‘ಎಂಜನಿಯರಿಂಗ್ ಮನುಫ್ಯಾಕ್ಚರರ್ ಎಂಟರ್ ಪ್ರೀನಿಯರ್ಸ್ ರಿಸೋರ್ಸ್ ಗ್ರೂಪ್’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಡಿಜಿಟಲ್ ಕನ್ನಡ ಟೀಮ್:
ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುತ್ತಿದ್ದಂತೆ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯಾದ್ಯಂತ ಸೊಳ್ಳೆ ಹಾಗೂ ಕೀಟಗಳ ಉತ್ಪನ್ನ ಹೇರಳವಾಗುತ್ತವೆ. ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿವೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಲೇರಿಯಾ, ಬಯಲು ಪ್ರದೇಶದಲ್ಲಿ ಚಿಕಿನ್ ಗುನ್ಯಾ, ಡೆಂಗ್ಯೂ ಕಳೆದ ವರ್ಷಗಳಿಗಿಂತ ಈ ಬಾರಿ ಹೆಚ್ಚುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್.
ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಸೂಕ್ತ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದಿದ್ದರೆ 108 ವಾಹನದ ಮೂಲಕ ರೋಗಿಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಖಾದರ್.
ಸತತ ಎರಡು ವರ್ಷಗಳಲ್ಲಿ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಸಂಪಾದಿಸಿರುವ ಮೈಸೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಮೈಸೂರು ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಕಳೆದ ನಾಲ್ಕು ತಿಂಗಳಲ್ಲಿ ಮೈಸೂರು ಒಂದರಲ್ಲೇ 118 ಮಂದಿ ಈ ರೋಗದಿಂದ ಬಳಲಿದ್ದಾರೆ ಎಂದರು.
ಇನ್ನುಳಿದಂತೆ ನೀವು ತಿಳಿಯಬೇಕಿರೋ ಸುದ್ದಿ ಸಾಲುಗಳು..
- ವಿವಾದದ ಕೇಂದ್ರ ಬಿಂದು ಆಗಿರುವ ಉಡ್ತಾ ಪಂಜಾಬ್ ಚಿತ್ರಕ್ಕೆ ಸೂಚಿಸಲಾಗಿರುವ ಕತ್ತರಿ ಪ್ರಯೋಗಕ್ಕೆ ಸಮರ್ಥನೆ ನೀಡುವಂತೆ ಬಾಂಬೆ ಹೈಕೋರ್ಟ್ ಸಿಬಿಎಫ್ ಸಿಗೆ ಸೂಚಿಸಿದೆ. ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ‘ಗೋ ಗೋವಾ ಗಾನ್’ ನಂತಹ ಚಿತ್ರ ಶೀರ್ಷಿಕೆಗೆ ಒಪ್ಪಿಗೆ ನೀಡಿದ್ದ ನೀವು, ಉಡ್ತಾ ಪಂಜಾಬ್ ಗೆ ಅಡ್ಡಿ ಮಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದೆ. ಅಲ್ಲದೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
- ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರು ಅಥವಾ ಮೈಸೂರಿನಲ್ಲಿ ನಿರ್ಮಿಸಬೇಕೇ ಎಂಬ ಬಗ್ಗೆ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬಂದ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎರಡು ನಗರಗಳ ಪೈಕಿ ಯಾವ ಸ್ಥಳದಲ್ಲಿ ಸ್ಮಾರಕಕ್ಕೆ ಜಾಗ ಬೇಕೆಂದು ಕೇಳುವರೋ ಅಲ್ಲಿ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
- ಚತ್ತೀಸ್ಗಡದ ಕೊಂಡಾಗೊನ್ ಜಿಲ್ಲೆಯಲ್ಲಿ ಗುರುವಾರ ಪ್ಯಾರಾಮಿಲಿಟರಿ ಶಿಬಿರದ ಮೇಲೆ ನಕ್ಸಲರ ದಾಳಿ ನಡೆದಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನ 41ನೇ ಬೆಟಾಲಿಯನ್ ಶಿಬಿರದ ಮೇಲೆ 100 ಕ್ಕೂ ಹೆಚ್ಚು ಮಾವೊ ನಕ್ಸಲರು ದಾಳಿ ನಡೆಸಿದರು. ಈ ವೇಳೆ 4 ರಾಕೆಟ್ ಸೇರಿದಂತೆ ಗುಂಡಿನ ಸುರಿಮಳೆಗೈದರು. ಪ್ಯಾರಾಮಿಲಿಟರಿ ಪಡೆ ಮತ್ತು ನಕ್ಸಲರ ಸಮರದಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿ ಬಂದಿಲ್ಲ.
- ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣ ಹಾಗೂ ವಿಜಯ್ ಮಲ್ಯ ಅವರ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ತನಿಖಾ ತಂಡವನ್ನು ರಚಿಸಿದೆ.
- ಬೆಳೆಹಾನಿ ಮಾಡುತ್ತಿದ್ದ ನೀಲ್ಗಾಯ್ ಜಾತಿಯ ಪ್ರಾಣಿಗಳನ್ನು ಕೊಲ್ಲಬಹುದು ಅಂತ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಕೆಲ ರಾಜ್ಯಗಳಿಗೆ ಅನುಮತಿ ಕೊಟ್ಟಿತು. ರಾಜ್ಯಗಳ ಮನವಿ ಆಧಾರದಲ್ಲಿ ನೀಡುವ ಸಮಯಬದ್ಧ ಪರವಾನಗಿ ಇದು. ಆದರೆ ಇದರ ವಿರುದ್ಧ ಹರಿಹಾಯ್ದಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿಯವರು ಸಚಿವ ಪ್ರಕಾಶ್ ಜಾವ್ಡೇಕರ್ ಆದೇಶದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ವರದಿ ಇಲ್ಲಿದೆ.