‘ಉಡ್ತಾ ಪಂಜಾಬ್’ ವಿವಾದ ಮತ್ತು ಕಟ್ ಕಟ್‍, ಕಟಾಕಟ್ ನ ಇತಿಹಾಸ


sridharamurthyಎನ್
.ಎಸ್.ಶ್ರೀಧರ ಮೂರ್ತಿ

ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲರನ್ನು ಅವರ ಕಥೆ-ಕಾದಂಬರಿಗಳಲ್ಲಿ ಬರುವ ಮುಂಬೈನ ವಿವರಗಳ ಕುರಿತು ಪ್ರಶ್ನೆ ಕೇಳಿದಾಗ ‘ನನ್ನ ಕೃತಿಗಳಲ್ಲಿ ಬರುವ ದಾದರ್ ಮುಲಂದ್ ಮೊದಲಾದ ಪ್ರದೇಶಗಳು ವಾಸ್ತದಲ್ಲೂ ಇವೆ ಎನ್ನುವುದು ಒಂದು ಆಕಸ್ಮಿಕ ಅಷ್ಟೇ’ ಎನ್ನುವ ಕುತೂಹಲಕರ ಉತ್ತರವನ್ನು ನೀಡಿದ್ದರು. ವಾಸ್ತವಿಕ ವಿವರಗಳು ಸೃಜನಶೀಲ ಮನೋಭೂಮಿಕೆಯಲ್ಲಿ ವಿಭಿನ್ನ ನೆಲೆಯನ್ನು ಹೊಂದಿರುತ್ತದೆ ಎನ್ನುವ ಒಳನೋಟವನ್ನು ಇಲ್ಲಿ ನೋಡ ಬಹುದು. ಆದರೆ ಇಂತಹ ಚಿಂತನೆಗಳೇ ಪ್ರಶ್ನಾರ್ಹವಾಗುವಂತಹ ಬೆಳವಣಿಗೆ ‘ಉಡ್ತಾ ಪಂಜಾಬ್‍’ ಚಿತ್ರದ ಕುರಿತು ಸೆನ್ಸಾರ್ ಮಂಡಳಿ ತಳೆದಿರುವ ನಿಲುವಿನಿಂದ ಉಂಟಾಗಿದೆ.

ಸೆನ್ಸಾರ್ ಮಂಡಳಿ ಚಿತ್ರವು ಪಂಜಾಬಿಗೆ ಸಂಬಂಧಿಸಿದ್ದು ಎನ್ನುವ ನೆಲೆಯೇ ಕಾಣದಂತೆ ಕಾಲ್ಪನಿಕ ರಾಜ್ಯವೊಂದರ ಕಥೆಯಾಗುವಂತೆ ಬದಲಾಯಿಸುವಂತೆ ಸೂಚನೆ ನೀಡಿದೆ. ಇದಕ್ಕೆ ಚುನಾವಣೆಯ ರಾಜಕೀಯ ಕಾರಣವನ್ನೂ ನೀಡಲಾಗಿದೆ.  89 ಕಟ್‍ಗಳನ್ನು ನೀಡಿದೆ ಎನ್ನುವುದಕ್ಕಿಂತ ಇಂತಹ ತಾತ್ವಿಕ ಧೋರಣೆ ಗಮನಿಸ ಬೇಕಾದದ್ದು. ಚಲನಚಿತ್ರ ಕಲೆಯಾಗುವುದರ ಜೊತೆಗೆ ವಾಸ್ತವಕ್ಕೆ ಪ್ರತಿಕ್ರಿಯೆ ಕೂಡ ಆಗಿರುತ್ತದೆ. ಅದರಲ್ಲೂ ಜನಪ್ರಿಯ ಚಿತ್ರಗಳ ಮಟ್ಟಿಗೆ ಅದು ಅನಿವಾರ್ಯ ಕೂಡ. ವಾಸ್ತವವನ್ನು ಎಷ್ಟರ ಮಟ್ಟಿಗೆ ಮರುರೂಪಿಸಿ ಸರ್ವಕಾಲೀನವಾಗಿಸಿದೆ ಎನ್ನುವುದರ ಮೇಲೆ ಚಿತ್ರದ ಕಲಾತ್ಮಕ ಅಂಶ ನಿಂತಿರುತ್ತದೆ.

ವಿಪರ್ಯಾಸವೆಂದರೆ 1952ರ ಸಿನಿಮಾಟೋಗ್ರಫಿ ಕಾಯಿದೆಯಲ್ಲೇ  ಇಂತಹ ಚಿಂತನೆಗೆ ವಿರೋಧಿಯಾದ ಈಗಿನ ಸೆನ್ಸಾರ್ ಮಂಡಳಿಯ ಕ್ರಮ ಸಮರ್ಥನೀಯ ಎನ್ನುವಂತಹ. ಸೆಕ್ಷನ್ 12(ಬಿ) ಎಂಬ ನಿಬಂಧನೆ ಇದೆ. ಅದರ ಪ್ರಕಾರ ‘ಚಲನಚಿತ್ರವು ಯಾವುದೇ ಜೀವಂತ ಇರುವ ಗತಿಸಿದ ವ್ಯಕ್ತಿಗೆ ಹೋಲಿಕೆಯಾಗುವಂತೆ ಇರಬಾರದು. ಪ್ರಾದೇಶಿಕ ವಿವರಗಳು ಸಂಬಂಧಿಸಿದವರ ಮನಸ್ಸಿಗೆ ನೋವನ್ನು ಉಂಟು ಮಾಡ ಬಾರದು.’ ಆದರೆ ಈ ನಿಯಮಾವಳಿಯನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಚರ್ಚೆಯ ಸಂಗತಿ. ತೀರಾ ಇತ್ತೀಚೆಗೆ ‘ನೀರಜಾ’, ‘ಸರ್ಬಜಿತ್’, ‘ಅಜರುದ್ದೀನ್‍’ ಅವರ ಕುರಿತು ಚಿತ್ರಗಳು ಬಂದಾಗ  ಈ ನಿಯಮಾವಳಿ ಎಲ್ಲಿ ಹೋಗಿತ್ತು ಎನ್ನುವ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಸಿನಿಮಾ ಮತ್ತು ವಾಸ್ತವಕ್ಕೆ ಸಂಬಂಧಿಸಿದ  19(ಎ) ವಿಧಿಯನ್ನು ರೂಪಿಸಿದ್ದು ಬ್ರಿಟೀಷರು. 1918ರಲ್ಲಿ ಈ ಕಾಯಿದೆಯನ್ನು ರೂಪಿಸಿದಾಗ ಭಾರತೀಯರು ಸ್ವಾತಂತ್ರ್ಯ ಚಳುವಳಿಗೆ ಸಿನಿಮಾವನ್ನು ಬಳಸಿಕೊಳ್ಳ ಬಾರದು ಎನ್ನುವ ಎಚ್ಚರಿಕೆಯಿಂದ  ಈ ವಿಧಿಯನ್ನು ಸೇರಿಸಲಾಗಿತ್ತು. ಈ ವಿಧಿಯ ಅನ್ವಯ ಸ್ವಾತಂತ್ರ್ಯ ಪೂರ್ವದಲ್ಲಿ ಅನುಮತಿ ನಿರಾಕರಿಸಲ್ಪಟ್ಟ ಕೆಲವು ಚಿತ್ರಗಳ ಹೆಸರುಗಳು ಹೀಗಿವೆ – “ಎಂಟನೇ ಹೆನ್ರಿಯ ಖಾಸಗಿ ಬದುಕು’ ‘ಪವಿತ್ರ ಹಗರಣಗಳು’ ‘ಬ್ರಿಟಿಷ್ ಏಜೆಂಟ್’, ‘ವಂದೇ ಮಾತರಂ’,ಝಾನ್ಸಿರಾಣಿ ಲಕ್ಷ್ಮಿಬಾಯಿ’ ಎಂದರೆ ಈ ವಿಧಿ ಹೇಗೆ ಬಳಕೆಯಾಗುತ್ತಿತ್ತು ಎನ್ನುವುದನ್ನು ಊಹಿಸಬಹುದು.

ಸ್ವಾತಂತ್ರ್ಯಾ ನಂತರ ಕೂಡ 1952ರಲ್ಲಿ ರೂಪುಗೊಂಡ ಕಾಯಿದೆಯಲ್ಲಿ ಈ ಮನೋಭಾವ ಮುಂದುವರೆಯಿತು. ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಗಳಾದ ಮೊದಲ ಅವಧಿಯಲ್ಲಿ ಸಿನಿಮಾಗಳ ರಾಜಕೀಯ ನಿಲುವಿನ ಕುರಿತು ಕಟ್ಟುನಿಟ್ಟಾದ ಕಣ್ಣಿಡಲಾಯಿತು. 1970ರಲ್ಲಿ ದೇಶಾದ್ಯಂತ ಬಿಡುಗಡೆಯಾದ ಒಟ್ಟು 224 ಚಿತ್ರಗಳಲ್ಲಿ 148 ಚಿತ್ರಗಳು ಸೆನ್ಸಾರ್ ಕತ್ತರಿಗೆ ಸಿಕ್ಕಿಹಾಕಿಕೊಂಡಿದ್ದವು. 1971ರಲ್ಲಿ 258 ಚಿತ್ರಗಳಲ್ಲಿ 154 ಚಿತ್ರಗಳು ಸಿಕ್ಕಿ ಹಾಕಿಕೊಂಡವು. ಇದರಿಂದ ಅಲ್ಲೋಲ ಕಲ್ಲೋಲವೇ ಆಗಿ ಜಸ್ಟೀಸ್ ಜಿ.ಡಿ.ಖೋಸ್ಲಾ ಅವರ ಅಧ್ಯಕ್ಷತೆಯಲ್ಲಿ ಸೆನ್ಸಾರ್ ಸುಧಾರಣೆಗೆ ಸಮಿತಿ ರೂಪುಗೊಂಡು 2045 ಪುಟಗಳ ಬೃಹತ್ ವರದಿಯನ್ನು ಸಲ್ಲಿಸಿತು. ಆಗ ಕೇಂದ್ರ ವಾರ್ತಾ ಸಚಿವರಾಗಿದ್ದ ಸತ್ಯನಾರಾಯಣ ಸಿನ್ಹಾ ಈ ವರದಿಯನ್ನು ಮಂಡಿಸುತ್ತಾ ‘ಚಲನ ಚಿತ್ರ ರಾಜಕೀಯ ಉದ್ದೇಶಕ್ಕೆ ರೂಪುಗೊಳ್ಳ ಬಾರದು. ಅಂತಹ ಬಯಕೆ ಇದ್ದವರು ಸಾಕ್ಷಚಿತ್ರ ನಿರ್ಮಿಸ ಬೇಕು’ಎಂದು ಹೇಳಿ ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದರು. ಮುಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆನ್ಸಾರ್ ಎಂತಹ ಬಿಗಿ ನಿಲುವನ್ನು ತಾಳಿತು ಎನ್ನುವುದು ಎಲ್ಲರೂ ಬಲ್ಲ ಸಂಗತಿ ಎಂ.ಎಸ್.ಸತ್ಯು ಅವರ ‘ಚಿತೆಗೂ ಚಿಂತೆ’ಯಂತಹ ರಾಜಕೀಯ ಚಿತ್ರವಿರಲಿ ‘ರಾಜ ನನ್ನ ರಾಜ’ದಂತಹ ಶುದ್ದ ವ್ಯಾಪಾರಿ ಚಿತ್ರ ಕೂಡ ಸೆನ್ಸಾರ್‍ ಕತ್ತರಿಯ ಪ್ರಯೋಗಕ್ಕೆ ಒಳಗಾಗಿತ್ತು.

ಪಹ್ಲೇಜ್ ನಿಹಲಾನಿ ಸೆನ್ಸಾರ್ ಬೋರ್ಡ್‍ನ ಅಧ್ಯಕ್ಷರಾದಾಗಿನಿಂದಲೂ ವಿವಾದಗಳನ್ನು ಸೃಷ್ಟಿಸುತ್ತಲೇ ಬರುತ್ತಿದ್ದಾರೆ. ಪ್ರಸ್ತುತ ‘ಉಡ್ತಾ ಪಂಜಾಬ್’ ಚಿತ್ರದ ಕುರಿತ ವಿವಾದದಲ್ಲೂ ‘ ಚಿತ್ರದ ನಿರ್ಮಾಪಕ ಅನುರಾಗ ಕಶ್ಯಪ್‍ ಆಮ್ ಆದ್ಮಿ ಪಾರ್ಟಿಯಿಂದ ಹಣ ಪಡೆದಿದ್ದಾರೆ’ ಎಂದು ಹೇಳಿ ಚರ್ಚೆಯ ತಾತ್ವಿಕ ನೆಲೆಯನ್ನೇ ದಿಕ್ಕು ತಪ್ಪಿಸಿದ್ದಾರೆ. ಇಂದಿರಾ ಗಾಂಧಿಯವರ ಕಾಲದ ಕತ್ತಲ ಯುಗವನ್ನು ಈ ಸಮಿತಿ ಮುಂದುವರೆಸುತ್ತಿದೆಯೆ ಎಂಬ ಅನುಮಾನವನ್ನು ಈ ಹೇಳಿಕೆ ಹುಟ್ಟು ಹಾಕಿದೆ. ಖೋಸ್ಲಾ ಸಮಿತಿಯಂತೆ ಈಗಲೂ ಶ್ಯಾಂ ಬೆನಗಲ್ ನೇತೃತ್ವದಲ್ಲಿ ಸುಧಾರಣಾ ಸಮಿತಿ ನೇಮಕವಾಗಿದೆ. ಅದರಿಂದ ಪವಾಡವನ್ನೇನು ನಿರೀಕ್ಷಿಸುವಂತಿಲ್ಲ. ಸೆನ್ಸಾರ್ ಎನ್ನುವುದೇ ಬೇಡ ಸರ್ಟಿಫಿಕೇಷನ್‍ಗೆ ಸಮಿತಿ ಇರಲಿ ಸಾಕು ಎನ್ನುವ ವಾದವೂ ಕೇಳಿ ಬರುತ್ತಿದೆ. ಬಹಳ ಜನಕ್ಕೆ ಗೊತ್ತಿಲ್ಲದ ಸಂಗತಿ ಎಂದರೆ ಈಗಿರುವದೂ ಕೂಡ ‘ಸೆಂಟ್ರಲ್ ಬೋರ್ಡ್‍ ಆಫ್ ಫಿಲ್ಮ್‍ ಸರ್ಟಿಫಿಕೇಷನ್‍’ ಅದು ಜನರ ಬಾಯಲ್ಲಿ ‘ಸೆನ್ಸಾರ್ ಬೋರ್ಡ್’ ಆಗಿದೆ ಅಷ್ಟೇ. ವರ್ಷಕ್ಕೆ ಒಂದೂವರೆ ಸಾವಿರ ಚಿತ್ರಗಳು ನಿರ್ಮಾಣವಾಗುತ್ತಿರುವ ಕಾಲದಲ್ಲಿ ನಿಯಂತ್ರಣವೇ ಇಲ್ಲದೆ ಹೋಗುವುದು ಅದೂ ಸಿನಿಮಾ ಪ್ರಭಾವಶಾಲಿ ಮಾಧ್ಯಮವಾಗಿರುವ ಕಾಲದಲ್ಲಿ ಅಪಾಯಕಾರಿ  ಎನ್ನುವುದೂ ಗಮನಿಸ ಬೇಕಾದ ಸತ್ಯ.

1953ರಲ್ಲಿ ಎಸ್.ಎ.ಅಯ್ಯರ್ ಎನ್ನುವವರು ಮದ್ರಾಸಿನಲ್ಲಿ ಸೆನ್ಸಾರ್ ಆಫೀಸರ್ ಆಗಿದ್ದರು. ಅವರ ಕಾಲದಲ್ಲಿ ಬಿ.ವಿಠಲಾಚಾರ್ಯರು ‘ಸೌಭಾಗ್ಯ ಲಕ್ಷ್ಮಿ’ ಚಿತ್ರದ ಕುರಿತು ಎದುರಿಸಿದ ಕಷ್ಟಗಳು ಹೀಗಿವೆ ‘ಖಳನಾಯಕ ನಾಯಕಿಯನ್ನು ಮುಟ್ಟಿದರೆ ಕಟ್, ವಿಲನ್ ಕತ್ತಿ ಎತ್ತಿದರೆ ಕಟ್, ನಾಯಕ-ನಾಯಕಿ ಕೈ ಹಿಡಿದುಕೊಂಡರೆ ಕಟ್‍’ ಹೀಗೆ ಸಿನಿಮಾ ನೋಡಿ ಒಂದು ಸಲ ಕಟ್ ಮಾಡಿದರೆ ಸೌಂಡ್ ನೋಡಿ ಇನ್ನೊಂದು ಸಲ ಕಟ್ ಮಾಡಿದರು’ 18 ಸಾವಿರ ಅಡಿ ಚಿತ್ರ  ಕಟ್‍ನಿಂದ ಹೊರ ಬಂದಾಗ 7,400 ಅಡಿಗೆ ಇಳಿದಿತ್ತಂತೆ. 53 ವರ್ಷಗಳ ನಂತರವೂ ‘ಉಡ್ತಾ ಪಂಜಾಬ್’ ಅಂತಹದೇ ಸಮಸ್ಯೆ ಎದುರಿಸುತ್ತಿದೆ ಎಂದರೆ ಸಮಸ್ಯೆ ಇರುವುದು ನಿಯಮಾವಳಿಯಲ್ಲಿ ಅಲ್ಲ ಅದರ ಬಳಕೆಯಲ್ಲಿ ಎನ್ನುವುದು ಖಚಿತವಾಗುತ್ತದೆ. ಚರ್ಚೆ ನಡೆಯ ಬೇಕಾಗಿರುವುದು ಈ ನೆಲೆಯಲ್ಲಿ.

1 COMMENT

  1. ಚೆನ್ನಾಗಿ ಮೂಡಿ ಬರುತ್ತಿದೆ, ದನ್ಯವಾದಗಳು …

Leave a Reply