ಎನ್ ಎಸ್ ಜಿ ಉಮೇದುವಾರಿಕೆ ಬೆಂಬಲಿಸಿ ‘ವೆಜಿಟೇರಿಯನ್ ಫೇರ್’ ಭೋಜನದೊಂದಿಗೆ ಬೀಳ್ಕೊಟ್ಟಿತು ಮೆಕ್ಸಿಕೊ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದ ‘ರಾಕ್ ಸ್ಟಾರ್ ಸದೃಶ’ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ, ಗುರುವಾರ ಪಕ್ಕದ ಮೆಕ್ಸಿಕೋಗೆ ತೆರಳಿ ಅಲ್ಲೂ ಉದ್ದೇಶಿತ ಕಾರ್ಯ ಮುಗಿಸಿದ್ದಾರೆ. ಭಾರತವು ಪರಮಾಣು ಪೂರೈಕೆ ಗುಂಪಿಗೆ (ಎನ್ ಎಸ್ ಜಿ) ಸೇರಿಕೊಳ್ಳುವುದಕ್ಕೆ ಮೆಕ್ಸಿಕೊ ಅಧಿಕೃತವಾಗಿ ಸಮ್ಮತಿಸಿದೆ.

ಅಲ್ಲಿಗೆ ಚೀನಾ ಒಂದನ್ನು ಬಿಟ್ಟು ಎನ್ ಎಸ್ ಜಿಯಲ್ಲಿರುವ ಎಲ್ಲ ಪ್ರಮುಖ ರಾಷ್ಟ್ರಗಳ ಒಪ್ಪಿಗೆಯನ್ನು ಭಾರತ ಪಡೆದಂತಾಗಿದೆ. ಪಂಚರಾಷ್ಟ್ರಗಳ ಪ್ರಧಾನಿ ಪ್ರವಾಸದಲ್ಲಿ ಮೆಕ್ಸಿಕೊ ಲಾಸ್ಟ್ ಸ್ಟಾಪ್. ಒಂದೇ ದಿನದ ಪ್ರವಾಸ. ನಿಯೋಗ ಮಟ್ಟದ ಮಾತುಕತೆಯಲ್ಲಿ ಇಂಧನ ಸಂಬಂಧಿ ಚರ್ಚೆಗಳು, ವಿಜ್ಞಾನ- ಬಾಹ್ಯಾಕಾಶ, ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಒಡಂಬಡಿಕೆಗಳಾದವಾದರೂ ಮುಖ್ಯ ಕಾರ್ಯಸೂಚಿ ಇದ್ದಿದ್ದೇ ಎನ್ ಎಸ್ ಜಿ ಸೇರ್ಪಡೆಗೆ ಬೆಂಬಲ ಅಧಿಕೃತಗೊಳಿಸಿಕೊಳ್ಳುವುದಾಗಿತ್ತು.

ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನಾ ನೈತೊ, ಭಾರತದ ಎನ್ ಎಸ್ ಜಿ ಉಮೇದುವಾರಿಕೆಗೆ ಸೈ ಎಂದಿದ್ದರಲ್ಲಿ ನಮ್ಮ ದೇಶದ ಮೇಲೆ ಹೆಚ್ಚುತ್ತಿರುವ ಜಾಗತಿಕ ವಿಶ್ವಾಸದ ಹೊಳಹನ್ನು ಕಾಣಬಹುದು.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ ಎಂಬುದೇ ಚೀನಾದಂಥ ರಾಷ್ಟ್ರ ಎನ್ ಎಸ್ ಜಿಯಲ್ಲಿ ಭಾರತದ ಸೇರ್ಪಡೆ ವಿರೋಧಕ್ಕೆ ಕೊಡುತ್ತಿರುವ ನೆಪ. ಆದರೆ ಮೆಕ್ಸಿಕೊ 1967ರಲ್ಲೇ ‘ಟ್ಲಟೆಲೊಲ್ಕೊ ಒಪ್ಪಂದ’ದ ಮೂಲಕ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರಾಂತ್ಯಗಳನ್ನು ಅಣ್ವಸ್ತ್ರ ಮುಕ್ತ ಪ್ರಾಂತ್ಯ ಎಂಬ ಒಡಂಬಡಿಕೆಗೆ ಆ ಪ್ರದೇಶದ ಎಲ್ಲ ದೇಶಗಳ ಸಹಿ ಹಾಕಿಸಿಕೊಂಡಿತ್ತು. ಕ್ಯೂಬಾ ಮಾತ್ರ ತಡವಾಗಿ ಒಪ್ಪಂದ ಸೇರಿತೆಂಬುದನ್ನು ಬಿಟ್ಟರೆ ಇದು ಇತಿಹಾಸದ ಬಹಳ ದೊಡ್ಡ ಶಾಂತಿ ಪ್ರಯತ್ನ ಎಂಬ ಪ್ರಶಂಸೆ ವ್ಯಕ್ತವಾಗಿ, ಅದರ ಶ್ರೇಯಸ್ಸು ಮೆಕ್ಸಿಕೊಗೆ ಸೇರಿತ್ತು.

ಇಂಥ ಮೆಕ್ಸಿಕೊ, ಭಾರತ ಅಣ್ವಸ್ತ್ರ ರಾಷ್ಟ್ರವಾದರೂ ಅದಕ್ಕೆ ಜವಾಬ್ದಾರಿ ಇದೆ ಎಂಬುದನ್ನು ಪುರಸ್ಕರಿಸಿ ಎನ್ ಎಸ್ ಜಿ ಸೇರ್ಪಡೆಗೆ ಅನುಮೋದನೆ ನೀಡಿದೆ.

ಕೊನೆಯಲ್ಲಿ ಒಂದು ಆಪ್ತ ಚಿತ್ರಣದೊಂದಿಗೆ ಪ್ರಧಾನಿ ಭೇಟಿ ಸಂಪನ್ನಗೊಂಡಿತು. ಮೆಕ್ಸಿಕೊ ಅಧ್ಯಕ್ಷ ತಮ್ಮ ಕಾರಿನಲ್ಲಿ ತಾವೇ ಚಾಲಕರಾಗಿ ಮೋದಿಯವರನ್ನು ರೆಸ್ಟೊರೆಂಟ್ ಒಂದಕ್ಕೆ ಕರೆದೊಯ್ದರು. ಅಧಿಕಾರ ಪ್ರಭಾವಳಿಗಳಿಲ್ಲದೇ ಸಾಮಾನ್ಯ ಸ್ನೇಹಿತರು ಸಾರ್ವಜನಿಕರ ನಡುವೆಯೇ ಉಪಾಹಾರಗೃಹದಲ್ಲಿ ಉಭಯಕುಶಲೋಪರಿಯೊಂದಿಗೆ ಆಹಾರ ಸವಿಯುವ ಚಿತ್ರಣದಂತೆಯೇ ಇದೆ ಮೋದಿ- ನೈತೊ ಔಟಿಂಗ್.

modi mexico

(ಚಿತ್ರಗಳು- ಎಂಇಎ ಟ್ವಿಟ್ಟರ್ ಖಾತೆಯಿಂದ)

Leave a Reply