್ಯೆಗೆ ಪರವಾನಿಗೆ ನೀಡಬೇಕೆಂಬುದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ನೀಡಿರುವ ವರದಿಯ ಸಾರ.

ಹೇಳಿಕೇಳಿ ಮನೇಕಾ ಗಾಂಧಿ ಪ್ರಾಣಿ ಹಕ್ಕು ಸಂರಕ್ಷಣೆಯ ಕಾರ್ಯಕರ್ತೆ. ಹಾಗಾಗಿ ಈ ವರದಿಯ ವಿರುದ್ಧ ಅವರು ಕಿಡಿಕಾರಿರುವುದು ಸಹಜ. ಮನೇಕಾ ಗಾಂಧಿ ಸಚಿವರ ಈ ನಿರ್ಧಾರ ಕುರಿತು ಹೇಳಿದ್ದೇನು ಇಲ್ಲಿದೆ ನೋಡಿ.

‘ಪಶ್ಚಿಮ ಬಂಗಾಳದಲ್ಲಿ ಆನೆಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಕೋತಿಗಳನ್ನು, ಗೋವಾದಲ್ಲಿ ನವಿಲು ಕೊಲ್ಲಲು ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ 53 ಕಾಡು ಹಂದಿಯನ್ನು ಕೊಂದಿದ್ದು, ಇನ್ನು 50 ಹತ್ಯೆಗೆ ಅನುಮತಿ ನೀಡಲಾಗಿದೆ. ಸಚಿವರಿಗೆ ಪ್ರಾಣಿ ಕೊಲ್ಲುವ ಲಾಲಸೆ ಹುಟ್ಟಿಕೊಂಡಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ. ಇದೇ ಮೊದಲ ಬಾರಿಗೆ ಪರಿಸರ ಸಚಿವಾಲಯದಿಂದ ಪ್ರಾಣಿ ಹತ್ಯೆಗೆ ಅನುಮತಿ ನೀಡಲಾಗುತ್ತಿದೆ.’

ಮನೇಕಾ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ಜಾವಡೇಕರ್ ನೀಡಿರುವ ಸ್ಪಷ್ಟನೆ ಹೀಗಿದೆ:

‘ಕಾಡು ಪ್ರಾಣಿಗಳ ಹಾವಳಿಯಿಂದ ಕೆಲವು ಪ್ರದೇಶಗಳಲ್ಲಿನ ರೈತರು ದೊಡ್ಡ ಮಟ್ಟದ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಕೇಂದ್ರದ ಕೆಲಸವಲ್ಲ. ರಾಜ್ಯಗಳು ನಿರ್ದಿಷ್ಟ ಪ್ರಾಣಿಗಳ ಹಾವಳಿ ಬಗ್ಗೆ ವರದಿ ನೀಡಿ, ಬೆಳೆ ರಕ್ಷಣೆಗಾಗಿ ಕೊಲ್ಲುವ ಅನುಮತಿ ನೀಡುವಂತೆ ಕೋರುತ್ತವೆ. ಇದಕ್ಕೆ ಕೇಂದ್ರ ಪ್ರತಿಕ್ರಿಯಿಸುತ್ತದಷ್ಟೆ. ಈ ರೀತಿ ದಾಳಿ ಮಾಡುವ ಪ್ರಾಣಿಗಳನ್ನು ಕ್ಷುದ್ರ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ. ಪ್ರಾಣಿಯನ್ನು ಈ ಪಟ್ಟಿಗೆ ಸೇರಿಸಲು ನಿರ್ದಿಷ್ಟ ಪ್ರಕ್ರಿಯೆಯೂ ಇದೆ. ಇದು ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಕುರಿತಂತೆ ಹಿಂದೆಯೂ ನಾವು ಹಲವು ಬಾರಿ ಸುತ್ತೋಲೆ ಹೊರಡಿಸಿದ್ದೆವು. ಈ ಅನುಮತಿ 1972ರಲ್ಲಿ ಜಾರಿಯಾದ ಕಾಡುಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಬರುವ ಪ್ರಾಣಿಗಳಿಗೂ ಅನ್ವಯವಾಗುತ್ತೆ. ರೈತರ ಸಮಸ್ಯೆಗೆ ಅನುಗುಣವಾಗಿ ಈ ಅನುಮತಿ ನೀಡಲಾಗುತ್ತದೆ.’

Leave a Reply