15 ಪಟ್ಟು ವೇಗ ಪಡೆದಿದೆ ರೈಲ್ವೆ ಹಳಿ ಕಾರ್ಯ! ಇದು ಸಾಧ್ಯವಾಗಿದ್ದು ಹೇಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಇದೇ ಮೊದಲ ಬಾರಿಗೆ ರೈಲ್ವೇ ಕಾರಿಡಾರ್ ನಿರ್ಮಾಣದಲ್ಲಿ ಆಧುನಿಕ ಯಂತ್ರಗಳ ಪ್ರಯೋಗವಾಗ್ತಿದೆ. ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೋರೇಷನ್ ಆಫ್ ಇಂಡಿಯಾ (ಡಿ ಎಫ್ ಸಿ ಸಿ ಐ ಎಲ್) ರೈಲು ಮಾರ್ಗ ನಿರ್ಮಾಣದಲ್ಲಿ ಆಟೋಮ್ಯಾಟಿಕ್ ಟ್ರ್ಯಾಕ್ ಲೇಯಿಂಗ್ ಮಷೀನ್ (ಎನ್ ಟಿ ಸಿ ಅಂತಲೂ ಕರೆಯುತ್ತಾರೆ) ಆಧುನಿಕ ಯಂತ್ರ ಬಳಕೆ ಮಾಡುತ್ತಿದೆ.

ಈ ಪ್ರಯೋಗದಲ್ಲಿ ಎನ್ ಟಿ ಸಿ ಯಂತ್ರ ಜಲ್ಲಿ ಕಲ್ಲಿನ ಹಾದಿಯ ಮೇಲೆ ಕಾಂಕ್ರೀಟ್ ಕಂಬಗಳನ್ನು ಅಡ್ಡಲಾಗಿ ಜೋಡಿಸಿ ಅದರ ಮೇಲೆ ಕಬ್ಬಿಣದ ಹಳಿಗಳನ್ನು ಏಕಕಾಲದಲ್ಲಿ ಅಳವಡಿಸುತ್ತದೆ. ಈ ಯಂತ್ರದ ಕಾರ್ಯವನ್ನು ಡ್ರೋನ್ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಈ ಪ್ರಾಯೋಗಿಕ ಹಂತದಲ್ಲಿ 6 ಸಾವಿರ ಕಿ.ಮೀ ಕಾರಿಡಾರ್ ನಿರ್ಮಾಣ ಹಮ್ಮಿಕೊಂಡಿದೆ ಡಿ ಎಫ್ ಸಿ ಸಿ ಐ ಎಲ್.

ಈ ಪ್ರಯೋಗ ಇಷ್ಟು ದಿನಗಳ ಕಾಲ ಮಂದಗತಿಯಲ್ಲಿ ಸಾಗುತ್ತಿದ್ದ ರೈಲ್ವೇ ಕಾರಿಡಾರ್ ನಿರ್ಮಾಣದ ಕಾರ್ಯವನ್ನು ಇನ್ಮುಂದೆ ತ್ವರಿತವಾಗಿಸಲಿದೆ. ರೈಲ್ವೇ ಕಾರಿಡಾರ್ ನಿರ್ಮಾಣ ಸುಲಭದ ಮಾತಲ್ಲ. ಮಾನವ ನಿರ್ಮಿತ ರೈಲ್ವೇ ಕಾರಿಡಾರ್ ನಲ್ಲಿ ದಿನಕ್ಕೆ ಕೇವಲ 100 ಮೀ. ಉದ್ದದಷ್ಟು ಟ್ರ್ಯಾಕ್ ಸಿದ್ಧವಾಗುತ್ತಿತ್ತು. ಆದರೆ ಈ ಯಂತ್ರ ದಿನಕ್ಕೆ 1.5 ಕಿ.ಮೀ ನಷ್ಟು ಉದ್ದದ ಟ್ರ್ಯಾಕ್ ನಿರ್ಮಾಣ ಮಾಡಲಿದೆ. ಇದರೊಂದಿಗೆ ರೈಲ್ವೇ ಟ್ರ್ಯಾಕ್ ನಿರ್ಮಾಣ 15 ಪಟ್ಟು ವೇಗವಾಗಿ ಸಾಗಲಿದೆ.

ಈ ಯಂತ್ರ ಪ್ರತಿ ನಿಮಿಷಕ್ಕೆ ಹತ್ತು ಕಾಂಕ್ರೀಟ್ ಕಂಬಗಳನ್ನು (ಕಾಂಸ್ರೇಟ್ ಸ್ಲೀಪರ್ಸ್) ಅಡ್ಡಲಾಗಿ ಜೋಡಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿ ಯಂತ್ರವೇ ಕಬ್ಬಿಣ ಹಳಿಗಳನ್ನು ವೆಲ್ಡ್ ಮಾಡುವುದರಿಂದ ರೈಲ್ವೇ ಕಂಬಿಗಳ ಜೋಡಣೆಯಲ್ಲಿ ಯಾವುದೇ ವ್ಯಾತ್ಯಾಸವಾಗುವುದಿಲ್ಲ. ಇದರೊಂದಿಗೆ ರೈಲ್ವೇ ಹಳಿಯ ಗುಣಮಟ್ಟ, ಸುರಕ್ಷತೆ ಹೆಚ್ಚಲಿದೆ.

ಸದ್ಯ ಪೂರ್ವ ಭಾಗದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್-1 ನಲ್ಲಿ ಈ ಪ್ರಾಯೋಗಿಕ ಯೋಜನೆ ನಡೆಯುತ್ತಿದ್ದು, ಟಾಟಾ ಎಎಲ್ ಡಿಇಎಸ್ಎ ಜೆವಿ ಇದರ ಗುತ್ತಿಗೆ ಪಡೆದಿದೆ. ಈ ಮಾರ್ಗದ ಭದನ್, ಮೈಥಾ ಮತ್ತು ದೌಡ್ಕನ್ ಪ್ರದೇಶಗಳಲ್ಲಿ ಮೂರು ಎನ್ ಟಿ ಸಿ ಯಂತ್ರಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ ದಕ್ಷಿಣ ಭಾಗದಲ್ಲಿ ಭಗೇಗ ಪ್ರದೇಶದಲ್ಲಿ ಎನ್ ಟಿ ಸಿ ಯಂತ್ರದ ಮೂಲಕ ರೈಲ್ವೇ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ.

‘ಈ ರೈಲ್ವೇ ಮಾರ್ಗ ಕಾರ್ಯವನ್ನು ಪರಿಶೀಲಿಸಲು ಡ್ರೋನ್ ಗಳ ಬಳಕೆಯಾಗುತ್ತಿದೆ. ಈಗಾಗಲೇ ಚಾಲ್ತಿಯಲ್ಲಿರುವ ಪೂರ್ವ ಭಾಗದ 56 ಕಿ.ಮೀ ಮತ್ತು ಪಶ್ಚಿಮ ಭಾಗದ 42 ಕಿ.ಮೀ ಕಾರಿಡಾರ್ ನಿರ್ಮಾಣದಲ್ಲಿ ಡ್ರೋನ್ ಬಳಸಲಾಗಿದೆ. ಇದರ ಫಲಿತಾಂಶ ಅತ್ಯುತ್ತಮವಾಗಿದ್ದು, ಈ ಕಾಮಗಾರಿಯ ಪ್ರಗತಿ ಬಗ್ಗೆ ಬೇರೆ ವಲಯಗಳ ಅಧಿಕಾರಿಗಳು ಸಹ ಪರಿಶೀಲನೆ ನಡೆಸಲು ಅವಕಾಶ ಮಾಡಿಕೊಟ್ಟಿದೆ’ ಎಂದಿದ್ದಾರೆ ‘ಫೈನಾನ್ಶಿಯಲ್ ಎಕ್ಸ್ ಪ್ರೆಸ್’ ಜತೆ ಮಾತಾಡಿರುವ ಡಿ ಎಫ್ ಸಿ ಸಿ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಆದೇಶ್ ಶರ್ಮಾ.

ಈ ಯಂತ್ರ ಕೇವಲ ಹೊಸ ರೈಲು ಹಳಿ ನಿರ್ಮಾಣವಲ್ಲದೇ ಈಗಾಗಲೇ ನಿರ್ಮಾಣಗೊಂಡಿರುವ ಹಳಿಯನ್ನು ನವೀಕರಿಸುತ್ತದೆ. ಈ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡಬಹುದು.

1 COMMENT

  1. Digital kannada has done a good job by giving due publicity the good work done by Railways. Thanks to our Honourable railway minister Suresh Prabhu.

Leave a Reply