ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಅಂಗೀಕರಿಸಿದ ರಾಜ್ಯ ಸರಕಾರ

 

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ನೀಡಿದ್ದ ರಾಜೀನಾಮೆಯನ್ನು ರಾಜ್ಯ ಸರಕಾರ ಗುರುವಾರ ರಾತ್ರಿ ಅಂಗೀಕರಿಸಿದೆ. ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ ತುಮಕೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.

ರಾಜ್ಯ ಸರಕಾರವನ್ನು ಎದಿರು ಹಾಕಿಕೊಂಡಿದ್ದು ಒಂದೆಡೆಯಾದರೆ, ಸರಕಾರಕ್ಕೆ ಸೆಡ್ಡು ಹೊಡೆದ ತಮ್ಮ ನೆರವಿಗೆ ಬಂದ ಸಾರ್ವಜನಿಕರ ಭಾವನೆಗಳ ಜತೆ ಆಟವಾಡಿದ ಅನುಪಮಾ ಕೊನೆಗೂ ಅಧಿಕಾರ ಕಳೆದುಕೊಂಡಿದ್ದಾರೆ. ರಾಜೀನಾಮೆ ಕೊಟ್ಟ ನಂತರ ಅವರ ಫೇಸ್ಬುಕ್ ಅಕೌಂಟ್ ನಲ್ಲಿ ಕಾಣಿಸಿಕೊಂಡಿದ್ದ ‘ರಾಜೀನಾಮೆ ಕೊಟ್ಟು ನಿರುದ್ಯೋಗಿಯಾಗಿದ್ದೇನೆ’ (resigned jobless) ಎಂಬ ಸ್ಟೇಟಸ್ ಅನ್ನು ರಾಜ್ಯ ಸರಕಾರ ಇದೀಗ ನಿಜ ಮಾಡಿದೆ.

ಕೂಡ್ಲಿಗಿ ಬಸ್ ಸ್ಟಾಂಡ್ ಸಮೀಪ ಅಂಬೇಡ್ಕರ್ ಭವನ ಹಾಗೂ ಮದ್ಯ ದಾಸ್ತಾನು ಕಟ್ಟಡ ನಿರ್ಮಾಣ ಸಂಬಂಧ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಗೆ ಬೇಸತ್ತು ಅನುಪಮಾ ಅವರು ನಾಲ್ಕು ದಿನಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ನಾಪತ್ತೆಯಾಗಿದ್ದರು.

ತಮ್ಮ ಮೊಬೈಲ್ ಫೋನ್ ಬಂದ್ ಮಾಡಿದ್ದ ಅನುಪಮಾ ಯಾರ ಕೈಗೂ ಸಿಕ್ಕಿರಲಿಲ್ಲ. ಆದರೆ ಅವರ ಹೆಸರಿನ ಫೇಸ್ಬುಕ್ ಅಕೌಂಟ್ ನಿಂದ ರಾಜ್ಯ ಸರಕಾರ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ವಿರುದ್ಧ ಹಲವಾರು ಅವಹೇಳನಕಾರಿ ಸ್ಟೇಟಸ್ ಗಳು ಪ್ರಕಟವಾಗಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸರಕಾರ ಅನುಪಮಾ ಅವರನ್ನು ಪತ್ತೆ ಮಾಡಿ, ಅವರ ಮನವೊಲಿಸಲು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನೂ ರಚಿಸಿತ್ತು.

ಗುರವಾರ ಮಧ್ಯಾಹ್ನದ ಕೂಡ್ಲಿಗಿಯಲ್ಲಿ ಕಾಣಿಸಿಕೊಂಡ ಅನುಪಮಾ ಮಾಧ್ಯಮಗಳ ಜತೆ ಮಾತನಾಡುತ್ತಾ ರಾಜೀನಾಮೆ ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಅಲ್ಲದೇ, ಫೇಸ್ಬುಕ್ ಸ್ಟೇಟಸ್ ಗಳಿಗೆ ಸಂಬಂಧಪಟ್ಟಂತೆ ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದರು. ತಮಗೂ ಅದಕ್ಕೂ ಸಂಬಂಧ ಇಲ್ಲ, ಯಾರೋ ತಮ್ಮ ಅಕೌಂಟ್ ಕದ್ದು ಸ್ಟೇಟಸ್ ಗಳನ್ನು ಹಾಕಿರಬಹುದು ಅಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ರಾಜೀನಾಮೆ ಕಾರಣವೇನು, ತಮಗಾದ ಅನ್ಯಾಯ ಏನು ಎಂಬುದನ್ನು ಹೇಳಿರಲಿಲ್ಲ. ನಂತರ ಅವರ ಮನವೊಲಿಸಲು ಮತ್ತೊಬ್ಬರು ಡಿವೈಎಸ್ಪಿ ಪಾಟೀಲ್ ಪೊಲೀಸ್ ವಸತಿ ಗೃಹಕ್ಕೆ ತೆರಳಿದರೂ ಅನುಪಮಾ ಬಾಗಿಲು ತೆರೆಯದೆ ವಾಪಸ್ಸು ಕಳುಹಿಸಿದ್ದರು. ಅಮೇಲೆ ಮಾಧ್ಯಮ ಹಾಗೂ ಜನಮಾನಸದ ವಿರುದ್ಧ ಅವರ ಹೆಸರಿನ ಫೇಸ್ಬುಕ್ ಅಕೌಂಟ್ ನಲ್ಲಿ ಸ್ಟೇಟಸ್ ಗಳು ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ ಅನುಪಮಾ ರಾಜೀನಾಮೆ ಅಂಗೀಕಾರ ವಿಚಾರವನ್ನು ಸಚಿವ ಜಯಚಂದ್ರ ತಿಳಿಸಿದ್ದಾರೆ.

ಅನುಪಮಾ ಪೊಲೀಸ್ ಪೇದೆಯೊಬ್ಬರ ಮೂಲಕ ಬಳ್ಳಾರಿ ಎಸ್ಪಿ ಚೇತನ್ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿಕೊಟ್ಟಿದ್ದರು. ಎಸ್ಪಿ ಅವರು ಡಿಐಜಿ ಮುರುಗನ್ ಅವರ ಮೂಲಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರಿಗೆ ಇದನ್ನು ಕಳುಹಿಸಿಕೊಟ್ಟಿದ್ದರು. ಅನುಪಮಾ ಅವರಿಗೆ ರಾಜೀನಾಮೆ ಪತ್ರ ವಾಪಸ್ಸು ಪಡೆಯಲು 90 ದಿನಗಳ ಗಡವು ಇತ್ತು. ಆದರೆ ಅಶಿಸ್ತು, ಸರಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ.

Leave a Reply