ನಾಳೆ-ನಾಡಿದ್ದು ಮೇಲ್ಮನೆ, ರಾಜ್ಯಸಭೆ ಚುನಾವಣೆ; ಜೆಡಿಎಸ್ ಗೆ ಮಣ್ಣು ಮುಕ್ಕಿಸಲು ಕಾಂಗ್ರೆಸ್-ಬಿಜೆಪಿ ಜಂಟಿತಂತ್ರ

ಡಿಜಿಟಲ್ ಕನ್ನಡ ಟೀಮ್:

ಕುತಂತ್ರ ರಾಜಕೀಯ, ಕುದುರೆ ವ್ಯಾಪಾರದ ಮೂಲಕ ಇಡೀ ದೇಶ ಮುಖ ಕಿವುಚಿ, ಕಣ್ಣರಳಿಸಿ ತನ್ನತ್ತ ನೋಡುವಂತೆ ಮಾಡಿಕೊಂಡ ಮೇಲ್ಮನೆ ಮತ್ತು ರಾಜ್ಯಸಭೆ ಚುನಾವಣೆಗೆ ಕರ್ನಾಟಕ ಶುಕ್ರವಾರ ಮತ್ತು ಶನಿವಾರ ಸಾಕ್ಷಿಯಾಗಲಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ನೇ ಹಾಗೂ ರಾಜ್ಯಸಭೆಯ 3 ನೇ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕೌತುಕದ ಘಟ್ಟ ಮುಟ್ಟಿದೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಪುತ್ರ ಕುಮಾರಸ್ವಾಮಿ ಸಾರಥ್ಯದ ಜಾತ್ಯತೀತ ಜನತಾ ದಳವನ್ನು ಬಗ್ಗು ಬಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಕೈ ಜೋಡಿಸಿರುವುದು ಈ ಚುನಾವಣೆಯ ಮತ್ತೊಂದು ವಿಶೇಷ. ಮೇಲ್ಮನೆಯ 7 ನೇ ಸ್ಥಾನಕ್ಕೆ ಮತಕೊರತೆ ಇರುವ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕ್ರಮವಾಗಿ ಡಾ. ವೆಂಕಟಪತಿ ಹಾಗೂ ಲೆಹರ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದು, ತನ್ನ ಸುಪರ್ದಿಯಲ್ಲಿರುವ ಪಕ್ಷೇತರ ಶಾಸಕರ ಬೆಂಬಲವನ್ನು ಬಿಜೆಪಿಗೆ ತಿರುಗಿಸಲು ಕಾಂಗ್ರೆಸ್ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪರಾಭವದತ್ತ ತೆವಳುತ್ತಿದೆ.

ಇನ್ನೊಂದೆಡೆ ರಾಜ್ಯಸಭೆ ಚುನಾವಣೆಯಲ್ಲೂ ಜೆಡಿಎಸ್ ಹಣೆಬರಹ ಇದಕ್ಕಿಂದ ಭಿನ್ನವಾಗಿರುವಂತೆ ಕಾಣುತ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಫಾರೂಕ್ ವಿರುದ್ಧ ಕಣಕ್ಕಿಳಿಸಿರುವ ಕೆ.ಸಿ. ರಾಮಮೂರ್ತಿ ಗೆಲುವಿಗೆ ಕಾಂಗ್ರೆಸ್ ಟೊಂಕಕಟ್ಟಿ ನಿಂತಿದೆ. ಜೆಡಿಎಸ್ ಸುಪರ್ದಿಯಲ್ಲಿದ್ದ ಪಕ್ಷೇತರರ ಬೆಂಬಲವನ್ನು ಹೈಜಾಕ್ ಮಾಡಿರುವ ಕಾಂಗ್ರೆಸ್ಸಿಗೆ ತಮ್ಮ ಪಕ್ಷದ ಐವರು ಶಾಸಕರ ಬೆಂಬಲ ಇದೆ ಎಂದು ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಬಹಿರಂಗವಾಗಿಯೇ ಹೇಳಿದ್ದಾರೆ. ಕಾಂಗ್ರೆಸ್ ಆಂತರಿಕ ಕಲಹಕ್ಕೆ ಕುಮಾರಸ್ವಾಮಿ ಕೂಡ ಕೊಳವೆ ಜೋಡಿಸಿದ್ದರಾದರೂ, ಅದರಲ್ಲಿ ಎಷ್ಟು ಮತಗಳು ಹರಿದು ಬರುತ್ತವೆ ಎಂಬ ಬಗ್ಗೆ ಖಾತರಿ ಇಲ್ಲ.

ಆದರೆ ದೇಶಾದ್ಯಂತ ಪರಸ್ಪರ ಬಡಿದಾಡುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಮೇಲ್ಮನೆಯ ಒಂದು ಸ್ಥಾನಕ್ಕಾಗಿ ಜತೆಯಾಗಿರುವುದನ್ನೇ ರಾಜಕೀಯ ಹೋರಾಟದ ಅಸ್ತ್ರ ಮಾಡಿಕೊಳ್ಳಲು ಜೆಡಿಎಸ್ ನಿರ್ಧರಿಸಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಇದೇ ಆಟ ಆಡಿರುವ ಜೆಡಿಎಸ್ ಗೆ ಈ ಅಸ್ತ್ರ ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಎಂಬುದು ಗೊತ್ತಿಲ್ಲ.

ಮೇಲ್ಮನೆ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ಸೋಲುವುದರಿಂದ ಪಕ್ಷವೇನೂ ಮುಳುಗಿ ಹೋಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ ಪಕ್ಷದ ಫಲಿತಾಂಶ ಏನಾಗಬಹುದು ಎಂಬುದರ ಸೂಕ್ಷ್ಮ ಸುಳಿವಿದೆ. ಆದರೆ ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿದ್ದ ನಾಯಕರ ಮೇಲೆ ಈ ಚುನಾವಣೆ ಬೆಳಕು ಚೆಲ್ಲಿದ್ದು, ಅವರ ವಿರುದ್ಧ ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಜೂ. 12 ರಂದು ಕರೆದಿರುವ ಜೆಡಿಎಸ್ ಕಾರ್ಯಕರ್ತರ ಸಭೆಯ ಉದ್ದೇಶವೂ ಇದೇ ಆಗಿದೆ.

ಈ ಮಧ್ಯೆ ರೆಸಾರ್ಟ್ ರಾಜಕೀಯ, ಕುದುರೆ ವ್ಯಾಪಾರದ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆ ಮುಂದೂಡಬೇಕೆಂಬ ದೂರಿನ ಬಗ್ಗೆ ಚುನಾವಣೆ ಆಯೋಗ ನಾಳೆ ತೀರ್ಮಾನ ತೆಗೆದುಕೊಳ್ಳಲಿದೆ. ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಾಳೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು ಕಾಂಗ್ರೆಸ್‍ನ ನಾಲ್ವರು, ಬಿಜೆಪಿ ಹಾಗೂ ಜೆಡಿಎಸ್‍ನ ತಲಾ ಈರ್ವರು ಕಣದಲ್ಲಿದ್ದಾರೆ.

ಕಾಂಗ್ರೆಸ್ಸಿನ ರಿಜ್ವಾನ್ ಆರ್ಷದ್, ವೀಣಾ ಅಚ್ಚಯ್ಯ, ಆರ್.ಬಿ.ತಿಮ್ಮಾಪೂರ್, ಅಲ್ಲಂ ವೀರಭದ್ರಪ್ಪ, ಬಿಜೆಪಿಯ ಸೋಮಣ್ಣ, ಲೆಹರ್ ಸಿಂಗ್, ಜೆಡಿಎಸ್ ನ ನಾರಾಯಣಸ್ವಾಮಿ, ವೆಂಕಟಪತಿ ಕಣದಲ್ಲಿರುವವರು. ರಾಜ್ಯಸಭೆಗೆ ಕಾಂಗ್ರೆಸ್ ನ ಆಸ್ಕರ್ ಫರ್ನಾಂಡಿಸ್, ಜೈರಾಂ ರಮೇಶ್, ಕೆ.ಸಿ.ರಾಮಮೂರ್ತಿ, ಬಿಜೆಪಿಯ ನಿರ್ಮಾಲಾ ಸೀತಾರಾಮನ್, ಜೆಡಿಎಸ್ ನ ಫಾರೂಕ್ ಅಭ್ಯರ್ಥಿಗಳು.

ಚುನಾವಣೆಯಲ್ಲಿ ನೋಟಾ ಪದ್ಧತಿ ಜಾರಿಯಲ್ಲಿದೆ. ಯಾವುದೇ ಅಭ್ಯರ್ಥಿ ಸೂಕ್ತವಲ್ಲ ಅನ್ನಿಸಿದರೆ ನೋಟಾ ಮುಂದೆ ಗುರುತು ಹಾಕಲು ಅವಕಾಶವಿದೆ. ಚುನಾವಣೆ ಅಧಿಕಾರಿಗಳು ಒದಗಿಸುವ ಸ್ಕೆಚ್ ಪೆನ್ ಮೂಲಕ ಶಾಸಕರು ಮತಪತ್ರದಲ್ಲಿ ಗುರುತು ಹಾಕಬೇಕು. ಬೇರೆ ಪೆನ್‍ ಬಳಸಿದರೆ ಆ ಮತ ಅಸಿಂಧುವಾಗಲಿದೆ. ಪರಿಷತ್ ಚುನಾವಣೆಯಲ್ಲಿ ಗುಪ್ತ ಮತದಾನ ಆಗಲಿದೆ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ತಮ್ಮ ಪಕ್ಷಗಳ ಚುನಾವಣಾ ಏಜೆಂಟರಿಗೆ ಮತಪತ್ರ ತೋರಿಸಿ ಮತದಾನ ಮಾಡಬೇಕು. ಇಲ್ಲದಿದ್ದರೆ ಆ ಮತ ಅಸಿಂಧುವಾಗುತ್ತದೆ.

ಆದರೆ ಪಕ್ಷೇತರ ಶಾಸಕರು ಮಾತ್ರ ಯಾರಿಗೂ ಮತಪತ್ರ ತೋರಿಸುವ ಅಗತ್ಯವಿಲ್ಲ. ಒಂದೊಮ್ಮೆ ಯಾವುದೇ ಪಕ್ಷದ ಏಜೆಂಟರಿಗೆ ತೋರಿಸಿದರೆ ಅವರ ಮತ ಅಸಿಂಧುವಾಗುತ್ತದೆ.

ಶಾಸಕರು ಆದ್ಯತೆ ಮೇರೆಗೆ ಮೊದಲು ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳನ್ನೂ ಗುರುತು ಹಾಕಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ. ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬುದನ್ನು ಚೀಟಿ ಮೂಲಕ ಸೂಚಿಸಲಿವೆ. ಇದಕ್ಕಾಗಿ ಮೂರೂ ಪಕ್ಷಗಳು ನಾಳೆ ಶಾಸಕಾಂಗ ಸಭೆ ಕರೆದಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎರಡು ದಿನಗಳ ಕಾಲ ಬೆಂಗಳೂರಲ್ಲೇ ಬೀಡು ಬೀಡಬೇಕು ಹಾಗೂ ಕಡ್ಡಾಯ ಮತದಾನ ಮಾಡಬೇಕು ಎಂದು ಶಾಸಕರಿಗೆ ಆದೇಶಿಸಿದ್ದಾರೆ. ವಿಧಾನ ಪರಿಷತ್ ಪಕ್ಷದ ಎರಡನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ 14 ಹಾಗೂ ಜೆಡಿಎಸ್ 18 ಮತಗಳ ಕೊರತೆ ಹೊಂದಿವೆ. ರಾಜ್ಯಸಭೆಯಲ್ಲಿ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ 5 ಹಾಗೂ ಕಾಂಗ್ರೆಸ್ 12 ಮತಗಳ ಕೊರತೆ ಎದುರಿಸುತ್ತಿವೆ. ಇಲ್ಲಿ ಪಕ್ಷೇತರ, ಮತ್ತಿತರ ಸಣ್ಣಪುಟ್ಟ ಪಕ್ಷಗಳ ಮತಗಳೇ ನಿರ್ಣಾಯಕ.

Leave a Reply